ಮಹಾಮಸ್ತಕಾಭಿಷೇಕ; ಜೈನಮಠ-ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜಟಾಪಟಿ

ಬಲವಂತದ ವರ್ಗಾವಣೆಗೊಂಡು ಕೊನೆಗೆ ಚುನಾವಣಾ ಆಯೋಗದ ಮಧ್ಯಪ್ರವೇಶದಿಂದಾಗಿ ಹಾಸನ ಜಿಲ್ಲಾಧಿಕಾರಿಯಾಗಿ ಮುಂದುವರಿದಿರುವ ರೋಹಿಣಿ ಸಿಂಧೂರಿ ಅವರೊಂದಿಗೆ ಜಟಾಪಟಿ ನಡೆಸುವ ಸರದಿ ಈಗ ಶ್ರವಣಬೆಳಗೊಳ ಜೈನ ಮಠದ್ದಾಗಿದೆ

ಇತ್ತೀಚೆಗಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಕೆಪಿಸಿಸಿ ಉಪಾಧ್ಯಕ್ಷ ಬಿ. ಶಿವರಾಮು ಮತ್ತು ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಅವರೊಂದಿಗಿನ ಜಟಾಪಟಿಯಿಂದಾಗಿ ಬಲವಂತದ ವರ್ಗಾವಣೆಗೊಂಡು ಕೊನೆಗೆ ಚುನಾವಣಾ ಆಯೋಗದ ಮಧ್ಯಪ್ರವೇಶದಿಂದಾಗಿ ಹಾಸನ ಜಿಲ್ಲಾಧಿಕಾರಿಯಾಗಿ ಮುಂದುವರಿದಿರುವ ರೋಹಿಣಿ ಸಿಂಧೂರಿ ಅವರೊಂದಿಗೆ ಜಟಾಪಟಿ ನಡೆಸುವ ಸರದಿ ಈಗ ಶ್ರವಣಬೆಳಗೊಳ ಜೈನ ಮಠದ್ದಾಗಿದೆ.

ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಬಾಹುಬಲಿ ಮಹಾಮಸ್ತಕಾಭಿಷೇಕದ ಮೂಲಸೌಕರ್ಯ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ನಡೆಸಿ, ಬಾಹುಬಲಿ ಮೂರ್ತಿಯ ಹಿಂಭಾಗ ಮತ್ತು ಸುತ್ತಲು ಜರ್ಮನ್ ತಂತ್ರಜ್ಞಾನದ ಅಟ್ಟಣಿಗೆ ನಿರ್ಮಿಸಿ, ವಿಂಧ್ಯಗಿರಿ ಬೆಟ್ಟದ ಮೇಲೆ ಐದು ಸಾವಿರ ಜನ ಕುಳಿತು ಮಹಾಸ್ತಕಾಭಿಷೇಕ ಕಣ್ತುಂಬಿಕೊಳ್ಳಲು ವ್ಯವಸ್ಥೆ ಮಾಡಿರುವ ಕುರಿತು ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಂದಲೂ ಮೆಚ್ಚುಗೆ ಪಡೆದಿದ್ದರು. ಆದರೆ ಅದೇ ಸ್ವಾಮೀಜಿ ಈಗ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಿರುವ ಗುಸುಗುಸು ಕೇಳಿ ಬರುತ್ತಿದೆ.

ಇದಕ್ಕೆ ಕಾರಣ ಫೆ.17 ರಿಂದ ನಡೆಯುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ವಿಂಧ್ಯಗಿರಿ ಬೆಟ್ಟದ ಮೇಲೆ ಹೋಗಲು ಐದು ಸಾವಿರ ಜನರಿಗೆ ಮಾತ್ರ ಅವಕಾಶವಿದ್ದು, ಅವರಿಗೆ ವಿವಿಐಪಿ ಪಾಸ್ ಗಳನ್ನು ಮುದ್ರಿಸಿ ವಿತರಿಸುವ ಹೊಣೆಯನ್ನು ಯಾರು ಹೊರಬೇಕೆಂಬ ಬಗ್ಗೆ ಜಿಲ್ಲಾಡಳಿತ ಮತ್ತು ಜೈನ ಮಠದ ನಡುವೆ ಜಟಾಪಟಿ ಆರಂಭವಾಗಿದೆ. ಅಲ್ಲದೆ, ಸಾರ್ವಜನಿಕರಿಗೆ ಧರ್ಮ ದರ್ಶನಕ್ಕೆ ಅವಕಾಶ ನೀಡುವ ಕುರಿತೂ ಬಹಳ ದಿನಗಳಿಂದಲೂ ಮಠದೊಂದಿಗೆ ಜಿಲ್ಲಾಡಳಿತ ಹಗ್ಗ ಜಗ್ಗಾಟ ನಡೆಸುತ್ತಲೇ ಇದೆ.

