ವಿಡಿಯೋ ಸ್ಟೋರಿ | ಆಲಮಟ್ಟಿ ಜಲಾಶಯ ಪಕ್ಕದಲ್ಲೇ ಇದ್ದರೂ ನೀರಿಗೆ ಪರದಾಟ!

ಲಕ್ಷಾಂತರ ಜನರ ಬದುಕು ಹಸನಾಗಿಸಿದ ಆಲಮಟ್ಟಿ ಜಲಾಶಯ ತನ್ನೊಡಲೊಳಗಿನ, ತನ್ನನ್ನೇ ನಂಬಿರುವ ಕುಟುಂಬಗಳನ್ನು ಕೈಬಿಟ್ಟಿದೆ! ಮುಳುಗಡೆಯಾಗಿ ಪುನರ್ವಸತಿ ಕೇಂದ್ರಕ್ಕೆ ಹೋದ ಬೇನಾಳ ಗ್ರಾಮದ ನಿವಾಸಿಗಳಿಗೆ ಅಲ್ಲೂ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಬಂದಿದೆ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಆಲಮಟ್ಟಿ ಜಲಾಶಯ ಸಿಹಿ-ಕಹಿ ಎರಡಕ್ಕೂ ಸಾಕ್ಷಿಯಾಗುತ್ತ ಬಂದಿದೆ. ಈ ಜಲಾಶಯದಿಂದ ಲಕ್ಷಾಂತರ ಜನರಿಗೆ ಜೀವಜಲ ದೊರೆತರೆ, ನೂರಾರು ಹಳ್ಳಿಗಳ ಪಾಲಿಗೆ ಬರಸಿಡಿಲು ಬಡಿದ ಹಾಗಾಗಿದೆ. ಈ ಜಲಾಶಯ ನಿರ್ಮಾಣದಿಂದ 196 ಹಳ್ಳಿಗಳು ಜಲಾವೃತವಾದವು. 2 ಲಕ್ಷ ಹೆಕ್ಟೇರ್ ಪ್ರದೇಶ ಮುಳುಗಡೆಯಾಗಿದೆ. ಅಂದಾಜು ನಾಲ್ಕು ಸಾವಿರ ಜನ ಭೂಮಿ, ವಸತಿ ಇಲ್ಲದೆ ನಿರ್ಗತಿಕರಾಗಿದ್ದಾರೆ. ನಿರ್ಗತಿಕರಿಗಾಗಿ ಆಲಮಟ್ಟಿ ಸುತ್ತಮುತ್ತ 136 ಪುನರ್ವಸತಿ ಕೇಂದ್ರಗಳನ್ನು ಸ್ಥಾಪನೆ ಮಾಡಿರುವುದು, ಅವರು ಬದುಕು ರೂಪಿಸಿಕೊಳ್ಳಲು ದಾರಿ ಮಾಡಿಕೊಟ್ಟಿತು. ಆದರೆ, ಇದೀಗ ಅದೇ ಪುನರ್ವಸತಿ ಕೇಂದ್ರಗಳು ಈ ಜನರ ಕಣ್ಣೀರಿಗೆ ಕಾರಣವಾಗಿದೆ. ಯಾಕಾದರೂ ಜಲಾಶಯ ನಿರ್ಮಾಣಕ್ಕೆ ಭೂಮಿ ನೀಡಿದೆವೋ ಎಂದು ರೈತರು ಪ್ರತಿದಿನ ಪರದಾಡುವಂತಾಗಿದೆ.

