ಮಧುಗಿರಿಯಲ್ಲಿ ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಜೆಡಿಎಸ್; ಈ ಬಾರಿ ಯಾರು?

೨೦೦೪ರ ಚುನಾವಣೆ ನಂತರ ಒಮ್ಮೆ ಕಾಂಗ್ರೆಸ್ ಮತ್ತೊಮ್ಮೆ ಜೆಡಿಎಸ್ ಪಕ್ಷಗಳು ಆಯ್ಕೆಯಾಗುತ್ತ ಬರುತ್ತಿರುವುದು ಮಧುಗಿರಿ ವಿಶೇಷ. ೬ ಹೋಬಳಿಗಳನ್ನು ಹೊಂದಿರುವ ಮಧುಗಿರಿ ತಾಲೂಕಿನಲ್ಲಿ ಒಕ್ಕಲಿಗ, ನಾಯಕ, ಪರಿಶಿಷ್ಟ ಜಾತಿ (ಎಡಗೈ, ಬಲಗೈ), ಕಾಡುಗೊಲ್ಲ ಸಮುದಾಯ ಹೆಚ್ಚಾಗಿದೆ

ಈ ಹಿಂದೆ ಮಧುಗಿರಿ ತಾಲೂಕು ದಾಳಿಂಬೆಗೆ ಹೆಸರುವಾಸಿಯಾಗಿತ್ತು. ಜೇನುಗೂಡುಗಳಿಂದ ತುಂಬಿತ್ತು. ಇಂಥ ಮದ್ದಗಿರಿ ತೆಲುಗರ ಬಾಯಿಯಲ್ಲಿ ಅಪಭ್ರಂಶವಾಗಿ ಕೆಟ್ಟ ಅರ್ಥ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ, ೧೯೪೨ರಲ್ಲಿ ಆಗಿನ ಉಪವಿಭಾಗಾಧಿಕಾರಿಯಾಗಿದ್ದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್‌ ಮದ್ದಗಿರಿಗೆ ಮಧುಗಿರಿ ಎಂದು ನಾಮಕರಣ ಮಾಡಿದರು. ಸ್ವಾತಂತ್ರ್ಯಪೂರ್ವದಲ್ಲಿ ಈ ಹೆಸರು ಬದಲಾವಣೆಗೊಂಡು ಮೀಸಲು ಕ್ಷೇತ್ರವಾಗಿದ್ದ ಮಧುಗಿರಿ ಈಗ ಸಾಮಾನ್ಯ ಕ್ಷೇತ್ರವಾಗಿದೆ. ತುಮಕೂರು ಜಿಲ್ಲೆಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷ ಆರಂಭದ ಎರಡನೇ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ನಂತರ ಅದೇ ಹೇಳಹೆಸರಿಲ್ಲದಂತೆ ಹೋಗಿದೆ. ಮುಂದೆ ಪ್ರಜಾ ಸೋಷಿಯಲಿಸ್ಟ್ ಪಕ್ಷಕ್ಕೆ ಯಾಕೆ ಇಂತಹ ಹೀನಾಯ ಸ್ಥಿತಿ ಬಂತೆಂಬುದು ಯಕ್ಷಪ್ರಶ್ನೆ.

೧೯೬೨ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದ ಟಿ ಎಸ್ ಶಿವಣ್ಣ ಆಯ್ಕೆಯಾಗಿದ್ದರೆ, ೧೯೬೭ ಮತ್ತು ೧೯೭೨ರಲ್ಲಿ ಕಾಂಗ್ರೆಸ್ ಆಯ್ಕೆಯಾಗಿದೆ. ೧೯೭೮ರಲ್ಲಿ ಗಂಗಹನುಮಯ್ಯ ಕಾಂಗ್ರೆಸ್ (ಐ) ಚಿಹ್ನೆಯಡಿ ಗೆಲುವು ಸಾಧಿಸಿದ್ದರು. ಅವರು ೩೨,೬೮೬ ಅಂದರೆ, ಶೇ.೫೧.೯೭ ಮತ ಪಡೆದಿದ್ದಾರೆ. ೧೯೮೩ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷದಿಂದ ರಾಜವರ್ಧನ ಸ್ಪರ್ಧಿಸಿದ್ದರು. ಇವರು ೨೯,೧೫೯ (ಶೇ.೪೭.೮೭) ಮತ ಪಡೆದು ಆಯ್ಕೆಯಾದರೆ, ಕಾಂಗ್ರೆಸ್‌ನಿಂದ ಗಂಗಹನುಮಯ್ಯ ೨೮,೪೮೩ (ಶೇ.೪೬.೭೬) ಮತ ಗಳಿಸಿ ಎರಡನೇ ಸ್ಥಾನಕ್ಕೆ ತೃಪ್ತಿ ಹೊಂದಬೇಕಾಯಿತು. ೧೯೮೫ ಜನತಾ ಪಕ್ಷದಿಂದ ರಾಜವರ್ಧನ ಮರು ಆಯ್ಕೆಯಾದರು.

