ಚುನಾವಣಾ ಕಣ | ಕಲ್ಯಾಣದಲ್ಲಿ ಖೂಬಾಗೆ ಬಿಜೆಪಿ ಟಿಕೆಟ್, ಮರಾಠ ಸಮುದಾಯದ ಬಂಡಾಯ

ಮರಾಠ ಸಮುದಾಯವೇ ನಿರ್ಣಾಯಕ ಆಗಿರುವ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಸಮುದಾಯದ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ಕೊಡುವ ಭರವಸೆ ನೀಡಿ ಮಾತು ಮುರಿದಿದೆ. ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಆ ಸಮುದಾಯದ ಒಲವನ್ನು ಪಡೆದುಕೊಳ್ಳಲು ಪ್ರಯತ್ನಿಸುವ ಸಾಧ್ಯತೆ ಇದೆ

ಚುನಾವಣಾ ಹೊಸ್ತಿಲಲ್ಲಿ ಇದೀಗ ಬಿಜೆಪಿ ಮರಾಠ ಸಮುದಾಯದ ಸಿಟ್ಟಿಗೆ ಸಿಲುಕಿದೆ. ಮರಾಠ ಸಮುದಾಯ ಹಿಂದಿನಿಂದಲೂ ರಾಜ್ಯದಲ್ಲಿ ಬಿಜೆಪಿಯನ್ನೇ ಬೆಂಬಲಿಸುತ್ತ ಬಂದಿದೆ. ಆದರೆ, ಇದೀಗ ಅದೇ ಸಮುದಾಯದ ಬೆಂಬಲವನ್ನು ಕಳೆದುಕೊಳ್ಳುವ ಆತಂಕ ಬಿಜೆಪಿಯನ್ನು ಕಾಡುತ್ತಿದೆ.

ಹೈದರಾಬಾದ್-ಕರ್ನಾಟಕ ಭಾಗದ ಕೆಲ ಕ್ಷೇತ್ರಗಳಲ್ಲಿ ಮರಾಠ ಸಮುದಾಯದವರೇ ನಿರ್ಣಾಯಕರು. ಹೀಗಾಗಿ, ಪರಿವರ್ತನಾ ರ‍್ಯಾಲಿ ಸೇರಿದಂತೆ ತನ್ನ ಪ್ರಚಾರ ಕಾರ್ಯಕ್ರಮಗಳಲ್ಲಿ ಬಿಜೆಪಿ ಮರಾಠ ಸಮುದಾಯದ ನಾಯಕರನ್ನು ವೇದಿಕೆ ಮೇಲೆ ಕರೆಸಿಕೊಂಡು ಹಲವು ಭರವಸೆಗಳನ್ನು ನೀಡಿತ್ತು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಕ್ಷೇತ್ರದಲ್ಲಿ ಮರಾಠ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಡಲಾಗುವುದು ಎನ್ನುವುದೂ ಆ ಭರವಸೆಗಳಲ್ಲೊಂದು. ಈ ಹಿನ್ನೆಲೆಯಲ್ಲಿ, ಮರಾಠ ಸಮುದಾಯದ ಪ್ರಮುಖ ನಾಯಕ ಎಂ ಜಿ ಮುಳೆ ಕಳೆದ ಅಕ್ಟೋಬರ್‌ನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ, ಅಧಿಕೃತ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದಾಗ, ಬಸವಕಲ್ಯಾಣ ಕ್ಷೇತ್ರದ ಟಿಕೆಟ್ ಮಲ್ಲಿಕಾರ್ಜುನ್ ಖೂಬಾ ಪಾಲಾಗಿದೆ. ಇದರಿಂದಾಗಿ ಬಿಜೆಪಿ ವಿರುದ್ಧ ಮರಾಠಿಗರು ಆಕ್ರೋಶ ಹೊರಹಾಕಿದ್ದಾರೆ.

ಬಸವಕಲ್ಯಾಣದಲ್ಲಿ ಕೆಲವರು ಬಂಡಾಯ ಮಾಡುತ್ತಿರುವುದು ನಿಜವಾದರೂ ನಾನು ಎಲ್ಲ ಪಕ್ಷದ ನಾಯಕರೊಂದಿಗೆ ಒಂದಾಗಿ ಹೋಗುತ್ತೇನೆ. ಬೀದರ್ ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯ ಸಾಧಿಸಲಿದೆ. ಬಂಡಾಯವೆಲ್ಲವೂ ಸರಿ ಹೋಗಿ ಕಾಂಗ್ರೆಸ್‌ ಸೋಲಿನ ಮುಖ ಕಾಣಲಿದೆ.
ಮಲ್ಲಿಕಾರ್ಜುನ ಖೂಬಾ, ಮಾಜಿ ಶಾಸಕ

