ಚುನಾವಣಾ ಕಣ | ಟಿಕೆಟ್ ವಂಚಿತರ ಆಶ್ರಯತಾಣವಾದ ವಿಜಯಪುರ ಜೆಡಿಎಸ್‌

ವಿಜಯಪುರ ಜಿಲ್ಲೆಯಲ್ಲಿ ಪ್ರಬಲವಾಗಿದ್ದ ಜೆಡಿಎಸ್‌ನ ಇಬ್ಬರು ನಾಯಕರು ಜೆಡಿಎಸ್ ತೊರೆದ ಬಳಿಕ ಜಿಲ್ಲೆಯಲ್ಲಿ ಪಕ್ಷ ನಾವಿಕನಿಲ್ಲದ ದೋಣಿಯಂತಾಗಿದೆ. ಸದ್ಯ ನಾಗಠಾಣ ಮೀಸಲು ಕ್ಷೇತ್ರ ಹಾಗೂ ಸಿಂಧಗಿಯಲ್ಲಿ ಮಾತ್ರ ಜೆಡಿಎಸ್ ಪ್ರಬಲವಾಗಿದ್ದು, ಉಳಿದ ಕ್ಷೇತ್ರಗಳಲ್ಲಿ ಪಕ್ಷದ ಕಚೇರಿ ಸಹ ಕಾಣುವುದಿಲ್ಲ

ವಿಜಯಪುರದಲ್ಲಿಗ ರಾಜಕೀಯ ನಾಯಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರಿ ಟಿಕೆಟ್ ಪಡೆದು ಚುನಾವಣಾ ಅಖಾಡಕ್ಕೆ ಇಳಿಯುತ್ತಿದ್ದಾರೆ. ಟಿಕೆಟ್ ಸಿಗದವರು ಬಂಡಾಯ ಎದ್ದಿದ್ದಾರೆ. ಅತೃಪ್ತ ಆಕಾಂಕ್ಷಿಗಳು ಹಾಗೂ ಟಿಕೆಟ್ ವಂಚಿತ ನಿರಾಶ್ರಿತರ ಪಾಲಿಗೆ ಜೆಡಿಎಸ್ ಆಶ್ರಯ ಆಶ್ರಯತಾಣವಾಗಿದೆ.

ಜಿಲ್ಲೆಯಲ್ಲಿ ಜೆಡಿಎಸ್ ಇತಿಹಾಸವನ್ನು ಗಮನಿಸಿದರೆ, ಒಂದು ಕಾಲದಲ್ಲಿ ಬಾಗಲಕೋಟ-ವಿಜಯಪುರ ಅಖಂಡ ಜಿಲ್ಲೆಯ 15 ಶಾಸಕರ ಪೈಕಿ 13 ಶಾಸಕರು ಜನತಾದಳದವರೇ ಇದ್ದರು. ಆದರೆ ಇಂದು ಅದೇ ಪಕ್ಷ ಬೇರೆ ಪಕ್ಷಗಳಿಂದ ವಲಸೆ ಬರುವವರನ್ನು ನೆಚ್ಚಿಕೊಂಡು ಚುನಾವಣೆ ಎದುರಿಸಬೇಕಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಹೇಳಿಕೊಳ್ಳುವಂತಹ ನಾಯಕನಿಲ್ಲ. ಇರುವ ಕೆಲವು ನಾಯಕರು ಗುಂಪುಗಾರಿಕೆಯಿಂದ ಬೇಸತ್ತು, ಪಕ್ಷದಿಂದ ದೂರು ಉಳಿದಿದ್ದಾರೆ. ಕಳೆದ ಚುನಾವಣೆ ವೇಳೆ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರ ನಗರ ಕ್ಷೇತ್ರದಿಂದ ಹಾಗೂ ವಿಜುಗೌಡ ಪಾಟೀಲ್ ಬಬಲೇಶ್ವರ ಮತಕ್ಷೇತ್ರದಿಂದ ಸರ್ಧೆ ಮಾಡಿದ್ದರು. ಈ ವೇಳೆ, ಜಿಲ್ಲೆಯಲ್ಲಿ ಜೆಡಿಎಸ್ ಪ್ರಬಲವಾಗಿತ್ತು. ಆದರೆ, ಈ ಇಬ್ಬರು ನಾಯಕರು ಜೆಡಿಎಸ್ ತೊರೆದ ಬಳಿಕ ಜಿಲ್ಲೆಯಲ್ಲಿ ನಾವಿಕನಿಲ್ಲದ ದೋಣಿಯಂತಾಗಿದೆ ಪಕ್ಷದ ಸ್ಥಿತಿ.

