ಚುನಾವಣಾ ಕಣ | ಸೊಗಡು ಶಿವಣ್ಣ ಮತ್ತು ಗೌರಿಶಂಕರ್ ಭೇಟಿ ಬಂಡಾಯದ ಸೂಚನೆಯೇ?

ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಮುಖಂಡ ಸೊಗಡು ಶಿವಣ್ಣನವರು ಜೆಡಿಎಸ್ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಿ ಸಿ ಗೌರಿಶಂಕರ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿರುವುದು ತುಮಕೂರು ಜಿಲ್ಲೆಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ

ರಾಜ್ಯ ವಿಧಾನಸಭೆಯ ಚುನಾವಣೆ ಹೊಸ್ತಿಲಲ್ಲಿ ತುಮಕೂರು ರಾಜಕೀಯ ಚಟುವಟಿಕೆ ಗರಿಗೆದರಿದೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ವೋಟರ್ ಲೀಸ್ಟ್ ತೆಗೆದುಕೊಂಡು ಮನೆಮನೆಗೂ ಭೇಟಿ ನೀಡಿ ಪ್ರಚಾರ ಚುರುಕುಗೊಳಿಸಿದ್ದಾರೆ. ಇದರ ನಡುವೆಯೇ ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಮುಖಂಡ ಸೊಗಡು ಶಿವಣ್ಣನವರು ಜೆಡಿಎಸ್ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಿ ಸಿ ಗೌರಿಶಂಕರ್ ಅವರನ್ನು ಭೇಟಿ ಮಾಡಿ ಉಪಾಹಾರ ಸೇವಿಸಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆಗೆ ಒಂದು ತಿಂಗಳು ಬಾಕಿ ಇರುವಾಗ ಮತ್ತು ಅಭ್ಯರ್ಥಿ ಪಟ್ಟಿ ಪ್ರಕಟಿಸುವಾಗ ಇಂಥ ಭೇಟಿಗೆ ವಿಶೇಷ ಅರ್ಥ ಸಹಜ ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯ. ಚುನಾವಣೆಯ ಸಂದರ್ಭದಲ್ಲಿ ಆ ಪಕ್ಷದಿಂದ ಈ ಪಕ್ಷಕ್ಕೆ ಜಿಗಿಯುವ ಸರದಿ ನಡೆಯುತ್ತಿರುವಾಗಲೇ ಬಿಜೆಪಿಯ ಹಿರಿಯ ಮುಖಂಡ ಸೋಮವಾರ ಬೆಳಗ್ಗೆ ದಿಢೀರನೆ ಈ ಭೇಟಿಗೆ ಮುಂದಾಗಿರುವುದು ಬಿಜೆಪಿಗೆ ಟಾಂಗ್ ನೀಡಲೆಂದೇ ಎಂದು ವಿಶ್ಲೇಷಿಸಲಾಗುತ್ತಿದೆ.

ಸೊಗಡು ಶಿವಣ್ಣ ಹಿಂದಿನಿಂದಲೂ ತನಗೆ ಟಿಕೆಟ್ ಕೊಡಬೇಕೆಂದು ಒತ್ತಾಯಿಸುತ್ತಲೇ ಬರುತ್ತಿದ್ದಾರೆ. ಆದರೆ, ಪಕ್ಷದ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆ ಎಂಬುದರ ಮೇಲೆ ಶಿವಣ್ಣನವರ ತೀರ್ಮಾನವೂ ನಿಂತಿದೆ ಎಂಬ ಚರ್ಚೆಯೂ ನಡೆಯುತ್ತಿದೆ. ಈಗಾಗಲೇ ಜೆಡಿಎಸ್ ವರಿಷ್ಠರೊಂದಿಗೆ ಸೊಗಡು ಶಿವಣ್ಣ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಗೌರಿಶಂಕರ್ ಭೇಟಿಗೆ ಮತ್ತಷ್ಟು ಪುಷ್ಠಿ ನೀಡುತ್ತದೆ. “ಹಿಂದೆ ಶಿವಣ್ಣ ಎಂದೂ ಹೀಗೆ ಇನ್ನೊಬ್ಬರ ಮನೆ ಬಾಗಿಲಿಗೆ ಹೋಗಿರಲಿಲ್ಲ. ಹೋಗುವಂತಹ ಪರಿಸ್ಥಿತಿಯೂ ಬಂದಿರಲಿಲ್ಲ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶತ್ರುವೂ ಮಿತ್ರನಾಗಬಹುದು, ಮಿತ್ರನೂ ಶತ್ರುವಾಗಬಹುದು,” ಎಂಬ ಮಾತು ಕೇಳಿಬಂದಿವೆ.

