ಚುನಾವಣಾ ಕಣ | ಕೊಡಗಿನಲ್ಲಿ ಬಿಜೆಪಿ ಪ್ರಾಬಲ್ಯ ಮುರಿಯಲಿದೆಯೇ ಕಾಂಗ್ರೆಸ್?

ಈ ಹಿಂದೆ ಕಾಂಗ್ರೆಸ್ ಕೋಟೆಯಾಗಿದ್ದ ಕೊಡಗನ್ನು ಈಗ ಬಿಜೆಪಿಯ ಭದ್ರಕೋಟೆ ಎಂದೇ ಹೇಳಲಾಗುತ್ತದೆ. ಈ ಪ್ರಾಂತದಲ್ಲಿ ಈ ಬಾರಿ ಬಿಜೆಪಿ ಶಾಸಕ ಕೆ ಜಿ ಬೋಪಯ್ಯ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಅರುಣ್ ಮಾಚಯ್ಯ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು, ಕುತೂಹಲ ಮೂಡಿಸಿದೆ

ಮೂರು ಪ್ರಮುಖ ಪಕ್ಷಗಳು ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಹಣಾಹಣೀಗೆ ಸಜ್ಜಾಗಿವೆ. ಜಿಲ್ಲೆಯಲ್ಲಿ ಈ ಮೊದಲು ಮಡಿಕೇರಿ, ಸೋಮವಾರಪೇಟೆ ಮತ್ತು ವೀರಾಜಪೇಟೆ ಎಂಬ ಮೂರು ವಿಧಾನಸಭಾ ಕ್ಷೇತ್ರಗಳಿದ್ದು, ಇದರಲ್ಲಿ ವೀರಾಜಪೇಟೆ ಮೀಸಲು ಕ್ಷೇತ್ರವಾಗಿತ್ತು. 2008ರಲ್ಲಿ ವಿಧಾನಸಭಾ ಕ್ಷೇತ್ರಗಳ ಪುನರ್‌ ವರ್ಗೀಕರಣ ಆದ ನಂತರ ಸೋಮವಾರಪೇಟೆಯನ್ನು ರದ್ದು ಮಾಡಿ, ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ವಿಲೀನಗೊಳಿಸಲಾಯಿತು.

ಕ್ಷೇತ್ರ ಪುನರ್‌ವಿಂಗಡನೆಯ ನಂಥರ ಜಿಲ್ಲೆಯನ್ನು ಬಿಜೆಪಿಯ ಭದ್ರಕೋಟೆ ಎನ್ನಲಾಗುತ್ತಿದ್ದು, ಅದು ಈಗಲೂ ಮುಂದುವರಿದಿದೆ. ಸೋಮವಾರಪೇಟೆಯಲ್ಲಿ ಪ್ರಬಲವಾಗಿರುವ ಜೆಡಿಎಸ್, ಈಗಾಗಲೇ ಮಾಜಿ ಸಚಿವ ಬಿ ಎ ಜೀವಿಜಯ ಅವರನ್ನು ಕಣಕ್ಕಿಳಿಸಿದ್ದು, ಅವರು ಪ್ರಚಾರದಲ್ಲಿ ತೊಡಗಿದ್ದಾರೆ. ಮೊದಲ ಬಾರಿಗೆ 1983ರ ಚುನಾವಣೆಯಲ್ಲಿ ಸೋಮವಾರಪೇಟೆ ಕ್ಷೇತ್ರದಿಂದ ಕಾಂಗ್ರೆಸ್‍ನ ಆಗಿನ ಮುಖ್ಯಮಂತ್ರಿ ಆರ್ ಗುಂಡೂರಾವ್ ಅವರನ್ನು ಸೋಲಿಸಿ ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಅರಣ್ಯ ಸಚಿವರಾದ ಖ್ಯಾತಿಯೂ ಜೀವಿಜಯ ಅವರಿಗಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಜನತಾ ಪರಿವಾರದ ಖಾತೆ ತೆರೆದ ಹೆಗ್ಗಳಿಕೆಯೂ ಇವರದ್ದೇ ಆಗಿದೆ. ಆದರೆ, ನಂತರದ ಬೆಳವಣಿಗೆಗಳಲ್ಲಿ ಇವರು ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅವರ ಎದುರು ಸೋಲನ್ನಪ್ಪಬೇಕಾಯಿತು.

