ಚುನಾವಣಾ ಕಣ | ಎಚ್ ಡಿ ರೇವಣ್ಣ ವಿರುದ್ಧ ಮಂಜೇಗೌಡ ಕಣಕ್ಕಿಳಿಸುವ ಹಾದಿ ಸುಗಮ

ಹಾಸನ ಜಿಲ್ಲೆಯಲ್ಲೇ ಜೆಡಿಎಸ್ ಬಗ್ಗುಬಡಿಯುವ ಸಿಎಂ ಸಿದ್ದರಾಮಯ್ಯನವರ ತಂತ್ರಗಳು ಒಂದೊಂದಾಗಿ ಕಾರ್ಯರೂಪಕ್ಕೆ ಬರುವಂತೆ ಕಾಣುತ್ತಿವೆ. ಮೋಟಾರು ವಾಹನ ನಿರೀಕ್ಷಕರಾಗಿದ್ದ ಬಾಗೂರು ಮಂಜೇಗೌಡರ ರಾಜೀನಾಮೆಯನ್ನು ಇಲಾಖೆಯು ಅಂಗೀಕರಿಸಿದ್ದು, ಅವರನ್ನು ಕಣಕ್ಕಿಳಿಸುವ ಹಾದಿ ಸುಗಮವಾಗಿದೆ

ಅಂತೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ತವರು ಹಾಸನ ಜಿಲ್ಲೆಯಲ್ಲೇ ಜೆಡಿಎಸ್ ಬಗ್ಗುಬಡಿಯುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತಂತ್ರಗಳು ಒಂದೊಂದಾಗಿ ಕಾರ್ಯರೂಪಕ್ಕೆ ಬರುವಂತೆ ಕಾಣುತ್ತಿವೆ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಎಚ್ ಡಿ ದೇವೇಗೌಡರ ಪುತ್ರ ಮಾಜಿ ಸಚಿವ ಎಚ್ ಡಿ ರೇವಣ್ಣನವರ ವಿರುದ್ಧ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ ಪಿ ಮಂಜೇಗೌಡರನ್ನು (ಬಾಗೂರು ಮಂಜೇಗೌಡ) ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಹಾದಿ ಸುಗಮವಾಗಿದೆ. ಹಾಸನದ ಸಾರಿಗೆ ಇಲಾಖೆಯಲ್ಲಿ ಹಿರಿಯ ಮೋಟಾರು ವಾಹನ ನಿರೀಕ್ಷಕರಾಗಿದ್ದ ಬಾಗೂರು ಮಂಜೇಗೌಡರ ರಾಜಿನಾಮೆಯನ್ನು ಇಲಾಖೆಯು ಅಂಗೀಕರಿಸಿದೆ. ಈವರೆಗೂ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗದ ಕಾರಣ ರಾಜಿನಾಮೆ ಅಂಗೀಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಂಜೇಗೌಡರು ಸಿದ್ದರಾಮಯ್ಯನವರ ಇಚ್ಛೆಯಂತೆ ರೇವಣ್ಣ ವಿರುದ್ಧ ಚುನಾವಣಾ ಕಣಕ್ಕೆ ಧುಮುಕಲು ಇದ್ದ ಅಡ್ಡಿ ನಿವಾರಣೆ ಆದಂತಾಗಿದೆ.

ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಬಾಗೂರು ಮಂಜೇಗೌಡರು ಈಗಾಗಲೇ ಪ್ರಚಾರ ಆರಂಭಿಸಿದ್ದರು. ಆದರೆ, ಅವರ ರಾಜಿನಾಮೆ ಅಂಗೀಕಾರವಾಗದಿದ್ದ ಕಾರಣ ಪೂರ್ಣ ಪ್ರಮಾಣದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಆಗಿರಲಿಲ್ಲ. ಮಂಜೇಗೌಡರ ವಿರುದ್ಧ ಆದಾಯಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿ ಸಂಪಾದನೆ ಪ್ರಕರಣವು ಲೋಕಾಯುಕ್ತ ಪೊಲೀಸರ ಮೂಲಕ ದಾಖಲಾಗಿದೆ ಮತ್ತು ಬಳ್ಳಾರಿ ಅಕ್ರಮ ಗಣಿ ಪ್ರಕರಣದಲ್ಲೂ ಭಾಗಿಯಾಗಿರುವ ಕುರಿತು ಲೋಕಾಯುಕ್ತ ಜಂಟಿ ಇಲಾಖಾ ವಿಚಾರಣೆ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಮಂಜೇಗೌಡರ ರಾಜಿನಾಮೆಯನ್ನು ಅಂಗೀಕರಿಸಬೇಕೋ ಬೇಡವೋ ಎಂಬ ಕುರಿತು ಕಾನೂನು ಇಲಾಖೆ ಅಭಿಪ್ರಾಯ ಕೇಳಲಾಗಿತ್ತು. ಕಾನೂನು ಇಲಾಖೆಯು, “ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಸರ್ಕಾರಿ ನೌಕರ/ಅಧಿಕಾರಿಗಳ ರಾಜೀನಾಮೆಯನ್ನು ಅಂಗೀಕರಿಸುವುದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅಡಕವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಬಿ ಪಿ ಮಂಜೇಗೌಡರ ರಾಜೀನಾಮೆಯನ್ನು ಅಂಗೀಕರಿಸುವುದು ಸಮಂಜಸವಲ್ಲ,” ಎಂಬುದಾಗಿ ಕಳೆದ ಏ.2ರಂದು ತನ್ನ ಅಭಿಪ್ರಾಯ ತಿಳಿಸಿತ್ತು. ಆದಾಗ್ಯೂ ಏ.10ರಂದು ಬಿ ಪಿ ಮಂಜೇಗೌಡರ ರಾಜಿನಾಮೆ ಅಂಗೀಕಾರವಾಗಿದ್ದು, ಅವರು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೂ ರಾಜಿನಾಮೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಲ ದಿನಗಳ ಹಿಂದೆ ಮಂಜೇಗೌಡರಿಗೆ ದೂರವಾಣಿ ಕರೆ ಮಾಡಿ, “ಏ ಮಂಜೇಗೌಡ, ಯಾಕಯ್ಯಾ ಇನ್ನೂ ರಾಜಿನಾಮೆ ಕೊಟ್ಟಿಲ್ಲ? ಬೇಗ ಕೊಡು, ಅಕ್ಸೆಪ್ಟ್ ಮಾಡಕೆ ಅದ್ಯಾರಿಗ್ಹೇಳ್ಬೇಕು ಹೇಳ್ತೀನಿ,” ಎಂದು ತಾಕೀತು ಮಾಡಿದ್ದ ಆಡಿಯೊ ವೈರಲ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಒಟ್ಟಿನಲ್ಲಿ ಎಚ್ ಡಿ ರೇವಣ್ಣ ವಿರುದ್ಧ ಬಾಗೂರು ಮಂಜೇಗೌಡರನ್ನು ಜಂಗೀ ಕುಸ್ತಿಗಿಳಿಸಲು ಅಖಾಡ ಸಿದ್ಧಗೊಂಡಂತಾಗಿದೆ. ಈಗಾಗಲೇ ಮಂಜೇಗೌಡರು ಎದುರಾಳಿಯಾಗುವುದನ್ನು ತಿಳಿದು ಸ್ವಲ್ಪ ವಿಚಲಿತರಾಗಿರುವಂತೆ ಕಾಣುತ್ತಿರುವ ಮಾಜಿ ಸಚಿವ ಎಚ್ ಡಿ ರೇವಣ್ಣನವರು, “ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ಭ್ರಷ್ಟ ಅಧಿಕಾರಿಯ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ಅಂಗೀಕರಿಸಬಾರದು. ಸರ್ಕಾರಿ ನೌಕರರಾಗಿ ಜನರಿಗೆ ಬಾಡೂಟ ಹಾಕಿಸುತ್ತಿರುವ ಮಂಜೇಗೌಡರ ವಿರುದ್ಧ ಚುನಾವಣಾ ಆಯೋಗ ಕಾನೂನು ಕ್ರಮ ಕೈಗೊಳ್ಳಬೇಕು,” ಎಂಬುದಾಗಿ ಎರಡು-ಮೂರು ಬಾರಿ ಸುದ್ದಿಗೋಷ್ಠಿ ನಡೆಸಿ ಆಗ್ರಹಿಸಿದ್ದರು. ಅದಾವುದೂ ಫಲ ಕೊಡದೆ ಮಂಜೇಗೌಡರು ಅಭ್ಯರ್ಥಿಯಾಗುವುದು ನಿಶ್ಚಿತವಾದಂತಾಗಿದೆ.