ಕೆಲ ದಿನಗಳ ಹಿಂದೆಯಷ್ಟೇ ಲಿಂಗಾಯತರು ಕಾಂಗ್ರೆಸ್‌ಗೆ ಮತ ನೀಡಬೇಕೆಂದು ಮಾತೆ ಮಾಹದೇವಿ ಕರೆ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಈಗ ಮರಾಠ ಸಮುದಾಯದವರು ಕೂಡ ಬಿಜೆಪಿಗೆ ಪಾಠ ಕಲಿಸಲು ಮುಂದಾಗಿದ್ದಾರೆ. “ನಾವು ಬೀದರ್‌ನಲ್ಲಿ ಹಲವು ವರ್ಷಗಳಿಂದ ಬಿಜೆಪಿಗೆ ಬೆಂಬಲಿಸುತ್ತ ಬಂದಿದ್ದೇವೆ. ಆದರೆ ಬಿಜೆಪಿಯವರು ಕೇವಲ ಭರವಸೆ ನೀಡುತ್ತ ವಂಚಿಸುತ್ತಿದ್ದಾರೆ. ನಮ್ಮ ಸಮುದಾಯಕ್ಕೆ ಏನೂ ಮಾಡಿಲ್ಲ. ಎರಡು ಟಿಕೆಟ್ ಬೇಡಿಕೆ ಇಟ್ಟಿದ್ದ ನಮಗೆ ಒಂದು ಟಿಕೆಟ್ ಕೂಡ ಸಿಗದಂತಾಗಿದೆ. ನಾವು ಬಿಜೆಪಿ ಹಾಗೂ ಯಡಿಯೂರಪ್ಪ ಅವರಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಲಿದ್ದೇವೆ,” ಎಂದು ಮರಾಠ ನಾಯಕರು ಹೇಳಿದ್ದಾರೆ.

ಮರಾಠ ಸಮುದಾಯದ ಮುಖಂಡರು ಸಭೆ ಸೇರಿ ಮುಂದಿನ ಹಾದಿ ಏನೆಂದು ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದೇವೆ. ಟಿಕೆಟ್ ನೀಡುತ್ತೇನೆ ಎಂದು ಹೇಳಿ ಬಿ ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ಅಧ್ಯಕ್ಷರು ವಂಚಿಸಿದ್ದಾರೆ. ಏ.೧೪ರಂದು ಬಿಜೆಪಿ ಮರಾಠ ಸಮುದಾಯದ ಮುಖಂಡರ ಸಭೆ ಕರೆದಿದೆ. ನಂತರ ಈ ಕುರಿತು ತೀರ್ಮಾನಿಸಲಾಗುವುದು.
ಎಂ ಜಿ ಮುಳೆ, ಮರಾಠ ಸಮುದಾಯದ ಮುಖಂಡ
ಇದನ್ನೂ ಓದಿ : ಚುನಾವಣಾ ಕಣ | ಟಿಕೆಟ್ ವಂಚಿತರ ಆಶ್ರಯತಾಣವಾದ ವಿಜಯಪುರ ಜೆಡಿಎಸ್‌

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಬಾರಿ ಬೀದರ್ ಜಿಲ್ಲೆಯ ಕ್ಷೇತ್ರಗಳಲ್ಲಿ ಬಿಜೆಪಿಗೆ ದೊಡ್ಡ ಪ್ರಮಾಣದ ಹೊಡೆತ ಬೀಳುವ ಸಾಧ್ಯತೆ ಇದೆ. ಈ ನಡುವೆ, ಬಿಜೆಪಿ ವಿರುದ್ಧ ತಿರುಗಿಬಿದ್ದ ಮರಾಠ ಸಮುದಾಯವನ್ನು ಕಾಂಗ್ರೆಸ್ ಒಲಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಆದರೆ ಬಸವಕಲ್ಯಾಣ ಕ್ಷೇತ್ರದಲ್ಲಿ ಮರಾಠ ಸಮುದಾಯದ ಮುಖಂಡ ಪ್ರಕಾಶ ಪಾಟೀಲರಿಗೆ ಕಾಂಗ್ರೆಸ್ ಟಿಕೆಟ್ ಸಿಗುವ ಸಾಧ್ಯತೆ ಇದೆ. ಆ ಮೂಲಕ ಬಿಜೆಪಿಯ ಪರವಾಗಿರುವ ಸಮುದಾಯವನ್ನು ತನ್ನ ಕಡೆಗೆ ಸೆಳೆದುಕೊಳ್ಳುವ ಪ್ರಯತ್ನದಲ್ಲಿದೆ ಕಾಂಗ್ರೆಸ್. ಈ ಚುನಾವಣೆಯಲ್ಲಿ ಬೀದರ್ ಪ್ರಾಂತದಲ್ಲಿ ಮರಾಠ ಸಮುದಾಯದ ಮಠಗಳು ನಿರ್ಣಾಯಕ ಆಗಿರುವುದರಿಂದ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಸವಾಲು ಹೆಚ್ಚಲಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More