ಶಿಕ್ಷಕಿಗೆ ಲೈಂಗಿಕ ಕಿರುಕುಳ ಪ್ರಕರಣ: ತಡವಾಗಿ ಕ್ರಮಕ್ಕೆ ಮುಂದಾದ ಅಧಿಕಾರಿಗಳು

ಶಿಕ್ಷಣ ಇಲಾಖೆಗೆ ಸಂಬಂಧಿಸಿದ ವರ್ಷದ ಹಿಂದಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ತರಿಸಿಕೊಂಡು, ತಕ್ಷಣವೇ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅವಿನಾಶ್ ಮೆನನ್ ಈಗ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಏನಿದು ಪ್ರಕರಣ?

ಯಾದಗಿರಿ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ತರಿಸಿಕೊಂಡ,ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅವಿನಾಶ್ ಮೆನನ್, ಈ ಕುರಿತು ತಕ್ಷಣವೇ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ‘ದಿ ಸ್ಟೇಟ್’ನೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ (ಡಿಡಿಪಿಐ) ಈ ಬಗ್ಗೆ ಕಾರ್ಯಪ್ರವೃತ್ತರಾಗಲು ಆದೇಶಿಸಿದ್ದಾಗಿ ತಿಳಿಸಿದರು. ಇನ್ನೊಂದೆಡೆ, ಸಂತ್ರಸ್ತೆ ಸೇರಿದಂತೆ ಸಹಶಿಕ್ಷಕರನ್ನು ಈ ಬಗ್ಗೆ ವಿಚಾರಿಸಿ, ಕ್ರಮ ಕೈಗೊಳ್ಳಲು ಶಿಫಾರಸು ಮಾಡಿರುವ ಯಾದಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ರುದ್ರಗೌಡ ‘ದಿ ಸ್ಟೇಟ್’ ಜೊತೆ ಮಾತನಾಡಿ, ಡಿಡಿಪಿಐ ಕಚೇರಿ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಯಾದಗಿರಿ ತಾಲೂಕಿನ ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿಯೊಬ್ಬರು (Cluster Resource Person) ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬುದು ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರ ದೂರಾಗಿತ್ತು. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿ ವರ್ಷ ಸಮೀಪಿಸುತ್ತಿದ್ದರೂ ಕ್ರಮ ಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದಾರೆಂಬುದು ಅವರ ಅಳಲಾಗಿತ್ತು.

ದೂರಿದ ವ್ಯಕ್ತಿಯ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿದ್ದ ಶಿಕ್ಷಣ ಇಲಾಖೆಯ ಕೆಲವರು, “ಲೈಂಗಿಕ ಕಿರುಕುಳ ಅಂದರೆ ಎಲ್ಲೆಲ್ಲಿ, ಏನೇನು? ಯಾವ್ಯಾವ ರೀತಿ? ಎಂದೆಲ್ಲ ಮಜುಗರಕ್ಕೀಡಾಗಿಸುವ ಪ್ರಶ್ನೆಗಳನ್ನು ಕೇಳಿದ್ದಲ್ಲದೆ, ಹೊಂದಾಣಿಕೆ ಮಾಡಿಕೊಂಡು ಹೋಗಬೇಕೆಂದು ಸಲಹೆ ನೀಡಿದ್ದರಿಂದ ನೊಂದ ಸಂತ್ರಸ್ತೆ, ಮುಖ್ಯಮಂತ್ರಿ ಕಚೇರಿಗೆ ಹಾಗೂ ಪ್ರಾಥಮಿಕ-ಪ್ರೌಢ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳಿಗೂ ಸಂಘದ ಮೂಲಕ ಲಿಖಿತ ದೂರು ನೀಡಿದ್ದರು. ಆದರೆ, ಅಲ್ಲಿಯೂ ಇದಕ್ಕೆ ಈವರೆಗೆ ಸ್ಪಂದನೆ ಸಿಕ್ಕಿರಲಿಲ್ಲ.

ಎಚ್ ಶರಣಪ್ಪ ಎನ್ನುವ ಸಿಆರ್‌ಪಿಯೊಬ್ಬರು ಕಳೆದೊಂದು ವರ್ಷದಿಂದ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದ ಸಂತ್ರಸ್ತೆ, ತಮ್ಮ ಜೊತೆ ಅವರು ಅಸಭ್ಯವಾಗಿ ವರ್ತಿಸುತ್ತಿದ್ದಾರೆಂದು ಇಲ್ಲಿನ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಹಾಗೂ ಯಾದಗಿರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದರು.

