ಧನ್ಯಶ್ರೀ ಆತ್ಮಹತ್ಯೆ ಬೆನ್ನಲ್ಲೇ ಹಿಂದೂ ಹುಡುಗಿಯರಿಗೆ ಭಜರಂಗದಳ ಎಚ್ಚರಿಕೆ!

ಭಜರಂಗ ದಳದ ಬೆದರಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅವಮಾನಕರ ಪೋಸ್ಟಿನಿಂದ ನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಸಿಯಾಗಿರುವ ಬೆನ್ನಲ್ಲೇ, ಮೂಡಿಗೆರೆಯಲ್ಲಿ, ಭಜರಂಗ ದಳದ ಹೆಸರಲ್ಲಿ ವೈರಲ್ ಆಗಿರುವ ಎಚ್ಚರಿಕೆಯ ಸಂದೇಶ ಜನರನ್ನು ಬೆಚ್ಚಿಬೀಳಿಸಿದೆ

"ಮೂಡಿಗೆರೆ ನಗರದ ಆಸುಪಾಸಿನ ಹುಡುಗಿಯರಿಗೆ ಕೊನೆಯ ಎಚ್ಚರಿಕೆ ಸಂದೇಶ ನೀಡುತ್ತಿದ್ದೇವೆ. ಕಾಲೇಜಿನಲ್ಲಿ ಸಹಪಾಠಿ ಎಂಬ ಸಲುಗೆಯಿಂದ ಅನ್ಯ ಧರ್ಮದ ಯುವಕರೊಂದಿಗೆ ಚಕ್ಕಂದವಾಡುತ್ತಿರುವುದು ಎಲ್ಲೇ ಕಂಡರು, ಅಲ್ಲಿ ನಿಮ್ಮ ಮಾತಿಗೆ ಅವಕಾಶ ಕೊಡದೆ ಧರ್ಮದೇಟು ಗ್ಯಾರೆಂಟಿ. ಕಾರಣ ನೂರಿರಬಹುದು. ಆದರೆ ನಮಗೆ ಅದರ ಅವಶ್ಯಕತೆ ಇಲ್ಲ. ನಮಗೆ ಹಿಂದೂ ಧರ್ಮ ಮುಖ್ಯ. ಧರ್ಮವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಧರ್ಮೋ ರಕ್ಷತಿ ರಕ್ಷಿತಃ" ಇಂತಹದ್ದೊಂದು ಸಂದೇಶ ಮೂಡಿಗೆರೆ ಭಜರಂಗದಳದ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಆತಂಕ ಹುಟ್ಟಿಸಿದೆ.

ಭಜರಂಗ ದಳದ ಬೆದರಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅವಮಾನಕರ ಪೋಸ್ಟಿನಿಂದ ನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ ಬೆನ್ನಲ್ಲೇ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ, ಭಜರಂಗ ದಳದ ಹೆಸರಲ್ಲಿ ವೈರಲ್ ಆಗಿರುವ ಎಚ್ಚರಿಕೆಯ ಸಂದೇಶ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ಯಾವುದೇ ಅನ್ಯ ಕೋಮಿನ ಹುಡುಗರೊಂದಿಗೆ ಕಾಣಿಸಿಕೊಂಡರೆ, ನಿಮಗೆ ಧರ್ಮದೇಟು ಬೀಳುವುದು ಖಂಡಿತಾ ಎಂಬ ಸಂದೇಶವನ್ನು ಒಳಗೊಂಡಿರುವ ಬೆದರಿಕೆಯ ಸಂದೇಶ ಮೂಡಿಗೆರೆ ಭಜರಂಗದಳದ ಹೆಸರಿನಲ್ಲಿ ವಾಟ್ಸಪ್ ಮತ್ತು ಫೇಸ್‌ಬುಕ್‌ಗಳಲ್ಲಿ ಹರಿದಾಡುತ್ತಿದೆ. ಮೂಡಿಗೆರೆಯ ಧನ್ಯಶ್ರೀ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ಇಂತಹ ಸಂದೇಶ ಜಿಲ್ಲೆಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಗಿರುವುದು ಹೆಣ್ಣುಮಕ್ಕಳು ಮತ್ತು ಅವರ ಹೆತ್ತವರು ಆತಂಕಕ್ಕೆ ಕಾರಣವಾಗಿದೆ.

