ವರ್ತಕರ ದುರಾಸೆಯಿಂದ ಹಣ ಕಳೆದುಕೊಂಡ ಕೊಡಗಿನ ಕಾಫಿ ಬೆಳೆಗಾರರು

ದಕ್ಷಿಣ ಕೊಡಗಿನ ಪೊನ್ನಂಪೇಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇರಳ ಮೂಲದ ವರ್ತಕರು ಅನೇಕ ಕಾಫಿ ಬೆಳೆಗಾರರಿಂದ ಕಾಫಿ ಖರೀದಿಸಿ ಸುಮಾರು ಮೂರು ಕೋಟಿ ರೂಪಾಯಿಗಳಿಗೂ ಅಧಿಕ ವಂಚನೆ ಮಾಡಿರುವುದು ತಿಳಿದುಬಂದಿದೆ. ಇದರಿಂದಾಗಿ ಬೆಳೆಗಾರರು ತೀವ್ರ ಸಂಕಷ್ಟಕ್ಕಿಡಾಗಿದ್ದಾರೆ

ಕೊಡಗು ಜಿಲ್ಲೆಯಲ್ಲಿ ಕಾಫಿಯನ್ನೇ ನಂಬಿಕೊಂಡು ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಕಾಫಿಯ ದರ ಕುಸಿತದಿಂದಾಗಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ, ದಕ್ಷಿಣ ಕೊಡಗಿನ ಪೊನ್ನಂಪೇಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇರಳ ಮೂಲದ ವರ್ತಕರು ಅನೇಕ ಕಾಫಿ ಬೆಳೆಗಾರರಿಂದ ಕಾಫಿ ಖರೀದಿಸಿ ಸುಮಾರು ಮೂರು ಕೋಟಿ ರುಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ದೇಶದಲ್ಲಿ ಕಾಫಿಯ ವಾರ್ಷಿಕ ಉತ್ಪಾದನೆ ಸುಮಾರು ೩.೫ ಲಕ್ಷ ಟನ್‌ಗಳಷ್ಟಿದ್ದು, ಶೇಕಡ ೭೦ರಷ್ಟು ವಿದೇಶಕ್ಕೆ ರಫ್ತಾಗುತ್ತಿದೆ. ಮೊದಲಿನಿಂದಲೂ ಕಾಫಿಯು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮತ್ತು ಸಾಗಾಟ ಮಾಡುವುದಕ್ಕೆ ಕೇಂದ್ರ ಸರ್ಕಾರದ ನಿರ್ಬಂದ ವಿಧಿಸಿತ್ತು. ಬೆಳೆಗಾರರು ಕಾಪಿ ಬೆಳೆದರೂ ಅದನ್ನು ತೋಟದಿಂದ ಸಂಸ್ಕರಣೆಗೆ ಮತ್ತು ಸಾಗಾಟ ಮಾಡುವುದಕ್ಕೂ ಕೇಂದ್ರ ಅಬಕಾರಿ ಇಲಾಖೆಯ ಅನುಮತಿ ಅಗತ್ಯ ಇತ್ತು.

