ಕಣಕುಂಬಿಗೆ ಗೋವಾ ಸ್ಪೀಕರ್ ಭೇಟಿ; ಗ್ರಾಮವಾಸ್ತವ್ಯದ ಮೂಲಕ ಕೋನರೆಡ್ಡಿ ಎದಿರೇಟು?

ಗೋವಾ ಸ್ಪೀಕರ್ ನೇತೃತ್ವದ ತಂಡ ಮಹದಾಯಿ ಕಾಮಗಾರಿ ನಡೆದಿರುವ ಕಣಕುಂಬಿಗೆ ಯಾವುದೇ ಮಾಹಿತಿ ನೀಡದೆ ಭೇಟಿ ನೀಡಿದ್ದ ಘಟನೆ ಮಹದಾಯಿ ಹೋರಾಟಗಾರರನ್ನು ಕೆರಳಿಸಿದೆ. ಇದೀಗ ಜೆಡಿಎಸ್ ಶಾಸಕ ಕೋನರೆಡ್ಡಿ ಅದೇ ಪ್ರದೇಶದಲ್ಲಿ ಗ್ರಾಮ ವಾಸ್ತವ್ಯ ಮಾಡಲು ಮುಂದಾಗಿದ್ದಾರೆ

ಗೋವಾ ವಿಧಾನಸಭೆ ಸ್ಪೀಕರ್ ನೇತೃತ್ವದ ಶಾಸಕರ ತಂಡ ನಿನ್ನೆ ಮಹದಾಯಿ ಕಾಮಗಾರಿ ನಡೆದಿರುವ ಕಣಕುಂಬಿಗೆ ರಾಜ್ಯ ಸರಕಾರಕ್ಕೆ ಮಾಹಿತಿ ನೀಡದೆ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿಕೊಂಡು ಹೋಗಿರುವುದು ಮಹದಾಯಿ ಹೋರಾಟಗಾರರನ್ನು ಕೆರಳಿಸಿದೆ. ಸಿಎಂ ಕೂಡ ಈ ವಿದ್ಯಮಾನಕ್ಕೆ ಪ್ರತಿಕ್ರಿಯಿಸಿದ್ದು, “ಗೋವಾ ಶಾಸಕರ ತಂಡ ಕಣಕುಂಬಿಗೆ ಬರುವುದರ ನಮಗೆ ಮಾಹಿತಿ ನೀಡಿಲ್ಲ. ಆದರೂ ಶಿಷ್ಟಾಚಾರದ ಪ್ರಕಾರ ನಡೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೆ,” ಎಂದಿದ್ದರು. ಬಿಜೆಪಿ ಮಾತ್ರ ತನ್ನ ಎಂದಿನ ಕ್ರಮದಂತೆ ಬಾಯಿ ಬಿಡದೆ, ಪ್ರತ್ಯಾರೋಪದಲ್ಲಿ ತೊಡಗಿತ್ತು. ಇದೀಗ ಮತ್ತೆ ಗೋವಾ ಭೇಟಿ ವಿರೋಧಿಸಿ ಜೆಡಿಎಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದು, ಜನವರಿ 31 ರಂದು ಕಣಕುಂಬಿ ಮತ್ತು ಮಹದಾಯಿ ಕಾಮಗಾರಿ ಪಕ್ಕದ ಮಾವಲಿ ದೇವಸ್ಥಾನದಲ್ಲಿ ಗ್ರಾಮ ವಾಸ್ತವ್ಯ ಮಾಡುವುದಾಗಿ ಹೇಳಿದ್ದಾರೆ. ಈ ಸಂಬಂಧ ಇಂದು ಮಾತನಾಡಿದ ಮಹದಾಯಿ ಹೋರಾಟದ ಶಕ್ತಿಕೇಂದ್ರ ನವಲಗುಂದ ಕ್ಷೇತ್ರದ ಶಾಸಕ ಎನ್ ಎಚ್ ಕೋನರೆಡ್ಡಿ, “ಬಿಜೆಪಿಯವರ ಕುಮ್ಮಕ್ಕಿನಿಂದ ಗೋವಾ ನಾಯಕರ ತಂಡಗಳು ಪದೇ ಪದೇ ಕಣಕುಂಬಿಗೆ ಭೇಟಿ ನೀಡುತ್ತಿವೆ,” ಎಂದು ಆರೋಪಿಸಿದರು.

