ವಿಡಿಯೋ ಸ್ಟೋರಿ | ಕುರಿ ದಾನದ ಮೂಲಕ ಅಭ್ಯರ್ಥಿಗೆ ಸಹಾಯ ಮಾಡಿದ ಮತದಾರರು

ಇಂಡಿ ವಿಧಾನಸಭಾ ಕ್ಷೇತ್ರದ ಹಾಲುಮತ ಸಮುದಾಯದವರು ತಮ್ಮ ಪ್ರಿಯ ಚುನಾವಣಾ ಅಭ್ಯರ್ಥಿಗೆ ಈ ಬಾರಿ ಕುರಿಗಳನ್ನು ದಾನ ಮಾಡಿದ್ದಾರೆ. ಚುನಾವಣೆಗೆ ಸ್ಪರ್ಧಿಸಲು ಶಕ್ತರಲ್ಲದವರಿಗೆ, ಖರ್ಚಿಗೆ ಹಣವಿಲ್ಲದವರಿಗೆ ಹೀಗೆ ನೆರವು ನೀಡುವುದು ಇಂಡಿ ವಿಧಾನಸಭಾ ಕ್ಷೇತ್ರದ ಮತದಾರರ ವಾಡಿಕೆ

ರಾಜ್ಯದಲ್ಲಿ ದಿನೇ ದಿನೇ ಚುನಾವಣಾ ಕಾವು ಏರುತ್ತಿದ್ದು, ಹಲವು ಕ್ಷೇತ್ರಗಳು ವಿಭಿನ್ನ ಕಾರಣಗಳಿಂದ ಸುದ್ದಿಯಾಗುತ್ತಿವೆ. ಇತ್ತಿಚಿಗೆ ಬಹುತೇಕ ಮತಕ್ಷೇತ್ರಗಳಲ್ಲಿ ಮತದಾರರಿಗೆ ಮನವೊಲಿಸಿ ಹಣ ಹಂಚುವುದು, ಸೀರೆ ಹಂಚುವುದು ಸೇರಿದಂತೆ ನಾನಾ ಆಮಿಷಗಳನ್ನು ಒಡ್ಡುತ್ತಿರುವುದು ಸಾಮಾನ್ಯ ಎನ್ನುವಂತಾಗಿದೆ. ಆದರೆ, ಇದಕ್ಕೆ ಅಪವಾದ ಎಂಬಂತಿದೆ ವಿಜಯಪುರ ಜಿಲ್ಲೆಯ ಭೀಮಾ ತೀರದ ಇಂಡಿ ಮತಕ್ಷೇತ್ರ.