ಕಾಫಿಯ ಮಾರಾಟದ ಪೂರ್ಣ ಏಕಸ್ವಾಮ್ಯ ಕಾಫಿ ಮಂಡಳಿಯ ಅಧೀನಕ್ಕೊಳಪಟ್ಟಿದ್ದು ಮಂಡಳಿಯೇ ರಫ್ತು ಮಾಡಿ, ಬೆಳೆಗಾರರಿಗೆ ಬೋನಸ್ ರೂಪದಲ್ಲಿ ಹಣ ಪಾವತಿಸುತಿತ್ತು. ಬೆಳೆಗಾರರು ಬೆಳೆದ ಕಾಫಿಯನ್ನೆಲ್ಲಾ ಕಾಫಿ ಮಂಡಳಿಗೆ ನೀಡಬೇಕಿದ್ದು , ಮಾರಾಟ ಮಾಡಿದ ಕೂಡಲೇ ಕಾಫಿಯ ಮೌಲ್ಯದ ಶೇಕಡ ೭೦-೮೦ರಷ್ಟು ಹಣ ಮಾತ್ರ ಬೆಳೆಗಾರನಿಗೆ ಸಿಗುತಿತ್ತು. ನಂತರ ಕಾಫಿಯು ರಫ್ತು ಆದ ಬಳಿಕ ಲಾಭಾಂಶ ಆಧರಿಸಿ ಬೋನಸ್ ರೂಪದಲ್ಲಿ ಪೂರ್ಣ ಹಣ ಪಾವತಿಸಲಾಗುತಿದ್ದುದು ಈಗ ಇತಿಹಾಸ.

೧೯೯೧-೯೨ರಲ್ಲಿ ಬೆಳೆಗಾರ ಸಂಘಟನೆಗಳು ಕೈಗೊಂಡ ತೀವ್ರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ, ಕಾಫಿಯ ಮುಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಜಾರಿಗೆ ತಂದಿತು. ಇದರಿಂದ ಇತರ ಕೃಷಿ ಉತ್ಪನ್ನಗಳಂತೆ ಬೆಳೆಗಾರರು ತಾವು ಬೆಳೆದ ಕಾಫಿಯನ್ನು ಯಾವುದೇ ಅದೆ ತಡೆಯಿಲ್ಲದೆ ಎಲ್ಲಿಗೆ ಬೇಕಾದರೂ ಸಾಗಾಟ ಮಾಡಬಹುದು ಮತ್ತು ಯಾರಿಗೆ ಬೇಕಾದರೂ ಮಾರಾಟ ಮಾಡುವ ಹಕ್ಕು ಸಿಕ್ಕಿತು.

ಈ ಬೆಳವಣಿಗೆಯ ನಂತರ ಕಾಫಿ ಬೆಳೆಗಾರರು ಒಂದಷ್ಟು ಆರ್ಥಿಕವಾಗಿ ಸಬಲರಾದರು. ವರ್ಷವಿಡೀ ಸಾಲದ ಸುಳಿಯಲ್ಲೇ ಇರುತಿದ್ದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡತೊಡಗಿತು. ಕೊಡಗಿನ ಮಡಿಕೇರಿ, ಸೋಮವಾರಪೇಟೆ, ಗೋಣಿಕೊಪ್ಪ, ಪೊನ್ನಂಪೇಟೆ, ವೀರಾಜಪೇಟೆ, ಶನಿವಾರಸಂತೆ ಸೇರಿದಂತೆ ಎಲ್ಲ ಪಟ್ಟಣಗಳಲ್ಲೂ ಕಾಫಿ ಖರೀದಿಸುವ ವರ್ತಕರು ಮಳಿಗೆಗಳನ್ನು ತೆರೆದರು. ಬೆಳೆಗಾರರ ಜೊತೆಗೇ ಈ ವರ್ತಕರು ಅತ್ಯುತ್ತಮ ಲಾಭ ಗಳಿಸತೊಡಗಿ, ಕೊಡಗಿನಲ್ಲಿ ಹೊಸ ವಾಹನಗಳ ಖರೀದಿ ಭರಾಟೆಯೂ ಜೋರಾಯಿತು. ಅನೇಕ ವರ್ತಕರು ದೀಢಿರ್ ಶ್ರೀಮಂತಿಕೆಯನ್ನೂ ಗಳಿಸಿದರು.

