ಕೊಡಗಿನಲ್ಲಿ ಮೈದಳೆಯುತ್ತಿದೆ ಸರ್ಕಾರದ ಮೊದಲ ಮೇಕೆ ಹಾಲು ಉತ್ಪಾದನಾ ಘಟಕ

ರಾಜ್ಯದ ಕೆಲವೆಡೆ ಖಾಸಗಿ ಮೇಕೆ ಹಾಲು ಡೈರಿಗಳಿದ್ದು, ಈ ಹಾಲಿಗೆ ಉತ್ತಮ ಬೇಡಿಕೆಯೂ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಐದು ಕೋಟಿ ರುಪಾಯಿ ವೆಚ್ಚದಲ್ಲಿ ಕೊಡಗಿನಲ್ಲಿ ಮೇಕೆ ಹಾಲು ಉತ್ಪಾದನಾ ಘಟಕವನ್ನು ಆರಂಭಿಸಲು ಮುಂದಾಗಿದ್ದು, ಸ್ಥಳೀಯರಿಗೆ ಉದ್ಯೋಗವೂ ಸಿಗಲಿದೆ

ರಾಜ್ಯದ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಹಸುರಿಗೇನೂ ಬರವಿಲ್ಲ. ಹಾಗಾಗಿ ಹಸು, ಹಂದಿ, ಕುರಿ, ಮೇಕೆ ಸಾಕಾಣಿಕೆ ಇಲ್ಲಿನ ಜನರ ಪರ್ಯಾಯ ಆದಾಯ ಮೂಲವಾಗಿದೆ. ಮಾತ್ರವಲ್ಲ, ಅನೇಕ ಮಂದಿ ಹೈನೋದ್ಯಮವನ್ನು ಪೂರ್ಣಾವಧಿ ಉದ್ಯೋಗವನ್ನಾಗಿಸಿಕೊಂಡು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ.

ರಾಜ್ಯ ಪಶು ವೈದ್ಯಕೀಯ ಇಲಾಖೆಯು ಕೊಡಗಿನ ಕೂಡಿಗೆ ಸಮೀಪದ ಬ್ಯಾಡಗೊಟ್ಟ ಗ್ರಾಮದಲ್ಲಿ ಸರ್ಕಾರದಿಂದ ಆರಂಭವಾಗುತ್ತಿರುವ ರಾಜ್ಯದಲ್ಲೇ ಮೊದಲನೆಯ ಮೇಕೆ ಹಾಲು ಉತ್ಪಾದನಾ ಘಟಕ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದು, ಕೆಲಸ ಭರದಿಂದ ಸಾಗಿದೆ. ನಿರ್ಮಾಣ ವೆಚ್ಚ ೫ ಕೋಟಿ ರು. ಈಗಾಗಲೇ ೨ ಕೋಟಿ ರು. ವೆಚ್ಚದಲ್ಲಿ ಕಟ್ಟಡ, ಮೇಕೆ ಸಾಕಣೆ ಪಂಜರಗಳು ಸಿದ್ಧವಾಗುತ್ತಿವೆ.

ಇದನ್ನೂ ಓದಿ : ‘ನಾನೂ ಕೃಷಿ ಕುಟುಂಬದಿಂದ ಬಂದವನೇ’ | ಕೃಷಿ ಸಚಿವ ಕೃಷ್ಣ ಬೈರೇಗೌಡ ಸಂದರ್ಶನ

ಘಟಕಕ್ಕೆ ಮೀಸಲಿಟ್ಟಿರುವ ೧೧೨ ಎಕರೆ ಭೂಮಿಯಲ್ಲಿ ೮ ತಿಂಗಳ ಹಿಂದೆ ಪಶುಸಂಗೋಪನಾ ಸಚಿವ ಎ ಮಂಜು ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. “ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಒಬ್ಬರು ಪಶು ವೈದ್ಯಕೀಯ ಸಹಾಯಕ ನಿರ್ದೇಶಕ, ಪಶು ವೈದ್ಯ, ಕೃಷಿ ಅಧಿಕಾರಿ, ತಾಂತ್ರಿಕ ಅಧಿಕಾರಿ ಸಹಿತ ಸುಮಾರು ೫೦ ಉದ್ಯೋಗಿಗಳ ನೇಮಕ ಆಗಬೇಕಿದೆ,’’ ಎಂದು ಸದ್ಯ ಘಟಕದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕೂಡಿಗೆ ಜರ್ಸಿ ತಳಿ ಸಂವರ್ಧನಾ ಕೇಂದ್ರದ ಉಪನಿರ್ದೇಶಕ ಪದ್ಮನಾಭ ತಿಳಿಸಿದರು.

ಜರ್ಸಿ ತಳಿ ಘಟಕ ಪಶುಸಂಗೋಪನಾ ಇಲಾಖೆಯ ನಿರ್ದೇಶಕರ ಅಧೀನದಲ್ಲಿ ಕಾರ್ಯನಿರ್ವಹಿಸುತಿದ್ದು, ಜಿಲ್ಲಾ ಪಂಚಾಯ್ತಿ ಅಥವಾ ಜಿಲ್ಲಾ ಪಶುಸಂಗೋಪನಾ ಅಧಿಕಾರಿಗಳ ನಿಯಂತ್ರಣ ಹೊಂದಿಲ್ಲ. ಮೇಕೆ ಹಾಲು ಘಟಕವೂ ನೇರವಾಗಿ ಇಲಾಖೆಯ ನಿರ್ದೇಶಕರ ಅಧೀನದಲ್ಲೇ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.