ಸದ್ಯ ಜಿಲ್ಲೆಯ ನಾಗಠಾಣ ಮೀಸಲು ಕ್ಷೇತ್ರ ಹಾಗೂ ಸಿಂಧಗಿ ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಪ್ರಬಲವಾಗಿದ್ದು, ಉಳಿದ ಕ್ಷೇತ್ರಗಳಲ್ಲಿ ಪಕ್ಷದ ಕಚೇರಿ ಸಹ ಕಾಣುವುದಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಬಬಲೇಶ್ವರ, ನಾಗಠಾಣ ಹಾಗೂ ಸಿಂಧಗಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದರು, ಹೀಗಾಗಿ, ಈ ಸಲ ಆ ಕ್ಷೇತ್ರಗಳನ್ನ ಮತ್ತೆ ವಶಕ್ಕೆ ಮಾಡಿಕೊಳ್ಳಲು ಕುಮಾರಸ್ವಾಮಿ ಶ್ರಮಿಸುತ್ತಿದ್ದಾರೆ. ಇದರಲ್ಲಿ ಬಬಲೇಶ್ವರದ ವಿಜುಗೌಡ ಪಾಟೀಲ್ ಕುಮಾರಸ್ವಾಮಿ ವಿರುದ್ಧ ಬಂಡೆದ್ದು ಪಕ್ಷದಿಂದ ಹೊರಬಂದು ಬಿಜೆಪಿ ಸೇರಿದ್ದಾರೆ. ಹೀಗಾಗಿ ಈ ಮತಕ್ಷೇತ್ರದಲ್ಲಿ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಂಡು ಜೆಡಿಎಸ್ ತನ್ನ ಅಭ್ಯರ್ಥಿಯನ್ನ ಹಾಕದೆ ಬಿಎಸ್ಪಿಗೆ ಬೆಂಬಲ ನೀಡಲಿದೆ. ನಾಗಠಾಣ ಕ್ಷೇತ್ರದಲ್ಲಿ ದೇವಾನಂದ ಚೌಹಾಣ್ ಈ ಸಲ ಅಭ್ಯರ್ಥಿಯಾಗಿದ್ದು, ಕಳೆದ ಸಲ ಕೇವಲ 400 ಮತಗಳ ಅಂತರದಿಂದ ಸೋಲುನ್ನ ಕಂಡಿದ್ದು, ಈ ಸಲ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಕಳೆದ ಸಲ ಚುನಾವಣೆ ವೇಳೆ ಅಂದಿನ ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ, ದೇವಾನಂದ ಚೌಹಾಣ್ ಅವರಿಗೆ ಟಿಕೆಟ್ ನೀಡಲು ಮೀನಾಮೇಷ ಎಣಿಸಿದ್ದರು. ಕೊನೆಗೆ ಚುನಾವಣೆಗೆ 8 ದಿನ ಬಾಕಿ ಇರುವಾಗ ಟಿಕೆಟ್ ನೀಡಿದರು. ಇದರಿಂದಾಗಿ ಚುನಾವಣೆ ಎದುರಿಸಲು ಕಡಿಮೆ ಸಮಯವಿದ್ದ ಕಾರಣ ಅಲ್ಲಿ ಜೆಡಿಎಸ್ ಸೋಲುವಂತಾಗಿತ್ತು.

ಇನ್ನು, ಸಿಂಧಗಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂಸಿ ಮನಗೂಳಿ ಅಭ್ಯರ್ಥಿಯಾಗಿದ್ದು, ಅಲ್ಲಿ ಸದ್ಯ ಜೆಡಿಎಸ್ ಪ್ರಬಲವಾಗಿದೆ. ಘೋಷಿತ ಅಭ್ಯರ್ಥಿ ಎಂಸಿ ಮನಗೂಳಿ ಮಾಜಿ ಪ್ರಧಾನಿ ದೇವೇಗೌಡ ಆತ್ಮಿಯರಾಗಿದ್ದು, 80 ವರ್ಷದವರಾಗಿದ್ರು ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಕಳೆದ ಸಲ ಸೋಲು ಕಂಡ ಎಂಸಿ ಮನಗೂಳಿ, ಇದು ನನ್ನ ಕೊನೆಯ ಚುನಾವಣೆ ಇದೊಂದು ಸಲ ನನಗೆ ಅವಕಾಶ ಮಾಡಿಕೊಂಡಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಈ ಎರಡು ಕ್ಷೇತ್ರಗಳನ್ನು ಹೊರತು ಪಡಿಸಿದರೆ ಬಸವನಬಾಗೇವಾಡಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಾರ್ಯಕರ್ತರಿದ್ದರೆ, ಉಳಿದೆಡೆ ಯಾರು ಜೆಡಿಎಸ್ ನಾಯಕರು ಎಂದು ಹುಡುಕಿದರು ಕಾಣುವುದಿಲ್ಲ.

