ಬಿಎಸ್‌ವೈ ನಡೆಯಿಂದ ಬಂಡಾಯಕ್ಕಿಳಿದರೆ ಇಂಡಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು?

ವಿಜಯಪುರದಲ್ಲಿ ಪರಿವರ್ತನಾ ಯಾತ್ರೆ ವೇಳೆ ಆರಂಭವಾಗಿದ್ದ ಅಸಮಾಧಾನ ಇಂದು ಬಂಡಾಯದ ಮಟ್ಟಿಗೆ ಬಂದು ನಿಂತಿದೆ. ಜೈಲಿನಲಿದ್ದೇ ಚುನಾವಣೆಗೆ ಸ್ಪರ್ಧಿಸಿ, ಮೂರು ಸಲ ಪಕ್ಷೇತರರಾಗಿ ಆಯ್ಕೆಯಾದ ರವಿಕಾಂತ್ ಪಾಟೀಲ್ ಈ ಬಂಡಾಯಕ್ಕೆ ಮೂಲ ಕಾರಣರಾಗಿದ್ದಾರೆ

ಶತಾಯಗತಾಯ ಈ ಬಾರಿ ಅಧಿಕಾಕ್ಕೆರಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಬಿಜೆಪಿ ನಾಯಕರಿಗೆ ಕಾರ್ಯಕರ್ತರೇ ಮುಳುವಾಗುತ್ತಾರಾ ಅನ್ನುವ ಅನುಮಾನ ವಿಜಯಪುರ ಜಿಲ್ಲೆಯ ಜನರಲ್ಲಿ ಕಾಡುತ್ತಿದೆ. ಸದ್ಯ ಜಿಲ್ಲೆಯ ಇಂಡಿ ತಾಲೂಕು ಬಿಜೆಪಿ ಘಟಕ ಈ ಅನುಮಾನಕ್ಕೆ ಕಾರಣವಾಗಿದ್ದು, ರಾಜ್ಯ ನಾಯಕರ ನಡೆಯಿಂದ ಬೇಸತ್ತು, 12 ಮಂದಿ ಟಕೆಟ್ ಆಕಾಂಕ್ಷಿಗಳು ಏಕಕಾಲಕ್ಕೆ ಬಂಡಾಯದ ಬಾವುಟ ಹಾರಿಸಲು ವೇದಿಕೆ ಸಿದ್ದಮಾಡಿಕೊಂಡಿದ್ದಾರೆ. ಪರಿವರ್ತನಾ ಯಾತ್ರೆ ವೇಳೆ ಆರಂಭವಾಗಿದ್ದ ಅಸಮಾಧಾನ ಇಂದು ಬಂಡಾಯದ ಮಟ್ಟಿಗೆ ಬಂದು ನಿಂತಿದೆ. ಜೈಲಿನಲಿದ್ದೇ ಚುನಾವಣೆಗೆ ಸ್ಪರ್ಧಿಸಿ ಮೂರು ಸಲ ಪಕ್ಷೇತರರಾಗಿ ಆಯ್ಕೆಯಾದ ರವಿಕಾಂತ್ ಪಾಟೀಲ್ ಈ ಬಂಡಾಯಕ್ಕೆ ಮೂಲ ಕಾರಣರಾಗಿದ್ದಾರೆ.

