ಶ್ರವಣಬೆಳಗೊಳವನ್ನು ಅಹಿಂಸಾ ವಲಯವನ್ನಾಗಿ ಘೋಷಿಸಲು ಮುನಿಗಳ ಮನವಿ

“ನಾವು (ಜೈನರು) ಇದುವರೆಗೂ ಸರ್ಕಾರದಿಂದ ಏನನ್ನೂ ಕೇಳಿಲ್ಲ. ಅಹಿಂಸಾಮೂರ್ತಿ ಬಾಹುಬಲಿ ನೆಲೆಸಿರುವ ಬೆಳಗೊಳದ ಸುತ್ತ 5 ಕಿ.ಮೀ. ಪ್ರದೇಶವನ್ನು ಅಹಿಂಸಾ ವಲಯ ಎಂಬುದಾಗಿ ಘೋಷಿಸಬೇಕು” ಎಂದು ಆಚಾರ್ಯ ಪುಷ್ಪದಂತ ಮಹಾರಾಜ್ ಸರ್ಕಾರಕ್ಕೆ ಮನವಿ ಮಾಡಿದರು

ಒಂದು ನಿರ್ದಿಷ್ಟ ಪ್ರದೇಶವನ್ನು ಅಹಿಂಸಾ ವಲಯ ಅಥವಾ ಹಿಂಸೆ ಮುಕ್ತ ವಲಯ ಎಂದು ಘೋಷಿಸಿರುವ ಉದಾಹರಣೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅಂತಹದ್ದೊಂದು ಮನವಿ ಮತ್ತು ಚರ್ಚೆಗೆ ಅಹಿಂಸಾಮೂರ್ತಿ ಬಾಹುಬಲಿ ನೆಲೆಸಿರುವ ಶ್ರವಣಬೆಳಗೊಳದಲ್ಲಿ ಶನಿವಾರ (ಫೆ.10, 2018) ಮಹಾಮಸ್ತಕಾಭಿಷೇಕದ ಅಂಗವಾಗಿ ನಡೆದ ರಾಜ್ಯಾಭಿಷೇಕ ಕಾರ್ಯಕ್ರಮದಲ್ಲಿ ಭಾರತದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಸಮ್ಮುಖದಲ್ಲಿ ಚಾಲನೆ ದೊರೆತಿದೆ.

ಮಹಾಮಸ್ತಕಾಭಿಷೇಕಕ್ಕೆ ಪೂರ್ವಭಾವಿಯಾಗಿ ನಡೆಯುವ ಪಂಚಕಲ್ಯಾಣ ಮಹೋತ್ಸವದ ಭಾಗವಾಗಿ ಶನಿವಾರ ನಡೆದ ಜೈನಧರ್ಮದ ಪ್ರಥಮ ತೀರ್ಥಂಕರ ಆದಿದೇವ (ಬಾಹುಬಲಿಯ ತಂದೆ) ಅವರ ರಾಜ್ಯಾಭಿಷೇಕ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಆಚಾರ್ಯ ಪುಷ್ಪದಂತ ಮಹಾರಾಜ್ ಅವರು, “ನಾವು (ಜೈನರು) ಇದುವರೆಗೂ ಸರ್ಕಾರದಿಂದ ಏನನ್ನೂ ಕೇಳಿಲ್ಲ. ಅಹಿಂಸಾಮೂರ್ತಿ ಬಾಹುಬಲಿ ನೆಲೆಸಿರುವ ಶ್ರವಣಬೆಳಗೊಳದ ಸುತ್ತ 5 ಕಿ.ಮೀ. ಪ್ರದೇಶದಲ್ಲಿ ಯಾವುದೇ ರೀತಿಯ ಹಿಂಸೆ ನಡೆಸದಂತೆ ಅಹಿಂಸಾ ವಲಯ ಎಂಬುದಾಗಿ ಘೋಷಿಸಬೇಕು” ಎಂಬ ಬೇಡಿಕೆ ಮುಂದಿಟ್ಟರು. ಅಲ್ಲದೆ, “ಮಂಗಳಗ್ರಹಕ್ಕೆ ಹೋಗಲು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುವ ಬದಲು ಭಾರತವನ್ನು ಮಂಗಳಕರವನ್ನಾಗಿ ಮಾಡಲು ಪ್ರಯತ್ನಿಸಿ. ಯುದ್ಧರಹಿತ ವಿಶ್ವ, ಸಂಘರ್ಷರಹಿತ ಸಮಾಜ, ವಿವಾದರಹಿತ ರಾಜ್ಯ, ಸ್ವಾರ್ಥರಹಿತ ರಾಜನೀತಿ ಮತ್ತು ಕಪಟರಹಿತ ಮೈತ್ರಿ- ಈ ಐದು ಸೂತ್ರಗಳು ಪಾಲನೆಯಾಗುವಂತೆ ನೋಡಿಕೊಳ್ಳಿ” ಎಂಬ ಸಲಹೆಯನ್ನೂ ನೀಡಿದರು.

