ದರ್ಗಾದಲ್ಲಿ ಪ್ರಾರ್ಥನೆ, ಮಠಕ್ಕೆ ಭೇಟಿ; ಸೂಫಿ ನೆಲದಲ್ಲಿ ರಾಹುಲ್ ಭಾವೈಕ್ಯತೆ

‘ಜನಾಶೀರ್ವಾದ ಯಾತ್ರೆ’ಯ ಮೂರನೇ ದಿನವಾದ ಸೋಮವಾರ ಸಂಜೆ ಜೇವರ್ಗಿ ನಂತರ ಕಲಬುರಗಿಗೆ ಭೇಟಿ ನೀಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಭಾವೈಕ್ಯತೆಯ ಸಂಕೇತಗಳಾದ ಶ್ರೀಶರಣ ಬಸವೇಶ್ವರ ಮಠ ಹಾಗೂ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು

ಸೂಫಿ ಸಂತರ ನಾಡು ಕಲಬುರಗಿಯಲ್ಲಿ ರಾಹುಲ್ ಚರಿಷ್ಮಾ ಛಾಪು ಮೂಡಿಸಿದೆ. ಜನಾಶೀರ್ವಾದ ಯಾತ್ರೆಯ ಮೂರನೇ ದಿನವಾದ ಸೋಮವಾರ ಸಂಜೆ ಜೇವರ್ಗಿ ನಂತರ ಕಲಬುರಗಿಗೆ ಭೇಟಿ ನೀಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ನೂತನ ವಿದ್ಯಾಲಯ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆ ನಂತರ, ಭಾವೈಕ್ಯತೆಯ ನೆಲೆಗಳಾದ ಶ್ರೀಶರಣ ಬಸವೇಶ್ವರ ಮಠ ಹಾಗೂ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಜೇವರ್ಗಿ ಹಾಗೂ ಕಲಬುರಗಿಯಲ್ಲಿ ಸಂಜೆ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ರಾಹುಲ್, “ಕಲಂ 371 (ಜೆ) ತಿದ್ದುಪಡಿಗೆ ಕಾಂಗ್ರೆಸ್ ಸಕಾರಾತ್ಮಕವಾಗಿ ಪ್ರಯತ್ನಿಸಿದೆ. ಇದರಿಂದ ಕಲಂ ತಿದ್ದುಪಡಿ ಕಾರ್ಯರೂಪಕ್ಕೆ ಬಂದು, ಇಲ್ಲಿನ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಉಜ್ವಲಗೊಳಿಸಿಕೊಳ್ಳಲು ಸಹಾಯಕವಾಗಿದೆ,” ಎಂದರು.

ಜೇವರ್ಗಿಯಲ್ಲಿ ಮಾತನಾಡಿದ ವೇಳೆ ರಾಹುಲ್ ಅವರು, ಮಾಜಿ ಸಿಎಂ ದಿ.ಎನ್ ಧರಂಸಿಂಗ್ ಅವರನ್ನು ನೆನಪಿಸಿಕೊಂಡರಲ್ಲದೆ, ಮಲ್ಲಿಕಾರ್ಜುನ್ ಖರ್ಗೆ ಹಾಗೂ ಧರಂಸಿಂಗ್ ಕೊಡುಗೆ ಪ್ರಯತ್ನದ ಫಲವೇ ಕಲಂ 371 ತಿದ್ದುಪಡಿ ಜಾರಿಯಾದದ್ದು ಎಂದರು.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಜನರ ಆಶೀರ್ವಾದದ ಜೊತೆ ಹುಲಿಗೆಮ್ಮನ ಕೃಪೆ ಬೇಡಿದ ರಾಹುಲ್

ಕಲಬುರಗಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ರಾಹುಲ್, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಂಡವಾಳಶಾಹಿಗಳಿಗೆ ಕೇಂದ್ರದ ಮೋದಿ ಸರ್ಕಾರದ ನೆರವು, ಬಡವರ ಹಾಗೂ ಸಣ್ಣ ವ್ಯಾಪಾರಿಗಳಿಗೆ ಆಗಿರುವ ಸಂಕಷ್ಟ, ಜಿಎಸ್ಟಿ ಜಾರಿ, ಕಪ್ಪುಹಣದ ಹೆಸರಲ್ಲಿ ಮೋದಿ ಸರ್ಕಾರದ ಗಿಮಿಕ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪುತ್ರನ ಹಗರಣ, ರಾಫೇಲ್ ಒಪ್ಪಂದ; ಇದರಿಂದ ಕರ್ನಾಟಕ ಮೂಲದ ಎಚ್‌ಎಎಲ್‌ಗೆ ಆಗಿರುವ ನಷ್ಟ... ಮುಂತಾದವುಗಳ ವಿಷಯದಲ್ಲಿನ ಕೇಂದ್ರದ ನಡೆಯನ್ನು ತರಾಟೆಗೆ ತೆಗೆದುಕೊಂಡರು. ಅಂದಹಾಗೆ, ಹೊಸಪೇಟೆಯಿಂದ ಜೇವರ್ಗಿವರೆಗೂ ತಮ್ಮ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಲು ದಿನೇಶ್ ಗುಂಡೂರಾವ್ ಹಾಗೂ ಹರಿಪ್ರಸಾದ್ ಅವರ ನೆರವು ಪಡೆದಿದ್ದ ರಾಹುಲ್, ಕಲಬುರಗಿಯಲ್ಲಿ ಹಾಗೆ ಮಾಡದೆ, ತಮ್ಮ ಎಂದಿನ ಶೈಲಿಯಲ್ಲಿ ಮಾತನಾಡಿ ಗಮನ ಸೆಳೆದರು.

ಬಹಿರಂಗ ಸಭೆ ನಂತರ, ಶ್ರೀಶರಣ ಬಸವೇಶ್ವರ ಸಂಸ್ಥಾನ ಮಠಕ್ಕೆ ಹಾಗೂ ಖ್ವಾಜಾ ಬಂದೇ ನವಾಝ್ ದರ್ಗಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ಶರಣ ಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶರಣಬಸಪ್ಪ ಅಪ್ಪ ಅವರನ್ನು ಹಾಗೂ ಖ್ವಾಜಾ ಬಂದೇ ನವಾಜ್ ದರ್ಗಾದ ಸಜ್ಜಾದೆಯವರನ್ನು ಮಾತನಾಡಿಸಿದರು. ಈ ಮಧ್ಯೆ, ವಿಶೇಷ ಬಸ್‌ನ ಬಾಗಿಲಲ್ಲೇ ನಿಂತು ಜನರತ್ತ ಕೈಬೀಸುತ್ತಿದ್ದ ರಾಹುಲ್ ಗಾಂಧಿ, ಸೆಲ್ಫಿ ಪಡೆಯಲು ಮುಂದಾದ ಯುವಕನೊಬ್ಬನನ್ನು ಕರೆದು ವಾಹನದಲ್ಲೇ ಸೆಲ್ಫಿಗೆ ಮುಗುಳ್ನಗೆ ಬೀರಿದರು.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More