ಬಿಸಿಲು ನೆತ್ತಿ ಸುಡುತ್ತಿದೆ. ಭೀಕರ ಬರಕ್ಕೆ ಈ ಭಾಗದ ಭೂಮಿ ಬಾಯ್ತೆರೆದಿದೆ. ಜನ, ಜಾನುವಾರುಗಳು ಹನಿ ನೀರಿಗಾಗಿ ತತ್ವಾರ ಪಡುವಂತಾಗಿದೆ. ಇದನ್ನು ಕಂಡ ವೈದ್ಯೆ, ಬಾಯಾರಿದವರ ದಾಹ ನೀಗಿಸಲು ಟೊಂಕ ಕಟ್ಟಿ ನಿಂತಿದ್ದಾರೆ. ಈ ಮೂಲಕ ಇಲ್ಲಿನ ಜನರ ಪಾಲಿನ ಭಗೀರಥಿ ಎನಿಸಿಕೊಂಡಿದ್ದಾರೆ ಡಾ.ನೀತಾ ಸಾಂಭ್ರಾಣಿ.
ಮುದ್ರಣ ಕಾಶಿಗೆ ನೀರಿನ ಶಾಪ
ಬೇಸಿಗೆ ಆರಂಭವಾದರೆ ಸಾಕು ಮುದ್ರಣ ಕಾಶಿ ಗದಗ ಜಿಲ್ಲೆಗೆ ನೀರಿನ ಸಮಸ್ಯೆ ಎದುರಾಗುತ್ತದೆ. ಲಕ್ಷ್ಮೇಶ್ವರ ತಾಲೂಕು ಸೇರಿದಂತೆ ಜಿಲ್ಲೆಯ ಬಹುತೇಕ ಗ್ರಾಮಗಳಿಗೆ ತುಂಗಭದ್ರಾ ನದಿಯೇ ಜೀವಾಳ. ಆದರೆ ಈ ಬಾರಿ ತುಂಗೆ ಬೇಸಿಗೆಗೂ ಮುನ್ನವೇ ಬತ್ತಿ ಹೋಗಿದ್ದಾಳೆ. ಆದ್ದರಿಂದ ಗದಗ ಜಿಲ್ಲೆಯಾದ್ಯಂತ ನೀರಿನ ಮೂಲವೇ ಇಲ್ಲದಂತಾಗಿದೆ. ಅಂತರ್ಜಲ ಪಾತಾಳಕ್ಕೆ ಕುಸಿದಿರುವುದರಿಂದ ಕೊಳವೆ ಬಾವಿಗಳಿಂದಲೂ ನೀರು ಸಿಗುತ್ತಿಲ್ಲ. ಜಿಲ್ಲೆಯಲ್ಲಿ ನೀರಿಗೆ ಹಾಹಾಕಾರವೇ ಎದ್ದಿದೆ.
ಒಮ್ಮೆ ಕ್ಲಿನಿಕ್ಗೆ ಬಂದ ರೋಗಿಗಳು ನೀರಿಗಾಗಿ ಪಡುತ್ತಿರುವ ಸಂಕಟವನ್ನು ಡಾ.ನೀತಾ ಸಾಂಬ್ರಾಣಿಯವರ ಬಳಿ ಹೇಳಿಕೊಂಡಿದ್ದಾರೆ. ಇದನ್ನು ಅರಿತ ಡಾ.ಸಾಂಬ್ರಾಣಿಯವರು ಲಕ್ಷ್ಮೇಶ್ವರ ತಾಲೂಕು ಪಟ್ಟಣದ ವಿವಿಧ ನಗರಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ನಿತ್ಯ 6 ರಿಂದ 8 ಟ್ಯಾಂಕರ್ ನೀರು ಪೂರೈಸುವುದರ ಮೂಲಕ ಜನರ ದಾಹ ನೀಗಿಸುವ ಕೆಲಸ ಮಾಡುತ್ತಿದ್ದಾರೆ.
ಲಕ್ಷ್ಮೇಶ್ವರ ಪಟ್ಟಣದ ನೀರಿನ ಅವಶ್ಯಕತೆ ಇರುವ ವಾರ್ಡ್ಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಇಬ್ಬರು ಮಂದಿ ಟ್ಯಾಂಕರ್ ನೀರು ಪೂರೈಕೆಯ ನಿರ್ವಹಣೆ ಮಾಡುತ್ತಿದ್ದಾರೆ. ಪ್ರತಿ ದಿನ ಅಂದಾಜು 8 ಟ್ಯಾಂಕರ್ ನೀರು ಪೂರೈಸಲಾಗುತ್ತಿದ್ದು, ಪ್ರತಿ ದಿನಕ್ಕೆ 1100 ವೆಚ್ಚ ತಗುಲುತ್ತಿದ್ದು, ತಿಂಗಳಿಗೆ ಅಂದಾಜು 40,000 ಖರ್ಚು ಮಾಡುತ್ತಿದ್ದಾರೆ. ಲಕ್ಷ್ಮೇಶ್ವರ ತಾಲೂಕು ಹಾಗೂ ಪಟ್ಟಣದ ನಗರಗಳಿಗೆ ನಿತ್ಯ ಅವಶ್ಯವಿರುವಷ್ಟು ನೀರನ್ನು ಪೂರೈಸುತ್ತಿದ್ದಾರೆ. ಈ ಕಾರಣಕ್ಕಾಗಿ ಜನರು ಡಾ.ನೀತಾ ಅವರನ್ನು ಪ್ರೀತಿಯಿಂದ ನೆನೆಯುತ್ತಿದ್ದಾರೆ.