ಗುಡ್ ನ್ಯೂಸ್ | ಮಧ್ಯವರ್ತಿಗಳಿಂದ ಬೇಸತ್ತು ಕಂಪನಿ ಆರಂಭಿಸಿದ ಭಾಗಮಂಡಲ ರೈತರು

ಉತ್ಪಾದಕರು, ಬಳಕೆದಾರರಿಗಿಂತ ಮಧ್ಯವರ್ತಿಗಳೇ ಲಾಭ ಗಿಟ್ಟಿಸುವುದು ನಡೆದೇ ಇದೆ. ಇದೆಲ್ಲವನ್ನು ಮೀರಲು ಸಣ್ಣ ರೈತರೇ ಸೇರಿ ಸಹಕಾರಿ ತತ್ವದಡಿ ಕೊಡಗಿನ ಭಾಗಮಂಡಲದಲ್ಲಿ ಒಂದು ಕಂಪನಿ ತೆರೆದಿದ್ದಾರೆ.  ಕಂಪನಿಯಿಂದಾಗಿ ರೈತರ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆ ಸಿಗುತ್ತಿದೆ

ನಗರ, ಪಟ್ಟಣ, ಅಷ್ಟೇ ಏಕೆ, ಹಳ್ಳಿಯ ಜನರೂ ವರ್ತಮಾನದಲ್ಲಿ ನಿತ್ಯ ಬಳಸುವ ಬಹುತೇಕ ವಸ್ತುಗಳು ಬೃಹತ್ ಕಂಪನಿಗಳ ಮೊಹರನ್ನು ಹಾಕಿಕೊಂಡಿರುತ್ತವೆ. ಉತ್ಪಾದನೆ, ಪೂರೈಕೆ, ಮಾರಾಟ ಸಹಿತ ಅನೇಕ ಹಂತಗಳಿರುವುದರಿಂದ, ಅದೆಲ್ಲದರ ವೆಚ್ಚವನ್ನು ಬಳಕೆದಾರನೇ ದುಬಾರಿ ಬೆಲೆಯ ರೂಪದಲ್ಲಿ ತೆರಬೇಕಾಗುತ್ತದೆ. ಆದರೆ, ಉತ್ಪಾದಕರು ಮತ್ತು ಬಳಕೆದಾರರಿಗಿಂತ ಮಧ್ಯವರ್ತಿಗಳೇ ಸರಾಗವಾಗಿ ಹೆಚ್ಚು ಲಾಭ ಗಿಟ್ಟಿಸುವುದು ನಡೆದೇ ಇದೆ. ಇದೆಲ್ಲವನ್ನು ನೀಗಿಕೊಂಡು, ಸಣ್ಣ ರೈತರೇ ಸೇರಿ ಸಹಕಾರಿ ತತ್ವದಡಿ ಸಂಘಟನೆಗಳನ್ನು ಮಾಡಿಕೊಂಡು ಯಶಸ್ವಿಯಾದ ಅನೇಕ ನಿದರ್ಶನಗಳಿವೆ. ಕೊಡಗಿನ ಭಾಗಮಂಡಲದಲ್ಲಿ ಇಂಥದೇ ಒಂದು ರೈತರ ಕಂಪನಿ ಶುಭಾರಂಭ ಮಾಡಿದ್ದು, ಭರವಸೆದಾಯಕ ಹೆಜ್ಜೆಗಳನ್ನು ಊರಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯಿಂದ ೩೫ ಕಿಮೀ ದೂರದಲ್ಲಿರುವ ಪ್ರಸಿದ್ದ ತೀರ್ಥ ಕ್ಷೇತ್ರ ಭಾಗಮಂಡಲದಲ್ಲಿ ಜಿಲ್ಲೆಯಲ್ಲೇ ಪ್ರಥಮವಾಗಿ, ‘ಶ್ರೀ ಭಗಂಡೇಶ್ವರ ಹಾರ್ಟಿಕಲ್ಚರಲ್ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪನಿ ಲಿಮಿಟೆಡ್’ ಆರಂಭವಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮತ್ತು ರಾಜ್ಯ ಸರ್ಕಾರದ ಸಮಗ್ರ ತೋಟಗಾರಿಕಾ ಅಭಿವೃದ್ದಿ ಯೋಜನೆಯ ನೆರವು ದೊರೆತಿದೆ.

