ವಿಡಿಯೋ ಸ್ಟೋರಿ | ಮಸ್ತಕಾಭಿಷೇಕದಲ್ಲಿ ಡೋಲಿ ಹೊರುವವರ ಡೋಲಾಯಮಾನ ಬದುಕು

ಗೊಮ್ಮಟನ ದರ್ಶನಕ್ಕೆ ಈಗ ಸಾವಿರಾರು ಭಕ್ತರು, ಪ್ರವಾಸಿಗರ ದಂಡು ಹರಿದುಬರುತ್ತಿದೆ. ಅವರಲ್ಲಿ ಎಲ್ಲರಿಗೂ ವಿಂಧ್ಯಗಿರಿಯ 650 ಮೆಟ್ಟಿಲುಗಳನ್ನು ಹತ್ತಿ ಬಾಹುಬಲಿಯ ದರ್ಶನ ಮಾಡುವುದು ಕಷ್ಟ. ಅಂಥವರ ನೆರವಿಗಾಗಿಯೇ ಇಲ್ಲಿ ಸಜ್ಜಾಗಿ ನಿಂತಿದ್ದಾರೆ 300 ಕ್ಕೂ ಹೆಚ್ಚು ಡೋಲಿವಾಲಾಗಳು

ಅದನ್ನು ಭಕ್ತಿ ಎನ್ನಿ, ಆಕರ್ಷಣೆ, ಕುತೂಹಲ, ಸಾಹಸ, ಹೀಗೆ ಯಾವ ಹೆಸರಿನಿಂದಲಾರೂ ಕರೆಯಿರಿ; ಆಬಾಲ ವೃದ್ಧರಾದಿಯಾಗಿ, ಆಸ್ತಿಕ ಮತ್ತು ನಾಸ್ತಿಕ ಮನೋಭಾವದವರೆಲ್ಲರೂ ಬೆಟ್ಟ ಹತ್ತುವ ಸೆಳೆತಕ್ಕೊಳಪಟ್ಟೇ ಇರುತ್ತಾರೆ. ಅದರಲ್ಲೂ, ಭಾರತದಲ್ಲಿ ಬಹುತೇಕ ಧಾರ್ಮಿಕ ಕ್ಷೇತ್ರಗಳು, ದೇವಸ್ಥಾನಗಳು ಇರುವುದು ಗುಡ್ಡ, ಬೆಟ್ಟಗಳ ಮೇಲೆ. ಬೆಟ್ಟದ ಎದುರು ಕುಬ್ಜನಾಗುವ ಮಾನವ ತನ್ನ ಅಹಂ ಸ್ಥಾಪನೆಗಾಗಿ ಬೆಟ್ಟ ಹತ್ತಲು ಬಯಸುತ್ತಾನೋ ಅಥವಾ ಬೆಟ್ಟವೇ ಮಾನವನನ್ನು ಕೈಬೀಸಿ ಕರೆಯುತ್ತದೆಯೋ; ಒಟ್ಟಿನಲ್ಲಿ ಆರೋಹಣದ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ತೀರ್ಥಕ್ಷೇತ್ರಗಳ ದರ್ಶನ ಮಾಡುವ ಮುಕ್ಕಾಲು ಪಾಲು ಜನರಲ್ಲಿ ಭಕ್ತಿಯ ಪರಾಕಾಷ್ಠೆಯೂ ಬೆಟ್ಟ ಹತ್ತಲು ಪ್ರೇರಣೆ ನೀಡುತ್ತದೆ ಎಂಬುದು ಸುಳ್ಳಲ್ಲ.

