ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಮಹಾರಾ‍ಷ್ಟ್ರದಲ್ಲಿ ಗರಿಗೆದರಿದ ಹೋರಾಟ

ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದ ಬಳಿಕ ಮಹಾರಾ‍ಷ್ಟ್ರದಲ್ಲೂ ಹೋರಾಟ ಜೋರಾಗಿದೆ. ಅಲ್ಲಿನ ಸರ್ಕಾರ ಈ ಬಗ್ಗೆ ಮೌನ ವಹಿಸಿದ್ದು, ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೋರಾಟ ಜೋರಾಗುತ್ತಿದ್ದು, ಮಹಾ ಸರ್ಕಾರದ ನಿಲುವಿನ ಬಗ್ಗೆ ಕುತೂಹಲ ಹುಟ್ಟಿದೆ

ಲಿಂಗಾಯತ ಸ್ವತಂತ್ರ ಮತ್ತು ಅಲ್ಪಸಂಖ್ಯಾತ ಧರ್ಮ ಎಂದು ಘೋಷಿಸಲು ಆಗ್ರಹಿಸಿ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಬೀದಿಗಿಳಿದ ಲಿಂಗಾಯತರು, ತಮ್ಮ ಶಕ್ತಿ ಪ್ರದರ್ಶನ ಮಾಡುವ ಮೂಲಕ ಲಿಂಗಾಯತ ಪ್ರತ್ಯೇಕ ಧರ್ಮ ಚಳವಳಿಯ ಕೂಗು ನೆರೆಯ ಮಹಾರಾಷ್ಟ್ರದಲ್ಲಿ ಮಾರ್ದನಿಸುವಂತೆ ಮಾಡಿದರು. ಈ ಹಿಂದೆ ಸೆ.3ರಂದು ಮಹಾರಾಷ್ಟ್ರದ ಲಾತೂರ ಜಿಲ್ಲೆಯಲ್ಲಿ ಸುಮಾರು 5 ಲಕ್ಷ ಜನರು ಸೇರಿ ಲಿಂಗಾಯತ ಸ್ವಂತಂತ್ರ ಧರ್ಮದ ಮಾನ್ಯತೆಗಾಗಿ ಆಗ್ರಹಿಸಿದ್ದರು. ಈ ಕುರಿತು ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದ ಬಳಿಕ ಇದೀಗ ಮತ್ತೆ ಮಹಾರಾಷ್ಟ್ರದಲ್ಲಿ ಲಿಂಗಾಯತರು ಹೋರಾಟ ನಡೆಸಿದ್ದು, ಕುತೂಹಲ ಕೆರಳಿಸಿದೆ.