ಕಂಪನಿ ಕರಿಕೆ ಮತ್ತು ಚೇರಂಬಾಣೆಯಲ್ಲಿ ಎರಡು ಶಾಖೆ ತೆರೆದಿದ್ದು, ಉತ್ಪನ್ನಗಳ ಮಾರಾಟ ಮತ್ತು ರೈತರಿಗೆ ಯಂತ್ರೋಪಕರಣ ಒದಗಿಸಲು ಅನುಕೂಲವಾಗಿದೆ. ಪ್ರಸ್ತುತ ರಾಜ್ಯದಲ್ಲಿ ೫೮ ಫಾರ್ಮರ್ಸ್ ಪ್ರಡ್ಯೂಸರ್ಸ್ ಆರ್ಗನೈಸೇಷನ್‌ಗಳಿದ್ದು ಇವುಗಳ ಮೂಲಕ ರಾಜ್ಯಾದ್ಯಂತ ನಮ್ಮ ಉತ್ಪನ್ನಗಳನ್ನು ಮಾರುವ ಮತ್ತು ಅವರ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡುವ ಸಂಬಂಧ ಮಾತುಕತೆ ನಡೆಸಲಾಗುತ್ತಿದೆ.
ಹೊಸೂರು ಸತೀಶ್, ಅಧ್ಯಕ್ಷ, ಭಗಂಡೇಶ್ವರ ಹಾರ್ಟಿಕಲ್ಚರಲ್ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪನಿ ಲಿಮಿಟೆಡ್‌

ಈ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ಪ್ರಗತಿಪರ ಕೃಷಿಕರು, ಮೊದಲಿಗೆ ಆಸಕ್ತ ತಲಾ ೨೦ ರೈತರನ್ನೊಳಗೊಂಡ ೫೨ ಗುಂಪುಗಳನ್ನು ರಚಿಸಿದರು. ಈ ರೀತಿಯಲ್ಲಿ ಒಟ್ಟು ೧,೦೪೦ ರೈತರನ್ನೊಳಗೊಂಡ ರೈತ ಉತ್ಪಾದಕರ ಸಂಘ ಆಸ್ತಿತ್ವಕ್ಕೆ ಬಂದಿತು. ಪ್ರತಿ ರೈತನ ಪಾಲಿನ ಷೇರು ಹಣ ೧ ಸಾವಿರ ರು. ಇದರಿಂದ ಒಟ್ಟು ೧೦,೪೦,೦೦೦ ರು. ಬಂಡವಾಳ ಸಂಗ್ರಹವಾಯಿತು. ಈ ಮೂಲ ಬಂಡವಾಳದಿಂದ ರೂಪುಗೊಂಡ ಕಂಪನಿ, ದೇಶದ ಎಲ್ಲ ಕಂಪನಿಗಳಂತೆ ರಿಜಿಸ್ಟ್ರಾರ್ ಆಫ್ ಕಂಪನಿ ಕಾಯ್ದೆ ಪ್ರಕಾರ ೨೦೧೬ರಲ್ಲಿ ನೋಂದಣಿಗೊಂಡಿದೆ. ಇದಕ್ಕೆ ಎಂಬಿಎ ಪದವೀಧರರೊಬ್ಬರನ್ನು ಸಿಇಒ ಆಗಿ ನೇಮಕ ಮಾಡಿಕೊಳ್ಳಲಾಗಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ರೈತ ಕಂಪನಿಗೆ ೧೫ ಲಕ್ಷ ರು. ದುಡಿಯುವ ಬಂಡವಾಳ ಮತ್ತು ಯಂತ್ರೋಪಕರಣಗಳ ಖರೀದಿಗೆ ೨೫ ಲಕ್ಷ ರು. ಅನುದಾನವನ್ನು ಒದಗಿಸಿವೆ. ಅಲ್ಲದೆ, ಈ ಕಂಪನಿಯ ಸಿಇಒ ಮತ್ತು ನಾಲ್ವರು ಸಂಪನ್ಮೂಲ ವ್ಯಕ್ತಿಗಳಿಗೆ ಸರ್ಕಾರವೇ ಮೂರು ವರ್ಷದವರೆಗೆ ವೇತನವನ್ನೂ ನೀಡುತ್ತಿದೆ. ನಂತರ, ಕಂಪನಿಯೇ ಎಲ್ಲವನ್ನೂ ನಡೆಸಿಕೊಂಡು ಹೋಗುವಷ್ಟು ಸ್ವಯಂ ಆರ್ಥಿಕ ಚೈತನ್ಯ ಪಡೆಯಬೇಕಿದೆ.