ದಕ್ಷಿಣ ಭಾರತದ ಜೈನಕಾಶಿ ಶ್ರವಣಬೆಳಗೊಳದಲ್ಲೀಗ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಬಾಹಬಲಿ ಮಹಾಮಜ್ಜನದ ಸಂಭ್ರಮ. 470 ಅಡಿಗಳಷ್ಟು ಎತ್ತರದ ವಿಂಧ್ಯಗಿರಿ ಬೆಟ್ಟದ ಮೇಲೆ 58.8 ಅಡಿ ಎತ್ತರಕ್ಕೆ ತಲೆ ಎತ್ತಿನಿಂತಿರುವ ಗೊಮ್ಮಟನ ದರ್ಶನಕ್ಕೆ ಈಗ ಸಾವಿರಾರು ಭಕ್ತರು ಮತ್ತು ಪ್ರವಾಸಿಗರ ದಂಡು ಹರಿದುಬರುತ್ತಿದೆ. ಅವರಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು, ಅಶಕ್ತರು, ಅಂಗವಿಕಲರು, ರೋಗಿಗಳು ಎಲ್ಲರೂ ಇದ್ದಾರೆ. ಎಲ್ಲರಿಗೂ ವಿಂಧ್ಯಗಿರಿಯ 650 ಮೆಟ್ಟಿಲುಗಳನ್ನು ಹತ್ತಿ ಬಾಹುಬಲಿಯ ದರ್ಶನ ಮಾಡುವುದು ಕಷ್ಟ. ಅಂಥವರ ನೆರವಿಗಾಗಿಯೇ ಇಲ್ಲಿ ಸಜ್ಜಾಗಿ ನಿಂತಿದ್ದಾರೆ 300ಕ್ಕೂ ಹೆಚ್ಚು ಡೋಲಿವಾಲಾಗಳು.

ಹಿಂದೂಗಳಿಗೆ ಕಾಶಿ ಹೇಗೆ ಪವಿತ್ರವೋ, ಮುಸ್ಲಿಮರಿಗೆ ಹೇಗೆ ಮೆಕ್ಕಾ ಪವಿತ್ರವೋ ಹಾಗೆಯೇ ಜೈನರಿಗೆ ಜಾರ್ಖಂಡ್ ರಾಜ್ಯದ ಗಿರಿಢಿ ಎಂಬಲ್ಲಿರುವ ಸಮ್ಮೇದ ಶಿಖರ್ಜಿ ಅತ್ಯಂತ ಪವಿತ್ರ ತೀರ್ಥಯಾತ್ರಾ ಕ್ಷೇತ್ರ. ಜೈನರು ಜೀವನದಲ್ಲಿ ಒಮ್ಮೆಯಾದರೂ ಶಿಖರ್ಜಿಗೆ ಹೋಗಿಬರಲು ಬಯಸುತ್ತಾರೆ. ಜೈನ ಧರ್ಮದ 24 ತೀರ್ಥಂಕರರಲ್ಲಿ 20 ತೀರ್ಥಂಕರರು ಶಿಖರ್ಜಿಯ ಬೆಟ್ಟಗಳಲ್ಲಿ ಮೋಕ್ಷ ಸಾಧಿಸಿರುವರು ಎಂದು ಪುರಾಣಗಳು ಹೇಳುತ್ತವೆ. ಈ ತೀರ್ಥಂಕರರ ಪಾದುಕೆಗಳ ದರ್ಶನಕ್ಕೆ ಮಧುಬನದಿಂದ 27 ಕಿಮೀ ದೂರ ಬೆಟ್ಟಸಾಲುಗಳಲ್ಲಿ ಸಾಗಬೇಕು. ದೈಹಿಕ ದುರ್ಬಲರು ಮತ್ತು ಅಂಗವಿಕಲರು ಈ ಯಾತ್ರೆಗೆ ಡೋಲಿವಾಲಾಗಳ ನೆರವು ಪಡೆಯುತ್ತಾರೆ. ಅಂತಹ ಪವಿತ್ರ ಕ್ಷೇತ್ರ ಶಿಖರ್ಜಿಯಿಂದ 300 ಡೋಲಿವಾಲಾಗಳು ಮಹಾಮ್ತಕಾಭಿಷೇಕದ ಸೇವೆಗೆಂದೇ ಈಗ ಶ್ರವಣಬೆಳಗೊಳಕ್ಕೆ ಬಂದಿದ್ದಾರೆ. ಸ್ಥಳೀಯ 20 ಡೋಲಿವಾಲಾಗಳ ಜೊತೆ ಸೇರಿ ಅಶಕ್ತರನ್ನು ಡೋಲಿಯಲ್ಲಿ ಹೊತ್ತು ಬೆಟ್ಟ ಹತ್ತಿ ಬಾಹುಬಲಿ ದರ್ಶನ ಮಾಡಿಸುತ್ತಿದ್ದಾರೆ.

