ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಅಪಸ್ವರಕ್ಕೆ ವೇಣುಗೋಪಾಲ್‌ ಭೇಟಿಯ ಮದ್ದು?

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ವಿಜಯಪುರ ಪ್ರವಾಸದ ವೇಳೆ ಪಕ್ಷದೊಳಗಿನ ಭಿನ್ನಮತವನ್ನು ಶಮನಗೊಳಿಸಲು ಪ್ರಯತ್ನಿಸಿದ್ದಾರೆ. ಪಕ್ಷದ ಹಿಡಿತ ಜಿಲ್ಲೆಯಲ್ಲಿ ಮುಂದುವರೆಯಬೇಕಾದರೆ ಟಿಕೆಟ್‌ ಆಕಾಂಕ್ಷಿಗಳ ನಡುವಿನ ಪೈಪೋಟಿಯನ್ನು ನಾಜೂಕಾಗಿ ನಿಭಾಯಿಸಬೇಕಿದೆ

ವಿಜಯಪುರ ಜಿಲ್ಲಾ ವ್ಯಾಪ್ತಿಯ ೮ ವಿಧಾನಸಭಾ ಕ್ಷೇತ್ರಗಳಲ್ಲಿ ೭ರಲ್ಲಿ ಗೆದ್ದಿರುವ ಕಾಂಗ್ರೆಸ್‌ ಮುಂದಿನ ಬಾರಿಯೂ ಜಿಲ್ಲೆಯಲ್ಲಿ ತನ್ನ ಬಿಗಿಹಿಡಿತ ಉಳಿಸಿಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಸಂಘಟನೆಯನ್ನು ಬಲಗೊಳಿಸುವ, ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಸಲುವಾಗಿ ಗುರುವಾರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಹೊಣೆ ಹೊತ್ತಿರುವ ಕೆ ಸಿ ವೇಣುಗೋಪಾಲ್‌ ಭೇಟಿ ನೀಡಿದ್ದರು. ಇದೇ ವೇಳೆ ಜಿಲ್ಲಾ ಕಾಂಗ್ರೆಸ್‌ನಲ್ಲಿರುವ ಭಿನ್ನಮತವನ್ನು ಶಮನ ಮಾಡುವ ಪ್ರಯತ್ನವನ್ನು ಅವರು ಮಾಡಿದರಾದರೂ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ.

ಜಿಲ್ಲೆಯಲ್ಲಿನ ಕಾಂಗ್ರೆಸ್ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯುವ ಉದ್ದೇಶದಿಂದ ಗುರುವಾರ ಮಧ್ಯರಾತ್ರಿವರೆಗೂ ವೇಣುಗೋಪಾಲ್‌ ಸಭೆ ನಡೆಸಿದರು. ನಗರದ ಐಬಿಯಲ್ಲಿ ವಾಸ್ತವ್ಯ ಹೂಡಿದ್ದ ವೇಣುಗೋಪಾಲ್ ಅವರನ್ನು ಕಾಣಲು ಬೆಳಗ್ಗೆಯೇ ಪಕ್ಷದ ನಾಯಕರ ದಂಡು ಐಬಿಗೆ ಲಗ್ಗೆಯಟ್ಟಿತ್ತು. ನಗರದ ಶಾಸಕ ಮಕ್ಬೂಲ್ ಬಾಗವಾನ್ ವಿರುದ್ಧ ಹಿರಿಯ ನಾಯಕರು ದೂರು ನೀಡಿ, ಈ ಬಾರಿ ಹಾಲಿ ಶಾಸಕರ ಬದಲಾಗಿ ಬೇರೆಯವರಿಗೆ ಟಿಕೆಟ್‌ ನೀಡಬೇಕು ಎಂದು ಬಹಿರಂಗವಾಗಿ ಒತ್ತಾಯಿಸಿದರು. ಈ ಮಧ್ಯೆ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕಲಾಲ್ ಅವರು “ಈ ಬಾರಿ ತಮಗೆ ಟಿಕೆಟ್ ಕೊಡಬೇಕು,” ಎಂದು ಪಟ್ಟು ಹಿಡಿದರು. ವೇಣುಗೋಪಾಲ್ ಅವರು ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಅವರ ಜೊತೆಗೆ ವಾಗ್ದಾದಕ್ಕಿಳಿದರು. ಬಳಿಕ ಸ್ಥಳೀಯ ನಾಯಕರು ಅತೃಪ್ತರನ್ನು ಸಮಾಧಾನಪಡಿಸಿ ಅಲ್ಲಿಂದ ಕಳುಹಿಸಿದ ಘಟನೆ ನಡೆಯಿತು.