ತಾನು ತನ್ನ ಸಹಪಾಠಿಗಳಾದ ಅನ್ಯ ಧರ್ಮೀಯರೊಂದಿಗೆ ಸ್ನೇಹದಿಂದ ಇದ್ದ ಕಾರಣಕ್ಕೆ, ಭಜರಂಗದಳಕ್ಕೆ ಸೇರಿದ ಸಂತೋಷ್ ಎಂಬಾತ ಪದೇಪದೇ ಬೆದರಿಕೆ ಹಾಕಿದ್ದ ಮತ್ತು ತನ್ನ ಪೋಷಕರಿಗೂ ನಿಂದಿಸಿದ್ದ. ಆ ಕಾರಣದಿಂದ ತಾನು ಆತ್ಮಹತ್ಯೆಗೆ ಶರಣಾಗಿರುವುದಾಗಿ ಪತ್ರ ಬರೆದಿಟ್ಟು, ಮೂಡಿಗೆರೆಯ ಧನ್ಯಶ್ರೀ ಎಂಬ ಕಾಲೇಜು ಯುವತಿ ಜ.6ರಂದು ಆತ್ಮಹತ್ಯೆಗೆ ಶರಣಾಗಿದ್ದಳು. ಆರಂಭದಲ್ಲಿ ಪ್ರಕರಣವನ್ನು ಅಸಹಜ ಸಾವು ಎಂದು ಸ್ಥಳೀಯರು ನಮೂದಿಸಿ, ಮುಚ್ಚಿಹಾಕುವ ಪ್ರಯತ್ನ ನಡೆಸಿದ್ದರು. ಆದರೆ, ಆಕೆಯ ಆತ್ಮಹತ್ಯೆ ಕುರಿತು ಅನಾಮಿಕರೊಬ್ಬರು ಜಿಲ್ಲಾ ಎಸ್ಪಿಗೆ ನೇರ ಪತ್ರ ಬರೆದು, ಸ್ಥಳೀಯ ಪೊಲೀಸರು ಮರೆಮಾಚಿದ್ದ ಡೆತ್‌ನೋಟ್‌ ವಿಷಯವನ್ನು ಅವರ ಗಮನಕ್ಕೆ ತಂದಿದ್ದರು. ಬಳಿಕ, ಸ್ವತಃ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಎಸ್ಪಿ ಅಣ್ಣಾಮಲೈ, ಮೂಡಿಗೆರೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅನಿಲ್ ಎಂಬಾತನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇತರ ನಾಲ್ವರಿಗಾಗಿ ಶೋಧ ನಡೆಸಿದ್ದಾರೆ.

ಪ್ರಕರಣ ಸಂಘಪರಿವಾರ ಹಾಗೂ ಬಿಜೆಪಿ ಮುಖಂಡರ ಅನೈತಿಕ ಪೊಲೀಸ್ ಗಿರಿ ಕುರಿತು ರಾಜ್ಯಮಟ್ಟದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿತ್ತು. ಅದರ ಬೆನ್ನಲ್ಲೇ, ಇದೀಗ ಚಿಕ್ಕಮಗಳೂರು ಜಿಲ್ಲೆಯ ವಿವಿಧ ವಾಟ್ಸಪ್ ಗ್ರೂಪ್‌ಗಳಲ್ಲಿ "ಮೂಡಿಗೆರೆ ನಗರದ ಆಸುಪಾಸಿನ ಹುಡುಗಿಯರಿಗೆ ಕೊನೆಯ ಎಚ್ಚರಿಕೆ ಸಂದೇಶ ನೀಡುತ್ತಿದ್ದೇವೆ. ಕಾಲೇಜಿನಲ್ಲಿ ತನ್ನ ಸಹಪಾಠಿ ಎಂಬ ಸಲುಗೆಯಿಂದ ಅನ್ಯ ಧರ್ಮದ ಯುವಕರೊಂದಿಗೆ ಚಕ್ಕಂದವಾಡುತ್ತಿರುವುದು ಎಲ್ಲೇ ಕಂಡರು, ಅಲ್ಲಿ ನಿಮ್ಮ ಮಾತಿಗೆ ಅವಕಾಶ ಕೊಡದೆ ಧರ್ಮದೇಟು ಗ್ಯಾರೆಂಟಿ. ಕಾರಣ ನೂರಿರಬಹುದು. ಆದರೆ ನಮಗೆ ಅದರ ಅವಶ್ಯಕತೆ ಇಲ್ಲ. ನಮಗೆ ಹಿಂದೂ ಧರ್ಮ ಮುಖ್ಯ. ಧರ್ಮವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಧರ್ಮೋ ರಕ್ಷತಿ ರಕ್ಷಿತಃ" ಎಂಬ ಸಂದೇಶ ಮೂಡಿಗೆರೆ ಭಜರಂಗದಳದ ಹೆಸರಿನಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ : ಮೂಡಿಗೆರೆ ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ತಿರುವು, ಬಿಜೆಪಿ ಮುಖಂಡನ ಬಂಧನ