ಸುಮಾರು 75 ಡೋಲಿಗಳಲ್ಲಿ ಸೇವೆ ನೀಡಲಾಗುತ್ತಿದೆ. ಒಂದು ಡೋಲಿಯನ್ನು ನಾಲ್ವರು ಹೊತ್ತು ಕೈಯಲ್ಲಿ ಬಿದಿರು ಕೋಲು ಹಿಡಿದು ಒಂದೇ ಬಿರುಸಿನ ನಡಿಗೆಯಲ್ಲಿ ಬೆಟ್ಟವನ್ನು ಹತ್ತಿ ಡೋಲಿಯಲ್ಲಿ ಕುಳಿತವರಿಗೆ ಬಾಹುಬಲಿ ದರ್ಶನ ಮಾಡಿಸಿಕೊಂಡು ಮತ್ತೆ ಡೋಲಿ ಹೊತ್ತು ಅದೇ ರೀತಿ ಕೆಳಗಿಳಿಯುತ್ತಾರೆ. ಈ ಬಾರಿ ಕೇಂದ್ರ ಪುರಾತತ್ವ ಇಲಾಖೆಯು ಡೋಲಿ ಹೊತ್ತು ಸಾಗಲು ವಿಂಧ್ಯಗಿರಿ ಬೆಟ್ಟಕ್ಕೆ ಪ್ರತ್ಯೇಕ ಮೆಟ್ಟಿಲುಗಳ ಸಾಲನ್ನು ಕೆತ್ತಿಸಿಕೊಟ್ಟಿರುವುದರಿಂದ ಡೋಲಿ ಹೊರುವವರಿಗೂ ಮತ್ತು ಬೆಟ್ಟ ಹತ್ತುವ ಭಕ್ತರಿಗೂ ಅಡಚಣೆ ತಪ್ಪಿದಂತಾಗಿದೆ.

ಡೋಲಿ ಸೇವೆಗೆ ಶ್ರವಣಬೆಳಗೊಳ ದಿಗಂಬರ ಜೈನ ಮಠದ ಟ್ರಸ್ಟ್ ದರ ನಿಗದಿಪಡಿಸಿದೆ. ಮಾಮೂಲಿ ದಿನಗಳಲ್ಲಿ ಒಬ್ಬರಿಗೆ 725 ರು.ಗಳಷ್ಟಿದ್ದ ದರ ಈಗ ದುಪ್ಪಟ್ಟು ಅಂದರೆ 1,500 ರು.ಗಳಾಗಿದೆ. ಈ ಹಣಕ್ಕೆ ಟ್ರಸ್ಟ್‌ನ ರಶೀದಿ ನೀಡಲಾಗುತ್ತದೆ. ಆದರೆ, ಇಷ್ಟಕ್ಕೇ ಡೋಲಿ ಸೇವೆ ಸಿಗುವುದಿಲ್ಲ. ಡೋಲಿ ಹೊರುವವರಿಗೂ ಪ್ರತ್ಯೇಕವಾಗಿ ಹಣ ಕೊಡಬೇಕಾಗುತ್ತದೆ.

“ಶಿಖರ್ಜಿಯಲ್ಲಿ 27 ಕಿಮೀ ಉದ್ದದ ಬೆಟ್ಟಸಾಲುಗಳಲ್ಲಿ ಭಕ್ತರನ್ನು ಡೋಲಿಯಲ್ಲಿ ಹೊತ್ತು ಹೋಗಿಬರಲು ವ್ಯಕ್ತಿಯ ತೂಕದ ಆಧಾರದ ಮೇಲೆ ನಾಲ್ಕು ಸಾವಿರ ರು.ಗಳಿಂದ ಎಂಟು ಸಾವಿರ ರು.ಗಳವರೆಗೆ ಶುಲ್ಕ ಪಡೆಯುತ್ತಿದ್ದೆವು. ಇಲ್ಲಿ 650 ಮೆಟ್ಟಲುಗಳನ್ನು ಹತ್ತಿ ಇಳಿಯಬೇಕಿರುವುದರಿಂದ ಹೆಚ್ಚಿನ ಹಣ ಕೇಳುತ್ತಿಲ್ಲ,” ಎನ್ನುತ್ತಾರೆ ಶಿಖರ್ಜಿಯಿಂದ ಬಂದಿರುವ ಡೋಲಿವಾಲಾಗಳು.

