ಎಸ್ಪಿ ರವಿಕಾಂತೇ ಗೌಡ ಮನದ ಮಾತು | ಎಲ್ಲ ಅಕ್ರಮಗಳ ವಿರುದ್ಧವೂ ಕ್ರಮ ನಿಶ್ಚಿತ

ಕೋಮು ಸಂಘರ್ಷ, ನೈತಿಕ ಪೊಲೀಸ್‌ಗಿರಿ, ಮಾದಕವಸ್ತು ಮಾರಾಟ, ಭೂಗತ ಚಟುವಟಿಕೆ ಮುಂತಾದ ಕಾನೂನುಬಾಹಿರ ಕೃತ್ಯಗಳ ವಿರುದ್ಧ ಪೊಲೀಸಿಂಗ್ ಚುರುಕುಗೊಳಿಸುವ ಪಣ ತೊಟ್ಟಿರುವ ದಕ್ಷಿಣ ಕನ್ನಡದ ನೂತನ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ ‘ದಿ ಸ್ಟೇಟ್’ ಜೊತೆ ಮಾತನಾಡಿದ್ದಾರೆ

ದಕ್ಷಿಣ ಕನ್ನಡ ಎಸ್ಪಿ ರವಿಕಾಂತೇ ಗೌಡ ಅವರ ಮಾತಿನ ಮುಖ್ಯಾಂಶಗಳು

  • ಪೊಲೀಸ್ ಅಧಿಕಾರಿಗೆ ಪ್ರತಿನಿತ್ಯದ ಕೆಲಸ ಕೂಡ ಸವಾಲೇ. ಏಕೆಂದರೆ, ಕಾನೂನು ಪಾಲಿಸುವ ಜನ ಶೇ.90ರಷ್ಟು ಇರುತ್ತಾರೆ. ಕಾನೂನು ಉಲ್ಲಂಘಿಸುವವರು ಎಲ್ಲೇ ಆಗಲಿ, ಶೇ.10ರಷ್ಟು ಇರುತ್ತಾರೆ. ಈ ಶೇ.10ರಷ್ಟು ಮಂದಿಯನ್ನು ಉಳಿದವರಿಂದ ಬೇರ್ಪಡಿಸಿ, ಅವರನ್ನು ಗುರುತಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಪೊಲೀಸರಿಗೆ ನಿಜವಾಗಿಯೂ ಸವಾಲಿನ ಕೆಲಸ. ಹೀಗಾಗಿ, ಎಲ್ಲ ಜಿಲ್ಲೆಗಳಲ್ಲಿರುವ ಸವಾಲು ದಕ್ಷಿಣ ಕನ್ನಡದಲ್ಲೂ ಇದೆ.
  • ಪೋಷಕರು ಸಹಜವಾಗಿ ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ದೂರನ್ನು ಕೊಡದೆ ಇರಬಹುದು. ಆ ರೀತಿಯಾದಾಗ ಪೋಷಕರಿಗೆ ದೂರನ್ನು ಕೊಡಿ ಎಂದು ಒತ್ತಾಯ ಮಾಡಲು ಸಾಧ್ಯವಾಗುವುದಿಲ್ಲ. ಆಗ ನಾವೇ ಖುದ್ದಾಗಿ ಪ್ರಕರಣಗಳನ್ನು ದಾಖಲಿಸಿ, ನೈತಿಕ ಪೊಲೀಸ್‌ಗಿರಿ ವಿರುದ್ಧ ಕ್ರಮ ಕೈಗೊಳ್ಳಬೇಕು, ಅದನ್ನು ನಾವು ಮಾಡುತ್ತೇವೆ.
  • ಮಾದಕವಸ್ತು ಸೇವನೆ, ಮಾರಾಟ ಅಥವಾ ಇನ್ನಾವುದೇ ಅಕ್ರಮಗಳು ಸಾಮಾಜಿಕ ವಾತಾವರಣವನ್ನು ವಿಷಮಯಗೊಳಿಸಲು ಕಾರಣವಾಗುತ್ತವೆ. ಇದೆಲ್ಲದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈ ಪಿಡುಗುಗಳ ಶೇ.100ರಷ್ಟು ನಿರ್ಮೂಲನೆ ಸಾಧ್ಯವೇ ಎಂದು ಕೇಳಿದರೆ ಅದರ ವಿರುದ್ಧ ಸತತ ಪ್ರಯತ್ನ ಮುಂದುವರಿಯಬೇಕು, ನಾವು ಮಾಡುತ್ತೇವೆ.
  • ಚುನಾವಣೆ ಹಿನ್ನೆಲೆಯಲ್ಲಿ ಕೋಮು ಸಂಘರ್ಷ, ಭೂಗತ ಚಟುವಟಿಕೆಗಳನ್ನು ತಪ್ಪಿಸಲು ದಿನನಿತ್ಯದ ಪೋಲಿಸಿಂಗ್ ಅನ್ನು ಪರಿಣಾಮಕಾರಿಯಾಗಿ ಮಾಡುತ್ತೇವೆ. ಅದರಿಂದ ಹೆಚ್ಚು ಪರಿಣಾಮ ಬೀರಬಹುದು ಅನ್ನಿಸುತ್ತದೆ.
ಇದನ್ನೂ ಓದಿ : ಜಿಗ್ನೇಶ್ ಮನದ ಮಾತು | ಮೋದಿ ಕಾಲ ಮುಗಿಯಿತು, ಬಿಜೆಪಿ ಹೊಸ ನಾಯಕನ ಹುಡುಕಲಿ