ಈ ಮೇಕೆ ಹಾಲು ಘಟಕಕ್ಕೆ ಉತ್ತಮ ತಳಿಯ ೨೦೦ ಮೇಕೆಗಳನ್ನು ಖರೀದಿ ಮಾಡಲು ತಜ್ಞರ ಸಮಿತಿಯೊಂದನ್ನು ಸರ್ಕಾರ ನೇಮಿಸಿದ್ದು ನೆರೆಯ ಮಹಾರಾಷ್ಟ್ರದಲ್ಲಿ ಜಮಲಾಪುರಿ, ಸೆರಾಯ್ ಹಾಗೂ ಬೀಟಲ್ ತಳಿ ಮೇಕೆಗಳನ್ನು ಖರೀದಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ದೊರೆಯುವ ಉತ್ತಮ ತಳಿ ಮೇಕೆಗಳ ಬೆಲೆ ಒಂದಕ್ಕೆ ೧೫ರಿಂದ ೨೦ ಸಾವಿರ ರು. ಇವು ಎರಡು ವರ್ಷಕ್ಕೆ ೩ ಬಾರಿ ಮರಿ ಹಾಕುತ್ತವೆ. ದಿನಕ್ಕೆ ಒಂದೂವರೆಯಿಂದ ೩ ಲೀಟರ್ ಹಾಲು ಉತ್ಪಾದನೆ ಆಗುತ್ತದೆ.

ರಾಜ್ಯದ ಕೆಲವೆಡೆ ಖಾಸಗಿ ಮೇಕೆ ಹಾಲು ಡೈರಿಗಳಿದ್ದು ಮೇಕೆ ಹಾಲಿಗೆ ಉತ್ತಮ ಬೇಡಿಕೆಯೂ ಇದೆ. ಈಗ ಮಾರುಕಟ್ಟೆಯಲ್ಲಿ ಲೀಟರ್ ಹಾಲಿಗೆ ಸುಮಾರು ೭೦ ರು. ದರ. ಪ್ರಸ್ತುತ ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ ಹಾಗೂ ಇತರೆಡೆಗಳಲ್ಲಿ ಖಾಸಗಿಯವರು ಮೇಕೆ ಹಾಲು ಉತ್ಪಾದನಾ ಡೈರಿಗಳನ್ನು ಸ್ಥಾಪಿಸಿದ್ದು ಕೂಡಿಗೆ ಘಟಕ ಮೊದಲ ಸರ್ಕಾರಿ ಘಟಕ ಆಗಿದೆ. ಸುಮಾರು ೫೦ ಮಂದಿ ಸ್ಥಳೀಯರಿಗೂ ಇದರಿಂದ ಉದ್ಯೋಗಾವಕಾಶ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ಅಲ್ಲದೆ, ಇಲ್ಲಿ ಉತ್ಪಾದನೆ ಆಗುವ ಉತ್ತಮ ತಳಿಯ ಮರಿಗಳನ್ನು ಸ್ಥಳೀಯ ರೈತರಿಗೆ ನೀಡಿ ಅವರನ್ನು ಹಾಲು ಉತ್ಪಾದನೆಗೆ ಪ್ರೇರೇಪಿಸಲು ಸರ್ಕಾರ ಯೋಜನೆ ರೂಪಿಸಿದೆ. ನಂತರ ಮೇಕೆ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನೂ ಸ್ಥಾಪಿಸಲಾಗುತ್ತೆ. ಈ ಘಟಕದಲ್ಲಿ ಹಾಲು ಸಂಸ್ಕರಣಾ ಮತ್ತು ಶೀಥಲೀಕರಣ ಘಟಕ ಸ್ಥಾಪಿಸಲು ಮತ್ತು ಉತ್ಪಾದನೆ ಅಧಿಕಗೊಂಡ ನಂತರ ಹಾಲನ್ನು ಪ್ಯಾಕಿಂಗ್ ಮಾಡಿ ಮಾರಾಟ ಮಾಡಲು ಉದ್ದೇಶಿಸಲಾಗಿದೆ.

ಉತ್ಪಾದನಾ ಘಟಕದ ೧೦೦ ಎಕರೆ ಪ್ರದೇಶದಲ್ಲಿ ವಿವಿಧ ತಳಿಯ ಹುಲ್ಲನ್ನು ಬೆಳೆಸಲು ಉದ್ದೇಶಿಸಿದ್ದು, ಇಲ್ಲಿ ಸಾಕಲಾಗುವ ಮೇಕೆಗಳಿಗೆ ಉತ್ತಮ ಮೇವು ದೊರೆಯಲಿದೆ. ಇಲ್ಲಿ ಲಭ್ಯವಾಗುವ ಗೊಬ್ಬರವನ್ನು ಮಾರಾಟ ಮಾಡಲಾಗುವುದೆನ್ನುತ್ತಾರೆ ಅಧಿಕಾರಿಗಳು.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More