ಕುಶಾಲನಗರ ಪಟ್ಟಣದಲ್ಲಿ ಕಾಫಿ ವರ್ತಕರು ಕೋಟ್ಯಂತರ ರುಪಾಯಿ ಹೂಡಿಕೆ ಮಾಡಿ ಕಾಪಿ ಕ್ಯೂರಿಂಗ್ ಸೆಂಟರ್‌ಗಳನ್ನೂ ತೆರೆದರು. ಪ್ರಸ್ತುತ ಕುಶಾಲನಗರದ ಕೈಗಾರಿಕಾ ಬಡಾವಣೆಯಲ್ಲಿ ೧೦ರಿಂದ ೧೫ ಕಾಫಿ ಕ್ಯೂರಿಂಗ್ ವರ್ಕ್ಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಕೊಡಗಿನ ವಿವಿಧ ವರ್ತಕರು ಖರೀದಿಸುವ ಕಾಫಿ ಕುಶಾಲನಗರಕ್ಕೆ ರವಾನೆ ಆಗತೊಡಗಿತಲ್ಲದೆ ಇಲ್ಲಿಂದಲೇ ವಿದೇಶಕ್ಕೆ ರಫ್ತು ಆಗತೊಡಗಿತು.

ಹೀಗಿರುವಾಗ, ಕೆಲವೊಮ್ಮೆ ಕಾಫಿ ವರ್ತಕರು ಬೆಳೆಗಾರರಿಗೆ ವಂಚಿಸಿ ನಾಪತ್ತೆ ಆಗುವ ಪ್ರಕರಣಗಳು ಆಗೊಮ್ಮೆ ಈಗೊಮ್ಮೆ ವರದಿ ಆಗತೊಡಗಿದವು. ಇಂಥ ಪ್ರಕರಣಗಳು ಅಪರೂಪವಾದರೂ ವಂಚನೆಯ ಮೊತ್ತ ಕೋಟ್ಯಂತರ ರೂಪಾಯಿಗಳದ್ದೇ ಆಗಿರುತಿತ್ತು. ಬೆಳೆಗಾರರು ಬೆಳೆದ ಕಾಫಿಯನ್ನು ವರ್ತಕರಿಗೆ ನೀಡಿದರೂ ಅದೇ ದಿನ ಎಲ್ಲರೂ ಪೂರ್ಣ ಮೊತ್ತ ಪಾವತಿಸುವುದಿಲ್ಲ, ಕ್ಯೂರಿಂಗ್ ವರ್ಕ್ಸ್‌ಗೆ ಕಾಫಿ ತಲುಪಿಸಿ ಬಂದ ನಂತರ ಎರಡು ದಿನ ಬಿಟ್ಟು ಹಣ ಕೊಡುತ್ತೇವೆ ಎಂದು ಚೆಕ್ ನೀಡುತ್ತಾರೆ. ಕೆಲವೊಮ್ಮೆ ಬೆಳೆಗಾರರೇ ನಂಬಿಕೆಯಿಂದ ವರ್ತಕರ ಬಳಿ ಕಾಫಿ ಇಟ್ಟು ಬೆಲೆ ಏರಿಕೆ ಆದಾಗ ಮಾರಾಟ ಮಾಡಿ ಹಣ ಪಡೆದುಕೊಳ್ಳುವುದು ಸಾಮಾನ್ಯ.

ಇನ್ನೂ ಕೆಲ ವರ್ತಕರು ದಾಸ್ತಾನು ಇಟ್ಟ ಕಾಫಿಗೆ ತಿಂಗಳ ನಂತರ ಹಣ ಪಡೆದರೆ ೧೦೦ ರು., ಮೂರು ತಿಂಗಳ ನಂತರ ಕಾಫಿ ಮಾರಾಟ ಮಾಡಿದರೆ ೩೦೦ ರುಪಾಯಿಗಳನ್ನು ಅಂದಿನ ದರಕ್ಕೆ ಸೇರಿಸಿ ಪಾವತಿಸುವ ಪದ್ಧತಿಯೂ ಇದೆ. ಇದನ್ನು ಫಾರ್ವರ್ಡ್ ಟ್ರೇಡಿಂಗ್ ಅನ್ನುತ್ತಾರೆ. ಆದರೆ, ಕಾಫಿಯ ದರದ ಏರಿಳಿತದಿಂದಾಗಿ ಲಕ್ಷಾಂತರ ರುಪಾಯಿ ನಷ್ಟವೂ ಆದ ಹಿನ್ನೆಲೆಯಲ್ಲಿ ಈಗ ವರ್ತಕರು ಫಾರ್ವರ್ಡ್ ಟ್ರೇಡಿಂಗ್ ಮಾಡುತ್ತಿಲ್ಲ.