ಧನ್ಯಶ್ರೀ ಕೂಡ ತನ್ನ ಸಾವಿಗೂ ಭಜರಂಗದಳ ಮುಖಂಡರೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಸ್ಪಷ್ಟವಾಗಿ ಬರೆದಿರುವುದಾಗಿ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಅಧಿಕೃತ ಹೇಳಿಕೆಯಲ್ಲಿ ತಿಳಿಸಿರುವುದರಿಂದ ಮತ್ತು ಅದೇ ಸಂದರ್ಭದಲ್ಲಿ ಮೂಡಿಗೆರೆಯ 'ಹೊಯ್ಸಳ ಗೆಳೆಯರ ಬಳಗ' ಮತ್ತಿತರ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಗ್ರೂಪಿನಿಂದ ಇಂತಹ ಎಚ್ಚರಿಕೆಯ ಸಂದೇಶಗಳು ಹರಡುತ್ತಿರುವುದರಿಂದ ಮಲೆನಾಡಿನಲ್ಲಿ ಅನೈತಿಕ ಪೊಲೀಸ್ ಗಿರಿ ಮತ್ತು ಕಟ್ಟರ್‌ವಾದಿ ಹಿಂದೂ ಸಂಘಟನೆಗಳು ಅಟ್ಟಹಾಸ ಎಷ್ಟರಮಟ್ಟಿಗೆ ಬಲಿತಿದೆ ಎಂಬುದು ಬಹಿರಂಗವಾಗಿದೆ. ಆದರೆ, ಸಮಾಜದಲ್ಲಿ ಭೀತಿ ಹರಡುವ, ಧರ್ಮದ ಹೆಸರಲ್ಲಿ ಭಯ ಬಿತ್ತುವ ಹಾಗೂ ಮಹಿಳೆಯರ ವಿರುದ್ಧ ದೌರ್ಜನ್ಯ ನಡೆಸುತ್ತೇವೆ ಎಂದು ರಾಜಾರೋಷವಾಗಿ ಹೇಳಿಕೊಳ್ಳುವವರ ವಿರುದ್ಧ ರಾಜ್ಯ ಸರ್ಕಾರ ಮೌನ ವಹಿಸಿರುವುದು ಕೂಡ ಮಲೆನಾಡಿಗರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ನಡುವೆ, ಧನ್ಯಶ್ರೀ ಸಾವಿನ ಪ್ರಕರಣದಲ್ಲಿ ಬಿಜೆಪಿಯ ಯುವ ಮುಖಂಡ ಅನಿಲ್ ಎಂಬಾತನ ಬಂಧನವಾಗಿರುವ ಬೆನ್ನಲ್ಲೇ ರಾಜ್ಯ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಕಳೆದ ಎರಡು ದಿನಗಳ ಕಾಲ ಮೂಡಿಗೆರೆ ತಾಲ್ಲೂಕಿನ ಆಲ್ದೂರು ಹೋಬಳಿಯ ಸುತ್ತಮುತ್ತಲ ಗ್ರಾಮದಲ್ಲಿ ಯುವಕರ ಗುಂಪುಗಳ ಸಭೆ ನಡೆಸಿದ್ದಾರೆ. ಅದು ಚುನಾವಣೆ ಹಿನ್ನೆಲೆಯಲ್ಲಿ ನಡೆದ ಪಕ್ಷದ ಯುವ ಕಾರ್ಯಕರ್ತರ ಸಭೆ ಎಂದು ಮೂಡಿಗೆರೆ ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಆದರೆ, ಮೂಡಿಗೆರೆಯಲ್ಲೇ ಎರಡು ದಿನ ತಂಗಿದ್ದರೂ, ಹಿಂದೂ ಯುವತಿಯೊಬ್ಬಳು ಆತ್ಮಹತ್ಯೆಯ ವಿಷಯ ಗೊತ್ತಿದ್ದರೂ, ತಮ್ಮದೇ ಯುವ ಮೋರ್ಚಾ ಮುಖಂಡನೇ ಆಕೆಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದರೂ, ಯುವತಿಯ ಮನೆಮಂದಿಗೆ ಸಾಂತ್ವನ ಹೇಳಲು ಯಾಕೆ ಪ್ರತಾಪ ಸಿಂಹ ಪ್ರಯತ್ನಿಸಲಿಲ್ಲ? ರಾಜ್ಯದ ಯಾವುದೋ ಮೂಲೆಯಲ್ಲಿ, ಯಾವುದೇ ಕಾರಣಕ್ಕೆ ಹಿಂದೂಗಳ ಕೊಲೆಯಾದರೂ, ಆ ಬಗ್ಗೆ ಉಗ್ರವಾಗಿ ಖಂಡಿಸುವ, ಬೆಂಕಿ ಹಚ್ಚುವ ಮಾತನಾಡುವ ಸಂಸದರಿಗೆ ಈ ಯುವತಿ ಕೂಡ ಹಿಂದೂ ಎಂಬುದು ನೆನಪಾಗಲಿಲ್ಲವೆ? ಎಂಬುದು ಈಗ ಮೂಡಿಗೆರೆಯಲ್ಲಿ ಕೇಳಿಬರುತ್ತಿರುವ ಪ್ರಶ್ನೆ.

