ಮೈಸೂರಿನಲ್ಲಿ ಪಲ್ಲವಿಸಿದ ಕರಾವಳಿಯ ಸಾಂಸ್ಕೃತಿಕ ಬೆಡಗು, ಅಬ್ಬಕ್ಕನ ವೀರತನ

ಪೋರ್ಚುಗೀಸರ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಥಮವಾಗಿ ರಣಕಹಳೆ ಮೊಳಗಿಸಿದ ಮೊದಲ ಮಹಿಳೆ ಉಳ್ಳಾಲದ ವೀರ ರಾಣಿ ಅಬ್ಬಕ್ಕ. ಇಂಥ ಧೀರ ಇತಿಹಾಸವನ್ನು ದಾಖಲಿಸಿದ ವೀರ ವನಿತೆ ಅಬ್ಬಕ್ಕನ ಉತ್ಸವವನ್ನು ಈ ಬಾರಿ ಮೈಸೂರಿನಲ್ಲಿ ಆಯೋಜಿಸಲಾಗಿದೆ

ಉಳ್ಳಾಲದ ರಾಣಿ ಅಬ್ಬಕ್ಕನ ಸ್ಮರಣೆಯ ನೆಪದಲ್ಲಿ ಎರಡು ದಿನ ಮೈಸೂರಿನಲ್ಲಿ ಕರಾವಳಿಯ ಸಾಂಸ್ಕೃತಿಕ ವೈವಿಧ್ಯತೆ, ಬೆಡಗು ಅನಾವರಣಗೊಂಡಿತು ಮಹಾರಾಜ ಕಾಲೇಜು ಮೈದಾನದ ಸುಸಜ್ಜಿತ ಚಾವಣಿಯಡಿ ಈ ವಾರಾಂತ್ಯ (ಫೆ.೧೦ ಮತ್ತು ೧೧) ನಡೆದ “ರಾಣಿ ಅಬ್ಬಕ್ಕ ಸಾಂಸ್ಕೃತಿಕ ಉತ್ಸವ’’ವು ದಕ್ಷಿಣ ಕನ್ನಡ- ಮೈಸೂರು ಜನರ ಸಂಭ್ರಮ ಮತ್ತು ವೈವಿಧ್ಯತೆಯ ಸಂಗಮಕ್ಕೆ ಸಾಕ್ಷಿಯಾಯಿತು.

ಪೋರ್ಚುಗೀಸರ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಥಮವಾಗಿ ರಣಕಹಳೆ ಮೊಳಗಿಸಿದ ಮೊದಲ ಮಹಿಳೆ ಉಳ್ಳಾಲದವೀರ ರಾಣಿ ಅಬ್ಬಕ್ಕ. ಮೂಡಬಿದಿರೆ ಪ್ರಾಂತ್ಯವನ್ನಾಳಿದ ಚೌಟರ ವಂಶಕ್ಕೆ ಸೇರಿದ ಅಬ್ಬಕ್ಕ, ಉಳ್ಳಾಲವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ರಾಜ್ಯಭಾರ ಮಾಡಿದವಳು. “ಕಡಲ ಕಿನಾರೆ ಮೂಲಕ ದೇಶ ಪ್ರವೇಶಿಸಲು ಹವಣಿಸಿದ ಪೋರ್ಚುಗೀಸರ ಯತ್ನವನ್ನು ಮತ್ತೆ ಮತ್ತೆ ವಿಫಲಗೊಳಿಸಿ, ನಾಲ್ಕು ದಶಕ ಕಾಲ ಅವರನ್ನು ಕಾಡಿ,ಒಳಬರದಂತೆ ತಡೆದ ಧೀರೆ ಆಕೆ,” ಎನ್ನುತ್ತದೆ ಇತಿಹಾಸ.