ನಾಲ್ಕು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಕೊಡವ ಜನಾಂಗದ ಎಂ ಪಿ ಅಪ್ಪಚ್ಚು ರಂಜನ್ ಅವರಿಗೆ ಈ ಬಾರಿ ಬಿಜೆಪಿ ಹೈಕಮಾಂಡ್ ಟಿಕೆಟ್ ನಿರಾಕರಿಸಬಹುದು ಎಂಬ ವದಂತಿಗಳು ಹರಡಿದ್ದವು. ಅನೇಕ ಹಿರಿಯ ಬಿಜೆಪಿ ಮುಖಂಡರು ರಂಜನ್ ಅವರ ಸ್ಪರ್ದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪಕ್ಷಕ್ಕೆ ದುಡಿದ ನೂರಾರು ಮುಖಂಡರಿದ್ದು, ಹೊಸ ಮುಖಕ್ಕೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇದೆ. ರಂಜನ್ ವಿರೋಧಿ ಬಣ ಆರೆಸ್ಸೆಸ್ ನಾಯಕರ ಮೂಲಕ ಹೈಕಮಾಂಡ್ ಮೇಲೆ ಸತತ ಒತ್ತಡ ಹೇರುತ್ತಲೇ ಬಂದಿದೆ. ಅತ್ತ ವೀರಾಜಪೇಟೆಯಲ್ಲೂ ಅಲ್ಲಿನ ವಿರೋಧಿ ಗುಂಪು ಹಾಲಿ ಬಿಜೆಪಿ ಶಾಸಕ ಕೆ ಜಿ ಬೋಪಯ್ಯ ಅವರಿಗೆ ಟಿಕೆಟ್ ನೀಡದಂತೆ ಒತ್ತಡ ಹೇರಿತ್ತು.

ರಂಜನ್ ವಿರೋಧಿ ಬಣದ ಪ್ರಕಾರ, ರಂಜನ್ ಅವರು ನಾಲ್ಕು ಬಾರಿ ಆಯ್ಕೆ ಆಗಿದ್ದು ಇವರ ಮತ್ತೊಬ್ಬ ಸಹೋದರ ಎಂ ಪಿ ಸುನಿಲ್ ಸುಬ್ರಮಣಿ ಅವರನ್ನು ಜಿಲ್ಲೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿ ಕಳಿಸಲಾಗಿದೆ. ಮತ್ತೊಬ್ಬ ಸಹೋದರ ಸುಜಾ ಕುಶಾಲಪ್ಪ ಅವರೂ ಜಿಲ್ಲಾ ಬಿಜೆಪಿ ಅದ್ಯಕ್ಷರಾಗಿ ದುಡಿದಿದ್ದು, ವೀರಾಜಪೇಟೆಯಿಂದ ಟಿಕೆಟ್ ಪಡೆಯಲು ಪ್ರಯತ್ನಿಸುತಿದ್ದಾರೆ. ಈ ಹಿನ್ನೆಲೆಯಲ್ಲಿ, ಇತರರಿಗೂ ಅವಕಾಶ ನೀಡಲೇಬೇಕೆನ್ನುವ ವಾದ ಇವರದಾಗಿತ್ತು. ಕೆಲ ಸಮಯ ಅಪ್ಪಚ್ಚು ರಂಜನ್ ಬೆಂಬಲಿಗರಲ್ಲೂ ಟಿಕೆಟ್ ನಿರಾಕರಿಸಬಹುದೆನ್ನುವ ಕಾರಣದಿಂದ ಮಂಕು ಕವಿದಿತ್ತು.