“ಮೊದಲು 725 ರು. ಶುಲ್ಕವನ್ನು ಮಠ ಪಡೆಯುತ್ತಿತ್ತು. ಹಾಗಾಗಿ ಡೋಲಿ ಸೇವೆ ಉಪಯೋಗಿಸುತ್ತಿದ್ದ ಭಕ್ತರು ಪ್ರೀತಿಯಿಂದ ಡೋಲಿ ಹೊರುವವರಿಗೆ ನೂರೋ ಇನ್ನೂರೊ ಭಕ್ಷೀಸು ನೀಡುತ್ತಿದ್ದರು. ಈಗ ಮಠವೇ ಶುಲ್ಕವನ್ನು ದುಪ್ಪಟ್ಟು ಮಾಡಿರುವುದರಿಂದ ನಮ್ಮ ಭಕ್ಷೀಸಿಗೂ ಕುತ್ತು ಬಂದಿದೆ,” ಎಂದು ಸ್ಥಳೀಯ ಡೋಲಿವಾಲಾಗಳು ಅಲವತ್ತುಕೊಳ್ಳುತ್ತಾರೆ.

ಸ್ಥಳೀಯವಾಗಿ 20 ಮಂದಿ ಡೋಲಿವಾಲಾಗಳಿದ್ದು, ಅವರಿಗೆ ಜೈನ ಮಠದ ಟ್ರಸ್ಟ್ ಮಾಸಿಕ ಏಳು ಸಾವಿರದಿಂದ ಹತ್ತು ಸಾವಿರ ರು.ವರೆಗೆ ವೇತನ ನೀಡುತ್ತಿದೆ. ದಿನಕ್ಕೆ ಕನಿಷ್ಠ ಮೂರು ಟ್ರಿಪ್ ಡೋಲಿ ಹೊರಬೇಕೆಂಬುದು ಅವರಿಗಿರುವ ನಿಯಮ. ಆದರೀಗ ಮಹಾಮಸ್ತಕಾಭಿಷೇಕ ಮಹೋತ್ಸವದ ಸಂದರ್ಭವಾಗಿರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಹೆಚ್ಚಿನ ಟ್ರಿಪ್ ಕೆಲಸ ಮಾಡಬೇಕಾಗಿದೆ. ಹಾಗಾಗಿ ಈ ಮಾಸದಲ್ಲಿ ಅವರಿಗೆ 20 ಸಾವಿರ ರು.ವರೆಗೆ ವೇತನ ನೀಡುವ ಭರವಸೆ ಕೊಡಲಾಗಿದೆ ಎಂದು ಹೇಳಲಾಗಿದೆ.

ಅದೇನೇ ಇರಲಿ, ಶ್ರಮಜೀವಿಗಳಾದ ಡೋಲಿವಾಲಾಗಳಿಗೆ ಮಹಾಮಸ್ತಕಾಭಿಷೇಕವು ಹೆಚ್ಚಿನ ದುಡಿಮೆಗೆ ಸುವರ್ಣಾವಕಾಶ ಒದಗಿಸಿದೆ. ಕಟ್ಟುಮಸ್ತಾದ ಮೈಕಟ್ಟನ್ನು ಹೊಂದಿರುವ ಇವರದು ಯಾವುದೇ ದುಶ್ಚಟಗಳಿಲ್ಲದ, ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸದ ಕಟ್ಟುನಿಟ್ಟಿನ ಆಹಾರ ಪದ್ಧತಿ. ಸ್ಥಳೀಯ ಡೋಲಿವಾಲಾಗಳದು ವಂಶಪಾರಂಪರ್ಯ ವೃತ್ತಿ. ಯಾವುದೇ ಭೂಮಿ ಹೊಂದಿರದ ಇವರು, ಇದೇ ವೃತ್ತಿಯನ್ನು ಅವಲಂಬಿಸಿದ್ದಾರೆ. ಆದರೆ ತಮ್ಮ ಮಕ್ಕಳು ಮುಂದೆ ಡೋಲಿವಾಲಾಗಳಾಗುವುದು ಬೇಡ, ಉತ್ತಮ ಶಿಕ್ಷಣ ಪಡೆದು ಸುಖಮಯ ಬದುಕು ರೂಪಿಸಿಕೊಳ್ಳಬೇಕೆಂಬುದು ಇವರ ಕನಸಾಗಿದೆ.