ಇಂಥ ಧೀರ ಇತಿಹಾಸವನ್ನು ದಾಖಲಿಸಿದ ವೀರ ವನಿತೆ ಅಬ್ಬಕ್ಕನ ಹೆಸರಿನಲ್ಲಿ ದಕ್ಷಿಣ ಕನ್ನಡದಲ್ಲಿ ಪ್ರತಿವರ್ಷ ಉತ್ಸವನ್ನು ಆಚರಿಸಲಾಗುತ್ತದೆ. ಹಿಂದೆ, ಬೆಂಗಳೂರಿನಲ್ಲೂ ನಡೆದಿತ್ತು. ಇದೇ ಮೊದಲ ಬಾರಿ, ದಕ್ಷಿಣ ಕನ್ನಡ ಜಿಲ್ಲಾ ಸಂಘ, ರಾಣಿ ಅಬ್ಬಕ್ಕ ಉತ್ಸವ ಸಮಿತಿ ಹಾಗೂ ಮೈಸೂರಿನ ಕರಾವಳಿ ಮೂಲದ ೨೯ ಸಂಘಟನೆ ಸಹಯೋಗದಲ್ಲಿ ಸಾಂಸ್ಕೃತಿಕ ಉತ್ಸವವನ್ನು ಸಂಘಟಿಸಲಾಗಿತ್ತು.

ಇದನ್ನೂ ಓದಿ : ರಾಜಕೀಯ ಮೇಲಾಟಗಳ ಅಬ್ಬರದಲ್ಲಿ ನಲುಗಿದ ಮೊದಲ ಗದಗ ಉತ್ಸವ

ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದು, ಸಾಂಸ್ಕೃತಿಕ ನಗರಿಯಲ್ಲಿ ನೆಲೆ ನಿಂತಿರುವ ಸಾವಿರಾರು ಮಂದಿ ಸಮ್ಮಿಲನಗೊಂಡು ಸಂಭ್ರಮಿಸಿದರು. ಎಳನೀರು, ಅಕ್ಕಿಮುಡಿ,ಅಡಿಕೆ ಸಹಿತ ಸ್ಥಳೀಯ ಪರಿಕರಗಳಿಂದ ಅಲಂಕೃತ ಕರಾವಳಿಯ 'ಗುತ್ತಿನ ಮನೆ' ಮಾದರಿಯ ವೇದಿಕೆಯಲ್ಲಿ ಹಲವು ಸಂಘಟನೆಗಳು ದಿಟ್ಟ ರಾಣಿಯ ಸಾಹಸಗಾಥೆ ಸಾರುವ ನೃತ್ಯರೂಪಕ ಸಹಿತ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದವು. ಚೆಂಡೆ ಮದ್ದಳೆಯ ನಿನಾದ ಝೇಂಕರಿಸಿತು. ಅಬ್ಬಕ್ಕನ ಹೆಸರಿನಲ್ಲಿರುವ ಪ್ರಶಸ್ತಿಯನ್ನು ಡಾ.ಆಶಾಲತಾ ಎಸ್.ಸುವರ್ಣ ಮತ್ತು ತುಕಾರಾಮ ಪೂಜಾರಿ ಅವರಿಗೆ ಪ್ರದಾನ ಮಾಡಲಾಯಿತು.