ಪ್ರತಿಭಟನೆ ವೇಳೆ, “ನಮಗೂ ಕರ್ನಾಟಕ ಸರ್ಕಾರದ ರೀತಿಯಲ್ಲಿ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು,” ಎಂದು ಮಹಾ ಸರ್ಕಾರಕ್ಕೆ ಒಕ್ಕೊರಲಿನಿಂದ ಆಗ್ರಹಿಸಲಾಯಿತು. 103 ವರ್ಷಗಳ ಶತಾಯುಷಿ ಶಿವಲಿಂಗ ಶಿವಾಚಾರ್ಯ ಮಹಾರಾಜ್ ಅವರ ನೇತೃತ್ವದಲ್ಲಿ ನಡೆದ ಈ ಹೋರಾಟಲ್ಲಿ ಮಹಾರಾಷ್ಟ್ರ ಅಲ್ಲದೆ ದೇಶದ ಇತರ ಹಲವು ರಾಜ್ಯಗಳ ಲಿಂಗಾಯತ ಸಮುದಾಯದ ಹಲವಾರು ಧಾರ್ಮಿಕ ಮತ್ತು ಆಧ್ಯಾತ್ಮಿಕ ಗುರುಗಳು ಹಾಗೂ ನಾಯಕರು ಭಾಗವಹಿಸಿದ್ದರು. ಮಹಾರಾಷ್ಟ್ರದಲ್ಲಿನ ಆಲ್ ಇಂಡಿಯಾ ಲಿಂಗಾಯತ್ ಕೋ-ಆರ್ಡಿನೇಷನ್ ಕಮಿಟಿ, ಲಿಂಗಾಯತ ಸಮನ್ವಯ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭಾ ನೇತೃತ್ವದಲ್ಲಿ ಔರಂಗಾಬಾದ್ ವಿಭಾಗೀಯ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಿ ತಮ್ಮ ಸಮುದಾಯಕ್ಕೂ ಪ್ರತ್ಯೇಕ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿದರು. ಈ ವೇಳೆ, ಕರ್ನಾಟಕದಿಂದ ಕೂಡಲಸಂಗಮದ ಜಯಬಸವ ಮೃತ್ಯುಂಜಯ ಮಹಾಸ್ವಾಮೀಗಳು, ಮಾತೆ ಮಹಾದೇವಿ ಪಾಲ್ಗೊಂಡಿದ್ದರು. ಶಿವಸೇನೆ ಸಂಸದ ಚಂದ್ರಕಾಂತ ಶೆರೆ, ಔರಂಗಾಬಾದ ಮಹಾನಗರ ಪಾಲಿಕೆ ಮೇಯರ್ ಅಶೋಕ್ ಹಲವಾರು ನಾಯಕರು ಪಾಲ್ಗೊಂಡು ಪಕ್ಷಾತೀತವಾಗಿ ಹೋರಾಟದಲ್ಲಿ ಧುಮುಕಿದ್ದರು.

ಬಸವಣ್ಣನವರ ಚಿತ್ರಗಳೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಅಸಂಖ್ಯಾತ ಮಂದಿ ಲಿಂಗಾಯತ ಸಮುದಾಯವನ್ನು ಧಾರ್ಮಿಕ ಅಲ್ಪಸಂಖ್ಯಾತ ಸಮೂಹವನ್ನಾಗಿ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ನೀಡಬೇಕೆಂದು ಆಗ್ರಹಿಸಿದರು. ಸರ್ಕಾರವು ಲಿಂಗಾಯತ ಸಮುದಾಯಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡುವ ತನಕ ಇಂಥ ಚಳವಳಿಗಳು ಮುಂದುವರಿಯಲಿದೆ ಎಂದು ಧರಣಿ ವೇಳೆ ಘೋಷಣೆ ಮಾಡಿದ ಶಿವಲಿಂಗ ಶಿವಾಚಾರ್ಯ ಮಹಾರಾಜ್, “ಲಿಂಗಾಯತ ಸಮುದಾಯವು ದೇಶದ ಅತ್ಯಂತ ಹಳೆಯ ಧರ್ಮಗಳಲ್ಲಿ ಒಂದು. ಮಹಾರಾಷ್ಟ್ರದಲ್ಲೇ ನಾಲ್ಕು ಕೋಟಿ ಲಿಂಗಾಯತರು ಮತ್ತು ಅನುಯಾಯಿಗಳು ಇದ್ದಾರೆ. ನಮ್ಮ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಲೇಬೇಕು,” ಎಂದು ಆಗ್ರಹಿಸಿದರು. ಅಲ್ಲದೆ, ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹಾಕಲು ತೀರ್ಮಾನಿಸಿದ್ದಾರೆ.