ಇದನ್ನೂ ಓದಿ : ವೈರಾಗ್ಯಮೂರ್ತಿಗಳ ನೆಲೆ ತ್ಯಾಗಿನಗರ ಸುತ್ತಾಟದಲ್ಲಿ ಕಂಡದ್ದೇನು, ಕೇಳಿದ್ದೇನು?

ಇಎಸ್ಐ ಸೌಲಭ್ಯವಿಲ್ಲ

ಬರುವ ಅಲ್ಪ ವೇತನದಲ್ಲೇ ಸುಖವಾಗಿದ್ದೇವೆಂದು ಹೇಳಿಕೊಳ್ಳುವ ಇವರನ್ನು ಇಎಸ್ಐ ಸೌಲಭ್ಯದ ಬಗ್ಗೆ ಕೇಳಿದರೆ, “ಹಂಗಂದ್ರೇನು?” ಎಂಬುದಾಗಿ ನಮ್ಮನ್ನೇ ಮರುಪ್ರಶ್ನಿಸುತ್ತಾರೆ. ಆರೋಗ್ಯ ಕೆಟ್ಟರೆ ಏನು ಮಾಡುತ್ತೀರಿ ಎಂದರೆ, "ಮಠದ ಮಕ್ಕಳ ಆಸ್ಪತ್ರೆ ಇದೆ, ಅಲ್ಲಿ ಉಚಿತವಾಗಿ ಚಿಕಿತ್ಸೆ ಸಿಗುತ್ತೆ,” ಎನ್ನುತ್ತಾರೆ. “ಹಂಗಲ್ಲ, ದೊಡ್ಡ ಕಾಯಿಲೆಯ ದುಬಾರಿ ಚಿಕಿತ್ಸೆಗೇನು ಮಾಡುತ್ತೀರಿ?” ಅಂದರೆ, "ಗೊತ್ತಿಲ್ಲ!” ಎಂದು ಮುಗ್ಧವಾಗಿ ಉತ್ತರಿಸುತ್ತಾರೆ. “ಇಎಸ್ಐ ಸೌಲಭ್ಯ ಪಡೆದರೆ ಇಡೀ ಕುಟುಂಬಕ್ಕೆ ಉಚಿತ ಆರೋಗ್ಯ ಸೇವೆ ದೊರೆಯುತ್ತದೆ. ಅದನ್ನು ನಿಮಗೆ ವೇತನ ನೀಡುವ ಟ್ರಸ್ಟ್ ಮಾಡಿಸಬೇಕು,” ಎಂದು ತಿಳಿಹೇಳಿದಾಗ ಪರಸ್ಪರ ಮುಖ ನೋಡಿಕೊಂಡರೇ ಹೊರತು ಪ್ರತಿಕ್ರಿಯಿಸುವ ಗೋಜಿಗೆ ಹೋಗಲಿಲ್ಲ.

ನಿತ್ಯ ಬೆಟ್ಟ ಹತ್ತಿ ಇಳಿಯುವ ಅತಿಶ್ರಮದ ಕಾಯಕ ನಡೆಸುವ ಕಾಯಕ ಜೀವಿಗಳ ಬದುಕು ಈಗ ಚೆನ್ನಾಗಿದ್ದರೂ ಭವಿಷ್ಯ ಡೋಲಾಯಮಾನವೇ.

ವಿಶ್ವ ಛಾಯಾಗ್ರಹಣ ದಿನ | ನೆಲದ ಜನರ ನೋವಿಗೆ ಧ್ವನಿಯಾದ ಮುತ್ತು ಹಾಳಕೇರಿ
ಫೇಸ್‌ಬುಕ್‌ ಲೈವ್‌ನಲ್ಲಿ ಮದುವೆ ಪ್ರಸಾರ ಮಾಡಿ ಹೆತ್ತವರಿಗೆ ಸಂದೇಶ ನೀಡಿದ ಪ್ರೇಮಿಗಳು 
ವಿಡಿಯೋ | ಕೊಡಗಿನಲ್ಲಿ ಮಹಾಮಳೆಯ ಆರ್ಭಟಕ್ಕೆ ಜನಜೀವನ ತತ್ತರ
Editor’s Pick More