ಲಾಲ್ ಬಹದ್ದೂರ್ ಶಾಸ್ತ್ರಿ ಹೆಸರಿನಿಂದ ಕರೆಯಲಾಗುವ ಆಲಮಟ್ಟಿಯು ರಾಜ್ಯದ ಜಲಾಶಯಗಳಲ್ಲಿ ಪ್ರಮುಖವಾದದ್ದು. ವಿಜಯಪುರ, ಬಾಗಲಕೋಟೆ, ಕಲಬುರಗಿ, ರಾಯಚೂರು ಜಿಲ್ಲೆಗಳ ಲಕ್ಷಾಂತರ ಜನ, ಜಾನುವಾರುಗಳ ಜೀವನಾಡಿ ಈ ಜಲಾಶಯ. ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಗೇಟ್‌ಗಳಿಂದ ನೀರನ್ನು ಹರಿಬಿಟ್ಟಾಗ ಭೋರ್ಗರೆಯುವ ಜಲಪಾತ ನೋಡುವುದೇ ಸೌಭಾಗ್ಯ. ವೈವಿಧ್ಯಮಯ ಉದ್ಯಾನಗಳ ಸೊಬಗು, ಸಂಗೀತ-ನೃತ್ಯ ಕಾರಂಜಿ ವಯ್ಯಾರ, ಹಸಿರು ಹೊದ್ದು ಕಂಗೊಳಿಸುವ ಗುಡ್ಡಗಳನ್ನು ಬಣ್ಣಿಸಲು ಪದಗಳು ಸಾಲದು. ರಾಕ್ ಉದ್ಯಾನ, ಕೃಷ್ಣ ಉದ್ಯಾನ, ಮೊಘಲ್ ಉದ್ಯಾನ, ರೋಜ್ ಉದ್ಯಾನ, ಇಟಾಲಿಯನ್ ಉದ್ಯಾನ, ಫ್ರೆಂಚ್ ಉದ್ಯಾನ, ಲವ-ಕುಶ ಉದ್ಯಾನ ಹೀಗೆ ಉದ್ಯಾನಗಳ ದೊಡ್ಡ ಪಟ್ಟಣವೇ ಇಲ್ಲಿದೆ. ಆದರೆ, ಈ ಸಂತೋಷ ಕೇವಲ ಪ್ರವಾಸಿಗರಿಗೆ ಮಾತ್ರ ಅನ್ನೋದು ಜಲಾಶಯ ಸುತ್ತಮುತ್ತಲ ಜನರ ಮಾತಾಗಿದೆ. ಯಾಕೆಂದರೆ, ಈ ಉದ್ಯಾನವನ ನಿರ್ಮಾಣಕ್ಕೆ ಭೂಮಿ ನೀಡಿದ ರೈತರು, ಗ್ರಾಮಸ್ಥರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಹಲವು ಗ್ರಾಮಗಳಲ್ಲಿ ಈಗಿರುವ ಪರಿಸ್ಥಿತಿಯೇ ಇದಕ್ಕೆ ಸಾಕ್ಷಿ.

ಕೃಷ್ಣಾ ನದಿ ಪಕ್ಕದಲ್ಲಿ ಆ ಗ್ರಾಮ ಅತ್ಯಂತ ಶಾಂತವಾಗಿ ತನ್ನ ಪಾಡಿಗೆ ತಾನಿತ್ತು. ಆದರೆ, ಮುಳುಗಡೆ ಭೂತ ಇಲ್ಲಿನ ಜನತೆಯ ನೆಮ್ಮದಿಯನ್ನೇ ಕೆಡಿಸಿಬಿಟ್ಟಿತು. ಲಕ್ಷಾಂತರ ಜನರಿಗೆ ಜೀವಜಲ ಒದಗಿಸಿ ಬಾಳಿಗೆ ಬೆಳಕಾಗಿರುವ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಈ ಗ್ರಾಮದ ಜನತೆ ಎಲ್ಲವನ್ನೂ ಕಳೆದುಕೊಂಡರು. ಬದುಕೇ ನೀರು ಪಾಲಾದರೂ, ತ್ಯಾಗ ಮಾಡಿದ್ದಕ್ಕೆ ಸಾರ್ಥಕತೆ ಹೊಂದಿದ್ದರು. ಆದರೆ, ಇದೀಗ ಅಧಿಕಾರಿಗಳ ಅಸಡ್ಡೆಯಿಂದಾಗಿ, “ಯಾಕಾದರೂ ಭೂಮಿ ನೀಡಿದೆವೋ!” ಎಂದು ಕನವರಿಸುವಂತಾಗಿದೆ.

