ಗುಮ್ಮಟ ನಗರಿ ವಿಜಯಪುರದ ಸಿದ್ದೇಶ್ವರ ಜಾತ್ರೆಗೆ ಶತಮಾನದ ಸಂಭ್ರಮ

ಸಂಕ್ರಾಂತಿ ಸೊಬಗಿನೊಂದಿಗೆ ಉತ್ತರ ಕರ್ನಾಟಕದ ವೈಭವದ ವಿಜಯಪುರ ಸಿದ್ದೇಶ್ವರ ಜಾತ್ರೆಯೂ ಮೇಳೈಸಲಿದೆ. ಸಿದ್ದರಾಮರ ಜೀವನ ಚರಿತ್ರೆ ಜಾತ್ರೆಯಲ್ಲಿ ಜಾತ್ರೆಯೂ ಆಚರಣೆಯಾಗುವುದು ವಿಶೇಷ. ಅಷ್ಟೇ ಅಲ್ಲ, ಈ ಬಾರಿ ನಡೆಯುತ್ತಿರುವ ಈ ಉತ್ಸವ ನೂರನೇ ವರ್ಷದ ಸಂಭ್ರಮ

ದಕ್ಷಿಣಾಯಣ ಮುಗಿದು ಉತ್ತರಾಯಣದ ಕಡೆ ಸೂರ್ಯ ತನ್ನ ಪಥ ಬದಲಿಸುವ ದಿನ ಮಕರ ಸಂಕ್ರಮಣ. ಈ ಮಕರ ಸಂಕ್ರಮಣ ಕಾಲ ದಕ್ಷಿಣ ಭಾರತದಲ್ಲಿ ಅತೀ ದೊಡ್ಡ ಉತ್ಸವದ ಸಮಯ. ಬಹಳಷ್ಟು ಊರುಗಳ ದೇವಸ್ಥಾನಗಳು ಈ ಅವಧಿಯಲ್ಲಿಯೇ ವಾರ್ಷಿಕ ಜಾತ್ರೆಯನ್ನು ಆಯೋಜಿಸುತ್ತವೆ. ಕರ್ನಾಟಕದಲ್ಲಿ ಕೆಲವು ಭಾಗಗಳಲ್ಲಿ ಎಳ್ಳು-ಬೆಲ್ಲ ತಿಂದು ಹಬ್ಬ ಆಚರಿಸಿದರೆ, ಇನ್ನು ಹಲವೆಡೆ ಜಾತ್ರೆಗಳ ಸಂಭ್ರಮ, ಕೇರಳದ ಶಬರಿಮಲೆಯಲ್ಲಿ ದೊಡ್ಡ ವಾರ್ಷಿಕ ಉತ್ಸವ. ತಮಿಳುನಾಡಿನಲ್ಲಿದು ಪೊಂಗಲ್ ಆಗಿ ಆಚರಣೆಯಾಗುತ್ತದೆ. ಈ ಸಂಕ್ರಾಂತಿ ಸಂಭ್ರಮ ಗುಮ್ಮಟನಗರಿ ವಿಜಯಪುರದಲ್ಲಿಯೂ ಬಲು ಜೋರಾಗಿರುತ್ತೆ. ಜಾತ್ರೆಗಳ ಜಾತ್ರೆ, ಜಾತ್ರೆಗಳ ತೊಟ್ಟಿಲು ಎಂದೇ ಮನೆ ಮಾತಾಗಿರುವ ಸಿದ್ದೇಶ್ವರ ಜಾತ್ರೆ ಈ ಸಂಭ್ರಮಕ್ಕೆ ಸಾಕ್ಷಿ.

1918ರಿಂದ ಸಿದ್ದೇಶ್ವರ ಸಂಸ್ಥೆಯ ಆಡಳಿತ ಮಂಡಳಿ ಮೇಲ್ವಿಚಾರಣೆಯಲ್ಲಿ ವಿಜಯಪುರದಲ್ಲಿ ಜಾತ್ರೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಸಂಘಟಿಸಲಾಗುತ್ತಿದೆ. ಈ ಸಿದ್ದೇಶ್ವರ ಜಾತ್ರೆ ಇದೀಗ ಶತಮಾನದ ಸಂಭ್ರಮ ಆಚರಣೆ ಮಾಡುತ್ತಿದ್ದು, ಇಡೀ ವಿಜಯಪುರ ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಜಾತ್ರಾ ಮಹೋತ್ಸವದ ಅಂಗವಾಗಿ 770 ಲಿಂಗಕ್ಕೆ ಎಣ್ಣೆ ಮಜ್ಜನ, ಅಭಿಷೇಕ, ನಂದಿ ಧ್ವಜಗಳ ಮೆರವಣಿಗೆ, ಚಿತ್ತಾಕರ್ಷಕ ಮದ್ದು ಸುಡುವ ಕಾರ್ಯಕ್ರಮ, ದನಗಳ ಜಾತ್ರೆ, ಕಲಾ ಪ್ರದರ್ಶನ, ಜಾನಪದ ಕಲಾವಿದರಿಂದ ಕಲಾ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಲಿವೆ.

