ರಾಜಕೀಯ ಸಮಾರಂಭಗಳಿಗೆ ಜನರನ್ನು ಸೆಳೆಯಲು ಅಶ್ಲೀಲ ನೃತ್ಯಕ್ಕೆ ಮೊರೆ 

ಚುನಾವಣಾ ಪ್ರಚಾರದ ಸಮಾವೇಶಗಳಲ್ಲಿ ಜನರನ್ನು ಆಕರ್ಷಿಸಲು ಮತ್ತು ಅತ್ತಿತ್ತ ಕದಲದಂತೆ ಮಾಡಲು ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳಗಳಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದ ಅಶ್ಲೀಲ ನೃತ್ಯ ಈಗ ರಾಜ್ಯದಲ್ಲಿಯೂ ವ್ಯಾಪಕವಾಗುತ್ತಿದೆ. ಹಲವು ರಾಜಕೀಯ ಕಾರ್ಯಕ್ರಮಗಳಲ್ಲಿ ಇದುವೇ ಪ್ರಮುಖ ಆಕರ್ಷಣೆಯಾಗಿದೆ.

ಕೆಲವೇ ತಿಂಗಳುಗಳಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರವನ್ನೂ ಆರಂಭಿಸಿವೆ. ಆದರೆ, ಪ್ರಚಾರ ಸಮಾರಂಭಗಳಿಗೆ ಜನರನ್ನು ಸೇರಿಸುವುದು ಪಕ್ಷಗಳಿಗೆ ಸುಲಭದ ಕೆಲಸವೇನಲ್ಲ. ಅದಕ್ಕಾಗಿಯೇ ರಾಜಕೀಯ ಪಕ್ಷಗಳು ಹೊಸ ಹೊಸ ಪ್ರಚಾರ ತಂತ್ರಗಳನ್ನು ಅಳವಡಿಸಿಕೊಳ್ಳುವ ದಿಕ್ಕಿನೆಡೆಗೆ ಸಾಮುದಾಯಿಕ ಹೆಜ್ಜೆ ಹಾಕಿವೆ. ವಿಪರ್ಯಾಸವೆಂದರೆ, ಈ ನಿಟ್ಟಿನಲ್ಲಿ ಇದುವರೆಗೂ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳಗಳಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದ ಅಶ್ಲೀಲ ನೃತ್ಯವನ್ನು ರಾಜ್ಯದಲ್ಲೂ ವ್ಯಾಪಕವಾಗಿ ಪರಿಚಯಿಸುತ್ತಿರುವುದು.

ಇತ್ತೀಚೆಗೆ ಕೂಡಲಸಂಗಮದಲ್ಲಿ ನಡೆದ ಮಾಜಿ ಸಚಿವ ಹಾಗೂ ಕೋಲಾರದ ಹಾಲಿ ಶಾಸಕ ವರ್ತೂರು ಪ್ರಕಾಶ್ ಅವರ ನೇತೃತ್ವದ ‘ನಮ್ಮ ಕಾಂಗ್ರೆಸ್’ ಪಕ್ಷದ ಚಾಲನೆ, ಬೀದರಿನ ಖಾಶೆಂಪುರದಲ್ಲಿ ಮಹರ್ಷಿ ವಾಲ್ಮೀಕಿ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಪುತ್ಥಳಿಗಳ ಲೋಕಾರ್ಪಣೆ ಅಂಗವಾಗಿ ಆಯೋಜಿಸಿದ್ದ ಟೋಕರಿ ಕೋಲಿ ಸಮಾಜದ ಜನಜಾಗೃತಿ ಸಮಾವೇಶ ಹಾಗೂ ಬಾಗೇಪಲ್ಲಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸನ್ನಿವೇಶಗಳು ಇಂತಹ ಪ್ರಚಾರ ವೈಖರಿಗೆ ಸಾಕ್ಷಿಯಾಗಿವೆ.

ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಕ್ರಾಂತಿಕಾರಿ, ಜಗಜ್ಯೋತಿ ಬಸವಣ್ಣನವರ ಐಕ್ಯಸ್ಥಳ. ಬಸವಣ್ಣನವರ ನಂಬಿಕೆ, ಆದರ್ಶಗಳನ್ನು ಪಾಲಿಸುವವರು ತಮ್ಮ ಜೀವನದ ಪ್ರಮುಖ ಕಾರ್ಯಗಳನ್ನು ಇದೇ ಸ್ಥಳದಿಂದ ಆರಂಭಿಸುತ್ತಾರೆ. ಇತ್ತೀಚೆಗೆ ಶಾಸಕ ವರ್ತೂರು ಪ್ರಕಾಶ್ ಅವರು ತಮ್ಮ ಹೊಸ ಪಕ್ಷ ‘ನಮ್ಮ ಕಾಂಗ್ರೆಸ್’ಗೆ ಚಾಲನೆ ನೀಡಿದ್ದೂ ಇದೇ ಸ್ಥಳದಿಂದ. ಆದರೆ, ಕೂಡಲಸಂಗಮದಲ್ಲಿ ಕಾರ್ಯಕ್ರಮ ಆರಂಭಕ್ಕೂ ಮುನ್ನ ನಡೆದ ಮನರಂಜನೆಯ ಹೆಸರಿನಲ್ಲಿ ನಡೆದ ನೃತ್ಯ ಪಕ್ಷದ ಮೂಲೋದ್ದೇಶವನ್ನೇ ಮರೆತಂತಿತ್ತು. ಜನಸಮೂಹ ಸೇರಿಸುವ ಉದ್ದೇಶದಿಂದಲೋ ಏನೋ ಆಯೋಜಕರು ಯುವತಿಯರಿಂದ ಅಶ್ಲೀಲ ನೃತ್ಯವನ್ನು ಆಯೋಜಿಸಿದ್ದರು. ಪಕ್ಷದ ಸಿದ್ಧಾಂತ ಹಾಗೂ ಕಾರ್ಯಕ್ರಮ ಆಯೋಜಿಸಿದ್ದ ಸ್ಥಳ ಎರಡನ್ನೂ ಮರೆತು ಇಂತಹ ನೃತ್ಯ ಆಯೋಜನೆ ಮಾಡಿದ್ದಕ್ಕೆ ವ್ಯಾಪಕ ಟೀಕೆಗಳು ಸ್ಥಳೀಯವಾಗಿ ವ್ಯಕ್ತವಾದವು.