ಕೇರಳ ಗಡಿ ಭಾಗವಾದ ಪೊನ್ನಂಪೇಟೆ ಸಮೀಪದ ಕೋಟೂರಿನಲ್ಲಿ ಅಲ್ಲಿನವರೇ ಆದ ಕಾಫಿ ಬೆಳೆಗಾರ ಎ ಎಂ ಅರುಣ್ ಕುಮಾರ ಎಂಬುವವರು ೨೦ ವರ್ಷಗಳ ಹಿಂದೆಯೇ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಾಫಿ ಕ್ಯೂರಿಂಗ್ ವರ್ಕ್ಸ್ ತೆರೆದಿದ್ದರು. ವಹಿವಾಟು ಉತ್ತಮವಾಗೇ ನಡೆದಿತ್ತು. ನಂತರ ೨೦೦೮ರಲ್ಲಿ ಕ್ಯೂರಿಂಗ್ ವರ್ಕ್ಸ್ ನೋಡಿಕೊಳ್ಳಲು ಕಷ್ಟ ಎಂಬ ಕಾರಣಕ್ಕೆ ಕೇರಳ ಮೂಲದ ತಂಗಚ್ಚನ್, ಮ್ಯಾಥ್ಯೂ, ಬ್ರಿಜೇಶ್ ಮತ್ತು ಬಿಜು ಜಾಕೋಬ್ ಎಂಬುವವರಿಗೆ ಲೀಸ್ ನೀಡಿದರು.

ಅನೇಕ ವರ್ಷಗಳ ಕಾಲ ಉತ್ತಮವಾಗೇ ವ್ಯವಹಾರ ನಡೆಸಿದ ಈ ವರ್ತಕರಲ್ಲಿ ಎರಡು ವರ್ಷಗಳ ಹಿಂದೆ ತಂಗಚ್ಚನ್ ಮತ್ತು ಮ್ಯಾಥ್ಯೂ ಪಾಲುದಾರಿಕೆಯಿಂದ ಹೊರನಡೆದರು. ಉಳಿದ ಇಬ್ಬರು ವಹಿವಾಟು ನಡೆಸುತ್ತ ಬಂದರಾದರೂ ಕಳೆದ ಫೆ.೨೭ರಂದು ಕಾಫಿ ನೀಡಿದ ಬೆಳೆಗಾರರಿಗೆ ಶಾಕ್ ಕಾದಿತ್ತು. ಕ್ಯೂರಿಂಗ್ ವರ್ಕ್ಸ್ ಬಾಗಿಲು ಮುಚ್ಚಿದ್ದ ಬ್ರಿಜೇಶ್ ಮತ್ತು ಬಿಜು ಜಾಕೊಬ್ ನಾಪತ್ತೆ ಆದರು. ಇವರಿಗೆ ಕಾಫಿ ನೀಡಿದ್ದ ಸುಮಾರು ಮೂವತ್ತಕ್ಕೂ ಅಧಿಕ ಕಾಫಿ ಬೆಳೆಗಾರರು ಕಂಗಾಲಾದರು. ಕೆಲ ಬೆಳೆಗಾರರು ಪೋಲೀಸರಿಗೆ ದೂರು ನೀಡಿ ಪೋಲೀಸರ ಜೊತೆಯಲ್ಲೇ ಕೇರಳದ ಆರೋಪಿಗಳ ಮನೆ ಇರುವ ವೈನಾಡ್ ಅಮೀಪದ ಪುಲಪ್ಲಳ್ಳಿ ಎಂಬಲ್ಲಿಗೂ ಹೋಗಿಬಂದರು. ಆದರೆ ಇನ್ನೂ ಅರೋಪಿಗಳು ಪತ್ತೆ ಆಗಿಲ್ಲ.