ಬಳಿಕ ನಗರದ ಸ್ವಾರ್ ಹಾಲ್‌ನಲ್ಲಿ ನಡೆಯುತ್ತಿದ್ದ ಬೂತ್‌ ಮಟ್ಟದ ಕಾರ್ಯಕರ್ತರ ಸಭೆಗೆ ಆಗಮಿಸಿದ ವೇಣುಗೋಪಾಲ್, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು. ಬೂತ್ ಮಟ್ಟದಲ್ಲಿ ಕಾರ್ಯಕರ್ತರಿಗೆ, ಪದಾಧಿಕಾರಿಗಳಿಗೆ ಆಗುತ್ತಿರುವ ತೊಂದರೆಗಳನ್ನು ಆಲಿಸಿದರು. ಸ್ಥಳೀಯ ಶಾಸಕರು, ವಿವಿಧ ಘಟಕಗಳ ಅಧ್ಯಕ್ಷರ ಜೊತೆ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಭಿನ್ನಮತಕ್ಕೆ ಅವಕಾಶ ನೀಡದಂತೆ ಮುಖಂಡರಿಗೆ ಎಚ್ಚರಿಕೆ ನೀಡಿ, ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ, ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಶ್ರಮಿಸುವಂತೆ ಸೂಚನೆ ನೀಡಿದರು.

ಇದನ್ನೂ ಓದಿ : ಕಾಂಗ್ರೆಸ್‌ ಬಿಡಲು ಚಿಂತಿಸಿದ್ದವರ ಮನಸ್ಸು ಬದಲಿಸಿತೇ ಸಾಧನಾ ಸಮಾವೇಶ?

ನಾಗಠಾಣ ಮೀಸಲು ಕ್ಷೇತ್ರದ ಶಾಸಕ, ರಾಜ್ಯ ಸಾಬೂನು ಮತ್ತು ಮಾರ್ಜಕ ಮಂಡಳಿ ಅಧ್ಯಕ್ಷ ರಾಜು ಆಲಗೂರ್ “ಟಿಕೆಟ್ ನೀಡಿದರೆ ಶಾಸಕ ಸ್ಥಾನಕ್ಕೆ ನಿಲ್ಲುತ್ತೇನೆ. ಇಲ್ಲದಿದ್ದರೆ ಲೋಕಸಭೆ ಚುನಾವಣೆಗೆ ನಿಲ್ಲುತ್ತೇನೆ” ಎಂದು ಹೇಳುವ ಮೂಲಕ ವಿಧಾನಸಭೆ ಚುನಾವಣೆಗೆ ಟಿಕೆಟ್ ಖಾತ್ರಿ ಇಲ್ಲ ಎಂಬುದನ್ನು ಬಹಿರಂಗಪಡಿಸಿದರು.

ವಿಜಯಪುರದ ನಗರದ ಬೂತ್ ಮಟ್ಟದ ಸಭೆಯ ಬಳಿಕ ವೇಣುಗೋಪಾಲ್ ಅವರು ಮುದ್ದೇಬಿಹಾಳ ಪಟ್ಟಣಕ್ಕೆ ತೆರಳಿ ಅಲ್ಲಿಯೂ ಸಹ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿದರು. ವಿಜಯಪುರ ನಗರಕ್ಕೆ ಹತ್ತಿರದ ಕ್ಷೇತ್ರವನ್ನು ಬಿಟ್ಟು 80 ಕಿಲೋ ಮೀಟರ್ ದೂರದ ಮುದ್ದೇಬಿಹಾಳ ಕ್ಷೇತ್ರಕ್ಕೆ ವೇಣುಗೋಪಾಲ್ ತೆರಳಿದ್ದು, ಕುತೂಹಲಕ್ಕೆ ಕಾರಣವಾಗಿತ್ತು. ಈ ಹಿಂದೆ ದೇವರಹಿಪ್ಪರಗಿ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಎ ಎಸ್ ಪಾಟೀಲ್ ನಡಹಳ್ಳಿ ಇದೀಗ ಜೆಡಿಎಸ್‌ನಿಂದ ಮುದ್ದೇಬಿಹಾಳ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ನಡಹಳ್ಳಿ ಅವರನ್ನು ಶತಾಯ ಗತಾಯ ಸೋಲಿಸಲು ಕಾಂಗ್ರೆಸ್‌ ಪಣತೊಟ್ಟಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More