ಆಲಮಟ್ಟಿಯ ಲಾಲ್ ಬಹದ್ದೂರ್ ಅಣೆಕಟ್ಟಿನಲ್ಲಿ ನೀರು ಸಂಗ್ರಹಿಸುವಾಗ ಹಿನ್ನೀರಿನಲ್ಲಿ ಮುಳುಗಡೆಯಾದ ಊರೇ ಬೇನಾಳ ಗ್ರಾಮ. 2000ನೇ ಇಸ್ವಿಯಲ್ಲಿ ಹಿನ್ನೀರಿಗಾಗಿ ತಮ್ಮ ನಾಲ್ಕು ಸಾವಿರ ಎಕರೆ ಭೂಮಿ ಹಾಗೂ ತಮ್ಮ ಊರನ್ನೇ ಮುಳುಗಡೆಗೆ ಬಿಟ್ಟು ಇಲ್ಲಿಗೆ ಬಂದರು. ಆದರೆ, ಬಂದಾಗಿನಿಂದ ಜಲಾಶಯದ ಪಕ್ಕದಲ್ಲೇ ಇದ್ದರೂ ಇವರಿಗೆ ನೀರಿನ ಬವಣೆ ತಪ್ಪಿಲ್ಲ. ಸುಮಾರು 3,500 ಜನಸಂಖ್ಯೆಯುಳ್ಳ ಈ ಪುನರ್ವಸತಿ ಕೇಂದ್ರದಲ್ಲಿ 600 ಮನೆಗಳಿವೆ. ಆದರೆ, ವಾರಕ್ಕೊಂದು ಬಾರಿ ಮಾತ್ರ ಇಲ್ಲಿಗೆ ನೀರು ಬರುತ್ತದೆ. ಹೀಗಾಗಿ, ಇಲ್ಲಿನ ಜನರು ನಿತ್ಯ ನೀರಿಗಾಗಿ ಕಿಲೋಮೀಟರ್‌ಗಟ್ಟಲೆ ಅಲೆದಾಡಬೇಕಿದೆ. ಅಷ್ಟು ಅಲೆದಾಡಿದರೂ ಸಿಗುವುದು ಮಾತ್ರ ಕುಡಿಯಲು ಆಗದ ಸವಳು ನೀರು. ಕೊನೇಪಕ್ಷ ಬಳಕೆಗಾದರೂ ಆಗುತ್ತದೆ ಎಂದು ಇಲ್ಲಿನ ಮಹಿಳೆಯರು ಬಿಂದಿಗೆ ಹಿಡಿದು ನೀರಿಗಾಗಿ ಅಲೆದಾಡುತ್ತಾರೆ.

ನೀರಿಗಾಗಿ ಇಂದು ಕಿಲೋಮಿಟರ್ ದೂರ ಕ್ರಮಿಸುವ ಪರಿಸ್ಥಿತಿ ನಮಗೆ ಬಂದೊದಗಿದೆ. ಜನರು ಹೇಳ್ತಾರೆ, ನೀವು ಜಲಾಶಯದ ಪಕ್ಕದಲ್ಲೇ ಇರೋದ್ರಂದ ನೀರಿನ ಸಮಸ್ಯೆಯಾಗೋದಿಲ್ಲ ಅಂತಾ. ಆದರೆ ವಾಸ್ತವವೇ ಬೇರೆ. ಹೀಗೆ ನೀರಿಗಾಗಿ ಪರದಾಡುವ ಪರಿಸ್ಥಿತಿ ಯಾರಿಗೂ ಬರಬಾರದು.
ರತ್ನವ್ವ, ಗ್ರಾಮಸ್ಥರು