ಈ ರೀತಿ ಬೆಳೆಗಾರರಿಗೆ ಇವರು ವಂಚಿಸಿರುವ ಮೊತ್ತ ಮೂರು ಕೋಟಿ ರುಪಾಯಿಗಳಿಗೂ ಅಧಿಕ ಎನ್ನಲಾಗಿದೆ. ಸುಮಾರು ೧೫ ಚೀಲ ಕಾಫಿಯನ್ನು ಇವರಿಗೆ ಮಾರಾಟ ಮಾಡಿ ಬರೀ ರಶೀತಿಯನ್ನು ಪಡೆದಿದ್ದ ಬೆಳೆಗಾರ ಭೀಮಯ್ಯ ಅವರು ‘ದಿ ಸ್ಟೇಟ್’ನೊಂದಿಗೆ ಮಾತನಾಡಿ ಅಳಲು ತೋಡಿಕೊಂಡರು.

ಬೆಸಗೂರು ಗ್ರಾಮದ ಭೀಮಯ್ಯ ತಾವು ಬೆಳೆದ ಕಾಫಿಯನ್ನು ಕಳೆದ ೫ ವರ್ಷಗಳಿಂದಲೂ ಇವರಿಗೇ ನೀಡಿದ್ದರು. “ಇವರು ಇಂತಹ ವಂಚನೆ ಮಾಡುತ್ತಾರೆ ಎಂದು ಖಂಡಿತ ಗೊತ್ತಿರಲಿಲ್ಲ, ಮಗಳ ಮದುವೆಯು ಮೇ ತಿಂಗಳಿನಲ್ಲಿ ನಿಗದಿ ಆಗಿದೆ. ಇವರು ನೀಡಬೇಕಿರುವ ಮೊತ್ತ ೩.೨೫ ಲಕ್ಷ ರುಪಾಯಿಗಳಾಗಿದ್ದು ವಂಚಕರ ಪತ್ತೆ ಆಗಿಲ್ಲ,” ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಇದನ್ನೂ ಓದಿ : ಕಾಫಿ ದರ ಕುಸಿತ ನಿಯಂತ್ರಿಸಲು ಕೇಂದ್ರದ ನೆರವಿಗೆ ಸಂಘಟನೆಗಳ ಮೊರೆ 

ಈ ಮಧ್ಯೆ, ಕೇರಳ ಮೂಲದ ಕೆಲವು ವ್ಯಕ್ತಿಗಳು ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದು, ರಾಜಿ ಮೂಲಕ ಬೆಳೆಗಾರರಿಗೆ ಹಣ ಕೊಡಿಸಲು ಪ್ರಯತ್ನ ನಡೆಸುತಿದ್ದಾರೆ. ಹಣ ಕಳೆದುಕೊಂಡ ಬೆಳೆಗಾರರ ಸ್ಥಿತಿ ಅಯೋಮಯವಾಗಿದೆ.

‘ದಿ ಸ್ಟೇಟ್’ನೊಂದಿಗೆ ಮಾತನಾಡಿದ ಜಿಲ್ಲಾ ಎಸ್‌ಪಿ ಪಿ ರಾಜೇಂದ್ರ ಪ್ರಸಾದ್ ಅವರು, “ಪೊನ್ನಂಪೇಟೆ ಪೋಲೀಸರು ಸೆಕ್ಷನ್ ೪೨೦ ಅನ್ವಯ ವಂಚನೆ ಮೊಕದ್ದಮೆ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ವಂಚಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದರು.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More