ಸೊನ್ನಲಿಗೆ ಶಿವಯೋಗಿ ಸಿದ್ದರಾಮ ರೈತರ ಆರಾಧ್ಯ ದೈವ. ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲ ರೈತರು, ವ್ಯಾಪಾರಸ್ಥರು ಸಿದ್ದೇಶ್ವರನನ್ನು ಆರಾಧಿಸುತ್ತಾರೆ. ಕಾಯಕವೇ ಕೈಲಾಸ ಎಂಬ ಅಣ್ಣ ಬಸವಣ್ಣನವರ ತತ್ವವನ್ನು ಜೀವನದ ಉಸಿರಾಗಿಸಿಕೊಂಡಿದ್ದ ಸಿದ್ದರಾಮರು ಒಬ್ಬ ಮಹಾನ್ ಯೋಗಿ. ಸಿದ್ದೇಶ್ವರ, ಸಿದ್ದರಾಮೇಶ್ವರ ಎಂಬ ಹೆಸರುಗಳಿಂದಲೂ ಸಿದ್ದೇಶ್ವರ ಹೆಸರುವಾಸಿ. ಸಿದ್ದರಾಮ ಬಸವಣ್ಣನ ಅನುಯಾಯಿ. ಸೊನ್ನಲಗಿಯ (ಇಂದಿನ ಸೋಲಾಪುರ) ದೊರೆಯಾಗಿದ್ದವ ಸಿದ್ದರಾಮ. ಬಸವಣ್ಣವರ ನುಡಿಯಲ್ಲಿ ಬಲವಾದ ನಂಬಿಕೆ ಇಟ್ಟಿದ್ದ ಸಿದ್ದರಾಮ ಶರಣ ಸಾಹಿತ್ಯದಲ್ಲಿ ಬರುವ ಪ್ರಮುಖ ವಚನಕಾರರಲ್ಲೊಬ್ಬ. ಅಲ್ಲಮಪ್ರಭು, ದೇವರ ದಾಸಿಮಯ್ಯ, ಚನ್ನಬಸವರಂತೆ ವಚನ ಬರೆಯುತ್ತಿದ್ದ ಸಿದ್ದರಾಮ ಕನ್ನಡ ಸಾಹಿತ್ಯಕ್ಕೆ ವಚನಗಳ ಕೊಡುಗೆ ನೀಡಿದವ. ಆರಾಧ್ಯ ದೈವನಿಗಾಗಿ ಆಚರಿಸುವ ಸಿದ್ದೇಶ್ವರ ಜಾತ್ರೆ ಅಂದ್ರೆ ಜಿಲ್ಲೆಯ ಜನತೆಯ ಪ್ರತಿಯೊಬ್ಬರ ಮನೆಯ ಹಬ್ಬ. ಇದು ಇಡೀ ಊರಿನ ಹಬ್ಬ. ಜಾತ್ರೆಯ ಅಂಗವಾಗಿ ನಡೆಯುವ ನಂದಿಕೋಲು ಮೆರವಣಿಗೆ ಈ ಜಾತ್ರೆಯ ಪ್ರಮುಖ ಆಕರ್ಷಣೆ. ನಂದಿಕೋಲುಗಳನ್ನು ಮದುಮಗಳಂತೆ ಸಿಂಗರಿಸಿ ಊರ ತುಂಬೆಲ್ಲ ಮೆರವಣಿಗೆ ಮಾಡಿ ಅದ್ದೂರಿಯಾಗಿ ಜಾತ್ರೆ ನಡೆಸಲಾಗುತ್ತದೆ. ದೇಶದ ವಿವಿಧ ಭಾಗಗಳಿಂದ ಆಗಮಿಸುವ ಲಕ್ಷಾಂತರ ಜನ ಎಂಟು ದಿನಗಳ ಕಾಲ ನಡೆಯುವ ಜಾತ್ರೆಗೆ ಮೆರುಗು ನೀಡುತ್ತಾರೆ.

