ಅಕ್ರಮ ಮರಳು ಗಣಿಗಾರಿಕೆ; ತೆಲಂಗಾಣದಿಂದ ಯಾದಗಿರಿ ಜಿಲ್ಲೆಯ ಗಡಿ ಒತ್ತುವರಿ

ಈ ಹಿಂದೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಕಬ್ಬಿಣದ ಅದಿರಿನ ಗಣಿಗಾರಿಕೆಯು ಆಂಧ್ರಪ್ರದೇಶ-ಕರ್ನಾಟಕದ ಗಡಿಯನ್ನೇ ಬದಲಾಯಿಸಿತ್ತು. ಇದೀಗ ಮರುಳು ಗಣಿಗಾರಿಕೆಯ ಸರದಿ! ತೆಲಂಗಾಣ ರಾಜ್ಯವು ಕಲಬುರಗಿ, ಯಾದಗಿರಿ ಜಿಲ್ಲೆಗಳ ಗಡಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ

ಹಿಂದೊಮ್ಮೆ, ಬಳ್ಳಾರಿ ಜಿಲ್ಲೆಯಲ್ಲಿ ಕಬ್ಬಿಣದ ಅದಿರನ್ನು ಅಕ್ರಮವಾಗಿ ತೆಗೆಯುತ್ತಿದ್ದವರಿಗೆ ಒತ್ತಾಸೆಯಾಗಿ ನಿಂತಿದ್ದ ಆಂಧ್ರಪ್ರದೇಶ ಸರ್ಕಾರದ ಕಾರಣಕ್ಕೆ ಕರ್ನಾಟಕ-ಆಂಧ್ರ ಗಡಿಯ ಚಿತ್ರಣ ಸಂಪೂರ್ಣವಾಗಿ ಬದಲಾಗಿತ್ತು. ಈಗ ಮರಳು ಗಣಿಗಾರಿಕೆಗಾಗಿ ನಮ್ಮ ರಾಜ್ಯದ ಸುಮಾರು 143 ಎಕರೆಯಷ್ಟು ಪ್ರದೇಶದ ಮೇಲೆ ತೆಲಂಗಾಣ ವಕ್ರದೃಷ್ಟಿ ಬೀರಿದೆ. ಅಷ್ಟೇ ಅಲ್ಲ, ಒಂದು ಹೆಜ್ಜೆ ಮುಂದೆ ಹೋದ ತೆಲಂಗಾಣದ ಕಂದಾಯ ಇಲಾಖೆ ಅಧಿಕಾರಿಗಳು, ನಮ್ಮ ರಾಜ್ಯದ ಗ್ರಾಮದಲ್ಲಿನ ಮರಳು ಗಣಿಗಾರಿಕೆಗೆ ತಾವೇ ಟೆಂಡರ್ ಕರೆಯುವ ಮೂಲಕ ಒತ್ತುವರಿಗೆ ಅಧಿಕೃತ ಮೊಹರು ಹಾಕುವ ಷಡ್ಯಂತ್ರ ನಡೆಸಿದ್ದಾರೆ!

ಕಲಬುರಗಿ ಜಿಲ್ಲೆಯ ಸೇಡಂ ಹಾಗೂ ಯಾದಗಿರಿ ಜಿಲ್ಲೆಯ ಗುರುಮಠಕಲ್, ತೆಲಂಗಾಣದ ಗಡಿಭಾಗಕ್ಕಂಟಿದ ತಾಲೂಕುಗಳು. ಗುರುಮಠಕಲ್ ತಾಲೂಕಿನ ಚೆಲೇರಿ ಈಗ ಗಡಿ ವಿವಾದಕ್ಕೆ ಕಾರಣವಾಗಿರುವ ಗ್ರಾಮ. ಚೆಲೇರಿ ಹಳ್ಳವು ಯಾದಗಿರಿ ತಾಲೂಕಿನ ದೊಡ್ಡ ಹಳ್ಳಗಳಲ್ಲೊಂದು. ಉತೃಷ್ಟ ದರ್ಜೆಯ ಮರಳು ಇಲ್ಲಿನ ವಿಶೇಷ. ತೆಲಂಗಾಣದ ಗಡಿಯಂಚಿನ ಈ ನಮ್ಮ ರಾಜ್ಯದ ಗಡಿಗ್ರಾಮಗಳಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ಭಾಷೆ, ಭಾಷಿಕರ ಪ್ರಾಬಲ್ಯವೇ ಜಾಸ್ತಿ. ತೆಲಂಗಾಣದ ರಾಜಧಾನಿ ಹೈದರಾಬಾದ್‌ಗೆ ಇಲ್ಲಿಂದ ಎರಡು ಗಂಟೆಗಳಷ್ಟು ಅಂತರದ ಪ್ರಯಾಣ.