ಕಳೆದ ನವೆಂಬರ್ 29 ರಂದು ಬಾಗಲಕೋಟೆ ಜಿಲ್ಲೆಯಿಂದ ವಿಜಯಪುರ ಜಿಲ್ಲೆ ಪ್ರವೇಶ ಮಾಡಿದ ಬಿಜೆಪಿ ಪರಿವರ್ತನಾ ಯಾತ್ರೆ ಸದ್ದು ಗದ್ದಲದಿಂದ ಸುದ್ದಿ ಮಾಡಿತ್ತು. ಇದಕ್ಕೆ ಮೂಲ ಕಾರಣ ಇಂಡಿಯಲ್ಲಿ ನಡೆದಿದ್ದ ಪರಿವರ್ತನಾ ಯಾತ್ರೆ. ಅಂದು ಯಾತ್ರೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಮಾಜಿ ಶಾಸಕ ರವಿಕಾಂತ್ ಪಾಟೀಲ್ ಹೆಸರು ಪ್ರಸ್ತಾಪ ಮಾಡಿದ್ದೇ ತಡ, ಮೂಲ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರು ಬಿಎಸ್‌ವೈ ವಿರುದ್ಧ ಸಿಡಿದ್ದೆದ್ದರು. ವೇದಿಕೆ ಮೇಲೆ ಬಂದು ಬಿಎಸ್‌ವೈ ಜೊತೆ ವಾಗ್ವಾದಕ್ಕಿಳಿದರು. ಮೈಕ್ ಕಿತ್ತುಕೊಂಡು ಜಗಳಕ್ಕಿಳಿದರು. ಯಡಿಯೂರಪ್ಪ ಕಣ್ಮುಂದೆಯೇ ಇಷ್ಟಲ್ಲಾ ರಾದ್ಧಂತ ನಡೆದರು ಬಿಎಸ್‌ವೈ ಅವರಿಂದ ಯಾರನ್ನೂ ಸಮಾಧಾನ ಪಡಿಸಲು ಆಗಲಿಲ್ಲ. ಎಲ್ಲವನ್ನೂ ಮೂಕ ಪ್ರೇಕ್ಷಕರಾಗಿ ನೋಡುತ್ತಾ ನಿಂತ ಬಿಎಸ್‌ವೈ ಕಂಡ ಹಲವರಿಗೆ ಮರುಕ ಹುಟ್ಟುವಂತೆ ಮಾಡಿತ್ತು. ಇದಾದ ಬಳಿಕ ರಾತ್ರಿ ಇಂಡಿಯಲ್ಲೇ ಯಡಿಯೂರಪ್ಪ ವಾಸ್ತವ್ಯ ಮಾಡಿದ್ದರೂ ಯಾವೊಬ್ಬ ನಾಯಕ ಅವರನ್ನು ಭೇಟಿ ಮಾಡಲಿಲ್ಲ. ಅದಾದ ಬಳಿಕ ರಾಯಚೂರಿನಲ್ಲಿ ಭಿನ್ನಮತಿಯರನ್ನು ಕರೆಸಿ ಶಿಸ್ತಿನ ಪಾಠ ಮಾಡಿದ್ದರು ಯಡಿಯೂರಪ್ಪ. ಆದರೆ ಆ ಶಿಸ್ತಿನ ಪಾಠ ಇದೀಗ ಕಾಣೆಯಾಗಿದ್ದು, ಬಂಡಾಯದ ಕಹಳೆ ಊದಲಾಗಿದೆ.

ಇಂಡಿ ಭಾಗದಲ್ಲಿ ಪ್ರಭಾವ ಹೊಂದಿರುವ ರವಿಕಾಂತ್ ಪಾಟೀಲ್ ಈ ಹಿಂದೆ ಜೈಲಿನಲ್ಲಿದ್ದುಕೊಂಡೇ ಚುನಾವಣೆಯಲ್ಲಿ ಗೆದ್ದು ಬಂದಿದ್ದರು. ಆ ಬಳಿಕ ಯಡಿಯೂರಪ್ಪ ಅವರ ಕೆಜೆಪಿ ಸೇರಿ ಕಳೆದ ಸಲ ಸೋಲು ಕಂಡಿದ್ದರು. ಇದೀಗ ಚುನಾವಣೆ ಹತ್ತಿರ ಬಂದಿದ್ದರಿಂದ ಮತ್ತೆ ಯಡಿಯೂರಪ್ಪ ಜೊತೆ ಕಾಣಿಸಿಕೊಂಡಿದ್ದು, ಈ ಸಲ ತನಗೆ ಬಿಜೆಪಿ ಟಿಕೆಟ್ ಫೈನಲ್ ಮಾಡಲಾಗಿದೆ ಎಂದು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಇದು ಇಂಡಿ ಬಿಜೆಪಿ ಪದಾಧಿಕಾರಿಗಳು ಹಾಗೂ ಆಕಾಂಕ್ಷಿಗಳಲ್ಲಿ ತಳಮಳ ಉಂಟು ಮಾಡಿದೆ. ಪಕ್ಷಕ್ಕಾಗಿ ದುಡಿದ ನಮನ್ನು ಬಿಟ್ಟು, ನಿನ್ನೆ ಮೊನ್ನೆ ಬಂದವರಿಗೆ ಟಿಕೆಟ್ ನೀಡಿದರೆ ಬಂಡಾಯ ಎದುರಿಸಬೇಕಾಗುತ್ತದೆ ಎಂದು ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿರುವುದು ಬಿಎಸ್‌ವೈ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಒಂದೆಡೆ ಈ ಹಿಂದೆ ಕೆಜೆಪಿಯಲ್ಲಿ ತಮ್ಮ ಜೊತೆಗಿದ್ದವರಿಗೆ ಟಿಕೆಟ್ ನೀಡಬೇಕೋ ಅಥವಾ ಇಷ್ಟು ದಿನ ಪಕ್ಷ ಕಟ್ಟಿ ಬೆಳೆಸಿದ ನಾಯಕರಿಗೆ ಟಿಕೆಟ್ ನೀಡಬೇಕೋ ಅನ್ನೋ ಗೊಂದಲದಲ್ಲಿ ಸಿಲುಕಿದ್ದಾರೆ. ಇದರ ಜೊತೆಗೆ ಚುನಾವಣೆ ವೇಳೆ ಬಂಡಾಯವೇದ್ದರೆ ಅದರಿಂದ ಪಕ್ಷಕ್ಕಾಗುವ ಹಾನಿಯ ಬಗ್ಗೆ ಯಡಿಯೂರಪ್ಪ ಚಿಂತಿಸುವಂತಾಗಿದೆ.

