ಚುನಾವಣಾ ಕಣ | ರಾಣಿಬೆನ್ನೂರಲ್ಲಿ ಬಿಜೆಪಿಗೆ ಅಭ್ಯರ್ಥಿ ಗೊಂದಲ, ಕಾಂಗ್ರೆಸ್‌ ನಿರಾಳ

ರಾಜಕಾರಣದಲ್ಲಿ ಹಿರಿಯರಾದ ಕೋಳಿವಾಡ ಅವರ ಸಚಿವರಾಗುವ ಕನಸು ಈಡೇರಲಿಲ್ಲ. ತಾವು ರಾಜಕೀಯವಾಗಿ ಪ್ರಬಲರಾಗಿರುವಾಗಲೇ ತಮ್ಮ ಮಗ ಪ್ರಕಾಶ ಕೋಳಿವಾಡರನ್ನು ಶಾಸಕನನ್ನಾಗಿ ಮಾಡುವ ಕನಸು ಈಡೇರದು ಎಂದೆನಿಸಿದಾಗ ಸ್ವತಃ ಕೋಳಿವಾಡರೇ ಅಖಾಡಕ್ಕೆ ಇಳಿಯುತ್ತಿದ್ದಾರೆ

ಇನ್ನೆರಡು ತಿಂಗಳಲ್ಲಿ ಎದುರಾಗುವ ವಿಧಾನಸಭಾ ಚುನಾವಣೆಗೆ ರಾಣಿಬೆನ್ನೂರು ಕ್ಷೇತ್ರ ಸಕಲ ರೀತಿಯಲ್ಲಿ ಸಜ್ಜುಗೊಳ್ಳುತ್ತಿದೆ. ವಿಧಾನಸಭಾಧ್ಯಕ್ಷ ಕೆ ಬಿ ಕೋಳಿವಾಡ ಹೆಚ್ಚಿನ ಆತ್ಮವಿಶ್ವಾಸದಿಂದ ಮತ್ತೆ ಅದೃಷ್ಟಪರೀಕ್ಷೆಗೆ ಮನಸ್ಸು ಮಾಡಿದ್ದರೆ, ಬಿಜೆಪಿ ಇನ್ನೂ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಪಕ್ಷೇತರರಾಗಿ ಸ್ಪರ್ಧಿಸಲು ಆರ್ ಶಂಕರ ಸಿದ್ಧರಾಗಿದ್ದು, ಸಬಲರ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನಿಚ್ಚಳವಾಗಿದೆ.

ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ವಿಧಾನಸಭಾಧ್ಯಕ್ಷ ಕೆ ಬಿ ಕೋಳಿವಾಡ ಅವರು ೧೦ನೇ ಬಾರಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಹಿರಿಯರಾಗಿರುವ ಕೋಳಿವಾಡ ಅವರು ಸಚಿವರಾಗುವ ಕನಸು ಕಂಡರೂ ಅದು ಈಡೇರಲಿಲ್ಲ. ಬದಲಾಗಿ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಅದನ್ನೇ ಧನಾತ್ಮಕವಾಗಿ ತೆಗೆದುಕೊಂಡಿದ್ದ ಅವರು, ತಮ್ಮದು ಜವಾಬ್ದಾರಿಯುತ ಹಾಗೂ ಸಚಿವರಿಗಿಂತ ಮೇಲಿನ ಪಂಕ್ತಿಯಲ್ಲಿರುವಂತಹ ಸ್ಥಾನ ಎನ್ನುತ್ತಿದ್ದರು.