ಕೃಷ್ಣಾ ನದಿಯ ದಡದಲ್ಲಿರುವ ಬೇನಾಳ ಗ್ರಾಮದಲ್ಲಿ ಜನರು ಕುಡಿಯುವ ಹಾಗೂ ಬಳಕೆಯ ನೀರಿಗಾಗಿ ಅಲೆದಾಡುವಂತಾಗಿದ್ದರೂ ಅಧಿಕಾರಿಗಳು ಮಾತ್ರ ತಲೆಕೆಡೆಸಿಕೊಂಡಿಲ್ಲ. ಇನ್ನು, ಆಲಮಟ್ಟಿ ಜಲಾಶಯದ ಹಿನ್ನೀರಿಗಾಗಿ ಸರ್ವಸ್ವವನ್ನೂ ಕಳೆದುಕೊಂಡ ಹತ್ತಾರು ಹಳ್ಳಿಗಳ ಜನರು ಇಂದಿಗೂ ಸಂತ್ರಸ್ಥರಾಗಿಯೇ ಇದ್ದಾರೆ. ಲಕ್ಷಾಂತರ ಜನರ ಬದುಕು ಹಸನಾಗಿಸಿದ ಆಲಮಟ್ಟಿ ಜಲಾಶಯ ತನ್ನೊಡಲೊಳಗಿನ, ತನ್ನನ್ನೇ ನಂಬಿರುವ ಕುಟುಂಬಗಳನ್ನು ಕೈಬಿಟ್ಟಿದೆ. ಬೇನಾಳ ಗ್ರಾಮಕ್ಕೆ ಈಗಾಗಲೇ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಲ್ಲಿ ವ್ಯವಸ್ಥೆ ಮಾಡಿದರೂ ಅದು ಸರಿಯಾಗಿ ಆಗದ ಕಾರಣ ಇಂದಿಗೂ ನೀರು ಬರುತ್ತಿಲ್ಲ. ಇಪ್ಪತ್ತು ವರ್ಷಗಳ ಹಿಂದೆ ಕೃಷ್ಣಾ ಭಾಗ್ಯ ಜಲ ನಿಗಮದ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಇಲಾಖೆ ಅಧಿಕಾರಿಗಳು ಇವರಿಗೆ ಮನೆಗಳನ್ನು ಕೊಟ್ಟಿದ್ದು ಬಿಟ್ಟರೆ, ಸರಿಯಾದ ರಸ್ತೆ, ನೀರು, ವಿದ್ಯುತ್ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದಾಗಿ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ ಇಲ್ಲಿನ ಜನರು. ಈ ಭಾಗದ ಬಹುತೇಕ ರೈತರ ಬಾಳಿಗೆ ಬೆಳಕಾಗಿರುವ ಆಲಮಟ್ಟಿ ಆಣೆಕಟ್ಟು, ಜಮೀನು ನೀಡಿದ ಗ್ರಾಮಸ್ಥರಿಗೆ ಮಾತ್ರ ಶಾಪವಾಗಿ ಪರಿಣಮಿಸಿದೆ.

ಕುಡಿಯಲು ನೀರು ನೀಡಲು ಇದುವರೆಗೂ ಕೃಷ್ಣಾ ಭಾಗ್ಯ ಜಲ ನಿಗಮ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾ ಪಂಚಾಯತ್ ಅಡಿಯಲ್ಲಿ ಇದಕ್ಕಾಗಿ ಹಣ ಮೀಸಲಿಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಯಾರೂ ಇದುವರೆಗೂ ಕ್ರಮ ಕೈಗೊಂಡಿಲ್ಲ. 17 ವರ್ಷದಿಂದ ನಾವು ಇದೇ ಕಷ್ಟ ಅನುಭವಿಸುತ್ತಿದ್ದೇವೆ. 
ಬಾಬುರಾವ್ ಗಣ, ಗ್ರಾಮದ ಮುಖಂಡ
ಇದನ್ನೂ ಓದಿ : ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಅಪಸ್ವರಕ್ಕೆ ವೇಣುಗೋಪಾಲ್‌ ಭೇಟಿಯ ಮದ್ದು?