ಇದನ್ನೂ ಓದಿ : ವಿಜಯಪುರ: ಮನುಷ್ಯತ್ವದ ಮೇಲಿನ ಹೇಯ ದಾಳಿಗೆ ಒಡಕಿನ ಪ್ರತಿಕ್ರಿಯೆ ತರವೇ?

ರವಿಕಾಂತ್ ಪಾಟೀಲ್ ವಿರುದ್ಧ ಕರ್ನಾಟಕ ಹಾಗೂ ಮಹಾರಾಷ್ಟ್ರದ ಸೋಲಾಪುರದಲ್ಲಿ ಹಲವು ಪ್ರಕರಣಗಳಿವೆ. ಅಷ್ಟೇ ಅಲ್ಲ ಕಳೆದ ಆಗಸ್ಟ್‌ನಲ್ಲಿ ರೇವತ್ಗಾಂವ್ ಗ್ರಾಮ ಪಂಚಾಯತಿ ಅಧ್ಯಕ್ಷರ ಪುತ್ರನ ಮೇಲೆ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಜೈಲುಪಾಲಾಗಿ ಸದ್ಯ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಇಂತಹ ಹಿನ್ನೆಲೆ ಇರುವ ರವಿಕಾಂತ್ ಪಾಟೀಲ್ ಪರ ಬಿಎಸ್‌ವೈ ಒಲವು ಹೊಂದಿದ್ದರೆ, ಆರ್‌ಎಸ್‌ಎಸ್ ನಾಯಕರು ಪ್ರಬಲವಾಗಿ ವಿರೋಧಿಸುತ್ತಾರೆ. ಹೀಗಾಗಿ ಇದು ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಯಡಿಯೂರಪ್ಪಗೆ ಕೆಜೆಪಿಯಲ್ಲಿದ್ದಾಗ ಜೊತೆಗಿದ್ದ ಕಾರಣ ಟಿಕೆಟ್ ನೀಡುವ ಅನಿವಾರ್ಯತೆ ಎದುರಾಗಿದ್ದರೆ, ಸಂಘದ ನಾಯಕರಿಗೆ ಬಿಜೆಪಿ ಮೂಲ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂಬ ವಾದ ಮಂಡಿಸುತ್ತಿದ್ದಾರೆ. “ಇಲ್ಲಿ ಒಟ್ಟು 12 ಜನ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿದ್ದು, ಅವರಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ನೀಡಿ. ಅದಕ್ಕೆ ನಾವು ಸಹಕರಿಸುತ್ತೇವೆ. ಆದರೆ ರವಿಕಾಂತ್ ಪಾಟೀಲ್ ಗೆ ಬೇಡ,” ಎಂಬುದು ಬಿಜೆಪಿ ಕಾರ್ಯಕರ್ತರ ವಾದವಾಗಿದೆ. ಆದರೆ ಹೈಕಮಾಂಡ ಇದಕ್ಕೆ ಇದುವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಮುಂದೆ ಈ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತದೆ ಅನ್ನುವುದನ್ನು ಕಾದುನೋಡಬೇಕು.

ಇನ್ನು ಇಂಡಿ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರವಾಗಿ ಬಂಡಾಯ ನಾಯಕರ ಬಗ್ಗೆ ‘ದಿ ಸ್ಟೇಟ್’ ಜೊತೆ ಮಾತನಾಡಿದ ರವಿಕಾಂತ ಪಾಟೀಲ್ “ನಾನು ಟಿಕೆಟ್ ಆಕಾಂಕ್ಷಿ, ಟಿಕೆಟ್ ಕೇಳಿದ್ದೇನೆ. ಆದರೆ ನನಗೆ ಟಿಕೆಟ್ ನೀಡಲು ವಿರೋಧಿಸುತ್ತಿರುವ ಮುಖಂಡರ ಮಾತನ್ನು ಯಾರೂ ಕೇಳುವುದಿಲ್ಲ. ಬಂಡಾಯವೆದ್ದರೆ ಯಾರೂ ಕೂಡ ಮಾತನಾಡಿವುದಿಲ್ಲ,” ಎಂದು ಬಿಜೆಪಿ ಮುಖಂಡರಿಗೆ ಟಾಂಗ್ ನೀಡಿದ್ದಾರೆ. “ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ನೀಡಿದರು ನನ್ನ ಸಹಮತವಿದೆ. ಯಾರಿಗೆ ಟಿಕೆಟ್ ನೀಡಿದರು ಪಕ್ಷದ ಪರವಾಗಿ ಪ್ರಚಾರ ಮಾಡುತ್ತೇನೆ,” ಎಂದು ಸಹ ಹೇಳಿದ್ದಾರೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More