ತಾವು ರಾಜಕೀಯವಾಗಿ ಪ್ರಬಲರಾಗಿರುವಾಗಲೇ ತಮ್ಮ ಮಗ ಪ್ರಕಾಶ ಕೋಳಿವಾಡ ಅವರನ್ನು ರಾಜಕೀಯಕ್ಕೆ ತಂದು, ಶಾಸಕನನ್ನಾಗಿ ಮಾಡುವ ಕನಸು ಕಂಡಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಿಂದ ಮತ್ತೆ ತಾವೇ ಅಖಾಡಕ್ಕೆ ಇಳಿಯಲು ಮನಸ್ಸು ಮಾಡಿದ್ದಾರೆ. ಕಾಂಗ್ರೆಸ್‌ನಿಂದ ರುಕ್ಮಿಣಿ ಸಾಹುಕಾರ ಕೂಡ ಟಿಕೆಟ್ ಬಯಸಿದ್ದರೂ, ಅದು ಕಷ್ಟಸಾಧ್ಯ ಎಂಬುದು ಗೊತ್ತಿರುವ ಸಂಗತಿ. ಇನ್ನು, ಬಿಜೆಪಿ ಗೊಂದಲದಲ್ಲಿ ಬಿದ್ದಿರುವಂತೆ ಕಾಣುತ್ತಿದೆ. ಮಾಜಿ ಶಾಸಕ ಜಿ ಶಿವಣ್ಣ ನಿಧನರಾದ ನಂತರ ಕ್ಷೇತ್ರದಲ್ಲಿ ಬಿಜೆಪಿ ನಾವಿಕನಿಲ್ಲದ ದೋಣಿಯಂತಾಗಿದ್ದು, ಇರುವವರೆಲ್ಲರೂ ದೋಣಿಯ ಹುಟ್ಟು ಹಾಕಲು ಸಿದ್ದರಾಗಿದ್ದಾರೆ. ಹಾಗಾಗಿ, ಬಿಜೆಪಿಯಲ್ಲಿ ಅಭ್ಯರ್ಥಿ ಯಾರೆಂಬ ಗೊಂದಲ ಹೆಚ್ಚುತ್ತಲೇ ಇದೆ. ೧೮ ಜನ ಆಕಾಂಕ್ಷಿಗಳಲ್ಲಿ ಜನಮನ ಗೆಲ್ಲುವವರಾರು ಎಂಬುದು ಯಕ್ಷಪ್ರಶ್ನೆ ಆಗಿದೆ.

ಶಿಕಾರಿಪುರದ ಉಸ್ತುವಾರಿ ರಾಘವೇಂದ್ರ ಹೆಗಲಿಗೆ

ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಶಿಕಾರಿಪುರದಿಂದ ಸ್ಪರ್ಧೆ ಮಾಡುವ ಕಾರಣದಿಂದ ಅವರ ಪುತ್ರ, ಶಿಕಾರಿಪುರ ಕ್ಷೇತ್ರದ ಹಾಲಿ ಶಾಸಕ ಬಿ ವೈ ರಾಘವೇಂದ್ರ ರಾಣಿಬೆನ್ನೂರಿಗೆ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಅದಕ್ಕೆ ಪೂರಕವಾದ ಸಿದ್ಧತೆ ನಡೆದಿದ್ದವು. ಆದರೆ, ಈಗ ಆ ವಿಚಾರ ಬದಲಾಗಿದ್ದು, ಯಡಿಯೂರಪ್ಪ ಚುನಾವಣಾ ಸಂದರ್ಭದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಬೇಕಿದ್ದು, ಶಿಕಾರಿಪುರದಲ್ಲಿ ರಾಘವೇಂದ್ರ ಅವರೇ ಚುನಾವಣಾ ಉಸ್ತುವಾರಿ ನೋಡಿಕೊಳ್ಳಬೇಕಾಗಿದೆ. ಹಾಗಾಗಿ ರಾಣಿಬೆನ್ನೂರಿಗೆ ಬೇರೆ ಅಭ್ಯರ್ಥಿ ಅನಿವಾರ್ಯವಾಗಿದೆ.

ಕ್ಷೇತ್ರದಲ್ಲಿ ಈಗಾಗಲೇ ಚುನಾವಣಾ ಚಟುವಟಿಕೆ ಪ್ರಾರಂಭಗೊಂಡಿದೆ. ಕಾಂಗ್ರೆಸ್‌ನಿಂದ ಕೆ ಬಿ ಕೋಳಿವಾಡ ಅವರೇ ಅಭ್ಯರ್ಥಿಯಾಗಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಈಗಾಗಲೇ ಘೋಷಣೆ ಮಾಡಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಲು ಆರ್ ಶಂಕರ ಸಜ್ಜಾಗಿದ್ದು, ಇಬ್ಬರೂ ಕ್ಷೇತ್ರದಲ್ಲಿ ಜನಸಂಪರ್ಕ ಸಾಧಿಸುತ್ತಿದ್ದಾರೆ. ಆದರೆ, ಬಿಜೆಪಿಯಲ್ಲಿ ಕೆಲವರು ಜನಸಂಪರ್ಕಕ್ಕೆ ಮುಂದಾಗಿದ್ದರೂ ಟಿಕೆಟ್ ಸಿಗುವ ಬಗ್ಗೆ ಯಾರಿಗೂ ಖಚಿತತೆ ಇಲ್ಲದಿರುವುದು ಎಲ್ಲದಕ್ಕೂ ಹಿಂದೇಟು ಹಾಕುವಂತೆ ಮಾಡಿದೆ. ಮಾಜಿ ಶಾಸಕ ಜಿ ಶಿವಣ್ಣ ಅವರ ಪತ್ನಿ ಹಾಗೂ ಅವರ ಸೊಸೆಯ ಹೆಸರು ಟಿಕೆಟ್ ಸಿಗುವವರ ಪಟ್ಟಿಯಲ್ಲಿ ಹರಿದಾಡುತ್ತಿವೆ. ಕೆ ಬಿ ಕೋಳಿವಾಡ, ಆರ್ ಶಂಕರ್ ಇಬ್ಬರೂ ಪ್ರಚಾರದಲ್ಲಿ ತೊಡಗಿದ್ದಾಗಲೂ ಬಿಜೆಪಿ ಅಭ್ಯರ್ಥಿ ಬಗ್ಗೆ ಅಂತೆಕಂತೆಗಳು ಹರಿದಾಡುತ್ತಿದ್ದು, ಕೊನೆಯ ಹಂತದಲ್ಲಿ ಅಭ್ಯರ್ಥಿ ಘೋಷಣೆ ಮಾಡುವುದು ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಉಂಟುಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ : ಚುನಾವಣಾ ಕಣ | ಬಿಜೆಪಿ, ಕಾಂಗ್ರೆಸ್ ಅಬ್ಬರದಲ್ಲಿ ಮಂಕಾದ ಹಾವೇರಿ ಜೆಡಿಎಸ್