ಗುರುಮಠಕಲ್ ಮತಕ್ಷೇತ್ರ ಹಾಗೂ ತಾಲೂಕು ವ್ಯಾಪ್ತಿಗೊಳಪಡುವ ಕೊಂಕಲ್ ಹೋಬಳಿಯ ಚೆಲೇರಿಯು ಗಡಿಯಂಚಿನ ಕಟ್ಟಕಡೆಯ ಗ್ರಾಮ. ಸುಮಾರು 1500 ಜನಸಂಖ್ಯೆಯುಳ್ಳ ಇದು, ಜಿಲ್ಲಾಕೇಂದ್ರ ಯಾದಗಿರಿಯಿಂದ ಸುಮಾರು 60 ಕಿಮೀ ಅಂತರದಲ್ಲಿದೆ. ಚೆಲೇರಿ ಹಳ್ಳದ ಒಂದು ದಂಡೆಗೆ ನಿಂತು ಗಮನಿಸಿದರೆ, ಕೂಗಳತೆ ದೂರದಲ್ಲಿ ಕಾಣುವ ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ಉಟ್ಕೂರು ಮಂಡಳದ ನಾಗರೆಡ್ಡಿ ಪಲ್ಲಿ ಮುಂತಾದ ಗ್ರಾಮಗಳ ದನಿ ಕೇಳುತ್ತದೆ.

ಯಾದಗಿರಿ ತಾಲೂಕಿನ ದೊಡ್ಡ ಹಳ್ಳಗಳಲ್ಲೊಂದಾದ ಚೆಲೇರಿ ಗ್ರಾಮದ ಈ ಹಳ್ಳದ ವಿಸ್ತಾರ ಸುಮಾರು 143 ಎಕರೆ. ಗುಣಮಟ್ಟದ ಮರಳು ಈ ಹಳ್ಳದ ನೈಸರ್ಗಿಕ ಸಂಪತ್ತು. ಕಳೆದ ಕೆಲ ವರ್ಷಗಳಿಂದ ಚೆಲೇರಿ ಹಳ್ಳದಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆದಿತ್ತಾದರೂ ಇದನ್ನು ತಡೆಗಟ್ಟಬೇಕಾದ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಜಾಣ ಕುರುಡು ಹಾಗೂ ಜಾಣ ಕಿವುಡು ನೀತಿಗಳಿಂದಾಗಿ ಅಕ್ರಮ ಮರಳುಗಾರಿಕೆ ಇಲ್ಲಿ ಸಾಮಾನ್ಯ ಎನಿಸಿಬಿಟ್ಟಿತ್ತು. ಹಗಲೂ ರಾತ್ರಿ ಎನ್ನದೆ ಹಳ್ಳದ ಒಡಲಿಗೆ ಕನ್ನ ಹಾಕಿ ಲಾರಿಗಳಲ್ಲಿ ಮರಳು ದೋಚುತ್ತಿದ್ದ ತಂಡಗಳು ಹೈದರಾಬಾದ್ ಹಾಗೂ ಕಲಬುರಗಿ ಮೂಲಕ ಮಹಾರಾಷ್ಟ್ರದ ಪೂನಾ, ಮುಂಬೈಗೆ ಸಾಗಿಸುತ್ತಿದ್ದವು. ಪ್ರತಿ ಲಾರಿ ಅಥವಾ ಟಿಪ್ಪರ್ಮರಳಿಗೆ 80 ಸಾವಿರ ರು.ಗಳಿಂದ 1 ಲಕ್ಷ ರು.ವರೆಗೆ ಚೆಲೇರಿ ಮಾರಾಟ ಮಾಡಲಾಗುತ್ತಿತ್ತು.