೧೯೮೯, ೧೯೯೯ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಿ ಪರಮೇಶ್ವರ್ ಎರಡು ಅವಧಿಗೆ ಆಯ್ಕೆಯಾಗಿದ್ದರು. ೧೯೯೪ರಲ್ಲಿ ಜನತಾ ದಳದಿಂದ ಗಂಗಹನುಮಯ್ಯ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ್ದರು. ಗಂಗಹನುಮಯ್ಯ ಮತ್ತೆ ಆಯ್ಕೆ ಆಗಲೇ ಇಲ್ಲ. ಅವರು ಮತ್ತೆ-ಮತ್ತೆ ಚುನಾವಣೆಯಲ್ಲಿಸ್ಪರ್ಧಿಸಿದರಾದರೂ ಸೋಲನ್ನೇ ಉಂಡರು. ೨೦೦೪ರ ಹೊತ್ತಿಗೆ ಜಿ ಪರಮೇಶ್ವರ್ ಕಾಂಗ್ರೆಸ್‌ನಿಂದ ಎರಡನೇ ಬಾರಿಗೆ ಆಯ್ಕೆಯಾಗಿ, ೪೭,೦೩೯ ಮತ ಪಡೆದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕೆಂಚಮಾರಯ್ಯ ೨೯,೮೨೬ ಮತ ಪಡೆದು ಎರಡನೇ ಸ್ಥಾನ ಗಳಿಸಿದರು.

೨೦೦೮ರಲ್ಲಿ ಮಾಜಿ ಸಚಿವ ಸಿ ಚನ್ನಿಗಪ್ಪ ಪುತ್ರ ಡಿ ಸಿ ಗೌರಿಶಂಕರ್ ಜೆಡಿಎಸ್‌ನಿಂದ ಸ್ಪರ್ಧಿಸಿ ೫೧,೯೭೧ ಮತ ಅಂದರೆ, ಶೇ.೪೧ರಷ್ಟು ಮತ ಪಡೆದು ಆಯ್ಕೆಯಾಗಿದ್ದರು. ಹಿಂದೆ ಜೆಡಿಎಸ್‌ನಲ್ಲಿದ್ದು ಕಾಂಗ್ರೆಸ್ ಪಕ್ಷ ಸೇರಿದ ಕೆ ಎನ್ ರಾಜಣ್ಣ ೫೧,೪೦೮ ಮತ ಪಡೆದು ಗೌರಿಶಂಕರ್‌ಗೆ ತೀವ್ರ ಪೈಪೋಟಿ ನೀಡಿದ್ದರು. ಕೇವಲ ೫೦೦ ಮತಗಳ ಅಂತರದಿಂದ ರಾಜಣ್ಣ ಪರಾಭವ ಹೊಂದಿದ್ದರು. ಮತ್ತೆ ೨೦೧೩ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೆ ಎನ್ ರಾಜಣ್ಣ ೭೫,೦೮೬ ಮತ ಗಳಿಸಿ ಆಯ್ಕೆಯಾಗಿದ್ದರು. ರಾಜಣ್ಣ ೫೦.೫೫ ಮತ ಪ್ರಮಾಣ ದಾಖಲಿಸಿದ್ದರೆ, ಜೆಡಿಎಸ್‌ನ ವೀರಭದ್ರಯ್ಯ ೬೦,೬೫೯ ಮತ ಪಡೆದು ಎರಡನೇ ಸ್ಥಾನದಲ್ಲಿ ಠೇವಣಿ ಉಳಿಸಿಕೊಂಡಿದ್ದರು.

