ಬಳ್ಳಾರಿಯಲ್ಲಿ ಮುಳ್ಳಾಗಿದ್ದವರ ಮೂಲಕವೇ ಮತಕೋಟೆ ಕಟ್ಟಲು ಮುಂದಾದ ಕಾಂಗ್ರೆಸ್

ವಿಧಾನಸಭೆಯಲ್ಲಿ ಸಿದ್ದರಾಮಯ್ಯ ವಿರುದ್ಧವೇ ತೊಡೆ ತಟ್ಟಿದ್ದ ರೆಡ್ಡಿ ಪಾಳೆಯದ ಈ ಶಾಸಕರನ್ನು ಮೈದಡವಿ ಕಾಂಗ್ರೆಸ್ ಬರಮಾಡಿಕೊಂಡಿದೆ. ಶತ್ರುಗಳ ಶತ್ರುವನ್ನೇ ಮಿತ್ರರನ್ನಾಗಿಸಿಕೊಂಡ ಕಾಂಗ್ರೆಸ್‌ ಪಕ್ಷದ ಈ ಚಾಣಾಕ್ಷ ನಡೆ ಕಾಂಗ್ರೆಸ್‌ನೊಳಗೆ ಅಸಮಾಧಾನಕ್ಕೂ ಕಾರಣವಾಗುವ ಸಾಧ್ಯತೆ ಇದೆ

ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಹವಾ ಶುರುವಾಗಿದೆ. ಬಿಜೆಪಿ ತೊರೆದ ವಿಜಯನಗರ (ಹೊಸಪೇಟೆ) ಶಾಸಕ ಆನಂದ್ ಸಿಂಗ್, ಕೂಡ್ಲಿಗಿಯ ಪಕ್ಷೇತರ ಶಾಸಕ ಜಿ ನಾಗೇಂದ್ರ ಹಾಗೂ ಹಗರಿಬೊಮ್ಮನಹಳ್ಳಿಯ ಭೀಮಾನಾಯ್ಕ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಶನಿವಾರ ಜನಾಶೀರ್ವಾದ ಯಾತ್ರೆಯ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಉಪಸ್ಥಿತಿಯಲ್ಲಿ ಇವರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು.

ಮಾಜಿ ಸಚಿವ, ಬಿಜೆಪಿಯ ಜನಾರ್ದನ ರೆಡ್ಡಿ-ಶ್ರೀರಾಮುಲು ಬಣದ ಕಟ್ಟಾ ಬೆಂಬಲಿಗ ಎನಿಸಿಕೊಂಡಿದ್ದ, ಗಣಿ ಉದ್ಯಮಿಗಳಾದ ಆನಂದ್ ಸಿಂಗ್ ಹಾಗೂ ನಾಗೇಂದ್ರ ಅವರ ಕಾಂಗ್ರೆಸ್ ಸೇರ್ಪಡೆಗೆ ಸಚಿವ ಸಂತೋಷ್ ಲಾಡ್ ಹೆಣೆದ ‘ಸರ್ಜಿಕಲ್ ಸ್ಟ್ರೈಕ್’ ಕಾಂಗ್ರೆಸ್ ಪಕ್ಷಕ್ಕೆ ಬಲ ಮೂಡಿಸಿದಂತಾಗಿದೆ. ಬಿಜೆಪಿ ಪಕ್ಷದಲ್ಲಿನ ಆಂತರಿಕ ಕಲಹಗಳು ಶಾಸಕ ಆನಂದ್ ಸಿಂಗ್ ಹಾಗೂ ನಾಗೇಂದ್ರ ಅವರ ಪಕ್ಷಾಂತರಕ್ಕೆ ಕಾರಣವಾಗಿತ್ತು.

ಹಾಗೆ ನೋಡಿದರೆ, ವಿಧಾನಸಭೆಯಲ್ಲಿ ಸಿದ್ದರಾಮಯ್ಯ ವಿರುದ್ಧವೇ ಘರ್ಜಿಸಿ, ತೊಡೆ ತಟ್ಟಿದ್ದ ರೆಡ್ಡಿ ಪಾಳೆಯದ ಈ ಶಾಸಕರನ್ನು ಮೈದಡವಿ ಕಾಂಗ್ರೆಸ್ ಬರಮಾಡಿಕೊಂಡಿದೆ. ಕಳೆದ ಕೆಲವು ತಿಂಗಳಿಂದ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಸಂಸದ ಶ್ರೀರಾಮುಲು ಅವರ ಬಿಜೆಪಿ ಬಣದ ಜೊತೆ ಅಂತರ ಕಾಯ್ದುಕೊಂಡ ಶಾಸಕರುಗಳಾದ ಆನಂದ್ ಸಿಂಗ್ ಹಾಗೂ ನಾಗೇಂದ್ರ ಅವರ ಕಾಂಗ್ರೆಸ್ ತೆಕ್ಕೆಗೆ ಸೇರುವ ಅಂತರಾಳ ಇದೀಗ ಯಶಸ್ವಿಯಾಗಿದೆ. ಶತ್ರುಗಳ ಶತ್ರುವನ್ನೇ ಮಿತ್ರರನ್ನಾಗಿಸಿಕೊಂಡ ಕಾಂಗ್ರೆಸ್‌ನ ಚಾಣಾಕ್ಷ ನಡೆ ಬಳ್ಳಾರಿ ಜಿಲ್ಲೆಯಲ್ಲಿ ಹೊಸದೊಂದು ರಾಜಕೀಯ ನಾಂದಿಗೆ ಕಾರಣವಾಗಲಿದೆ.