ಅಕ್ರಮ ಮರಳು ಗಣಿಗಾರಿಕೆ ಹೆಚ್ಚಾದಂತೆಲ್ಲ ತೆಲಂಗಾಣದ ಗಣಿಗಳ್ಳರ ಪ್ರಾಬಲ್ಯವೂ ಹೆಚ್ಚಾಗಿ, ಚೆಲೇರಿ ಗ್ರಾಮದ ಹಳ್ಳ ಬರುಬರುತ್ತ ಕರಗತೊಡಗಿ, ಸುತ್ತಮುತ್ತ ಹತ್ತಾರು ಹಳ್ಳಿಗಳಲ್ಲಿ ಅಂತರ್ಜಲ ಕುಸಿತಕ್ಕೂ ಕಾರಣವಾಯಿತು. ಐದಾರು ಅಡಿಗಳ ಆಳದಲ್ಲೇ ನೀರು ಲಭ್ಯವಾಗುತ್ತಿದ್ದ ಇಲ್ಲಿ, ನೂರಾರು ಅಡಿಗಳಷ್ಟು ಬೋರವೆಲ್ ಕೊರೆದರೂ ನೀರು ಕಾಣದಾದಾಗ, ಕೊಳ್ಳೆ ಹೊಡೆದ ಖನಿಜ ಸಂಪತ್ತಿನ ಮಹತ್ವ ಇಲ್ಲಿನವರಿಗೆ ಅರಿವಾಗತೊಡಗಿತ್ತು. ಅಷ್ಟರಲ್ಲಾಗಲೇ, ಆಂಧ್ರ-ತೆಲಂಗಾಣ ವಿಭಜನೆಯ ಗದ್ದಲಗಳಲ್ಲಿ, ಗಡಿ ವ್ಯಾಪ್ತಿ ಗುರುತಿಸುವ ಪ್ರಕ್ರಿಯೆಯಲ್ಲಿ ಚೆಲೇರಾ ಗ್ರಾಮದ ಹಳ್ಳದ ಹೆಚ್ಚಿನ ಭೂಭಾಗ ತಮ್ಮ ರಾಜ್ಯದ ವ್ಯಾಪ್ತಿ ಪ್ರದೇಶವೆಂದು ತೆಲಂಗಾಣ ನೀಲನಕ್ಷೆಗಳಲ್ಲಿ ನಮೂದಿಸಿಯಾಗಿತ್ತು! ವಿಚಿತ್ರವೆಂದರೆ, ನಮ್ಮದೇ ಚೆಲೇರಾ ಹಳ್ಳದ ಭಾಗದಲ್ಲಿ ಮರಳುಗಾರಿಕೆ ಹರಾಜು ಪ್ರಕ್ರಿಯೆಗೆ ತೆಲಂಗಾಣದ ಕಂದಾಯ ಅಧಿಕಾರಿಗಳು ಮೊಹರು ಒತ್ತಿದ್ದರು.

ಒತ್ತುವರಿ ಬೆಳಕಿಗೆ ಬಂದಿದ್ದು ಹೇಗೆ ?