ಸಂಕ್ರಾಂತಿ ಸೊಬಗಿನೊಂದಿಗೆ ಉತ್ತರ ಕರ್ನಾಟಕದ ವೈಭವ ಜಾತ್ರೆಯಲ್ಲಿ ಮೇಳೈಸಲಿದ್ದು, ಸಿದ್ದರಾಮರ ಜೀವನ ಚರಿತ್ರೆ ಜಾತ್ರೆಯಲ್ಲಿ ಆಚರಣೆಯಾಗುವುದು ಇಲ್ಲಿನ ವಿಶೇಷ. ಇದನ್ನು ಕಣ್ತುಂಬಿಕೊಳ್ಳಲು ದೇಶದ ಮೂಲೆ ಮೂಲೆಯಿಂದ ಸಿದ್ದರಾಮನ ಭಕ್ತರು ಇಲ್ಲಿಗೆ ಆಗಮಿಸುವುದು ಪ್ರತಿ ವರ್ಷವೂ ತಪ್ಪದು. ಐತಿಹಾಸಿಕ ಹಿನ್ನೆಲೆಯ ಜಾತ್ರೆ ಇದೀಗ ‘ನಮ್ಮೂರ ಜಾತ್ರೆ’ಯಾಗಿ ಮಾರ್ಪಟ್ಟಿದ್ದು, ಉತ್ತರ ಕರ್ನಾಟಕವೂ ಸೇರಿದಂತೆ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶದಿಂದಲೂ ಭಕ್ತರು ಜಾತ್ರೆಯ ವೈಭವ ನೋಡಲು ತಂಡೋಪತಂಡವಾಗಿ ಬರುತ್ತಾರೆ. ವಿಜಯಪುರದ ಸಿದ್ದೇಶ್ವರ ಮಂದಿರದ ಸಂಕ್ರಮಣದ ಜಾತ್ರೆ ಬಂತೆಂದರೆ ಗುಡಿ ವಿದ್ಯುತ್‌ ದೀಪಾಲಂಕಾರಗಳಿಂದ ಕಂಗೊಳಿಸುವುದನ್ನು ಕಣ್ತುಂಬಿಕೊಳ್ಳುವುದೇ ಒಂದು ಆನಂದ. ನೂರಾರು ಸಾಲಂಗಡಿಗಳು, ಮಕ್ಕಳ ಮನೋರಂಜನಾ ಆಟಿಕೆ, ಬೇರೆ ಬೇರೆ ಕಡೆ ಉದ್ಯೋಗಕ್ಕಾಗಿ, ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ ಯುವಕ, ಯುವತಿಯರು ಜಾತ್ರೆಯ ದಿನ ತಪ್ಪದೆ ಊರಿಗೆ ಬಂದು, ಬಂಧು-ಬಾಂಧವರ ಜೊತೆ ಜಾತ್ರೆಯಲ್ಲಿ ಸುತ್ತಾಡುತ್ತಾ ಸಂತಸ ಪಡುವುದು, ಬಾಲ್ಯದ ಕ್ಷಣಗಳನ್ನ ಮತ್ತೆ ಮೆಲಕು ಹಾಕುವುದು, ಪರಸ್ಪರ ಕಷ್ಟ ಸುಖ ವಿಚಾರಿಸುತ್ತಾ ಜಾತ್ರೆಯಲ್ಲಿ ಕಾಲ ಕಳೆಯುತ್ತಾ ಸಂಭ್ರಮ ಪಡುತ್ತಾರೆ. ಇನ್ನು ಈ ಸಂಭ್ರಮಕ್ಕೆ ಸರ್ಕಸ್‌, ಜೋಕಾಲಿ, ಸಾಹಸ ಕ್ರೀಡೆಗಳ ಪ್ರದರ್ಶನ, ಸಂಗೀತ ವಾಧ್ಯಗಳ ಆರ್ಭಟ ಸಾಥ್ ನೀಡ್ತಾವೆ. ಜಾತ್ರೆಯಲ್ಲಿ ಯುವಕರ ಕೀಟಲೆ, ಮಕ್ಕಳ ಆಟಿಕೆಗಳು, ಮಹಿಳೆಯರ ಬಳೆ- ಅಲಂಕಾರಿಕ ವಸ್ತುಗಳ ಖರೀದಿ, ವಿವಿಧ ಬಗೆಯ ತಿಂಡಿ ತಿನಿಸುಗಳ ಘಮ-ಘಮ ಪರಿಮಳ ಜಾತ್ರೆಯ ಅನುಭವನ್ನ ಮತ್ತಷ್ಟು ಹೆಚ್ಚಿಸುತ್ತವೆ.