ಇನ್ನು, ಮಹಾರಾಷ್ಟ್ರ ಸರ್ಕಾರ ಅಲ್ಲಿನ ಲಿಂಗಾಯತ ಹೋರಾಟಗಾರರು ಸಲ್ಲಿಸಿರುವ ಮನವಿಯಲ್ಲಿ ಅನೇಕ ಅಂಶಗಳನ್ನು ಪ್ರಮುಖವಾಗಿ ಉಲ್ಲೇಖಿಸಿದ್ದಾರೆ. “ಸ್ವಾತಂತ್ರ್ಯ ಪೂರ್ವದಿಂದಲೂ ಜನಗಣತಿ ವರದಿಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಎಂದು ಉಲ್ಲೇಖಿಸಿದ್ದು ಕಂಡುಬಂದಿದೆ. ಲಿಂಗಾಯತ ಅವೈದಿಕ ಧರ್ಮವಾಗಿದ್ದು, ಇದರ ಆಚರಣೆ, ಪದ್ಧತಿ, ತಾತ್ವಿಕ ಸಿದ್ಧಾಂತ, ಪರಂಪರೆ ಹಿಂದೂ ಧರ್ಮಕ್ಕಿಂತ ಭಿನ್ನವಾಗಿದೆ. ಹೀಗಾಗಿ, ಲಿಂಗಾಯತ ಒಂದು ಸ್ವತಂತ್ರ ಧರ್ಮ ಎಂಬುದು ಸಿದ್ಧವಾಗುತ್ತದೆ. ಸ್ವತಂತ್ರ ಭಾರತದಲ್ಲಿ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಕಲ್ಪಿಸದೆ ಇರುವುದರಿಂದ ಸಮಾಜಕ್ಕೆ ಸಾಕಷ್ಟು ಅನ್ಯಾಯವಾಗಿದೆ. ದಶಕಗಳ ಬೇಡಿಕೆಯಾಗಿರುವ ಲಿಂಗಾಯತಕ್ಕೆ ಸಂವಿಧಾನಿಕ ಮಾನ್ಯತೆ ನೀಡಿ, ಅಲ್ಪಸಂಖ್ಯಾತರ ಧಾರ್ಮಿಕ ಪ್ರವರ್ಗದಲ್ಲಿ ಸೇರಿಸುವ ಮೂಲಕ ಲಿಂಗಾಯತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು,” ಎಂಬ ಅಂಶಗಳನ್ನು ಅಲ್ಲಿನ ಹೋರಾಟಗಾರರು ಪ್ರಮುಖವಾಗಿ ಪ್ರಸ್ತಾಪ ಮಾಡುತ್ತಿದ್ದಾರೆ. ಇದರ ಜೊತೆಗೆ ಔರಂಗಾಬಾದ್‌ನಲ್ಲಿ ನಡೆದ ಹೋರಾಟದಲ್ಲಿ ನಾಲ್ಕು ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಗಿದ್ದು, ಮುಂದೆಯೂ ಹೋರಾಟ ನಡೆಯಲಿದೆ ಎಂದು ಈ ಮೂಲಕ ಸರ್ಕಾರಕ್ಕೆ ಅಲ್ಲಿನ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

  • ಕರ್ನಾಟಕದಲ್ಲಿ ಲಿಂಗಾಯತ ಧರ್ಮವನ್ನು ಅಲ್ಪಸಂಖ್ಯಾತ ಧರ್ಮವೆಂದು ಪರಿಗಣಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವ ಕರ್ನಾಟಕ ಸರ್ಕಾರದ ಕ್ರಮವನ್ನು ಮಹಾರಾಷ್ಟ್ರದ ಸಮಸ್ತ ಲಿಂಗಾಯತರ ಪರವಾಗಿ ಅಭಿನಂದಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ.
  • ಕರ್ನಾಟಕದಂತೆ ಮಹಾರಾಷ್ಟ್ರದಲ್ಲಿ ಸರ್ಕಾರ ಈ ಕೂಡಲೇ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಘೋಷಿಸಬೇಕು. ಮತ್ತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು.