ಚೆಲೇರಿ ಗ್ರಾಮದ ಹಳ್ಳಕ್ಕಂಟಿಕೊಂಡ ಪ್ರದೇಶದಲ್ಲಿ ಮರಳು ಗಣಿಗಾರಿಕೆ ಹರಾಜು ಪ್ರಕ್ರಿಯೆಗೆ ತೆಲಂಗಾಣದ ಅಧಿಕಾರಿಗಳು ಚಾಲನೆ ನೀಡಿದ್ದರು. ಸರ್ವೆ ಪ್ರಕಾರ, ನಮ್ಮ ರಾಜ್ಯದ ಚೆಲೇರಿಯ ಭೂಭಾಗವೂ ಅವರಿಗೇ ಸೇರಿತ್ತು ಅನ್ನೋ ವಾದವಿಟ್ಟಿದ್ದರು. ಇತ್ತ, ಈ ಮರಳು ಹರಾಜು ಪ್ರಕ್ರಿಯೆ ವಿರೋಧಿಸಿ ತೆಲಂಗಾಣದ ನಾಗರೆಡ್ಡಿ ಪಲ್ಲಿಯ ಶೇಖರಗೌಡ ಹಾಗೂ ಗ್ರಾಮಸ್ಥರು ಮೆಹಬೂಬ್ ನಗರ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದಿದ್ದರು. ಅಂತರ್ಜಲ ಕುಸಿತ ಹೆಚ್ಚಾಗುತ್ತಿದ್ದು, ಈ ಭಾಗದ ನೈಸರ್ಗಿಕ ಸಂಪತ್ತಿನ ರಕ್ಷಣೆಯಾಗಬೇಕು ಎಂದು ಮನವಿ ಮಾಡಿದ್ದರು.

ಗ್ರಾಮಸ್ಥರ ದೂರು ಆಧರಿಸಿ ತೆಲಂಗಾಣದ ಅಧಿಕಾರಿಗಳು ಪರಿಶೀಲನೆಗೆಂದು ಬಂದಾಗ ಗಡಿ ಒತ್ತುವರಿ ಬೆಳಕಿಗೆ ಬಂದಿತ್ತು. ಚೆಲೇರಿ ಹಳ್ಳದಿಂದ ಅನತಿ ದೂರದ ತೆಲಂಗಾಣದ ಗ್ರಾಮಗಳಲ್ಲಿನ ಮರಳುಗಾರಿಕೆ ಹಂತಹಂತವಾಗಿ ತನ್ನ ಭೂಭಾಗ ವಿಸ್ತರಿಸಿಕೊಂಡು, ಚೆಲೇರಿ ಹಳ್ಳದ ಭಾಗವನ್ನೂ ಆಕ್ರಮಿಸಿತ್ತು. ತೆಲಂಗಾಣದ ಕಂದಾಯ ಅಧಿಕಾರಿಗಳ ಸರ್ವೆ ಪ್ರಕಾರ, 47 ಎಕರೆಯಷ್ಟು ಭಾಗ ತಮ್ಮದೆಂದು ಅವರ ವಾದವಾಗಿತ್ತು. ಇತ್ತ, ಗಡಿ ವಿವಾದ ಹೆಚ್ಚಿದಾಗ ಎಚ್ಚೆತ್ತ ಯಾದಗಿರಿ ಜಿಲ್ಲಾಡಳಿತದ ಅಧಿಕಾರಿಗಳು, ವಿವಾದಿತ ಪ್ರದೇಶಕ್ಕೆ ಹೋಗಿ ತೆಲಂಗಾಣ ಅಧಿಕಾರಿಗಳೊಂದಿಗೆ ದಾಖಲೆಗಳ ಪರಿಶೀಲನೆ ಆರಂಭಿಸಿದ್ದರು. ಯಾದಗಿರಿ ಕಂದಾಯ ಇಲಾಖೆ ಅಧಿಕಾರಿಗಳ ಪ್ರಕಾರ, 143 ಎಕರೆ ಪ್ರದೇಶ ಕರ್ನಾಟಕಕ್ಕೆ ಸೇರಿದೆ ಎಂದಾದರೆ; 47 ಎಕರೆಯಷ್ಟು ಪ್ರದೇಶ ತಮ್ಮದೆಂದು ತೆಲಂಗಾಣದ ಅಧಿಕಾರಿಗಳು ವಾದ ಮಂಡಿಸತೊಡಗಿದರು. ಎರಡೂ ಕಡೆಯ ದಾಖಲೆಗಳನ್ನು ಪರಿಶೀಲಿಸಿದಾಗ, ಒಟ್ಟು ವಿಸ್ತೀರ್ಣವೇ ಹೊಂದಾಣಿಕೆ ಆಗುತ್ತಿರಲಿಲ್ಲ!