ಬೀದರಿನ ಕಾಶೆಂಪುರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಪುತ್ಥಳಿ ಲೋಕಾರ್ಪಣೆ ಹಾಗೂ ಟೋಕರಿ ಕೋಲಿ ಸಮಾಜದ ಜನಜಾಗೃತಿ ಸಮಾವೇಶವೂ ಇಂತಹ ಸನ್ನಿವೇಶಕ್ಕೆ ಸಾಕ್ಷಿಯಾಗಬೇಕಾಯ್ತು. ಶಾಸಕ ಅಶೋಕ್‌ ಖೇಣಿ ಇದಕ್ಕೆ ಮೂಕಪ್ರೇಕ್ಷಕರಾಗಿದ್ದರು. ಸಮಾರಂಭದ ಉದ್ಘಾಟಕರು ಬರುವವರೆಗೆ ಹಾಗೂ ಜನರು ಮತ್ತಷ್ಟೂ ಹೆಚ್ಚು ಸೇರಲಿ ಎನ್ನುವ ಕಾರಣಕ್ಕೆ ಮಾದಕ ಗೀತೆಗಳಿಗೆ ಯುವತಿಯರಿಂದ ಹೆಜ್ಜೆ ಹಾಕಿಸಲಾಯಿತು. ನೃತ್ಯಪಟುಗಳ ಮಾದಕ ನೃತ್ಯಕ್ಕೆ ಚಪ್ಪಾಳೆಗಳ ಸುರಿಮಳೆಗಳೇನೋ ಬಂದವು ನಿಜ. ಆದರೆ, ವಚನಕಾರರ ಹೆಸರಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಶ್ಲೀಲತೆ ವಿಜೃಂಭಿಸಿದ್ದು ವಿಪರ್ಯಾಸ.

ಇದನ್ನೂ ಓದಿ : ನರಗುಂದ ಬಂದ್ ಸ್ಥಳೀಯ ಬಿಜೆಪಿ ನಾಯಕರ ಡ್ಯಾಮೇಜ್ ತುಂಬಿಕೊಳ್ಳುವ ಪ್ರಯತ್ನವಾ ?

ಇನ್ನು, ಶುಕ್ರವಾರ ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ಮಾದಕ ಗೀತೆಗಳಿಗೆ ಹೆಜ್ಜೆ ಹಾಕಿದ ನರ್ತಕ/ನರ್ತಕಿಯರ ತಂಡ, ಅಶ್ಲೀಲತೆ ಬಿಂಬಿಸುವ ಸನ್ನೆಗಳ ಮೂಲಕ ನೆರೆದಿದ್ದ ಜನಸಮೂಹಕ್ಕೆ ಕೀಳು ಮನರಂಜನೆ ಒದಗಿಸಿತು. ಭಾರತೀಯತೆ, ಹಿಂದೂ ಸಂಸ್ಕೃತಿ, ಸ್ತ್ರೀಯರ ಘನತೆ ಮುಂತಾದ ವಿಷಯಗಳ ಬಗ್ಗೆ ಎಗ್ಗಿಲ್ಲದೆ ಮಾತನಾಡುವ ಬಿಜೆಪಿ ನಾಯಕರಿಗೆ ತಮ್ಮ ಸಮಾರಂಭದ ವೇದಿಕೆಯಲ್ಲಿಯೇ ಇಂತಹ ಕಾರ್ಯಕ್ರಮ ನಡೆದ ಬಗ್ಗೆ ಮುಜುಗರವಿದ್ದಂತೆ ಕಾಣಲಿಲ್ಲ.

ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಉತ್ತರ ಪ್ರದೇಶ ರಾಜ್ಯಗಳಿಂದ ನೃತ್ಯತಂಡಗಳನ್ನು ಸಮಾವೇಶಕ್ಕೆಂದು ಮುಂಗಡ ಕಾಯ್ದಿರಿಸಿ, ರಾಷ್ಟ್ರ ಅಥವಾ ರಾಜ್ಯ ನಾಯಕರು ವೇದಿಕೆಗೆ ಆಗಮಿಸುವವರೆಗೂ ನೆರೆದ ಜನಸ್ತೋಮವನ್ನು ಮನರಂಜಿಸುವ ಯತ್ನಗಳು ನಡೆಯುತ್ತಿವೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More