“ಫೆ.4ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬರುತ್ತಿದ್ದಾರೆ. ಮಹದಾಯಿ ಬಗ್ಗೆ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಲೇಬೇಕು. ರಾಷ್ಟ್ರೀಯ ಪಕ್ಷಗಳ ಹೈ ಕಮಾಂಡ್ ಸಂಸ್ಕೃತಿಯಿಂದಾಗಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದ ಕೋನರೆಡ್ಡಿ, ನೆಲ, ಜಲ ವಿಚಾರ ಬಂದಾಗ ನಾವೆಲ್ಲ ಒಂದಾಗಬೇಕು. ಆದರೆ, ಅದು ರಾಷ್ಟ್ರೀಯ ಪಕ್ಷಗಳ ಹಿತದೃಷ್ಟಿಗೆ ಕಟ್ಟು ಬಿದ್ದಿವೆ. ಹಾಗಾಗಿ ಒಗ್ಗಟ್ಟಿನ ಕೊರತೆ ಎದುರಾಗಿದೆ,” ಎಂದು ಕೋನರೆಡ್ಡಿ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹರಿಹಾಯ್ದರು. ಜೊತೆಗೆ, “ನಾವು ಮಾತ್ರ ಇದೇ ತಿಂಗಳ ಮೂವತ್ತೊಂದರಂದು ಕಣಕುಂಬಿಯಲ್ಲಿ ಗ್ರಾಮ ವಾಸ್ತವ್ಯ ಮಾಡುವುದು ಖಚಿತ,” ಎಂದರು.

ನಿನ್ನೆ ಕಣಕುಂಬಿಗೆ ಭೇಟಿ ನೀಡಿದ ಗೋವಾ ಶಾಸಕರ ತಂಡ, ರಾಜ್ಯ ಸರ್ಕಾರದ ಮೇಲೆಯೇ ಹರಿಹಾಯ್ದಿದೆ. ಜ.14ರಂದು ನ್ಯಾಯಾಧಿಕರಣದ ಅಂಶಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟ ಅಂತಲೂ ಹೇಳಿದ್ದ ಗೋವಾ ಸ್ಪೀಕರ್, ನ್ಯಾಯಾಧಿಕರಣದ ಗಮನಕ್ಕೂ ಈ ಮಾಹಿತಿ ತರಲಾಗುವುದೆಂದಿದೆ. ಇದು ಒಂದು ಕಡೆ ಮಹದಾಯಿ ಹೋರಾಟಗಾರರಲ್ಲಿ ಆಕ್ರೋಶ ಕೆರಳಿಸಿದರೆ, ಮತ್ತೊಂದು ಕಡೆ ರಾಜಕೀಯ ನಾಯಕರ ಸಹಿತ ಕಣಕುಂಬಿಗೆ ಗೋವಾ ಶಾಸಕರ ತಂಡದ ಭೇಟಿಗೆ ಆಕ್ರೋಶ ವ್ಯಕ್ತಪಡಿಸತೊಡಗಿದ್ದಾರೆ. ಕೋನರೆಡ್ಡಿ ತಾವು ಹೇಳಿದಂತೆ ಕಣಕುಂಬಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದರೆ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದು ಸ್ಪಷ್ಟ. ಮಹದಾಯಿ ವಿಚಾರವಾಗಿ ಬಂದ್‌ಗೆ ಕರೆ ನೀಡಿದಾಗೆಲ್ಲ ಕಣಕುಂಬಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ನಿಯೋಜಿಸಲಾಗಿರುತ್ತದೆ. ಈಗಲೂ ಪೊಲೀಸರ ಪಹರೆ ಕಣಕುಂಬಿಯಲ್ಲಿ ಇದ್ದೇ ಇದೆ.

