ವಿಡಿಯೋ ಸ್ಟೋರಿ | ಕರ್ನಾಟಕದ್ದು ದೇಶದ್ರೋಹಿ ಸರ್ಕಾರ: ಬಿಜೆಪಿ ಶಾಸಕ ರಾಜಾಸಿಂಗ್

“ನಾನು ಪ್ರಧಾನಿಯಾದರೆ ದೇಶದಲ್ಲಿ ಬರೀ 100 ಕೋಟಿ ಹಿಂದೂಗಳು ಇರಲು ಅವಕಾಶ ನೀಡುತ್ತೇನೆ,” ಎಂದು ಹೈದರಾಬಾದ್‌ ಬಿಜೆಪಿ ಶಾಸಕ ರಾಜಾಸಿಂಗ್ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ತಮ್ಮ ಮೇಲೆ ಆರೋಪ ಹೊರಿಸಿದಾಗಲೂ ಪೊಲೀಸರು ಮೂಕಪ್ರೇಕ್ಷಕರಾಗಿದ್ದು ಗಮನಾರ್ಹ

ರಾಜ್ಯದ ಗಡಿ ಜಿಲ್ಲೆ ಬೀದರ್‌ನಲ್ಲಿ ಖಡಕಚಿಂಚೋಳಿಯಲ್ಲಿ ನಡೆದ ಹಿಂದೂ ಶಕ್ತಿ ಸಂಗಮ ಕಾರ್ಯಕ್ರಮದಲ್ಲಿ, ತೆಲಂಗಾಣದ ಹೈದರಾಬಾದ್‌ನ ಬಿಜೆಪಿ ಶಾಸಕ ರಾಜಾಸಿಂಗ್ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. “ನಾನು ಪ್ರಧಾನಿಯಾದರೆ ದೇಶದಲ್ಲಿ ಬರೀ 100 ಕೋಟಿ ಹಿಂದೂಗಳು ಮಾತ್ರ ಇರಲು ಅವಕಾಶ ನೀಡುತ್ತೇನೆ. ಪ್ರತಿಯೊಬ್ಬ ಮುಸ್ಲಿಂ ಸಮುದಾಯದವರು ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಮನೆಯಲ್ಲಿ ಇಟ್ಟು ಪೂಜೆ ಮಾಡಬೇಕು,” ಎಂದು ರಾಜಾಸಿಂಗ್ ಹೇಳಿದ್ದಾರೆ.

“ರಾಜ್ಯದಲ್ಲಿ ದೇಶದ್ರೋಹಿ ಸರ್ಕಾರ ಆಡಳಿತ ನಡೆಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶದ್ರೋಹಿಗಳನ್ನು ಚುನಾವಣಾ ಪ್ರಚಾರಕ್ಕೆ ಕರೆಸಿಕೊಳ್ಳುತ್ತಿದ್ದಾರೆ. ಸರ್ಕಾರದ ಅವಧಿಯಲ್ಲಿ ಹಿಂದೂಗಳ ಕಗ್ಗೊಲೆ ನಡೆಯುತ್ತಿದೆ ಮತ್ತು ಹಿಂದೂಗಳ ಕೊಲೆ ನಡೆಸಿದವರ ಮೇಲಿನ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಲಾಗುತ್ತಿದೆ,” ಎಂದು ರಾಜಾಸಿಂಗ್ ಆರೋಪಿಸಿದರು.

“ಒಂದು ವೇಳೆ ನಾನು ಪ್ರಧಾನಿಯಾದರೆ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತೇನೆ. ದೇಶದಲ್ಲಿ ಬರೀ 100 ಕೋಟಿ ಹಿಂದುಗಳು ಮಾತ್ರ ಇರುತ್ತಾರೆ. ಮುಸ್ಲಿಮರು ಪ್ರಧಾನಿ ಮೋದಿ ಫೋಟೋ ಇಟ್ಟು ಪೂಜಿಸಬೇಕು,” ಎಂದು ಹೇಳಿದ್ದಾರೆ.

ಮುಸ್ಲಿಂ ಮುಖಂಡ ಓವೈಸಿ ಅವರನ್ನು ಅತೀ ಕೆಟ್ಟ ಪದಗಳಿಂದ ನಿಂದಿಸಿದ ಅವರು, ಉಲ್ಲೇಖಿಸಲು ಸಾಧ್ಯವಿಲ್ಲದಂತಹ ಕೆಟ್ಟ ಪದಗಳನ್ನು ಬಳಸಿದ್ದಾರೆ. “ಮುಸ್ಲಿಂ ಸಮುದಾಯವರು ಭಾರತದಲ್ಲಿ ನೆಲಸಬೇಕಾದರೆ ಕಡ್ಡಾಯವಾಗಿ ಭಾರತ ಮಾತಕೀ ಜೈ, ವಂದೇ ಮಾತರಂ ಎಂದು ಹೇಳಬೇಕು. ಇಲ್ಲದಿದ್ದರೆ ಭಾರತದಲ್ಲಿ ನೆಲೆಸಲು ಅವಕಾಶ ಕೊಡುವುದಿಲ್ಲ,” ಎಂದೂ ಹೇಳಿದ್ದಾರೆ.

