ವಿಡಿಯೋ ಸ್ಟೋರಿ | ಸೇತುವೆ ಕಟ್ಟಿಸುವವರೆಗೆ ಈ ಊರಿನ ವೋಟು ಯಾರಿಗೂ ಇಲ್ಲ!

ರಾಯಚೂರು ಜಿಲ್ಲೆಯ ಕಡದರಗಡ್ಡಿ ಗ್ರಾಮದ ಜನತೆಗೆ ನದಿ ದಾಟುವುದೇ ದೊಡ್ಡ ಸಮಸ್ಯೆಯಾಗಿದೆ. ನದಿಗೊಂದು ಸೇತುವೆ ಕಟ್ಟಿಸಿಕೊಡಿ ಎನ್ನುವ ಬೇಡಿಕೆಗೆ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಹೀಗಾಗಿ, ಪ್ರತಿ ಚುನಾವಣೆಯನ್ನೂ ಬಹಿಷ್ಕರಿಸುವುದು ಈ ಗ್ರಾಮಸ್ಥರ ವಾಡಿಕೆಯಾಗಿದೆ

ರಾಯಚೂರು ಜಿಲ್ಲೆಯ ವ್ಯಾಪ್ತಿಗೆ ಬರುವ ನಡುಗಡ್ಡೆ ಪ್ರದೇಶಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಕಳೆದ 2-3 ದಶಕಗಳಿಂದಲೂ ಜನರು ಹೋರಾಟ ಮಾಡುತ್ತಿದ್ದಾರೆ. ಆದರೆ ಆಡಳಿತಾರೂಢ ಸರಕಾರಗಳು ಅವರ ಸಮಸ್ಯೆಗೆ ಸ್ಪಂದಿಸಿಲ್ಲ. ಇದಕ್ಕೆ ಜೀವಂತ ಸಾಕ್ಷಿ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ವ್ಯಾಪ್ತಿಗೆ ಬರುವ ಕಡದರಗಡ್ಡಿ, ಯರಗೋಡಿ, ಕರಕಲ್ ಗಡ್ಡಿ, ಮ್ಯಾದರಗಡ್ಡಿ, ಹಂಚಿನಾಳ, ಜಲದುರ್ಗ ಗ್ರಾಮಗಳು.

ಈ ಗ್ರಾಮಗಳಲ್ಲಿ ಇಂದಿಗೂ ಶುದ್ಧ ಕುಡಿಯುವ ನೀರಿನ ಘಟಕಗಳು, ಸುಸಜ್ಜಿತ ರಸ್ತೆಗಳು, ಸಮರ್ಪಕ ವಿದ್ಯುತ್ ವ್ಯವಸ್ಥೆ, ಚರಂಡಿ ವ್ಯವಸ್ಥೆ, ಸಮರ್ಪಕ ಕುಡಿಯುವ ನೀರಿನ ಪೂರೈಕೆ, ಸರಕಾರಿ ಬಸ್ ಸೌಲಭ್ಯಗಳಿಲ್ಲ. ಅಲ್ಲದೆ, ಕೇಂದ್ರ ಮತ್ತು ರಾಜ್ಯ ಸರಕಾರದ ಯಾವುದೇ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಇದರ ಪರಿಣಾಮ ನಡುಗಡ್ಡೆ ವಾಸಿಗಳು ನಿತ್ಯ ಸಮಸ್ಯೆಗಳ ಜೊತೆಗೇ ಜೀವನ ಸಾಗಿಸುತ್ತಾರೆ. ಆದರೆ ಈ ಬಾರಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು, ಜನಪ್ರತಿನಿಧಿಗಳಿಗೆ ಮತ್ತು ಆಡಳಿತ ವ್ಯವಸ್ಥೆಗೆ ತಕ್ಕ ಪಾಠ ಕಲಿಸುವುದಕ್ಕೆ ಚುನಾವಣೆ ಬಹಿಷ್ಕಾರಕ್ಕೆ ಸಿದ್ದಗೊಂಡಿದ್ದಾರೆ.