“ಸಿದ್ದೇಶ್ವರ ಜಾತ್ರೆ ಎಂದರೆ ಜಿಲ್ಲೆಯ ಜನತೆಯ ಪ್ರತಿಯೊಬ್ಬರ ಮನೆಯ ಹಬ್ಬದಂತೆ. ಇದು ಇಡೀ ಊರಿನ ಹಬ್ಬ. ಈಗಾಗಲೇ ಜಾತ್ರಾ ಮಹೋತ್ಸವಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಇದು ರೈತರ ಜಾತ್ರೆ, ಗ್ರಾಮಿಣ ಜನರ ಜಾತ್ರೆ. ನಮ್ಮೂರ ಜಾತ್ರೆಗೆ ಎಲ್ಲರೂ ಬನ್ನಿ,” ಎಂದು ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ ಅವರು ಆಹ್ವಾನಿಸಿದ್ದಾರೆ.

ಜಾತ್ರೆ ಅಂದರೆ ಅಲ್ಲಿ ಸಂಗೀತ, ಸಾಂಸ್ಕ್ರತಿಕ ಕಾರ್ಯಕ್ರಮಗಳ ಜೊತೆಗೆ ಪಾರಂಪರಿಕವಾದ ಭಕ್ತಿ, ಆಚರಣೆ, ನಂಬಿಕೆ ಶ್ರದ್ಧೆ ಇರುತ್ತದೆ. ಆದರೆ ವಿಜಯಪುರದ ಈ ಜಾತ್ರೆಯಲ್ಲಿ ಧಾರ್ಮಿಕ ಆಚರಣೆಯೊಂದಿಗೆ ಸಾಮಾಜಿಕ ಕಾರ್ಯಗಳು ನಡೆಯುತ್ತವೆ. ಜಾತ್ರೆಯಲ್ಲಿ ಕುಸ್ತಿ, ಕಬಡ್ಡಿಯಂತಹ ಕ್ರೀಡೆಗಳನ್ನ ಆಯೋಜನೆ ಮಾಡುವುದಲ್ಲದೆ, ಎತ್ತು-ದನಗಳ ಜಾತ್ರೆಯೂ ನಡೆಯುತ್ತದೆ. ಮೊದಲೆಲ್ಲ ಇದು ವಿಜಯಪುರ ನಗರದಲ್ಲೇ ನಡಯುತ್ತಿತ್ತು. ಆದರೆ ಆಧುನಿಕತೆ ಬೆಳೆದಂತೆ, ವಾಹನ ದಟ್ಟನೆ ಅಧಿಕವಾದಂತೆ, ಜನಸಂಖ್ಯೆ ಅಧಿಕವಾದಂತೆ ಇಲ್ಲಿಂದ ಸ್ಥಳಾಂತರಿಸಿ, ನಗರದ ಹೊರಭಾಗದ ತೊರವಿಯಲ್ಲಿ ನಡೆಯುತ್ತಿದ್ದು, ಈ ಜಾತ್ರೆಯನ್ನು ಉತ್ತರ ಕರ್ನಾಟಕದಲ್ಲೇ ಅತ್ಯಂತ ದೊಡ್ಡ ಜಾನುವಾರು ಜಾತ್ರೆ ಅಂತಾ ಕರೆಯಲಾಗುತ್ತೆ. ಇಲ್ಲಿಗೆ ಬೇರೆ ಬೇರೆ ಊರುಗಳಿಂದ ಬರುವ ರೈತರು ತಮಗೆ ಬೇಕಾದ ರಾಸುಗಳನ್ನ ಕೊಳ್ಳುವ, ಮಾರಾಟ ಮಾಡುವ ಕಾಯಕದಲ್ಲಿ ಬ್ಯೂಸಿಯಾಗಿರುತ್ತಾರೆ. ಈ ಕಾರಣದಿಂದಲೇ ರೈತರು ಮತ್ತು ವ್ಯಾಪಾರಸ್ಥರು ಜಾತ್ರೆ ಆಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. “ಪ್ರತಿ ವರ್ಷ ಬರಗಾಲದಿಂದ ಮೇವು ಇಲ್ಲದೆ ಜಾನುವಾರುಗಳನ್ನು ಮಾರಲು ಬರುತ್ತಿದ್ದೆವು. ಆದ್ರೆ ಈ ಸಲ ಉತ್ತಮ ಮಳೆಯಾದ ಕಾರಣ ಮೇವಿನ ಕೊರತೆ ಇಲ್ಲದ ಕಾರಣ ಜಾನುವಾರುಗಳನ್ನ ಕೊಂಡುಕೊಳ್ಳಲು ಬಂದಿದ್ದೇನೆ. ಈ ಜಾತ್ರೆ ರೈತರ ಪಾಲಿಗೆ ವರದಾನ,” ಎನ್ನುವುದು ರೈತ ಚನ್ನಬಸಯ್ಯ ಹಿರೇಮಠ ಅಭಿಪ್ರಾಯ.