ಸದ್ಯ, ಗುರುಮಠಕಲ್ ತಹಸೀಲ್ದಾರ್ ರೇವಣಸಿದ್ದಪ್ಪ ಘಂಟಿ ನೇತೃತ್ವದಲ್ಲಿ ಇಲ್ಲಿನ ಜಿಲ್ಲಾ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ತಂಡವೊಂದು ವಿವಾದಿತ ಪ್ರದೇಶಕ್ಕೆ ತೆರಳಿ, ತೆಲಂಗಾಣದ ಉಟ್ಕೂರು ಮಂಡಳದ ಕಂದಾಯ ಅಧಿಕಾರಿಗಳನ್ನು ಭೇಟಿಯಾಗಿ, ಅಂತಾರಾಜ್ಯ ಗಡಿ ಸರ್ವೆ ಕುರಿತ ಪ್ರಸ್ತಾಪ ಮುಂದಿಟ್ಟಿದ್ದಾರೆ. ಯಾದಗಿರಿ ಹಾಗೂ ತೆಲಂಗಾಣದ ಮೆಹಬೂಬ್ ನಗರದ ಜಿಲ್ಲಾಧಿಕಾರಿಗಳ ಜಂಟಿ ಸಭೆಯ ನಂತರ ಗಡಿ ಕುರಿತ ವಿವಾದ ಬಗೆಹರಿಸುವ ವಿಚಾರಗಳ ಬಗ್ಗೆ ಚರ್ಚೆ ನಡೆದಿವೆ. ಈ ಬಗ್ಗೆ ‘ದಿ ಸ್ಟೇಟ್’ಗೆ ಪ್ರತಿಕ್ರಿಯಿಸಿದ ಯಾದಗಿರಿ ಜಿಲ್ಲಾಧಿಕಾರಿ ಜೆ ಮಂಜುನಾಥ್, “ಅಂತಾರಾಜ್ಯ ಗಡಿ ವಿವಾದ ಇಲ್ಲಿ ಸೃಷ್ಟಿಯಾಗಿರುವುದರಿಂದ ಈ ಬಗ್ಗೆ ಉನ್ನತ ಮಟ್ಟದಲ್ಲಿ ಸಭೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲದೆ, ತೆಲಂಗಾಣದ ಸಂಬಂಧಿತ ಜಿಲ್ಲಾಧಿಕಾರಿಯ ಜೊತೆ ಚರ್ಚೆಯಾಗಿದ್ದು, ವಿವಾದಿತ ಪ್ರದೇಶದಲ್ಲಿ ‘ಯಥಾಸ್ಥಿತಿ’ ಕಾಪಾಡಿಕೊಳ್ಳುವಂತೆ ತಿಳಿಸಲಾಗಿದೆ,” ಎಂದು ಹೇಳಿದರು.

ಇದನ್ನೂ ಓದಿ : ಅಕ್ರಮ ಅದಿರು ಸಾಗಾಣಿಕೆ ಪ್ರಕರಣ; ವಸೂಲಾಗದ ದಂಡ 134 ಕೋಟಿ ರು.

ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಮೌನ!