‘ಕರಾವಳಿ ದರ್ಶನ’ ಹೆಸರಿನಲ್ಲಿ ಅನಾವರಣಗೊಂಡಿದ್ದ ವಸ್ತುಪ್ರದರ್ಶನವು ದಕ್ಷಿಣ ಕನ್ನಡ ಜಿಲ್ಲೆಯ ಬದುಕು, ಕಲೆ, ಕೃಷಿ, ಸಂಸ್ಕೃತಿಯ ಸೊಗಸು, ಸೊಬಗನ್ನು ಮೈಸೂರಿಗರಿಗೆ ಸಮರ್ಥವಾಗಿ ಪರಿಚಯಿಸಿತು. ಶಾವಿಗೆ ಮಣೆ, ಬಾವಿಯಿಂದ ನೀರೆತ್ತುವ ರಾಟೆ, ತರಕಾರಿ ಕತ್ತರಿಸುವ ಮಣೆ, ತುರಿಮಣೆ, ಅಕ್ಕಿ ಮುಡಿ, ಉಳುಮೆಗೆ ಬಳಸುವ ನೇಗಿಲು, ನೊಗ, ಬತ್ತ ಬಡಿಯು ಬಡಿಮಂಚ, ಯಕ್ಷಗಾನದ ಕಿರೀಟ, ಭುಜಪಟ್ಟಿ, ಸೊಂಟ ಪಟ್ಟಿ ಮತ್ತು ಭೂತಾರಾಧನೆ, ನಾಗಮಂಡಲ, ಹುಲಿವೇಷದ ವೇಷಭೂಷಣ ಪರಿಕರಗಳು, ಗ್ಯಾಸ್‌ಲೈಟುಗಳು, ಮರದ ಪೆಟ್ಟಿಗೆಗಳು ಸಹಿತ ಈಗಿನ ಕಾಲಕ್ಕೆ ಅಪರೂಪವಾಗಿರುವ ಗೃಹ ಬಳಕೆ ವಸ್ತುಗಳು, ಜನಪದ ವಾದ್ಯ ಮತ್ತಿತರ ಪರಿಕರಗಳು ಗಮನ ಸೆಳೆದವು.

ಕರಾವಳಿಯಲ್ಲಿ ಹುಟ್ಟಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಹೆಸರಾದ ಸಾಧಕ ಗಣ್ಯರ ಚಿತ್ರ-ಮಾಹಿತಿ, ಶೈಕ್ಷ ಣಿಕ, ಹಣಕಾಸು ಸಂಸ್ಥೆಗಳ ವಿವರಗಳನ್ನು ಅಳವಡಿಸಲಾಗಿತ್ತು. ಅಕ್ಕಿ ಮುಡಿ ಮತ್ತು ಯಕ್ಷಗಾನ ವೇಷಭೂಷಣ ಕಟ್ಟುವುದು ಹೇಗೆಂಬುದ ಪ್ರಾತ್ಯಕ್ಷಿಕೆಯೂ ಇತ್ತು. ‘ಅಬ್ಬಕ್ಕ ಆಹಾರ ಮಳಿಗೆ’ಯಲ್ಲಿ ಲಭ್ಯವಿದ್ದ ನೀರು ದೋಸೆ, ಪತ್ರೊಡೆ, ಅವಲಕ್ಕಿ, ಈರುಳ್ಳಿ ಭಜ್ಜಿ, ಪುಂಡಿ ಗಸಿ, ಬನ್ಸ್, ಕುಚ್ಚಲು ಅಕ್ಕಿ ಅನ್ನ, ಗೋಲಿಬಜೆ, ಬಿಸ್ಕೂಟ್ ರೊಟ್ಟಿ, ಹಲಸಿನ ಪಾಯಸ, ಕಡುಬು, ಗೆಣಸಿನ ಪೋಡಿ, ಸಿಹಿ ಪೋಡಿ ಸಹಿತ ಕರಾವಳಿ ಭಾಗದ ವೈವಿಧ್ಯಮಯ ತಿನಿಸುಗಳು ಕಡಿಮೆ ದರಕ್ಕೆ ನಾಲಿಗೆ ರುಚಿ ತಣಿಸಿದವು.