ಆದರೆ, ಬಿಜೆಪಿ ಬಿಡುಗಡೆ ಮಾಡಿದ ಮೊದಲನೇ ಪಟ್ಟಿಯಲ್ಲೆಯೇ ಸ್ಥಾನ ಪಡೆದಿರುವ ರಂಜನ್, ತಮ್ಮ ಬಲವನ್ನು ಸಾಬೀತುಪಡಿಸಿದ್ದಾರೆ. ಅತ್ತ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ ಜಿ ಬೋಪಯ್ಯ ಅವರೂ ಈಗ ಟೆಕೆಟ್ ಬಗ್ಗೆ ನಿರಾಳರಾಗಿದ್ದಾರೆ. ಬಿಜೆಪಿಯ ರಾಷ್ಟ್ರ ಸಹ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರು ಬೋಪಯ್ಯ ಅವರಿಗೆ ಟಿಕೆಟ್‌ ಭರವಸೆ ನೀಡಿದ್ದಾರೆ. ವಾಸ್ತವದಲ್ಲಿ ರಂಜನ್ ಅವರಿಗೆ ಟಿಕೆಟ್ ಖಾತರಿ ಆಗುತಿದ್ದಂತೆಯೇ ಬೋಪಯ್ಯ ಅವರ ಹಾದಿ ಸುಗಮವೇ ಆಗಿತ್ತು. ಏಕೆಂದರೆ, ಬೋಪಯ್ಯ ಅವರು ಗೌಡ ಜನಾಂಗಕ್ಕೆ ಸೇರಿದವರಾಗಿದ್ದು, ವೀರಾಜಪೇಟೆಯಲ್ಲಿ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿರುವವರ ಪೈಕಿ ಮಾಚಿಮಾಡ ರವೀಂದ್ರ ಮುಂಚೂಣಿಯಲ್ಲಿದ್ದಾರೆ. ರಂಜನ್ ಅವರು ಕೊಡವ ಜನಾಂಗಕ್ಕೆ ಸೇರಿರುವುದರಿಂದ ಮತ್ತೋರ್ವ ಕೊಡವ ಅಭ್ಯರ್ಥಿಯನ್ನು ಜಿಲ್ಲೆಯಿಂದ ನಿಲ್ಲಿಸಿರುವುದು ಸಾಧ್ಯವೇ ಇಲ್ಲದ ಮಾತಾಗಿದೆ. ಏಕೆಂದರೆ, ಜಿಲ್ಲೆಯ ಪ್ರಬಲ ಜನಾಂಗದಲ್ಲಿ ಗೌಡ ಜನಾಂಗವೂ ಒಂದಾಗಿದ್ದು, ಪ್ರಾತಿನಿಧ್ಯ ಇಲ್ಲದೆ ಮತ್ತು ಹಾಲಿ ಶಾಸಕರಿಗೆ ಟಿಕೆಟ್ ನೀಡದಿದ್ದರೆ ಜನಾಂಗ ಮುನಿಸಿಕೊಳ್ಳುವ ಸಂಭವವಿತ್ತು.

ವಿರಾಜಪೇಟೆಯಲ್ಲಿ ಜನಪ್ರಿಯ ಆಗಿರುವ ವಕೀಲ ಹಾಗೂ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಸಂಕೇತ್ ಪೂವಯ್ಯ ಅವರು ಭರದಿಂದ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಹಿಂದಿನಿಂದಲೂ ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನದ್ದೇ ಪಾರುಪತ್ಯ ಆಗಿದ್ದು, ಜೆಡಿಎಸ್ ಒಮ್ಮೆಯೂ ಗೆಲುವಿನ ರುಚಿ ನೋಡಿಲ್ಲ. ಕಾಡಾನೆ ಹಾಗೂ ಹುಲಿಗಳ ದಾಳಿಗೆ ನಲುಗಿರುವ ಈ ಕ್ಷೇತ್ರದಲ್ಲಿ ಸಂಕೇತ್ ಅವರು ನೊಂದವರಿಗೆ ನೆರವು ನೀಡುವುದರಲ್ಲಿ ಸದಾ ಮುಂದು. ಆಗಾಗ ಮರುಕಳಿಸುವ ಮಾನವ ಪ್ರಾಣಹಾನಿ ಹಾಗೂ ಜಾನುವಾರುಗಳ ಪ್ರಾಣಹಾನಿ ಪ್ರಕರಣಗಳಲ್ಲಿ ಅರಣ್ಯ ಇಲಾಖೆಗಿಂತಲೂ ಮುಂಚಿತವಾಗಿ, ನೊಂದವರಿಗೆ ತಮ್ಮ ಕಿಸೆಯಿಂದಲೇ 5-10 ಸಾವಿರ ರುಪಾಯಿಗಳ ನೆರವನ್ನೂ ಸಂಕೇತ್ ಮೊದಲಿನಿಂದಲೂ ನೀಡುತ್ತ ಬಂದಿದ್ದು ಜನಾನುರಾಗಿ ಆಗಲು ಕಾರಣ.

ಈ ಕ್ಷೇತ್ರದಲ್ಲಿ ಈ ಹಿಂದೆ ಕಾಂಗ್ರೆಸ್‌ನಿಂದ ಸ್ಪರ್ದಿಸಿದ್ದ ಪ್ರದೀಪ್ ನಿಧನರಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಅರುಣ್ ಮಾಚಯ್ಯ, ಉಸ್ತುವಾರಿ ಸಚಿವ ಸಿ ಸೀತಾರಾಂ ಅವರ ಅಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಮತ್ತು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸುತಿದ್ದಾರೆ.