ಇಂಡಿ ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲ್ ಪರ ಅವರ ಸಮುದಾಯವರೇ ಆದ ಹಾಲುಮತ ಸಮಾಜದವರು 150 ಕುರಿಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ಇಂಡಿ ಮತಕ್ಷೇತ್ರ ಹಾಗೂ ಪಕ್ಕದ ನಾಗಠಾಣ ಮತಕ್ಷೇತ್ರದ ಗ್ರಾಮಗಳ ನೂರಾರು ಜನರು ಹಾಗೂ ಕುರಿಗಾಹಿ ಸಂಘದವರು ಬಿ ಡಿ ಪಾಟೀಲ್ ಅವರಿಗೆ ಕುರಿಗಳನ್ನು ನೀಡಿದ್ದು, ಅವುಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ಚುನಾವಣೆ ಎದುರಿಸುವಂತೆ ಸಲಹೆ ನೀಡಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಯಾವ ಪಕ್ಷದಲ್ಲಿರುತ್ತಾರೋ ಆ ಪಕ್ಷಕ್ಕೆ ತಮ್ಮ ಮತ ಅನ್ನೋದನ್ನು ಸುಳ್ಳಾಗಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿಗೆ ಚುನಾವಣೆಗೆ ಖರ್ಚು ಮಾಡಲು ಹಣವಿಲ್ಲದ ಕಾರಣ ತಮ್ಮ ಸಮುದಾಯದ ಓರ್ವ ನಾಯಕ ಬೆಳೆಯಲಿ ಎನ್ನುವ ಕಾರಣದಿಂದ ಈ ಕುರಿಗಳನ್ನು ನೀಡಿದ್ದು, ಜಿಲ್ಲೆಯ ಜನರಲ್ಲಿ ಕುತೂಹಲ ಮೂಡಿಸುವುದರ ಜೊತೆಗೆ ಹಾಲುಮತ ಸಮಾಜದಲ್ಲಿರುವ ಒಗ್ಗಟ್ಟನ್ನೂ ಬಿಂಬಿಸಿದೆ. ಜಿಲ್ಲೆಯಲ್ಲಿ ಈ ಹಿಂದಿನ ಚುನಾವಣೆಗಳ ಇತಿಹಾಸ ಗಮನಿಸಿದರೆ, ಚುನಾವಣೆಯ ಸಮಯದಲ್ಲಿ ಅಭ್ಯರ್ಥಿಗಳ ಬಳಿ ಖರ್ಚು ಮಾಡಲು ಹಣವಿಲ್ಲದ್ದ ಸಂದರ್ಭದಲ್ಲಿ ಜನರೇ ತಮ್ಮ ಕೈಲಾದ ಸಹಾಯ ಮಾಡಿದ್ದನ್ನು ಕಾಣಬಹುದು. ಪ್ರಚಾರಕ್ಕೆ ಬರುವ ಅಭ್ಯರ್ಥಿಗಳಿಗೆ ಕೈಲಾದಷ್ಟು ಹಣ, ಧಾನ್ಯ ನೀಡಿದ ಉದಾಹರಣೆ ಇದೆ. ಆದರೆ ಇದೇ ಮೊದಲ ಬಾರಿಗೆ ಅಭ್ಯರ್ಥಿಗೆ 150 ಕುರಿಗಳನ್ನು ನೀಡಿ ಚುನಾವಣೆ ಎದುರಿಸುವಂತೆ ಜನರು ಹೇಳಿದ್ದು ಗಮನಾರ್ಹ. ಅಲ್ಲದೆ, ಇಂಡಿ ಕ್ಷೇತ್ರದ ಇತಿಹಾಸದಲ್ಲೇ ಇದೊಂದು ಮೈಲಿಗಲ್ಲಾಗಿದ್ದು, ಚುನಾವಣೆಯಲ್ಲಿ ಹಣಬಲ, ತೋಳ್ಬಲವೇ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ ಎನ್ನುವ ದಿನಗಳಲ್ಲಿ ಈ ರೀತಿ ಜನರೇ ಅಭ್ಯರ್ಥಿ ಖರ್ಚಿಗೆ ಹಣ ನೀಡಿರುವುದು ಎಲ್ಲೆ ಅಚ್ಚರಿಗೆ ಕಾರಣವಾಗಿದೆ.

ನನ್ನ ಕ್ಷೇತ್ರದ ಜೊತೆಗೆ ಬೇರೆ ಕ್ಷೇತ್ರದ ಜನರೂ ನನಗೆ ಅಧಿಕವಾಗಿ ಸಹಾಯ ಮಾಡಿದ್ದಾರೆ. ಎಲ್ಲ ಸಮುದಾಯದವರೂ ಹೆಗಲಿಗೆ ಹೆಗಲು ಕೊಟ್ಟು ಬೆಂಬಲ ನೀಡಿದ್ದಾರೆ. ಹಣದ ರಾಜಕಾರಣದ ಮುಂದೆ ಜನರ ಪ್ರೀತಿಯ ರಾಜಕಾರಣವೇ ಮೇಲು ಎಂಬುದನ್ನು ಇದು ತೋರಿಸಿಕೊಟ್ಟಿದೆ.
ಬಿ ಡಿ ಪಾಟೀಲ್, ಇಂಡಿ ಜೆಡಿಎಸ್ ಅಭ್ಯರ್ಥಿ