ಬಿಜೆಪಿಯಿಂದ ಮಾಜಿ ಸಂಸದ ಜಿ ಎಸ್ ಬಸವರಾಜು ಪುತ್ರ ಜಿ ಬಿ ಜ್ಯೋತಿಗಣೇಶ್ ಅವರಿಗೆ ಟಿಕೆಟ್ ಸಿಗುವುದು ಖಚಿತ ಎಂದು ಮೂಲಗಳು ಹೇಳುತ್ತಿವೆ. ಇದನ್ನು ಅರಿತುಕೊಂಡ ಸೊಗಡು ಶಿವಣ್ಣ, ಬಿಜೆಪಿ ಮುಖಂಡರಿಗೆ, ಅದರಲ್ಲೂ ಮುಖ್ಯವಾಗಿ ಬಿ ಎಸ್ ಯಡಿಯೂರಪ್ಪ ಅವರಿಗೆ ಹೊನ್ನಾಳಿ ಹೊಡೆತ ನೀಡಲು ಸಜ್ಜಾಗಿದ್ದಾರೆಯೇ ಎಂಬ ಯಕ್ಷಪ್ರಶ್ನೆ ಹುಟ್ಟಿದೆ. ಆದರೆ, ಜೆಡಿಎಸ್‌ನ ದೊಡ್ಡಗೌಡರ ಬಾಗಿಲು ತಟ್ಟಿರುವುದಂತೂ ಸತ್ಯ. ಚನ್ನಿಗಪ್ಪ ಪುತ್ರ ಗೌರಿಶಂಕರ್ ಜೊತೆ ಮಾತುಕತೆ ನಡೆಸಿರುವುದು ತುಮಕೂರು ಗ್ರಾಮಾಂತರದಲ್ಲಿ ಬಿ ಸುರೇಶ್ ಗೌಡರನ್ನು ಸೋಲಿಸಲೋ ಅಥವಾ ತುಮಕೂರಿನಲ್ಲಿ ಜ್ಯೋತಿಗಣೇಶ್ ವಿರುದ್ಧ ತಂತ್ರ ಎಣಿಯಲೋ ಎಂಬ ಮಾತುಕತೆಯ ವಿವರಗಳು ಲಭ್ಯವಾಗಿಲ್ಲ. ಆದರೆ, ಸೊಗಡು ಶಿವಣ್ಣ ಆಪ್ತರ ಪ್ರಕಾರ, ಬಿಜೆಪಿಗೆ ಟಾಂಗ್ ಕೊಡಲು ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ : ಚುನಾವಣಾ ಕಣ | ಪಾವಗಡದಲ್ಲಿ ಹಣಬಲ, ಜಾತಿಬಲ ಇರುವವರದ್ದೇ ಪರೋಕ್ಷ ಆಳ್ವಿಕೆ