ಆದರೆ, ಹೊಳೆನರಸೀಪುರ ಕ್ಷೇತ್ರದಲ್ಲಿ ಸತತವಾಗಿ ರೇವಣ್ಣನವರನ್ನು ಎದುರಿಸಿಕೊಂಡು ಬರುತ್ತಿರುವ ದಿವಂಗತ ಜಿ ಪುಟ್ಟಸ್ವಾಮಿಗೌಡರ ಸೊಸೆ ಅನುಪಮಾ ಅವರು ಮಾತ್ರ ಮತ್ತೆ ತಮಗೇ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆನ್ನಲಾಗಿದೆ. ತಮಗೆ ಕೊಡದಿದ್ದರೆ ತಮ್ಮ ಪುತ್ರ, ಜಿಲ್ಲಾ ಪಂಚಾಯಿತಿ ಸದಸ್ಯ ಶ್ರೇಯಸ್ ಪಟೇಲ್ ಗಾದರೂ ಟಿಕೆಟ್ ಕೊಡಿ ಎಂಬ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆದರೆ, "ದೇವೇಗೌಡರ ಕುಟುಂಬದ ಪ್ರಾಬಲ್ಯ ಮುರಿಯಲೇ ಬೇಕು ಎಂಬ ಹಠಕ್ಕೆ ಬಿದ್ದಂತೆ ಕಾಣುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಖುದ್ದು ಬಾಗೂರು ಮಂಜೇಗೌಡರನ್ನು ರೇವಣ್ಣ ವಿರುದ್ಧ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ. ಹಾಗಾಗಿ ಅನುಪಮಾ ಅವರನ್ನು ಮುಂದೆ ವಿಧಾನ ಪರಿಷತ್ ಸದಸ್ಯರಾಗಿಸುವ ಭರವಸೆ ನೀಡಿ ಸಮಾಧಾನಪಡಿಸಲಾಗಿದೆ,” ಎಂಬುದಾಗಿ ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.

ಇದನ್ನೂ ಓದಿ : ಸಾರಸ್ಯಕರ ಚರ್ಚೆಗೆ ಕಾರಣವಾದ ಸಿಎಂ ಮತ್ತು ಬಾಗೂರು ಮಂಜೇಗೌಡ ಮಾತುಕತೆಯ ಆಡಿಯೋ

ಅನುಪಮಾ ಅವರು ಎರಡು ಬಾರಿ ಎಚ್ ಡಿ ರೇವಣ್ಣ ವಿರುದ್ಧ ಪರಾಭವಗೊಂಡಿದ್ದಾರೆ. 2008 ರ ಚುನಾವಣೆಯಲ್ಲಿ ಅನುಪಮಾ 49842 ಮತಗಳನ್ನು ಗಳಿಸಿದರೆ, ರೇವಣ್ಣ 77,448 ಮತಗಳಿಸಿ 27,606 ಮತಗಳ ಅಂತರದಿಂದ ಗೆದ್ದಿದ್ದರು. 2013 ರಲ್ಲಿ ಅನುಪಮಾ 62,655 ಮತ ಪಡೆದರೆ, ರೇವಣ್ಣ 92,713 ಮತ ಗಳಿಸಿ 30,058 ಮತಗಳ ಭಾರಿ ಅಂತರದ ಜಯ ಪಡೆದರು. ಹಾಗಾಗಿ, ಈ ಬಾರಿ ರೇವಣ್ಣ ಅವರನ್ನು ಮಣಿಸಲು ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ಬಂದಿರುವಂತಿದೆ. ಒಟ್ಟಿನಲ್ಲಿ ಜೆಡಿಎಸ್ ಶಕ್ತಿ ಕೇಂದ್ರದಲ್ಲಿ ರಾಜಕೀಯ ಹಲವು ರಂಗು ಪಡೆದುಕೊಳ್ಳುವ ಎಲ್ಲ ಸೂಚನೆಗಳು ಕಾಣತೊಡಗಿವೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More