‘ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ’ ಎಂಬಂಥ ಪರಿಸ್ಥಿತಿಯಲ್ಲಿದ್ದ ಆರ್ ಶಂಕರ್ ಅವರು ಈಗ ರಾಣಿಬೆನ್ನೂರಿನಲ್ಲಿಯೇ ಭವ್ಯ ಮನೆ ಕಟ್ಟಿದ್ದು, ಕಚೇರಿಯನ್ನೂ ತೆರೆದಿದ್ದಾರೆ. ಫೆ.೨೫ರಂದು ‘ನಮ್ಮ ಮನೆ, ನಮ್ಮ ಕಚೇರಿ’ ಹೆಸರಿನಲ್ಲಿ ಗೃಹ ಪ್ರವೇಶ ಮಾಡಿದ್ದಾರೆ. ಆ ಮೂಲಕ ನಮ್ಮನೆ ಇಲ್ಲಿಯೇ ಇದೆ ಎಂದು ಮತದಾರರಿಗೆ ಹೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಮಠಗಳ ೩೦ ಪೀಠಾಧೀಪತಿಗಳಿಗೆ ಬೆಳ್ಳಿ ಕಿರೀಟ ಕೊಡುವ ಮೂಲಕ ಭರ್ಜರಿಯಾದ ದಾಳ ಉರುಳಿಸಿದ್ದಾರೆ. ಗೃಹಪ್ರವೇಶದ ನೆಪದಲ್ಲಿ ಮತದಾರರಿಗೆ ತಟ್ಟೆ, ಸೀರೆ ಹಂಚುತ್ತಿದ್ದಾರೆ. ಬೆಂಗಳೂರಿನ ಬಿಬಿಎಂಪಿ ಅಧಿಕಾರದ ಅನುಭವದ ಮೇಲೆ ರಾಣಿಬೆನ್ನೂರಿಗೆ ಬಂದಿರುವ ಶಂಕರ್ ಅವರು, ಕಳೆದ ಚುನಾವಣೆಯಲ್ಲಿಯೇ ತಮ್ಮ ಖದರ್ ತೋರಿಸಿದ್ದರು. ಕೋಳಿವಾಡ ಅವರಿಗೆ ದೊಡ್ಡ ಮಟ್ಟದಲ್ಲಿ ಪೈಪೋಟಿ ನೀಡಿ, ಬಿಜೆಪಿ-ಕೆಜೆಪಿಯನ್ನೂ ಹಿಂದೆ ಹಾಕಿ ಎರಡನೇ ಸ್ಥಾನದಲ್ಲಿದ್ದರು.

ಇನ್ನು, ಜೆಡಿಎಸ್‌ನಿಂದ ಶ್ರೀಪಾದ ಸಾಹುಕಾರ ಅವರಿಗೆ ಟಿಕೇಟ್ ಘೋಷಣೆಯಾಗಿದ್ದು, ಅವರೂ ಚುನಾವಣಾ ಸಿದ್ದತೆಯಲ್ಲಿದ್ದಾರೆ. ಒಟ್ಟಾರೆಯಾಗಿ, ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಬ್ಬರ ಜೋರಾಗುತ್ತಿದ್ದು, ಅಧಿಕೃತವಾಗಿ ಅಭ್ಯರ್ಥಿಗಳ ಘೋಷಣೆಯ ನಂತರವೇ ಸ್ಪಷ್ಟ ಚಿತ್ರಣ ಸಿಗಲಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More