ರಾಜ್ಯದ ಗಡಿಭಾಗದಲ್ಲಿ ಇಂಥ ವಿವಾದಗಳು ಅಥವಾ ಸಮಸ್ಯೆಗಳು ತಲೆದೋರಿದಾಗ ಇದಕ್ಕೆ ಸ್ಪಂದಿಸಲೆಂದೇ ರಾಜ್ಯ ಸರ್ಕಾರ ಗಡಿ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಗುರುಮಠಕಲ್ ಶಾಸಕ, ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಪ್ರಸಕ್ತ ಇದರ ಅಧ್ಯಕ್ಷರು. ಸದ್ಯ, ಈ ಗಡಿ ವಿವಾದ ಅವರದ್ದೇ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ತಲೆದೋರಿದೆ. ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿನಿಧಿಸುತ್ತಿರುವ ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಗುರುಮಠಕಲ್ ಮತಕ್ಷೇತ್ರ ಬರುತ್ತದೆ.

ಈ ಹಿಂದೆ ಅನೇಕ ಬಾರಿ ಚೆಲೇರಾದಲ್ಲಿ ಅಕ್ರಮ ಮರಳು ಗಣಿಗಾರಿಕೆ ವಿಷಯಗಳು ಚರ್ಚೆಯಾದಾಗ, ಮರಳು ಗಣಿಗಾರಿಕೆ ವಿರುದ್ಧ ದನಿಯೆದ್ದಾಗ ಶಾಸಕ ಬಾಬುರಾವ್ ಚಿಂಚನಸೂರು ಅವರ ಖಾಸಾ ಬೆಂಬಲಿಗರತ್ತಲೇ ಬೊಟ್ಟು ಮಾಡಲಾಗುತ್ತಿತ್ತು. ಅಕ್ರಮ ಮರಳು ಗಣಿಗಾರಿಕೆಯಲ್ಲಿ ಕೆಲವು ಬೆಂಬಲಿಗರ ಕೈವಾಡ ಹೆಚ್ಚಿತ್ತು ಅನ್ನೋ ಆರೋಪಗಳೂ ಕೇಳಿಬಂದಿದ್ದವು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರಿಸರಪ್ರೇಮಿಗಳು ಹಾಗೂ ಗ್ರಾಮಸ್ಥರ ಹೋರಾಟಗಳ ನಡುವೆಯೂ ಮರಳಿಗೆ ಕನ್ನ ಹಾಕುವ ಕೃತ್ಯ ನಿಂತಿರಲಿಲ್ಲ. ಗುರುಮಠಕಲ್ ಗಡಿವಿವಾದ ವಿಚಾರವಾಗಿ ಈ ಮೊದಲು ಪ್ರತಿಕ್ರಿಯಿಸಲು ಹಿಂದೇಟು ಹಾಕಿದ್ದ ಬಾಬುರಾವ್ ಚಿಂಚನಸೂರು ಕೊನೆಗೂ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. “ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೆ ತರಲಾಗಿದ್ದು, ಜಿಲ್ಲಾಧಿಕಾರಿ ಅವರಿಗೆ ಈ ಬಗ್ಗೆ ಪರಿಶೀಲಿಸಲು ಸೂಚಿಸಿದ್ದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ, ನಮ್ಮ ರಾಜ್ಯದ ಇಂಚೂ ಜಾಗ ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಬಳ್ಳಾರಿ ಜಿಲ್ಲೆಯಲ್ಲಿ ಆದಂತೆ, ಗಣಿಗಾರಿಕೆಗಾಗಿ ರಾಜ್ಯದ ಗಡಿಯೇ ಕಾಣೆಯಾದ ಪ್ರಸಂಗ ಇಲ್ಲಿ ಎದುರಾಗದಿರಲಿ. ನೈಸರ್ಗಿಕ ಸಂಪತ್ತನ್ನು ರಕ್ಷಿಸುವ ಮೂಲಕ ಇಲ್ಲಿನ ಅಂತರ್ಜಲ ಮೊದಲಿನಂತಾಗಲಿ ಎಂಬುದು ಸಾರ್ವಜನಿಕರ ಆಶಯ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More