ಇದನ್ನೂ ಓದಿ : ಚಿಕ್ಕಲ್ಲೂರು ಜಾತ್ರೆ ಪಂಕ್ತಿ ಸೇವೆ ಪರಂಪರೆ ಉಳಿವಿಗೆ ಇರುವ ಒಳದಾರಿಗಳೇನು?

ಸೊಲ್ಲಾಪುರ ಹೊರತುಪಡಿಸಿದರೆ ಬೃಹತ್ ಪ್ರಮಾಣದಲ್ಲಿ ವಿಜೃಂಭಣೆಯಿಂದ ಸಿದ್ದರಾಮೇಶ್ವರರ ಜಾತ್ರೆ ನಡೆಯುವುದು ವಿಜಯಪುರದಲ್ಲೇ ಎಂಬುದು ವಿಶೇಷ. ಇದು ನಮ್ಮ ಆಚರಣೆಯ ಜೊತೆಗೆ ಅನ್ನದಾತರು ರಾಸುಗಳನ್ನ ಉಳಿಸಿ ಬೆಳೆಸಲು ಪ್ರೋತ್ಸಾಹ ನೀಡಿದಂತಾಗುತ್ತೆ. ಇದಕ್ಕಾಗಿ ಸಿದ್ದೇಶ್ವರ ಸಂಸ್ಥೆ ಉತ್ತಮವಾದ ಎತ್ತುಗಳಿಗೆ ಬಂಗಾರದ ಆಭರಣಗಳ ರೂಪದಲ್ಲಿ ಬಹುಮಾನ ನೀಡುವ ಪದ್ದತಿ ರೂಡಿಸಿಕೊಂಡು ಬಂದಿದೆ. ಇದರ ಜೊತೆಗೆ ಮಹಿಳಾ ಹಾಗೂ ಪುರುಷ ಕುಸ್ತಿ, ಭಾರ ಎತ್ತುವ ಸ್ಪರ್ಧೆ ಗ್ರಾಮೀಣ ಸೊಗಡನ್ನ ಮತ್ತೆ ಮರುಕಳಿಸುವಂತೆ ಮಾಡುತ್ತವೆ. ಬಂಡವಾಳ ಶಾಹಿಗಳ ಆರ್ಭಟಕ್ಕೆ ನಲುಗಿದ ಕರ ಕುಶಲ ವಸ್ತುಗಳ ಮಾರಾಟ, ಖಾದಿ ವಸ್ತುಗಳ ಮಾರಾಟ, ಪ್ರಚಾರ, ತಯಾರಿಕೆ, ಅದರ ಮಹತ್ವವನ್ನ ತಿಳಿಸುವ ಮೂಲಕ ಗ್ರಾಮಿಣ ಕೈಗಾರಿಕೆಗಳು ಅಭಿವೃದ್ಧಿ ಹೊಂದಲು ಈ ಜಾತ್ರೆ ಪೂರಕವಾಗಿದೆ. “ನಮ್ಮೂರ ಜಾತ್ರೆ ಅಂದರೆ ನಮಗೆ ಹೆಮ್ಮೆ. ನಾನು ಪ್ರತಿವರ್ಷ ಎಲ್ಲೆ ಇದ್ರು ಜಾತ್ರೆಗೆ ಬರ್ತೇನೆ. ಜಾತ್ರೆಯಲ್ಲಿ ಸ್ನೇಹಿತರೊಂದಿಗೆ ಸುತ್ತಾಡೋ ಮಜಾನೆ ಬೇರೆ. ಈ ಸಲ ನೂರನೇ ವರ್ಷ ಇರೋದ್ರಿಂದ ಬೇರೆ ಜಿಲ್ಲೆಯ ನನ್ನ ಸ್ನೇಹಿತರನ್ನು ಕರೆ ತಂದಿದ್ದೇನೆ,” ಎನ್ನುತ್ತಾರೆ ಜಾತ್ರೆಗೆ ಆಗಮಿಸಿರುವ ಬಸವರಾಜ್ ಉಳ್ಳಾಗಡ್ಡಿ.