ಇದು ಕೇವಲ ಬೇನಾಳ ಗ್ರಾಮದ ಸಮಸ್ಯೆಯಲ್ಲ. ಜಲಾಶಯಕ್ಕಾಗಿ ನೀರು ಕೊಟ್ಟ ಬಹುತೇಕ ಹಳ್ಳಿಗಳ ಸಮಸ್ಯೆ ಇದೇ ರೀತಿ ಇದೆ. ಜೊತೆಗೆ, ಹಿನ್ನೀರಿನಲ್ಲಿ ಭೂಮಿ ಮುಳುಗಿದ ಬಳಿಕ ಇವರ ಜೀವನಕ್ರಮವೇ ಬದಲಾಯಿತು. ಗ್ರಾಮಗಳು ಮುಳುಗಿದ ಬಳಿಕ ಹಲವರು ನಗರ ಪ್ರದೇಶಗಳಿಗೆ ವಲಸೆ ಹೋದರೆ, ಕೆಲವರು ಪುನರ್ವಸತಿ ಕೇಂದ್ರದಲ್ಲಿ ದುಡಿಯಲು ಕೆಲಸ ಸಿಗದ ಕಾರಣ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಗೆ ಹೊಟ್ಟೆಪಾಡಿಗಾಗಿ ವಲಸೆ ಹೋಗುವಂತಾಗಿದೆ. ಜೊತೆಗೆ, ಪರಿಹಾರ ನೀಡುವ ವಿಚಾರವಾಗಿ ನೀರಾವರಿ ಭೂಮಿಗೆ 1.20 ಲಕ್ಷ ಹಾಗೂ ಒಣಬೇಸಾಯ ಭೂಮಿಗೆ 76 ಸಾವಿರ ಪರಿಹಾರ ಎಂದು 1997-98ರ ಅವಧಿಯಲ್ಲಿ ನಿರ್ಧರಿಸಲಾಗಿತ್ತು. ಇದನ್ನು ಕೆಲವರು ಒಪ್ಪಿ ಹಣ ಪಡೆದುಕೊಂಡರೆ, ಕೆಲವರು ಕಾನೂನು ಹೋರಾಟ ಮುಂದುವರಿಸಿದ್ದಾರೆ. ಇದು ಆರ್ಥಿಕವಾಗಿ ಬದಲಾವಣೆ ತಂದರೆ, ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಬಹಳಷ್ಟು ವ್ಯತ್ಯಾಸಗಳಾದವು. ಈ ಹಿಂದೆ, ಗ್ರಾಮದಲ್ಲಿ ಇದ್ದ ಸಾಮರಸ್ಯ ಪುನರ್ವಸತಿ ಕೇಂದ್ರದಲ್ಲಿ ಇಲ್ಲದಂತಾಯಿತು. ಜೊತೆಗೆ ಮುಳುಗಡೆಯಾದ ಗ್ರಾಮದಲ್ಲಿದ್ದ ಊರದೇವರ ಗುಡಿಗಳು ನೀರಿನಲ್ಲಿ ಮುಳುಗಿದ ಕಾರಣ, ಹೊಸ ದೇವಸ್ಥಾನಗಳ ನಿರ್ಮಾಣ ವಿಚಾರದಲ್ಲಿ ಗ್ರಾಮಸ್ಥರಲ್ಲೇ ಭಿನ್ನಾಭಿಪ್ರಾಯ ಉಂಟಾಗುವಂತಾಯಿತು.

ಇನ್ನು, ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519 ಮೀಟರ್‌ನಿಂದ 524ಕ್ಕೆ ಏರಿಕೆ ಮಾಡಬೇಕು ಎನ್ನಲಾಗುತ್ತಿದೆ. ಒಂದು ವೇಳೆ, ನೀರಿನ ಲಭ್ಯತೆ ಹೆಚ್ಚಿಸಲು ಜಲಾಶಯ ಎತ್ತರ ಮಾಡಿದರೆ, ಇನ್ನೂ 22 ಗ್ರಾಮಗಳು ಭಾಗಶಃ ಮುಳುಗುತ್ತವೆ. ಜೊತೆಗೆ, ಒಂದು ಲಕ್ಷಕ್ಕೂ ಅಧಿಕ ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ, ಸರ್ಕಾರ ಹಣ ಮೀಸಲಿಟ್ಟಿದೆ. ಆದರೆ ಇದುವರೆಗೂ ಆ ಕಾರ್ಯ ಕೈಗೂಡಿಲ್ಲ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More