ಜೊತೆಗೆ, ಸಂಸದೆ ಶೋಭಾ ಕರಂದ್ಲಾಜೆ ಅವರು ಕೂಡ ಘಟನೆ ನಡೆದು ನಾಲ್ಕು ದಿನಗಳ ಬಳಿಕವೂ ನತದೃಷ್ಟ ಯುವತಿಯ ಸಾವಿನ ಬಗ್ಗೆಯಾಗಲೀ, ಅದಕ್ಕೆ ಕಾರಣರು ಎನ್ನಲಾಗಿರುವ ತಮ್ಮದೇ ಸಂಘಪರಿವಾರದ ಪುಂಡರ ಬಗ್ಗೆಯಾಗಲೀ ತುಟಿಬಿಚ್ಚದಿರುವುದು ಕೂಡ ಸಂಸದರ ಸ್ವಕ್ಷೇತ್ರ ಮೂಡಿಗೆರೆ ಮತ್ತು ಚಿಕ್ಕಮಗಳೂರಿನಲ್ಲಿ ವ್ಯಾಪಕ ಟೀಕೆ ಮತ್ತು ಅನುಮಾನಗಳಿಗೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಬೆದರಿಕೆಯ ಸಂದೇಶಗಳ ಬಗ್ಗೆ ಪ್ರತಿಕ್ರಿಯಿಸಿರುವ ಅಣ್ಣಮಲೈ ಅವರು ಮಾಧ್ಯಮದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಸಂಘಟನೆ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗುವುದು. ವಾಟ್ಸಾಪ್‌ನಲ್ಲಿ ಬೆದರಿಕೆ ಹಾಕಿದ ನಾಲ್ಕು ಜನರ ಮೇಲೆ ಕೂಡ ದೂರು ದಾಖಲು ಮಾಡಲಾಗುವುದು ಎಂದಿದ್ದಾರೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More