೨೦೦೪ರ ಚುನಾವಣೆಯ ನಂತರ ಒಮ್ಮೆ ಕಾಂಗ್ರೆಸ್ ಮತ್ತೊಮ್ಮೆ ಜೆಡಿಎಸ್ ಪಕ್ಷಗಳು ಆಯ್ಕೆಯಾಗುತ್ತ ಬರುತ್ತಿವೆ. ಆರು ಹೋಬಳಿ ಕೇಂದ್ರಗಳನ್ನು ಹೊಂದಿರುವ ಮಧುಗಿರಿ ತಾಲೂಕಿನಲ್ಲಿ ಒಕ್ಕಲಿಗ, ನಾಯಕ, ಪರಿಶಿಷ್ಟ ಜಾತಿ (ಎಡಗೈ, ಬಲಗೈ) ಮತ್ತು ಕಾಡುಗೊಲ್ಲ ಸಮುದಾಯ ಹೆಚ್ಚಾಗಿದೆ. ಮುಸ್ಲಿಮರು ಕೊಡಿಗೇನಹಳ್ಳಿ ಹೋಬಳಿ ಮತ್ತು ಮಧುಗಿರಿ ಪಟ್ಟಣದಲ್ಲಿ ಹೆಚ್ಚಾಗಿದ್ದು ಇವರ ಮತಗಳು ಯಾರ ಪಾಲಾಗುತ್ತವೋ ಅವರು ಗೆದ್ದು ಬರುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ : ಸೊರಗಿದ ಕಾಂಗ್ರೆಸ್, ಬಿಜೆಪಿ; ಜೆಡಿಎಸ್ ಹುರಿಯಾಳುಗಳ ಕಾರುಬಾರು

ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಳೆದ ಎರಡು ಬಾರಿ ಚುನಾವಣೆಯಿಂದಲೂ ನಿವೃತ್ತ ಅಧಿಕಾರಿ ವೀರಭದ್ರಯ್ಯ ಮತ್ತು ಕೆ ಎನ್ ರಾಜಣ್ಣ ನಡುವೆ ಜಿದ್ದಾಜಿದ್ದಿ ಪೈಪೋಟಿ ಇದೆ. ರಾಜಣ್ಣ ನಾಯಕ ಸಮುದಾಯಕ್ಕೆ ಸೇರಿದ್ದು, ಎರಡು ಹೋಬಳಿಗಳಲ್ಲಿ ನಾಯಕರ ವೋಟುಗಳು ನಿರ್ಣಾಯಕವಾಗಲಿವೆ. ವೀರಭದ್ರಯ್ಯ ಕುಂಚಿಟಿಗ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಏನೇ ಆಗಲಿ ತಮ್ಮ ಸಮುದಾಯದವರೊಬ್ಬರನ್ನು ಶಾಸಕರಾಗಿಸಬೇಕು ಎಂಬ ಕಸರತ್ತು ನಡೆಯುತ್ತಿದೆ.

ಕೆ ಎನ್ ರಾಜಣ್ಣ ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷರಾಗಿದ್ದು, ಸಹಕಾರ ಬ್ಯಾಂಕ್‌ನಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಎಲ್ಲ ಜನಾಂಗದವರಿಗೆ ಕಲ್ಪಿಸಿದ್ದಾರೆ. ಡಿಸಿಸಿ ಬ್ಯಾಂಕ್‌ನಿಂದ ಸಾಲ ಪಡೆದು ಮೃತಪಟ್ಟಿರುವ ಎಲ್ಲ ರೈತರ ಹಣವನ್ನು ಮನ್ನಾ ಮಾಡಿ ಋಣಮುಕ್ತರನ್ನಾಗಿ ಮಾಡಿರುವ ಹೆಗ್ಗಳಿಕೆ ಹೊಂದಿರುವ ರಾಜಣ್ಣ ಈಗಿನ ಚುನಾವಣೆಯಲ್ಲಿ ಮರುಆಯ್ಕೆ ಬಯಸಿದ್ದಾರೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More