ಮೈಸೂರಿನಲ್ಲಿ ಕರಾವಳಿ ಭಾಗದ ೧೫ ಸಾವಿರ ಕುಟುಂಬಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಇದ್ದಾರೆ. 22 ಜಾತಿ ಸಂಘಟನೆಗಳೂ ಸೇರಿ 29 ಸಂಘ-ಸಂಸ್ಥೆಗಳಿವೆ. ಅವೆಲ್ಲವೂ ಅಬ್ಬಕ್ಕನ ಹೆಸರಿನ ಉತ್ಸವದಲ್ಲಿ ಏಕತ್ರಗೊಂಡಿದ್ದವು. ಪರಿಣಾಮ, ಕೆಲವು ಜನಪರ ಬೇಡಿಕೆಗಳೂ ಗಟ್ಟಿ ಧ್ವನಿ ಪಡೆದವು. “ಎರಡೂ ನಗರಗಳ ಸಂಪರ್ಕ-ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿ ಬೆಸೆಯಲು ಮೈಸೂರು-ಮಂಗಳೂರು ಮಧ್ಯೆ ನಿತ್ಯ ರೈಲು ಸಂಚಾರ ವ್ಯವಸ್ಥೆ ಮಾಡಬೇಕು, ವಿಮಾನ ಸಂಚಾರ ವ್ಯವಸ್ಥೆಯನ್ನೂ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕು,’’ ಎಂದು ಆಗ್ರಹಿಸಿ ಈ ಉತ್ಸವ ಸಹಿಸಂಗ್ರಹ ಮೂಲಕ ಹಕ್ಕೊತ್ತಾಯ ಮಂಡಿಸಿತು. ಉತ್ಸವವನ್ನು ಉದ್ಘಾಟಿಸಿದ ಎಚ್ ಡಿ ದೇವೇಗೌಡರು, “ಮಂಗಳೂರು ಅಥವಾ ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ದೇವಿಯ ಪ್ರತಿಮೆ ನಿರ್ಮಿಸಬೇಕು,’’ ಎಂದು ಒತ್ತಾಯಿಸಿದರು. “ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿ ಬಾಯಿಯವರಷ್ಟೇ ಸಮರ್ಥವಾಗಿ ಹೋರಾಡಿದವಳು ಅಬ್ಬಕ್ಕ. ಆಕೆಯನ್ನು ನೆನೆಯುವ ಕೆಲಸ ಪರಿಣಾಮಕಾರಿಯಾಗಿ ನಡೆದಿಲ್ಲ. ಇನ್ನಾದರೂ ಈ ಕೆಲಸ ನಡೆಯಲಿ,’’ ಎಂದು ಆಶಿಸಿದರು. “ಅಬ್ಬಕ್ಕ ಉತ್ಸವ ಬೆಂಗಳೂರಿನಲ್ಲಿ ನಡೆದಾಗ ಸರ್ಕಾರ ೫೦ ಲಕ್ಷ ರೂ. ನೀಡಿತ್ತು. ಮುಂದೆ ಕೂಡ ಸರ್ಕಾರ ಎಲ್ಲ ನೆರವು ನೀಡುತ್ತದೆ,” ಎಂದು ಅಬ್ಬಕ್ಕ ಉತ್ಸವ ಸಮಿತಿ ಗೌರವ ಅಧ್ಯಕ್ಷರೂ ಆದ ಸಚಿವ ಯು ಟಿ ಖಾದರ್ ಭರವಸೆ ನೀಡಿದರು. ಎರಡು ದಿನದ ಕಾರ್ಯಕ್ರಮದಲ್ಲಿ ಅನೇಕ ರಾಜಕಾರಣಿಗಳು, ಗಣ್ಯರು ಭಾಗವಹಿಸಿದ್ದರು. “ಉಳ್ಳಾಲದವರೇ ಆದ ಖಾದರ್ ಅವರ ತಂದೆ ಹಿಂದಿನಿಂದಲೂ ಅಬ್ಬಕ್ಕನ ಉತ್ಸವವನ್ನು ಆಯೋಜಿಸುತ್ತಿದ್ದರು. ಆ ಪರಂಪರೆಯನ್ನು ಮುಂದುವರಿಸಿರುವ ಖಾದರ್ ಅಬ್ಬಕ್ಕನ ಹಿರಿಮೆಯನ್ನು ರಾಜ್ಯದೆಲ್ಲೆಡೆಗೆ ಕೊಂಡೊಯ್ಯುವ ಪ್ರಯತ್ನ ಆರಂಭಿಸಿದ್ದಾರೆ,’’ ಎಂದು ಸಂಘಟನಾ ಸಮಿತಿಯಲ್ಲಿರುವ ನಾರಾಯಣ ಕುಂದರ್ ಶ್ಲಾಘಿಸಿದರು.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More