ಇದನ್ನೂ ಓದಿ : ಚುನಾವಣಾ ಕಣ | ಮಹದಾಯಿ, ಕಳಸಾ ಕಿಚ್ಚಿಗೆ ಬಲಿಯಾಗುವವರು ಯಾರು?

ಮಡಿಕೇರಿ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ವಕೀಲ ಹಾಗೂ ಮಾಜಿ ಅಡ್ವೋಕೇಟ್ ಜನರಲ್ ಎಚ್ ಎಸ್ ಚಂದ್ರಮೌಳಿ ಅವರಿಗೆ ಟಿಕೆಟ್ ನೀಡುವ ಸಾದ್ಯತೆ ಇದೆ. ಬೆಂಗಳೂರನ್ನು ಬಿಟ್ಟು ಕಳೆದೆರಡು ವರ್ಷಗಳಿಂದ ಇಲ್ಲೇ ಬಂದು ನೆಲೆಸಿರುವ ಚಂದ್ರಮೌಳಿ ಅವರು, ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಒಕ್ಕಲಿಗರು ಮತ್ತು ಕೊಡವರನ್ನು ಬಿಟ್ಟರೆ ಜಿಲ್ಲೆಯಲ್ಲಿ ಮೂರನೇ ಅತಿ ದೊಡ್ಡ ಜನಾಂಗ ಇದಾಗಿದೆ. ಇವರಲ್ಲದೆ, ಕೆಪಿಸಿಸಿ ಸದಸ್ಯೆ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ ಪಿ ಚಂದ್ರಕಲಾ ಅವರೂ ಟಿಕೆಟ್‌ಗಾಗಿ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಇನ್ನೋರ್ವ ಮುಖಂಡ ಹಾಗೂ ಇಂಟಕ್‌ನ ರಾಜ್ಯ ನಾಯಕರಾಗಿ ಗುರುತಿಸಿಕೊಂಡಿರುವ ನಾಪಂಡ ಮುತ್ತಪ್ಪ ಅವರೂ ಮುಂಚೂಣಿಯಲ್ಲಿದ್ದು ಈಗಾಗಲೇ ಪ್ರಚಾರವನ್ನೂ ಅರಂಭಿಸಿಬಿಟ್ಟಿದ್ದಾರೆ.

ಬಿಜೆಪಿಯು ವೀರಾಜಪೇಟೆಯಲ್ಲಿ ಯಾರಿಗೆ ಟಿಕೆಟ್ ನೀಡಲಿದೆ ಎಂದು ನೋಡಿಕೊಂಡು ನಂತರ ಒಂದೇ ಬಾರಿಗೆ ಎರಡೂ ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್ ಹಂಚಿಕೆ ಮಾಡಲಿದೆ ಎಂದು ಹೈಕಮಾಂಡ್ ಮೂಲಗಳು ತಿಳಿಸಿವೆ. ಏ.12ರಂದು ಬಿಜೆಪಿಯ ವಿರಾಜಪೇಟೆ ಅಭ್ಯರ್ಥಿಯ ಹೆಸರು ಘೋಷಣೆ ಆಗಲಿದ್ದು, ಎಲ್ಲ ಪಕ್ಷಗಳೂ ಭರದಿಂದ ಪ್ರಚಾರ ಆರಂಬಿಸಿವೆ. ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಟಿಕೆಟ್ ಘೋಷಣೆಯ ನಂತರ ಅಸಮಾಧಾನವೂ ಭುಗಿಲೇಳಲಿದೆ ಎಂದು ಹೇಳಲಾಗಿದೆ. ಅದೇ ರೀತಿ, ವೀರಾಜಪೇಟೆ ಕ್ಷೇತ್ರದಲ್ಲೂ ಬೋಪಯ್ಯ ಅವರಿಗೆ ಟಿಕೆಟ್ ಘೋಷಣೆ ಆದರೆ, ರವೀಂದ್ರ ಮತ್ತು ಸುಜಾ ಕುಶಾಲಪ್ಪ ಬಣ ತಟಸ್ಥವಾಗಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ರಾಜಕೀಯ ವಿದ್ಯಮಾನಗಳು ರಂಗೇರತೊಡಗಿವೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More