ಕಂಪನಿಯಿಂದಾಗಿ ರೈತರ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆ ಸಿಗುತ್ತಿದೆ. ನೇರ ಮಾರಾಟದಿಂದ ಬಳಕೆದಾರರಿಗೂ ಲಾಭವಿದೆ. ಗೋದಾಮು ನಿರ್ಮಾಣಕ್ಕೆ ಇಲಾಖೆಯಿಂದ ಶೇ.೯೦ರಷ್ಟು ಅನುದಾನ ನೀಡಲಾಗುವುದು. ಸರ್ಕಾರ ಇಷ್ಟೆಲ್ಲ ನೆರವು ನೀಡುತಿದ್ದರೂ ಆಡಳಿತದಲ್ಲಿ ಹಸ್ತಕ್ಷೇಪ ಮಾಡದಿರುವುದು ಈ ಕಂಪನಿಯ ವಿಶೇಷ.
ಚಕ್ಕೇರ ಪ್ರಮೋದ್, ಮಡಿಕೇರಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ

ಕಂಪನಿಯ ಲೆಕ್ಕಪತ್ರ ನಿರ್ವಹಣೆ, ತಾಂತ್ರಿಕ-ಆಡಳಿತಾತ್ಮಕ ನೆರವು, ಉತ್ಪಾದನೆ ಮತ್ತು ಉತ್ಪನ್ನಗಳ ಮಾರುಕಟ್ಟೆಗಾಗಿ ಬೆಂಗಳೂರಿನ ‘ಇಂಡಿಯನ್ ಸೊಸೈಟೀಸ್ ಫಾರ್ ಅಗ್ರಿ ಬಿಸಿನೆಸ್ ಪ್ರೊಫೆಷನಲ್’ ಎನ್ನುವ ಸ್ವಯಂ ಸೇವಾ ಸಂಘಟನೆಯ (ಎನ್‌ಜಿಒ) ನೆರವು ಪಡೆಯಲಾಗಿದೆ. ಇದು ಕಂಪನಿಯ ನೋಡಲ್ ಏಜೆನ್ಸಿಯಾಗಿಯೂ ಕಾರ್ಯನಿರ್ವಹಿಸುತ್ತಿದೆ.

ಪ್ರಸ್ತುತ ಕಂಪನಿ ಕರಿಮೆಣಸು, ಕಾಫಿ ಪುಡಿ, ತೆಂಗಿನ ಎಣ್ಣೆ ಹಾಗೂ ಏಲಕ್ಕಿಯನ್ನು ತನ್ನದೇ ಬ್ರಾಂಡ್ ಮೂಲಕ ಮಾರಾಟ ಮಾಡುತ್ತಿದೆ. “ಪ್ರಾರಂಭಗೊಂಡ ಒಂದು ವರ್ಷದ ಅಂತ್ಯಕ್ಕೆ ೪.೩೬ ಲಕ್ಷ ರು. ಲಾಭ ಗಳಿಸಿದೆ. ಗುಣಮಟ್ಟದ ಉತ್ಪನ್ನಕ್ಕೆ ಆದ್ಯತೆ ನೀಡುತ್ತಿರುವುದರಿಂದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ,” ಎನ್ನುತ್ತಾರೆ ಕಂಪನಿ ಅದ್ಯಕ್ಷ ಹೊಸೂರು ಸತೀಶ್.

“ಕಂಪನಿ ಎರಡು ಟ್ರಾಕ್ಟರ್, ಎರಡು ಟಿಲ್ಲರ್, ಕಳೆ ತೆಗೆಯುವ, ಔಷಧ ಸಿಂಪರಿಸುವ ಯಂತ್ರಗಳನ್ನು ಖರೀದಿಸಿದ್ದು, ಇವುಗಳನ್ನು ಬಾಡಿಗೆಗೆ ನೀಡುವ ಮೂಲಕ ಆದಾಯ ಗಳಿಸುತ್ತಿದೆ. ರೈತರಿಗೂ ಹೆಚ್ಚಿನ ಅನುಕೂಲವಾಗಿದೆ,’’ ಎನ್ನುತ್ತಾರೆ ಸತೀಶ್ ಹೇಳಿದರು.

ಕಂಪನಿಯು ಗೋದಾಮು ಹಾಗೂ ಕಚೇರಿ ನಿರ್ಮಿಸಲು ಅರ್ಧ ಎಕರೆ ಜಾಗವನ್ನು ಭಾಗಮಂಡಲದಲ್ಲಿ ಮೂರು ತಿಂಗಳ ಹಿಂದೆಯೇ ಖರೀದಿಸಿದೆ. “ಅಂದಾಜು ೫೦ ಲಕ್ಷ ರು. ವೆಚ್ಚದಲ್ಲಿ ಕಟ್ಟಡ ನಿರ್ಮಿಸುವ ಸಂಬಂಧ ನೀಲಿನಕ್ಷೆ ತಯಾರಾಗಿದ್ದು, ಸರ್ಕಾರದ ಅನುದಾನ ದೊರೆತ ಕೂಡಲೇ ಕಾಮಗಾರಿ ಆರಂಭಗೊಳ್ಳಲಿದೆ,’’ ಎಂದವರು ಹೇಳಿದರು.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More