“ಹಿಂದಿನಿಂದಲೂ ಶ್ರವಣಬೆಳಗೊಳದ ಜೈನಮಠವೇ ಮಹಾಮಸ್ತಕಾಭಿಷೇಕ ಕಾರ್ಯಕ್ರಮದ ವಿವಿಐಪಿ ಪಾಸ್ ಗಳನ್ನು ಮುದ್ರಿಸಿ ವಿತರಿಸುವ ವ್ಯವಸ್ಥೆ ಮಾಡಿಕೊಂಡು ಬಂದಿದೆ. ಹಾಗಾಗಿ ಈ ಬಾರಿಯೂ ಮಠವೇ ಆ ಕೆಲಸ ಮಾಡಲು ಅವಕಾಶ ಕೊಡಬೇಕು” ಎಂಬುದು ಚಾರುಕೀರ್ತಿ ಸ್ವಾಮೀಜಿಯವರ ಆಗ್ರಹಪೂರ್ವಕ ಬೇಡಿಕೆಯಾಗಿದೆ ಎನ್ನಲಾಗಿದೆ.

ಆದರೆ, “ಉತ್ಸವ ಸರ್ಕಾರದ ಜವಾಬ್ದಾರಿ. ಅಟ್ಟಣಿಗೆಯ ಮೇಲೆ ಐದು ಸಾವಿರ ಜನ ಮಾತ್ರ ಕೂರಲು ಅವಕಾಶವಿದೆ. ಜೈನಮಠವು ಹೆಚ್ಚಿನ ಪಾಸ್ ಗಳನ್ನು ವಿತರಿಸಿ ಅಟ್ಟಣಿಗೆ ಕುಸಿಯುವಂತಾಗಿ ಅನಾಹುತವಾದರೆ ಯಾರು ಹೊಣೆ” ಎಂಬುದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರ ಪ್ರಶ್ನೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಪಾಸ್ ಗಳನ್ನು ಜಿಲ್ಲಾಡಳಿತವೇ ಮುದ್ರಿಸಿ ಮಠಕ್ಕೆ ಅಗತ್ಯವಿರುವಷ್ಟು ಪಾಸ್ ಗಳನ್ನು ವಿತರಿಸುವುದಾಗಿ ಜಿಲ್ಲಾಧಿಕಾರಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಆದರೆ ಸ್ವಾಮೀಜಿ ಇದಕ್ಕೆ ಒಪ್ಪುತ್ತಿಲ್ಲ. “ಹೆಚ್ಚಿನ ಪಾಸ್ ಗಳನ್ನು ಮುದ್ರಿಸಿ ವಿತರಿಸಲು ಸಾಧ್ಯವಿಲ್ಲ. ಜೈನ ಮಠಕ್ಕೂ ಜಿಲ್ಲಾಡಳಿತದಷ್ಟೇ ಸಾರ್ವನಿಕರ ಮತ್ತು ಐತಿಹಾಸಿಕ ಸ್ಮಾರಕದ ರಕ್ಷಣೆಯ ಜವಾಬ್ದಾರಿ ಇದೆ. ಆದ್ದರಿಂದ ಪಾಸ್ ಗಳನ್ನು ಮುದ್ರಿಸಿ ವಿತರಿಸುವ ಜೈನ ಮಠದ ಪರಂಪರೆ ಮುಂದುವರಿಸಲು ಬಿಡಬೇಕು” ಎಂಬುದಾಗಿ ಚಾರುಕೀರ್ತಿ ಸ್ವಾಮೀಜಿಯವರೂ ಹಠ ಹಿಡಿದಿದ್ದಾರೆ. ಹಾಗಾಗಿ ಗೊಂದಲ ಸೃಷ್ಟಿಯಾಗಿದೆ ಎಂದು ಮಠದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ : ಅಲೆಮಾರಿಗಳಿಂದ ದಿನಪೂರ್ತಿ ಕೆಲಸ ಮಾಡಿಸಿಕೊಳ್ಳುತ್ತಿದೆ ಮಸ್ತಕಾಭಿಷೇಕ ಉತ್ಸವ

“ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ ಹತ್ತಿರಹತ್ತಿರ 300 ಕೋಟಿ ರೂ. ಖರ್ಚು ಮಾಡಿದೆ. ಅದು ಸಾರ್ವಜನಿಕರ ತೆರಿಗೆ ಹಣ. ಹಾಗಾಗಿ ಮಹಾಮಸ್ತಕಾಭಿಷೇಕ ನೋಡಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಬೇಕು. ಸಾರ್ವಜನಿಕರು ಸಾಲಾಗಿ ಬೆಟ್ಟ ಹತ್ತಿ ಬಂದು ಗೊಮ್ಮಟನ ಬಳಿ ನಿಲ್ಲದೆ ಸಾಗುತ್ತಲೇ ಮಸ್ತಕಾಭಿಷೇಕ ಕಣ್ತುಂಬಿಕೊಳ್ಳುತ್ತಾರೆ. ಯಾವುದೇ ಗೊಂದಲವಾಗದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಸಿಬ್ಬಂದಿ ನೋಡಿಕೊಳ್ಳಲಿದ್ದಾರೆ” ಎಂಬುದು ಸಹ ಜಿಲ್ಲಾಧಿಕಾರಿಗಳ ವಾದ ಎನ್ನಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಮಾತ್ರ ಇದಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹೋಗುತ್ತಿದ್ದಾರಷ್ಟೇ. ಜಿಲ್ಲಾಧಿಕಾರಿಗಳ ತೀರ್ಮಾನದಲ್ಲಿ ಮಧ್ಯಪ್ರವೇಶ ಮಾಡುವ ಧೈರ್ಯ ಮಾಡುತ್ತಿಲ್ಲ ಎಂದೂ ಹೇಳಲಾಗುತ್ತಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More