ಇದನ್ನೂ ಓದಿ : ಸುರಪುರ ಲೈಂಗಿಕ ದೌರ್ಜನ್ಯ ಪ್ರಕರಣ; ಕೊನೆಗೂ ಪೋಕ್ಸೋ ಕಾಯ್ದೆಯಡಿ ಪರಿಗಣನೆ

ಇನ್ನೊಂದೆಡೆ, ತಮ್ಮ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡಿದ್ದಕ್ಕಾಗಿ, ಲೈಂಗಿಕ ಕಿರುಕುಳದ ಆರೋಪ ಹೊತ್ತ ಶರಣಪ್ಪ, ಮತ್ತಷ್ಟು ಶೋಷಣೆ ನಡೆಸುತ್ತಿದ್ದಾರೆ. 'ತನ್ನನ್ನು ಅರ್ಥ ಮಾಡಿಕೊಳ್ಳುವಂತೆ' ಪೀಡಿಸುತ್ತಿದ್ದಾರೆಂದು ಸಂತ್ರಸ್ತೆ ‘ದಿ ಸ್ಟೇಟ್’ ಎದುರು ತಮ್ಮ ಅಳಲು ತೋಡಿಕೊಂಡರು.

ಇತ್ತ, ಶಿಕ್ಷಕಿಯ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಸಿಆರ್‌ಪಿ ಕಾರ್ಯವೈಖರಿ ಬಗ್ಗೆಯೂ ಕೆಲವು ಸಹಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿ, 10.6.2017ರಂದು ದೂರು ನೀಡಿದ್ದರು. ಆದರೂ, ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಮೇಲಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ಆಘಾತ ಮೂಡಿಸಿದೆಯಲ್ಲದೆ, ಮಹಿಳಾ ಸುರಕ್ಷತೆ ಬಗ್ಗೆ ಆತಂಕವೂ ಉಂಟಾಗಿದೆ ಎಂದು ಸಹ ಶಿಕ್ಷಕರೊಬ್ಬರು ಅಭಿಪ್ರಾಯಪಟ್ಟರು. ಆರೋಪಕ್ಕೆ ಗುರಿಯಾಗಿರುವ ಶರಣಪ್ಪ ಅವರನ್ನು ಸಂಪರ್ಕಿಸಲು ‘ದಿ ಸ್ಟೇಟ್’ ಅನೇಕ ಬಾರಿ ಯತ್ನಿಸಿದರೂ, ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಲಿಲ್ಲ.

ಇನ್ನೊಂದೆಡೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಮೊರೆಹೋಗಿದ್ದ ನೊಂದ ಮುಖ್ಯ ಶಿಕ್ಷಕಿ ಹಾಗೂ ಈ ಎಲ್ಲ ವಿಚಾರಗಳನ್ನು ಬಲ್ಲ ಕೆಲವು ಶಿಕ್ಷಕರ ಸಮೂಹ ಲಿಖಿತ ದೂರು ನೀಡಿ, ಶರಣಪ್ಪ ಎನ್ನುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕಚೇರಿಗೆ ಹಾಗೂ ಪ್ರಾಥಮಿಕ-ಪ್ರೌಢ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯವರ ಬಳಿ ದೂರು ನೀಡಿದ್ದಾದರೂ, ಮುಖ್ಯಮಂತ್ರಿಯವರ ಕಚೇರಿ ಹಂತದಲ್ಲಾಗಲೀ ಅಥವಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಕಡೆಉಇಂದಾಗಲೀ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯ ಗೋಳು ನಿವಾರಿಸಿ, ಕ್ರಮ ಕೈಗೊಳ್ಳುವ ಬದಲು, ಸಂತ್ರಸ್ತೆಯನ್ನೇ ಬೆದರಿಸಿ, ಹೊಂದಿಕೊಳ್ಳುವಂತೆ ಸಲಹೆ ನೀಡಿರುವ ಶಿಕ್ಷಣ ಇಲಾಖೆ ಅಧಿಕಾರಿಗಳ ವರ್ತನೆ ಬಗ್ಗೆ ಶಿಕ್ಷಕ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More