ಏ.8ರಂದು ಇಂಡಿ ತಾಲೂಕಿನ ಅಹಿರಸಂಗ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ರೈತರಿಂದ ಸಂಗ್ರಹಿಸಿದ ಕುರಿಗಳನ್ನು ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲ್ ಅವರಿಗೆ ನೀಡಲಾಯಿತು. ಸದ್ಯ ಒಂದು ಕುರಿಯ ಬೆಲೆ ಮಾರುಕಟ್ಟೆಯಲ್ಲಿ 6ರಿಂದ 12 ಸಾವಿರ ರು. ಇದ್ದು, ಜನರು ನೀಡಿರುವ 150 ಕುರಿಗಳನ್ನು ಮಾರಾಟ ಮಾಡಿದರೆ ಅಂದಾಜು 10 ಲಕ್ಷ ರುಪಾಯಿ ಬರಲಿದ್ದು, ಆ ಹಣವನ್ನು ಬಳಿಸಿಕೊಂಡು ಚುನಾವಣೆ ಪ್ರಚಾರ ಮಾಡಲು ಜೆಡಿಎಸ್ ಅಭ್ಯರ್ಥಿ ನಿರ್ಧರಿಸಿದ್ದಾರೆ. ಸದ್ಯ ಈ ಕುರಿಗಳನ್ನು ಇಂಡಿಯ ಹಟ್ಟಿಯೊಂದರಲ್ಲಿ ಸಾಕಲಾಗುತ್ತಿದ್ದು, ಸಂತೆಯ ದಿನಗಳಲ್ಲಿ ಮಾರಾಟ ಮಾಡಲು ಮುಂದಾಗಿದ್ದಾರೆ.

ಈ ಮಧ್ಯೆ, ಬಿ ಡಿ ಪಾಟೀಲ್ ತಮ್ಮ ಸಮಾಜದವರಿಂದ ಕುರಿಗಳನ್ನು ಪಡೆದರೆ ಕೇಸ್ ಹಾಕುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರಂತೆ. ಆದರೆ, “ಇದು ಜನರು ತಾವಾಗೇ ನೀಡುತ್ತಿರುವುದು, ಅವರೆಲ್ಲ ನಮ್ಮ ಸಮಾಜದವರು, ಅಷ್ಟೇ ಅಲ್ಲ, ಕುರಿ ನೀಡಿದ ಬಹುತೇಕರು ನನ್ನ ಪಕ್ಕದ ಮತಕ್ಷೇತ್ರದ ವ್ಯಾಪ್ತಿಗೆ ಬರುತ್ತಾರೆ. ಇದರಿಂದಾಗಿ ನಾನು ಕುರಿ ಪಡೆಯುವುದರಲ್ಲಿ ತಪ್ಪೇನಿಲ್ಲ,” ಎಂದು ಪಾಟೀಲರು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟ ನಂತರ ಏನೂ ಸಮಸ್ಯೆ ಆಗಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಚುನಾವಣಾ ಕಣ | ಕಲ್ಯಾಣದಲ್ಲಿ ಖೂಬಾಗೆ ಬಿಜೆಪಿ ಟಿಕೆಟ್, ಮರಾಠ ಸಮುದಾಯದ ಬಂಡಾಯ

ಜೆಡಿಎಸ್ ಸಮಾವೇಶದ ವೇಳೆ ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದೆ ಅಧಿಕಾರಿಗಳ ಎಚ್ಚರಿಕೆ ಬಗ್ಗೆ ತಿಳಿಸಿದಾಗ, ಕುಮಾರಸ್ವಾಮಿ ಇದರಲ್ಲಿ ಹೇಗೆ ತಪ್ಪಾಗುತ್ತೆ ತಿಳಿಸಿ ಎಂದು ಪ್ರಶ್ನೆ ಮಾಡಿದರು. ಬಿ ಡಿ ಪಾಟೀಲ್ ಮನವರಿಕೆ ಮಾಡಿದ್ದರಿಂದ ಸುಮ್ಮನಾಗಿರುವ ಅಧಿಕಾರಿಗಳು ಸದ್ಯದ ಮಟ್ಟಿಗೆ ಯಾವುದೇ ಕೇಸ್ ಹಾಕಿಲ್ಲ. ಸದ್ಯ ಈ ರೀತಿ ಅಭ್ಯರ್ಥಿಗೆ ಜನರೇ ಕುರಿಗಳನ್ನು ನೀಡಿ, ಅವುಗಳನ್ನು ಮಾರಿ ಬರುವ ಹಣದಿಂದ ಚುನಾವಣೆ ಎದುರಿಸುವಂತೆ ಹೇಳಿರುವುದು ಎಲ್ಲರ ಗಮನ ಸೆಳೆದಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More