  • ದಕ್ಷಿಣ ಕನ್ನಡದ ಬೂದಿ ಮುಚ್ಚಿದ ಕೆಂಡದಂಥ ಸ್ಥಿತಿಯನ್ನು ತಪ್ಪಿಸಲು ದಿನ ನಿತ್ಯ ನಾವು ಯಾರ ಮೇಲೆ ನಿಗಾ ಇಡಬೇಕೋ, ಪ್ರತಿನಿತ್ಯ ನಾವು ಯಾರ ವಿರುದ್ಧ ಕ್ರಮ ಕೈಗೊಳ್ಳಬೇಕೋ ಅವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಇಂತಹ ವಾತಾವರಣವನ್ನು ತಿಳಿಗೊಳಿಸಲು ಪ್ರಯತ್ನ ಮಾಡುತ್ತೇವೆ.
  • ಬರೀ ಅಕ್ರಮ ಮರಳು ಸಾಗಣೆ, ರಿಯಲ್ ಎಸ್ಟೇಟ್ ಮಾಫಿಯಾ ಅಕ್ರಮಗಳಲ್ಲ. ಎಲ್ಲ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅದರಿಂದ ಅಕ್ರಮಗಳ ಸಂಖ್ಯೆ ಕಡಿಮೆಯಾಗುತ್ತದೆ.
  • ಕೆಳಹಂತದ ಪೊಲೀಸ್ ಸಿಬ್ಬಂದಿಗೆ ಸಂವಿಧಾನ, ರೂಲ್‌ಬುಕ್ ನಿಯಮಗಳ ಪರಿಚಯಕ್ಕಾಗಿ ತರಬೇತಿ ಅವಧಿಯಲ್ಲಿ ಬಹಳ ಮುಖ್ಯವಾಗಿ ನಾವು ಸಂವಿಧಾನ, ಭಾರತೀಯ ದಂಡಸಂಹಿತೆ, ಭಾರತೀಯ ಸಾಕ್ಷ್ಯಾಧಾರ ಕಾಯ್ದೆ, ಅಪರಾಧ ಪ್ರಕ್ರಿಯಾ ಸಂಹಿತೆ ಇವುಗಳ ಬಗ್ಗೆ ಹೆಚ್ಚು ಮಾಹಿತಿ ಕೊಡುತ್ತೇವೆ. ಕರ್ತವ್ಯಕ್ಕೆ ಹಾಜರಾದ ಮೇಲೆ ಕಾಲಕಾಲಕ್ಕೆ ತಿಳಿವಳಿಕೆ ಕೊಡುವಂಥ ತರಗತಿಗಳು ಇರುವುದಿಲ್ಲ. ಆದ್ದರಿಂದ, ಅವರಿಗೆ ಪುನರ್ ಮನನ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡು ಅವರನ್ನು ಸಜ್ಜುಗೊಳಿಸುವ ಕೆಲಸ ಮಾಡುತ್ತೇವೆ. ಹೊರಗಿನಿಂದ ಜಿಲ್ಲೆಗೆ ಬಂದ ಪೊಲೀಸ್ ಸಿಬ್ಬಂದಿಗೆ ಭಾಷೆ ಸಮಸ್ಯೆ ನಿಟ್ಟಿನಲ್ಲಿ ಚಂದ್ರಶೇಖರ್ ಅವರ ಅವಧಿಯಲ್ಲಿ ಈ ಹಿಂದೆ ಒಂದು ಪ್ರಯತ್ನ ಆಗಿದೆ. ಅವರಿಗೆ ಸ್ಥಳೀಯ ಭಾಷೆ ಕಲಿಸಲು ತರಗತಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಗತ್ಯವಿದ್ದರೆ ಅದನ್ನು ಮುಂದುವರಿಸುತ್ತೇವೆ.
  • ಪದೇಪದೇ ನಡೆಯುವ ವರ್ಗಾವಣೆಗಳಿಂದಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಆಗುತ್ತಿಲ್ಲ ಎನ್ನುವುದು ನನ್ನ ಅನುಭವಕ್ಕೆ ಬಂದಿಲ್ಲ. ನಾನು ಹೊಸದಾಗಿ ಇಲ್ಲಿಗೆ ಬಂದಿದ್ದು ಅಧಿಕಾರಿಗಳ ಜೊತೆ ಮಾತನಾಡಿ, ಇಲ್ಲಿನ ತೊಡಕುಗಳನ್ನು ತಿಳಿದುಕೊಳ್ಳುತ್ತೇನೆ. ಆಮೇಲೆ ಈ ಬಗ್ಗೆ ಹೇಳಬಹುದು.
  • ಎಲ್ಲ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡುವುದು ಕಷ್ಟ. ಪೊಲೀಸ್ ಇಲಾಖೆಯ ಸಾಮಾಜಿಕ ಜಾಲತಾಣ ನಿಗಾ ವ್ಯವಸ್ಥೆಯ ಗಮನಕ್ಕೆ ಬಂದ ವಿಷಯಗಳ ಬಗ್ಗೆ ನಾವು ಕ್ರಮ ಕೈಗೊಂಡಿರುತ್ತೇವೆ. ಜೊತೆಗೆ, ಅಂತಹ ಪ್ರಚೋದನಕಾರಿ ಸಂದೇಶಗಳ ವಿರುದ್ಧ ಜಾಗೃತಿ ಉಂಟುಮಾಡುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತೇವೆ. ಇಷ್ಟಾಗಿಯೂ ಜಾಲಿಗರು ಮುಂದುವರಿದರೆ ಎಷ್ಟೇ ಕಷ್ಟವಾಗಲಿ, ಕಠಿಣ ಕ್ರಮ ಕೈಗೊಳ್ಳುತ್ತೇವೆ.
ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More