ಈ ಸಿದ್ದೇಶ್ವರ ಜಾತ್ರೆಯ ಮುಖ್ಯ ಸೆಳೆತ ಪಟಾಕಿ ಮದ್ದು ಸುಡುವ ಕಾರ್ಯಕ್ರಮ. ವಿಜಯಪುರದ ನಗರದ ಡಾ ಬಿ ಆರ್ ಅಂಬೇಡ್ಕರ್ ಆಟದ ಬಯಲಿನಲ್ಲಿ ಮದ್ದು ಸಿಡಿಸುವ ಕಾರ್ಯಕ್ರಮ ನಡೆಯುತ್ತದೆ. ಆಗಸದಲ್ಲಿ ಬಗೆ ಬಗೆಯ ಚಿತ್ತಾರ ಮೂಡಿಸುವ ಮದ್ದುಗಳ ಬರಾಟೆ ಜನರ ಮನವನ್ನು ಮುದಗೊಳಿಸಿ ಹಬ್ಬದ ಸಂತಸ ಇಮ್ಮಡಿಗೊಳಿಸುತ್ತ ಬಂದಿದೆ. ಇದರ ಜೊತೆಗೆ ದೇಶದ ಹಾಗೂ ರಾಜ್ಯದ ಪ್ರಖ್ಯಾತ ಕಲಾವಿದರಿಂದ ನಿರಂತರವಾಗಿ ಎಂಟು ದಿನಗಳ ಕಾಲ ವಿವಿಧ ಸಾಂಸ್ಕ್ರತಿಕ ಹಾಗೂ ಸಂಗೀತ ಕಾರ್ಯಕ್ರಮಗಳು ಜಾತ್ರೆಗೆ ಬರುವ ಭಕ್ತರ ಮನೋರಂಜಿಸುತ್ತವೆ. ಜೊತೆಗೆ ಜಾತ್ರೆಯ ಅವಧಿಯಲ್ಲಿ ಪ್ರತಿದಿನ ಬೆಳಿಗ್ಗೆ ಸಿದ್ದೇಶ್ವರ ದೇವಸ್ಥಾನದ ಮುಂಭಾಗ ನಡೆಯುವ ಜಾನಪದ ಕಾರ್ಯಕ್ರಮಗಳು, ನಮ್ಮ ಮೂಲ ಕಲೆಯನ್ನ ಉಳಿಸಿ ಬೆಳೆಸುವಂತೆ ಮಾಡಲು ಪ್ರೇರೆಪಿಸುವುದರೊಂದಿಗೆ ಅವುಗಳ ಮಹತ್ವವನ್ನ ತಿಳಿ ಹೇಳುತ್ತವೆ. ಧಾರ್ಮಿಕ ಆಚರಣೆಯ ಜತೆ ಜತೆಗೆ ಪಾರಂಪರಿಕ ಆಚರಣೆಗಳನ್ನು ಉಳಿಸುವ, ಬೆಳೆಸುವ ಕಾರ್ಯಕ್ಕೆ ನಮ್ಮೂರ ಜಾತ್ರೆ, ಶತಮಾನದ ಜಾತ್ರೆ, ಸಂಕ್ರಮಣದ ಜಾತ್ರೆ, ರೈತರ ಜಾತ್ರೆ ಕೈ ಬೀಸಿ ಕರೆಯುತ್ತಿದ್ದು, ನೀವೂ ಒಮ್ಮೆ ಇದನ್ನ ತಪ್ಪದೆ ನೋಡಬೇಕು. ಈ ಸಲದ ಜಾತ್ರೆ ಇಂದಿನಿಂದ (ಗುರುವಾರ) ಆರಂಭವಾಗಿದ್ದು, ಜನವರಿ 18ನೇ ತಾರೀಖಿನವರೆಗೆ ನಡೆಯಲಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More