‘ದಿ ಸ್ಟೇಟ್’ ಸೊಗಡು ಶಿವಣ್ಣನವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಗೌರಿಶಂಕರ್ ಭೇಟಿ ಕುರಿತು ಪ್ರಶ್ನಿಸಿದಾಗ, “ರೀ ಸಾಹೇಬ್ರೇ, ಗ್ರಾಮಾಂತರ ಕ್ಷೇತ್ರದಲ್ಲಿ ದೇವಾಲಯವೊಂದಕ್ಕೆ ಭೇಟಿ ಕೊಟ್ಟಿದ್ದೆ. ಹಂಗೇ ಬರಬೇಕಾದ್ರೆ ಗೌರಿಶಂಕರ್ ಮನೆಗೆ ಹೋಗಿದ್ದೂ ನಿಜ. ಅದಕ್ಕೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ದೇವಾಲಯಕ್ಕೆ ಹೋಗಿದ್ದೋನು ಹಾಗೆ ಅವರ ಮನೆಗೆ ಹೋದೆ, ತಿಂಡಿ ಕೊಟ್ರು, ತಿಂದು ಬಂದೆ. ಸುಮ್ನೆ ಅನುಮಾನ ಯಾಕೆ? ಅಷ್ಟೇ ಅಲ್ಲ, ಇವೊತ್ತು ಎಂಎಲ್‌ಎ ರಫೀಕ್ ಅಹಮದ್ ಕೂಡ ನಮ್ಮನೆಗೆ ದಿಢೀರ್ ಬಂದರು. ತಿಂಡಿ ಕೊಟ್ಟೆವು. ಹಾಗೆ ಗೌರಿಶಂಕರ್ ಭೇಟಿಯೂ ಕೂಡ. ಏನು ಇಲ್ಲರೀ ಸಾಹೇಬ್ರೇ,” ಎಂದು ನಗುನಗುತ್ತಲೇ ಮಾತು ಮುಗಿಸಿದರು.

ಜನಸಂಘದಿಂದ ರಾಜಕೀಯ ಪಟ್ಟುಗಳನ್ನು ಹಾಕಿಕೊಂಡು ಬಂದ ಸೊಗಡು ಶಿವಣ್ಣ, ಇಂದಿನ ಬಿಜೆಪಿಯ ಸ್ಥಿತಿಗತಿ ನೋಡಿ ಬೇಸತ್ತರೇ? ಮೂಲಮನೆಯಲ್ಲಿ ಇವರನ್ನು ಉತ್ತಮವಾಗಿ ನಡೆಸಿಕೊಳ್ಳುತ್ತಿಲ್ಲವೇ? ಜೆಡಿಎಸ್ ಅನಿವಾರ್ಯವಾಯಿತೇ? ಬಿಜೆಪಿಯ ಗ್ರಾಮಾಂತರ ಶಾಸಕ ಬಿ ಸುರೇಶ್‌ ಗೌಡ ಮತ್ತೊಮ್ಮೆ ಗೆದ್ದರೆ ಸಚಿವರಾಗುವುದು ಗ್ಯಾರಂಟಿ; ಅದಕ್ಕೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಅವರನ್ನೇ ಸೋಲಿಸಿಬಿಟ್ಟರೆ ಒಂದೇ ಕಲ್ಲಿಗೆ ಎರಡು ಹಕ್ಕಿಯನ್ನು ಹೊಡೆಯುವ ತಂತ್ರಭಾಗವೇ ಈ ಭೇಟಿ? ಈ ಪ್ರಶ್ನೆಗಳಿಗೆ ಸದ್ಯಕ್ಕಂತೂ ಉತ್ತರ ಸಿಕ್ಕಿಲ್ಲ.

ಮಾಜಿ ಸಚಿವ ಸೊಗಡು ಶಿವಣ್ಣನವರನ್ನು ಸಮರ್ಪಕವಾಗಿ ಬಳಸಿಕೊಂಡು ಎರಡೆರಡು ಗೆಲುವು ಪಡೆಯುವ ಜೆಡಿಎಸ್ ಬಯಕೆ ಈಡೇರಿದರೆ ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯ ಮತ್ತಷ್ಟು ಹೆಚ್ಚಲಿದೆ. ಆದರೆ ಏನೇ ಆದರೂ ಅದು ಸೊಗಡು ಶಿವಣ್ಣ ಅವರ ತೀರ್ಮಾನವನ್ನು ಅವಲಂಬಿಸಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More