ಇದನ್ನೂ ಓದಿ : ಚುನಾವಣಾ ಕಣ | ಲಿಂಗಸುಗೂರು ಟಿಕೆಟ್‌ ಪೈಪೋಟಿ, ಇಕ್ಕಟ್ಟಿನಲ್ಲಿ ಕಾಂಗ್ರೆಸ್ 

ವಿಜಯಪುರ ಜಿಲ್ಲೆಯ ರಾಜಕೀಯದಲ್ಲಿ ಜೆಡಿಎಸ್ ಪಕ್ಷ ಸದ್ಯಕ್ಕೆ ರಾಜಕೀಯ ನಾಯಕರ ಪಾಲಿಗೆ ಆಶ್ರಯತಾಣವಾಗಿದೆ. ಬೇರೆ ಪಕ್ಷದಲ್ಲಿ ಅಧಿಕಾರ, ಟಿಕೆಟ್ ಸಿಗದಿದ್ದರೆ ಕೊನಗೆ ಅವರು ಬರೋದು ಜೆಡಿಎಸ್ ಮನೆ ಬಾಗಿಲಿಗೆ. ಈ ಹಿಂದೆ ಯಡಿಯೂರಪ್ಪ ವಿರುದ್ಧ ಬಂಡಾಯವೆದಿದ್ದ ಬಸನಗೌಡ ಪಾಟೀಲ್ ಬಿಜೆಪಿಯಿಂದ ಉಚ್ಚಾಟನೆಯಾದ ಬಳಿಕ ಜೆಡಿಎಸ್ ಸೇರಿ ಅಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅಲ್ಲಿ ಎರಡು ವರ್ಷ ರಾಜಕೀಯ ಕಾಲ ಕಳೆದು ಮತ್ತೆ ಲೋಕಸಭೆ ಚುನಾವಣೆ ವೇಳೆ ಮೋದಿಯನ್ನು ಪ್ರಧಾನಿ ಮಾಡಬೇಕು ಎಂದು ಜೆಡಿಎಸ್‌ಗೆ ಕೈಕೊಟ್ಟು ಮತ್ತೆ ಬಿಜೆಪಿ ಸೇರಿದರು. ಇತ್ತೀಚೆಗೆ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ಪಕ್ಷದಿಂದ ಹೊರಬಂದ ಬಳಿಕ ಜೆಡಿಎಸ್‌ನಲ್ಲಿ ಕೆಲ ಕಾಲ ಆಶ್ರಯ ಪಡೆದರು. ಬಳಿಕ ರಾತೋರಾತ್ರಿ ಬಿಜೆಪಿಗೆ ಜಂಪ್ ಆದರು. ಇವರಷ್ಟೇ ಅಲ್ಲ, ಜಿಲ್ಲೆಯಲ್ಲಿ ವಿಮಲಾಬಾಯಿ ದೇಶಮುಖ, ಆರ್ ಕೆ ರಾಠೋಡ್, ಬಿ ಎಚ್ ಮಹಾಬರಿ ಸೇರಿದಂತೆ ಹಲವಾರು ನಾಯಕರು ಬೇರೆ ಪಕ್ಷದಲ್ಲಿ ಟಿಕೆಟ್ ಸಿಗದಿದ್ದಾಗ ಇಲ್ಲಿದು ಬಂದು ಆಶ್ರಯ ಪಡೆಯುತ್ತಾರೆ. ಬಳಿಕ ರಾತೋರಾತ್ರಿ ಪಕ್ಷದ ನಾಯಕರ ವಿರುದ್ಧ ತಿರುಗಿಬಿದ್ದು ಪಕ್ಷದಿಂದ ಹೊರನಡೆಯುತ್ತಾರೆ. ಹೀಗಾಗಿ ಜಿಲ್ಲೆಯ ರಾಜಕೀಯ ನಾಯಕರ ಪಾಲಿಗೆ ಇದು ಆಶ್ರಯತಾಣವಾಗಿದೆ.

ಸದ್ಯ ಮಾಜಿ ಸಚಿವ ಎಂ ಎಲ್ ಉಸ್ತಾದ ಸಹೋದರ ಎಲ್ ಎಲ್ ಉಸ್ತಾದ ಕಾಂಗ್ರೆಸ್‌ನಿಂದ ಜೆಡಿಎಸ್ ಅಂಗಳಕ್ಕೆ ಜಿಗಿದಿದ್ದಾರೆ. ಜೊತೆಗೇ, ಹಲವು ಟಿಕೆಟ್ ವಂಚಿತರು ಜೆಡಿಎಸ್ ಬಾಗಿಲು ತಟ್ಟಲು ನಿರ್ಧರಿಸಿದ್ದಾರೆ. ಆದರೆ, ಮೂಲ ಪಕ್ಷದಲ್ಲಿ ಟಿಕೆಟ್ ಸಿಗದವರು ವಲಸಿಗರತ್ತ ನೋಡುತ್ತ ಕಾಲ ನೂಕುತ್ತಿದ್ದಾರೆ. ಜೆಡಿಎಸ್ ಕೂಡ ಅಂಥವರಿಗಾಗಿಗೇ ಬಾಗಿಲು ತೆರೆದುಕೊಂಡು ಕಾದುಕುಳಿತಿರುವಂತಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More