ಇದನ್ನೂ ಓದಿ : ಜನ, ಜನಾರ್ದನ ದರ್ಶನ; ಹೈದರಾಬಾದ್ ಕರ್ನಾಟಕದಲ್ಲಿ ಗಮನ ಸೆಳೆದ ರಾಹುಲ್ ಹವಾ

ಅಕ್ರಮ ಗಣಿಗಾರಿಕೆ ವಿರುದ್ಧ ಈ ಹಿಂದೆ ಬಳ್ಳಾರಿವರೆಗೆ ಪಾದಯಾತ್ರೆ ಮೂಲಕ ಗಮನ ಸೆಳೆದು ಅಧಿಕಾರದ ಗದ್ದುಗೆ ಏರುವಲ್ಲಿ ಸಫಲರಾದ ಸಿಎಂ ಸಿದ್ದರಾಮಯ್ಯನವರ ವಿರುದ್ಧವೇ, ರೆಡ್ಡಿ ಬಣದ ಈ ಶಾಸಕರು ದನಿಯೇರಿಸಿದ್ದರು. ಬಳ್ಳಾರಿಗೆ ಬರುವಂತೆ ಸವಾಲನ್ನೂ ಹಾಕಿ, ಹುಬ್ಬೇರಿಸಿದ್ದರು. ಕಾಲಚಕ್ರ ಉರುಳಿದಂತೆ, ಎಲ್ಲವೂ ಬದಲಾಗತೊಡಗಿದೆ. ಬಿಜೆಪಿ ಜೊತೆಗಿನ ಇವರ ಭಿನ್ನವನ್ನೇ ದಾಳವನ್ನಾಗಿಸಿಕೊಂಡ ಕಾಂಗ್ರೆಸ್ ಪಕ್ಷ, ಇವರ ಮೂಲಕವೇ ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭದ್ರ ಬುನಾದಿ ಹಾಕಿಸಲು ಮುಂದಾಗಿದೆ.

ಈ ಮೂಲಕ ಒಂದೇ ಕಲ್ಲಿನಲ್ಲಿ, ರೆಡ್ಡಿ ಪಾಳೆಯವನ್ನೂ ಹಿಮ್ಮೆಟ್ಟಿಸೋದು ಹಾಗೂ ಕಾಂಗ್ರೆಸ್ ಅಲೆಯನ್ನು ಇಲ್ಲಿ ಬೀಸುವಂತೆ ರಾಜಕೀಯ ತಂತ್ರಗಾರಿಕೆಯನ್ನ ಸಿಎಂ ಸಿದ್ಧರಾಮಯ್ಯ ಹೆಣೆದಿದ್ದಾರೆ. ಇತ್ತ, ಹಗರಿಬೊಮ್ಮನಹಳ್ಳಿಯ ಜೆಡಿಎಸ್ ಶಾಸಕ ಭೀಮಾನಾಯ್ಕ ಸಹ ಕಾಂಗ್ರೆಸ್ ಸೇರ್ಡಡೆಗೊಂಡಿದ್ದಾರೆ. ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಅಡ್ಡಮತದಾನದ ಆರೋಪ ಹೊತ್ತು, ಜೆಡಿಎಸ್‌ನಿಂದ ಶಾಸಕ ಭೀಮಾನಾಯ್ಕ್ ಉಚ್ಛಾಟಿತಗೊಂಡಿದ್ದರು. ಅಂದಹಾಗೆ, ಭೀಮಾನಾಯ್ಕ್ ಕಾಂಗ್ರೆಸ್ ಸೇರಿದ್ದರು ಅನ್ನೋದಕ್ಕಿಂತ ಹೆಚ್ಚಾಗಿ, ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಮರಳಿದ್ದಾರೆ ಅನ್ನಬಹುದು.

ಫೆ.10ರ ಶನಿವಾರ ಬಳ್ಲಾರಿ ಜಿಲ್ಲೆಯ ಹೊಸಪೇಟೆಯಿಂದ ಜನಾಶೀರ್ವಾದ ಯಾತ್ರೆ ಆರಂಭಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಬಳ್ಳಾರಿ ಸೇರಿದಂತೆ ಹೈದರಾಬಾದ್ ಕರ್ನಾಟಕ ಭಾಗದ ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಫೆ.13ರವರೆಗೆ ಪ್ರವಾಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ದೇವಸ್ಥಾನ, ಮಠ, ಸೂಫಿ ಸಂತರ ದರ್ಗಾ, ಅನುಭವ ಮಂಟಪಕ್ಕೂ ಸಾಗುವ ಅವರ ಪ್ರವಾಸವನ್ನು ‘ಸಾಮರಸ್ಯದೆಡೆಗೆ ರಾಹುಲ್ ನಡಿಗೆ’ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತಿದ್ದರೆ, ಇದು ಮತಗಳಿಗಳಿಕೆಯ ತಂತ್ರ ಎಂಬುದು ಬಿಜೆಪಿ ಸೇರಿದಂತೆ ವಿಪಕ್ಷಗಳ ಟೀಕೆಯಾಗಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More