ಜ.14ರಂದು ಗೋವಾ ಜಲಸಂಪನ್ಮೂಲ ಸಚಿವ ವಿನೋದ ಪಾಲೇಕರ್ ಸಹ ಭೇಟಿ ನೀಡಿದ್ದರು. ಆಗ ಮಾತನಾಡುವ ಭರದಲ್ಲಿ ಕನ್ನಡಿಗರನ್ನು ಹರಾಮಿ ಎಂದು ಅವರು ಜರೆದಿದ್ದರು. ಆ ಘಟನೆ ಇನ್ನೂ ಹಸಿರಾಗಿದೆ. ಅಷ್ಟರಲ್ಲೇ, ಮತ್ತೆ ಗೋವಾ ಸ್ಪೀಕರ್ ನೇತೃತ್ವದ ಶಾಸಕರ ತಂಡ ಕಣಕುಂಬಿಗೆ ಭೇಟಿ ನೀಡಿ ಹೋಗಿರುವುದು ಉತ್ತರ ಕರ್ನಾಟಕದ ಎಲ್ಲ ಪಕ್ಷದ ನಾಯಕರಲ್ಲೂ ಅಸಹನೆಗೆ ಕಾರಣವಾಗಿದೆ. ನಿನ್ನೆ ಧಾರವಾಡಕ್ಕೆ ಬಂದಿದ್ದ ಯಮಕನಮರಡಿ ಶಾಸಕ, ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ, "ಗೋವಾ ರಾಜ್ಯದವರು ಕರ್ನಾಟಕ ರಾಜ್ಯದ ಮಹದಾಯಿ ನದಿ ಪ್ರದೇಶಕ್ಕೆ ಕದ್ದು ಮುಚ್ಚಿ ಬಂದಿದ್ದು ತಪ್ಪು. ತಿಳಿಸಿ ಬಂದಿದ್ದರೆ ನಾವೇ ಸೂಕ್ತ ವ್ಯವಸ್ಥೆ ಮಾಡುತ್ತಿದ್ದೆವು,” ಎಂದಿದ್ದರು.

ಇದನ್ನೂ ಓದಿ : ಕೋನರೆಡ್ಡಿ ಮನದ ಮಾತು | ಈ ಬಾರಿ ಕುಮಾರಸ್ವಾಮಿ ಸಿಎಂ ಆಗುವುದಂತೂ ಖರೆ

ಗೋವಾ ಸಚಿವ ವಿನೋದ ಪಾಲೇಕರ್, “ಕನ್ನಡಿಗರಿಗೆ ಹನಿ ನೀರನ್ನು ಕೊಡುವುದಿಲ್ಲ,” ಎಂದಿದ್ದರು. ಇವತ್ತು ಮತ್ತೆ ಜೆಡಿಎಸ್ ಶಾಸಕ ಕೋನರೆಡ್ಡಿ ಕಣಕುಂಬಿಯಲ್ಲಿ ಗ್ರಾಮ ವಾಸ್ತವ್ಯದ ಮಾತನ್ನಾಡಿದ್ದಾರೆ. ಕೋನರೆಡ್ಡಿ ಕಣಕುಂಬಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದರೆ ಉಳಿದ ಪಕ್ಷಗಳ ನಾಯಕರ ಚಿತ್ತವೂ ಹರಿತವಾಗಲಿದೆ. ಅವರು ಬೇರೆ ರೀತಿಯಲ್ಲಿ ಕಣಕುಂಬಿಗೆ ಜಾಥಾ ಅಥವಾ ಕಾಮಗಾರಿ ನಿಂತಿರುವ ಪ್ರದೇಶದಲ್ಲೇ ಪ್ರತಿಭಟನೆ ಮಾಡುವ ಬಗ್ಗೆಯೂ ಯೋಚಿಸುವುದು ಸಹಜ. ಚುನಾವಣೆ ಹತ್ತಿರದಲ್ಲಿರುವುದು ಕೂಡ ಈ ಎಲ್ಲ ವಿದ್ಯಮಾನಗಳಿಗೆ ಪೂರಕ ಸನ್ನಿವೇಶ ಸೃಷ್ಟಿ ಮಾಡಿಕೊಟ್ಟಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More