ಮುಂಗೈ ಕಳೆದುಕೊಂಡ ಕೋತಿಗೆ ಕೈತುತ್ತು ನೀಡುವರು ಈ ಭಿಕ್ಷುಕ ಮಹಿಳೆಯರು

ಮಕ್ಕಳಿಗೆ ಅಮ್ಮ ಪ್ರೀತಿಯ ಕೈತುತ್ತು ತಿನ್ನಿಸೋದು ಸಹಜ. ಆದರೆ, ಕೊಪ್ಪಳ ಜಿಲ್ಲೆಯ ಆನೆಗುಂದಿ ಬಳಿಯ ಅಂಜನಾದ್ರಿ ಪರ್ವತದಲ್ಲಿರುವ ಭಿಕ್ಷುಕ ಅಮ್ಮಂದಿರದ್ದು ಡಿಫರೆಂಟ್ ಪ್ರೀತಿ. ಎರಡೂ ಕೈಯಿಲ್ಲದ ಕೋತಿಗೆ ಇವರು ನೀಡುವ ಕೈತುತ್ತೇ ಬದುಕು. ಇಲ್ಲಿದೆ ಅದರ ಮಾನವೀಯ ನೋಟ

‘ಕೈತುತ್ತು ಅಂದರೆ ಪ್ರೀತಿ, ಬದುಕಲು ಕಲಿಸುವ ನೀತಿ’ ಅಂತ ಕವಿಯೊಬ್ಬರು ಹಾಡಿದ್ದಾರೆ. ಆದರೆ ಇಲ್ಲಿ ಕೈತುತ್ತು ಜೀವಪರತೆಯ ಬೆಳಕು. ಪ್ರಾಣಿಗಳೊಂದಿಗೆ ಮನುಷ್ಯರ ಸಂಬಂಧ ಕ್ಷೀಣವಾಗುತ್ತಿದೆ ಎಂಬ ಹೊತ್ತಲ್ಲಿ ಆನೆಗುಂದಿ ಸಮೀಪದ ಅಂಜನಾದ್ರಿ ಬೆಟ್ಟದ ಭಿಕ್ಷುಕ ಮಹಿಳೆಯರು ಇದಕ್ಕೆ ಅಪವಾದ.

ವಿದ್ಯುತ್ ಅವಘಡಕ್ಕೆ ಸಿಲುಕಿ ಎರಡೂ ಮುಂಗೈಗಳನ್ನು ಕಳೆದುಕೊಂಡಿರುವ ಕೋತಿಗೆ ಈ ಅಮ್ಮಂದಿರ ಕೈತುತ್ತೇ ಬದುಕು. ಭಿಕ್ಷೆ ಬೇಡಿ ತಮ್ಮ ಬದುಕಿನ ಬಂಡಿಯನ್ನು ಸಾಗಿಸುವ ಮಹಿಳೆಯರು ಕೈ ಇಲ್ಲದ ಕೋತಿಗೂ ಅದರಲ್ಲೊಂದು ಪಾಲನ್ನು ಕೈತುತ್ತಿನ ಮೂಲಕ ನೀಡಿ, ಮಾನವೀಯತೆಯನ್ನು ಮತ್ತು ಘನ ಆದರ್ಶವನ್ನು ಸದ್ದಿಲ್ಲದೆ ಮೆರೆಯುತ್ತಿದ್ದಾರೆ.

ಮುಂಗೈ ಇಲ್ಲದೆ, ಕಾಲಲ್ಲೇ ಓಡಾಡುವ ಈ ಮಂಗನನ್ನು ನೋಡಿದರೆ ಎಂಥವರಲ್ಲೂ ಮರುಕ ಹುಟ್ಟುತ್ತದೆ. ನಿತ್ಯ ಆಹಾರಕ್ಕಾಗಿ ಭಿಕ್ಷುಕ ಮಹಿಳೆಯರು ಬರುವ ದಾರಿಯನ್ನು ಈ ಮಂಗ ಕಾಯುತ್ತದೆ. ಮಹಿಳೆಯರು ತಮ್ಮ ಬುತ್ತಿಯ ಜೊತೆ ಕೋತಿಗೂ ತರುವುದನ್ನು ಮರೆಯುವುದಿಲ್ಲ. ಕೈತುತ್ತು ನೀಡುವ, ಪಡೆದು ತಿನ್ನುವ ಈ ಪ್ರೀತಿ’ಯನ್ನು ಅಂಜನಾದ್ರಿ ಬೆಟ್ಟಕ್ಕೆ ಬರುವ ಭಕ್ತರು ಅಚ್ಚರಿ, ಮೆಚ್ಚುಗೆಯ ಕಣ್ಣುಗಳಿಂದು ನೋಡಿ, ಶ್ಲಾಘಿಸುತ್ತಾರೆ.

ಇದನ್ನೂ ಓದಿ : ಶಿರಹಟ್ಟಿ ಬೆಣ್ಣೆ ಅಜ್ಜಿಯ ಬದುಕು ಹಸನಾಗಿಸಿತು ಅವ್ವ ಕೊಟ್ಟ ಮುದ್ದಿನ ಎಮ್ಮೆ

ಉಳ್ಳವರು ಗುಡಿಯಲ್ಲಿ ಕಾಯಿ ಒಡೆದು ವಿಜೃಂಭಿಸಿದರೆ, ಆ ಉಳ್ಳವರಿಂದ ಬೇಡಿದ ಭಿಕ್ಷೆಯಲ್ಲಿ ಕೋತಿಗೂ ಪಾಲು ನೀಡಿ, ಅದರಲ್ಲೇ ‘ಶಿವಾಲಯ’ವ ಮಾಡಿದ ಸಾರ್ಥಕ್ಯ ಕಾಣುವರು ಈ ತಾಯಂದಿರು.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More