ಆದರೆ ‘ಅಹಿಂಸಾವಲಯ’ದ ಮನವಿಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಾಗಲೀ, ವೇದಿಕೆಯಲ್ಲಿದ್ದ ಕೇಂದ್ರ ಸಚಿವ ಅನಂತಕುಮಾರ್ ಅವರಾಗಲಿ ತಮ್ಮ ಭಾಷಣದ ಸಂದರ್ಭದಲ್ಲಿ ಯಾವುದೇ ಪ್ರತಿಕ್ರಿಯೆ ನೀಡದೆ ಸಾಂದರ್ಭಿಕ ಮಾತುಗಳನ್ನಾಡಿದರು.

ಇದಕ್ಕೂ ಮುನ್ನ ನಡೆದ ರಾಜ್ಯಾಭಿಷೇಕ ವಿಧಿಯನ್ನು ಶ್ರವಣಬೆಳಗೊಳ ಜೈನ ಮಠದ ಪೀಠಾಧ್ಯಕ್ಷರಾದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ನೆರವೇರಿಸಿದರು. ಸ್ವಾಮೀಜಿಯವರು ವೆಂಕಯ್ಯನಾಯ್ಡು ಅವರ ಕೊರಳಿಗೆ ಚಿನ್ನದ ಸರ ಹಾಕಿ, ತಲೆಗೆ ಮೈಸೂರು ಪೇಟ ತೊಡಿಸಿ ನಂತರ ಆದಿದೇವನ ಮೂರ್ತಿಗೆ ಪಟ್ಟಾಭಿಷೇಕ ಮಾಡಿಸಿದರು. ಆದಿದೇವನಿಗೆ ಕಿರೀಟ ಧಾರಣೆ ಮಾಡಿಸಿದ ತರುವಾಯ ಮುತ್ತುರತ್ನಗಳಿಂದ ಅಭಿಷೇಕ ನಡೆಸಲಾಯಿತು. ಭಾರತೀಯ ಜ್ಞಾನಪೀಠ ಸಂಸ್ಥೆಯ ಸಹಯೋಗದೊಂದಿಗೆ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಮರುಮುದ್ರಣಗೊಳಿಸಿರುವ 108 ಜೈನಸಾಹಿತ್ಯ ಕೃತಿಗಳನ್ನು ಸಹ ಇದೇ ಸಂದರ್ಭದಲ್ಲಿ ಉಪರಾಷ್ಟ್ರಪತಿಗಳಿಂದ ಬಿಡುಗಡೆಗೊಳಿಸುವ ಮೂಲಕ ಬಾಹುಬಲಿಗೆ ‘ಗ್ರಂಥಾಭಿಷೇಕ’ವನ್ನೂ ನಡೆಸಲಾಯಿತು.

“ಶಾಂತಿ, ಸಾಮರಸ್ಯದ ಸಮಾಜ ಸ್ಥಾಪನೆಗೆ ಅಹಿಂಸಾ ಸಿದ್ಧಾಂತ ಅಗತ್ಯ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರೂ ಜೈನ ಧರ್ಮದ ಪ್ರಭಾವದಿಂದಲೇ ತಮ್ಮ ಚಳವಳಿಯಲ್ಲಿ ಅಹಿಂಸೆಯನ್ನು ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಂಡರು. ಭಾರತೀಯತೆ, ಧರ್ಮ ಮತ್ತು ಪರಂಪರೆಯ ಕುರಿತು ಯಾವತ್ತೂ ನಾಚಿಕೆಪಟ್ಟುಕೊಳ್ಳಬಾರದು.

“ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಭಾರತೀಯ ಸಂಸ್ಕೃತಿಯಲ್ಲಿ ವಿಕೃತಿ ತಲೆದೋರುತ್ತಿದೆ. ಅದನ್ನು ನಿವಾರಿಸಲು ಇಂತಹ ಧಾರ್ಮಿಕ ಉತ್ಸವಗಳು ಅತ್ಯಗತ್ಯ. ವಿವಿಧತೆಯಲ್ಲಿ ಏಕತೆ ಸಾರುವ ಭಾರತೀಯತ್ವ ಉಳಿಯಬೇಕಾದರೆ ಜೈನಧರ್ಮದ ಸಾರವಾದ ‘ಬದುಕು-ಬದುಕಲು ಬಿಡು’ ಎಂಬ ಪರಮತತ್ವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು” ಎಂಬುದಾಗಿ ಸಲಹೆಯನ್ನೂ ನೀಡಿದರು.

ದೇವೇಗೌಡರ ಗೈರು

ಮಹಾಮಸ್ತಕಾಭಿಷೇಕ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೊಂದಿಗೆ ಉಪಸ್ಥಿತರಿದ್ದರೂ ತಮಗೆ ಮಾತನಾಡಲು ಅವಕಾಶ ನೀಡದ ಕುರಿತು ಅಸಮಾಧಾನಗೊಂಡಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಉಪರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಅವರ ಪುತ್ರ ಶಾಸಕ ಹೆಚ್.ಡಿ. ರೇವಣ್ಣ ಸಹ ಗೈರಾಗಿದ್ದರು. ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಹೊರತುಪಡಿಸಿ ಜಿಲ್ಲೆಯ ಜೆಡಿಎಸ್ ನ ಯಾವ ಶಾಸಕರು ಭಾಗವಹಿಸಿರಲಿಲ್ಲ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More