ನಿರ್ಣಯಗಳು

  • ಲಿಂಗಾಯತ ಸ್ವತಂತ್ರ ಧರ್ಮದ ಕುರಿತು ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಂ ಬಿ ಪಾಟೀಲ, ವಿನಯ ಕುಲಕರ್ಣಿ ಸೇರಿದಂತೆ ಮತ್ತಿತರ ನಾಯಕರ ಚುನಾವಣಾ ಪ್ರಚಾರದಲ್ಲಿ 15 ಸಾವಿರ ಸ್ವಯಂಸೇವಕರು ಸಕ್ರಿಯವಾಗಿ ಪಾಲ್ಗೊಂಡು ಅವರ ಗೆಲುವಿಗೆ ಶ್ರಮಿಸಲಾಗುವುದು.
  • ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಪೂರ್ವಗ್ರಹಪೀಡಿತರಾಗಿ ನೀಡುತ್ತಿರುವ ಹೇಳಿಕೆಗಳನ್ನು ಖಂಡಿಸುತ್ತೇವೆ.
ಇದನ್ನೂ ಓದಿ : ಲಿಂಗಾಯತ ಧರ್ಮ ಸಂಕಟ; ಬೀಸೋ ದೊಣ್ಣೆಯಿಂದ ಪಾರಾಗಲು ಶಾ ಪ್ರಯತ್ನ

ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ದಕ್ಷಿಣ ಭಾಗದ ಹಲವು ಪ್ರದೇಶಗಳಲ್ಲಿ ಲಿಂಗಾಯತ ಸಮುದಾಯದ ಮತಗಳು ನಿರ್ಣಾಯಕ. ದಕ್ಷಿಣ ಸೋಲಾಪುರ, ಇಂಚಲಕರಂಜಿ, ಸಾಂಗ್ಲಿ, ಲಾತೂರ, ಔರಂಗಾಬಾದ್, ಜತ್, ಮಂಗಳವೇಡೆ, ಅಕ್ಕಲಕೋಟೆ ಸೇರಿದಂತೆ ವಿವಿಧ ಭಾಗದಲ್ಲಿ ಲಿಂಗಾಯತರು ಚುನಾವಣೆ ವೇಳೆ ಪ್ರಾಬಲ್ಯ ಹೊಂದಿದ್ದಾರೆ. ಅದರಲ್ಲೂ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಜಿಲ್ಲೆಗಳಲ್ಲಿ ಲಿಂಗಾಯತ ಮತದಾರರು ಅಧಿಕವಾಗಿದ್ದು, ಚುನಾವಣೆ ವೇಳೆ ಇವರೇ ನಿರ್ಣಾಯಕ. ಅಲ್ಲಿನ ಲಿಂಗಾಯತರಲ್ಲಿ ಈಗಲೂ ಹೆಚ್ಚಿನವರ ಮಾತೃಭಾಷೆ ಕನ್ನಡವೇ ಆಗಿದೆ. ಹೀಗಾಗಿ, ಕರ್ನಾಟಕದ ಲಿಂಗಾಯತ ಹೋರಾಟ ಮಹಾರಾಷ್ಟ್ರದಲ್ಲಿ ಪರಿಣಾಮ ಬೀರುತ್ತದೆ. ಇದರ ಜೊತೆಗೆ 103 ವರ್ಷಗಳ ಶತಾಯುಷಿ, ಲಾತೂರ ಜಿಲ್ಲೆಯ ಅಹ್ಮದಪುರ ಮಠದ ರಾಷ್ಟ್ರಸಂತ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಮಹಾರಾಷ್ಟ್ರದಲ್ಲಿ ಲಿಂಗಾಯತ ಹೋರಾಟಕ್ಕೆ ಸಾಥ್ ನೀಡಿರುವುದು ಹೋರಾಟಗಾರರಿಗೆ ಆನೆಬಲ ಬಂದಂತಾಗಿದೆ.

ಶ್ರೀಗಳಿಗೆ ಅಲ್ಲಿ ಲಕ್ಷಾಂತರ ಭಕ್ತರಿದ್ದು, ಅವರ ವಿರೋಧ ಕಟ್ಟಿಕೊಳ್ಳಲು ಅಲ್ಲಿನ ಸರ್ಕಾರಗಳು ಹಿಂಜರಿಯುತ್ತವೆ. ಹೀಗಾಗಿ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದ ಬಳಿಕ ಅಲ್ಲಿಯೂ ಹೋರಾಟ ಜೋರಾಗಿದೆ. ಆದರೆ, ಅಲ್ಲಿನ ಸರ್ಕಾರ ಈ ಬಗ್ಗೆ ಮೌನ ವಹಿಸಿದ್ದು, ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More