ಇದನ್ನೂ ಓದಿ : ಸಿಎಂ ವಿರುದ್ಧ ಏಕವಚನ ಪ್ರಯೋಗಿಸಿದ ಸಚಿವ ಅನಂತ್ ಕುಮಾರ್ ಹೆಗಡೆ

ರಾಜ್ಯ ಸರ್ಕಾರದ ಮೇಲೆ ದೇಶದ್ರೋಹದ ಆರೋಪ ಹೊರಿಸಿದ ರಾಜಾಸಿಂಗ್, “ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಚುನಾವಣೆಯ ಸಂದರ್ಭದಲ್ಲಿ ಹಿಂದೂ ಓಲೈಕೆಗೆ ಪ್ರಯತ್ನಿಸುತ್ತಿದ್ದಾರೆ,” ಎಂದು ಹೇಳಿದ್ದಾರೆ. ಅಲ್ಲದೆ, ಸಮಾವೇಶಕ್ಕೆ ಆಗಮಿಸಿದ ಕಾರ್ಯಕರ್ತರ ಬಳಿ ಮುಸ್ಲಿಂ ವಿರೋಧಿ ಪ್ರಚೋದನಕಾರಿ ಭಾಷಣಗಳನ್ನು ಮಾಡುವಂತೆ ಪ್ರೋತ್ಸಾಹಿಸಿ, ಲವ್ ಜಿಹಾದಿಗಳಿಗೆ ಪಾಠ ಕಲಿಸಿ ಎಂದು ಪ್ರಚೋದನೆ ನೀಡಿದ್ದಾರೆ. ಕರ್ನಾಟಕ ಪೊಲೀಸರ ಮೇಲೂ ಆರೋಪ ಹೊರಿಸಿದಾಗ ಕಾರ್ಯಕ್ರಮಕ್ಕೆ ಪಹರೆ ನೀಡಿದ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು.

ಡಿ.೧೨ರಂದು ಯಾದಗಿರಿಯಲ್ಲಿ ನಡೆದ ಹಿಂದೂ ವಿರಾಟ್‌ ಸಮಾವೇಶದಲ್ಲಿ ತೆಲಂಗಾಣ ಶಾಸಕ ರಾಜಾಸಿಂಗ್‌ ಅವರ ಪ್ರಚೋದನಾಕಾರಿ ಭಾಷಣವನ್ನು ‘ದಿ ಸ್ಟೇಟ್‌’ ವರದಿ ಮಾಡಿತ್ತು. ವರದಿ ಗಮನಿಸಿದ ಯಾದಗಿರಿ ಜಿಲ್ಲಾ ಪೊಲೀಸರು ಶಾಸಕ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದರು. ಬಹಿರಂಗ ಸಮಾರಂಭದಲ್ಲಿ ಕೋಮು ಭಾವನೆ ಕೆರಳಿಸಿ, ಮಾರಕಾಸ್ತ್ರಗಳ ಪ್ರದರ್ಶನಕ್ಕೆ ಅನುವು ಮಾಡಿದ ಕಾರಣಕ್ಕೆ ನಾಲ್ವರ ವಿರುದ್ಧ ಯಾದಗಿರಿ ನಗರ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ ೧೪೩, ೧೪೫, ೧೪೭, ೧೪೯, ೨೫(೧) ಎ ಹಾಗೂ ೧೫೮ (ಎ) ಶಸ್ತ್ರಾಸ್ತ್ರ ಕಾಯ್ದೆ ಅಡಿ ಕೇಸು ದಾಖಲಿಸಲಾಗಿದೆ. ಇದನ್ನು ನೆನಪಿಸಿಕೊಂಡು ಮಾತನಾಡಿದ ರಾಜಾಸಿಂಗ್, “ನನ್ನ ಮೇಲೆ ಪೊಲೀಸರು ಎಷ್ಟೇ ಕೇಸ್ ಹಾಕಿದರೂ ನಾನು ಹಿಂದುತ್ವದ ಹೋರಾಟದಿಂದ ಹಿಂದೆ ಸರಿಯುವುದಿಲ್ಲ,” ಎಂದಿದ್ದಾರೆ. ಆದರೆ, ರಾಜಾಸಿಂಗ್ ಕೋಮು ಪ್ರಚೋದಿತ ಭಾಷಣ ಮಾಡುತ್ತಿದ್ದರೂ, ಪದೇಪದೇ ರಾಜ್ಯದಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವರಿಗೆ ಅವಕಾಶ ನೀಡುವ ಅಗತ್ಯವೇನು ಎನ್ನುವ ಪ್ರಶ್ನೆ ಎದ್ದಿದೆ. ಈ ಪ್ರಶ್ನೆಗೆ ಬಿಜೆಪಿ ನಾಯಕರು ಉತ್ತರಿಸುವ ಧೈರ್ಯ ಮಾಡಿಲ್ಲ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More