ಕಳೆದ ಮೂವತ್ತು ವರ್ಷಗಳಿಂದ ಕಡದರಗಡ್ಡಿಯಿಂದ ಗೊಂತಗೋಳಕ್ಕೆ ತೆರಳುವ ದಾರಿಯಲ್ಲಿ ಬರುವ ನದಿಗೆ ಸೇತುವೆ ನಿರ್ಮಾಣ ಮಾಡುವಂತೆ ಹೋರಾಟ ಮಾಡುತ್ತಿದ್ದೇವೆ. ಆದರೆ ನಮ್ಮ ಹೋರಾಟಕ್ಕೆ ಯಾರೂ ಸ್ಪಂದಿಸಿಲ್ಲ. ತುರ್ತು ಪರಿಸ್ಥಿತಿ ಬಂದಾಗ ಕಷ್ಟವಾಗುತ್ತಲೇ ಇದೆ. ಇಲ್ಲಿ ಸೇತುವೆ ಕಟ್ಟಿಕೊಡುವ ಭರವಸೆ ನೀಡಿದರೆ ಚುನಾವಣೆಯಲ್ಲಿ ಮತ ಹಾಕುತ್ತೇವೆ, ಇಲ್ಲದಿದ್ದರೆ ಇಲ್ಲ.
ಹುಲುಗಪ್ಪ, ಕಡದರಗಡ್ಡಿ ನಿವಾಸಿ

ನಡುಗಡ್ಡೆಯ ಪ್ರದೇಶದಲ್ಲಿ ಬರುವ ಕಡದರಗಡ್ಡಿ ಗ್ರಾಮದಲ್ಲಿ ಸುಮಾರು 2 ಸಾವಿರ ಜನಸಂಖ್ಯೆ ಇದೆ. ಹಲವು ವರ್ಷಗಳಿಂದ ಈ ಗ್ರಾಮದ ಜನರು ಸೇತುವೆ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸೇತುವೆ ಇನ್ನೂ ನಿರ್ಮಾಣವಾಗಿಲ್ಲ. ನಿತ್ಯ ನದಿನೀರಿನಲ್ಲಿ ಜಲಚರಗಳ ಅಪಾಯದ ಮಧ್ಯೆ ವಯೋವೃದ್ಧರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ನದಿ ದಾಟುತ್ತಿದ್ದಾರೆ. ಅಲ್ಲದೆ, ತೆಪ್ಪದಲ್ಲಿ ನದಿ ದಾಟುತ್ತಿರುವುದು ನೀರು ಹೆಚ್ಚಾದಾಗ ಅಪಾಯ ಖಂಡಿತ. ಹೀಗಾಗಿ ಗೊಂತಗೊಳದಿಂದ ಕಡದರಗಡ್ಡಿಗೆ ಸೇತುವೆ ನಿರ್ಮಿಸುವಂತೆ ಒತ್ತಾಯವಿದೆ. ನಡುಗಡ್ಡೆ ಜನರ ಬೇಡಿಕೆಗೆ ಸರ್ಕಾರ ಗಮನ ಕೊಡದೆ ಇದ್ದಾಗ 2016ರಲ್ಲಿ ನಡೆದ ತಾಲೂಕು ಪಂಚಾಯಿತಿ ಉಪ ಚುನಾವಣೆ ಬಹಿಷ್ಕಾರ ಮೂಲಕ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಸಾರ್ವತ್ರಿಕ ಚುನಾವಣೆಯನ್ನು ಬಹಿಷ್ಕರಿಸಿ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿಯಲು ಒಕ್ಕೊರಲಿನ ನಿರ್ಧಾರ ಕೈಗೊಂಡಿದ್ದಾರೆ.

ಕಡದರಗಡ್ಡಿಯ ನಾಗರಿಕರು ತಮ್ಮ ಜೀವನಾಂಶದ ವಸ್ತುಗಳು, ಆಸ್ಪತ್ರೆ ಸೇರಿದಂತೆ ಎಲ್ಲದಕ್ಕೂ ಲಿಂಗಸುಗೂರು ಅಥವಾ ಗುರುಗುಂಟ ಪಟ್ಟಣಗಳನ್ನು ಅವಲಂಬಿಸಿದ್ದಾರೆ. ಸೇತುವೆ ನಿರ್ಮಾಣಗೊಂಡರೆ ಗೊಂತಗೋಳ ಮಾರ್ಗವಾಗಿ ಲಿಂಗಸುಗೂರು ತೆರಳಲು 15 ಕಿಮೀ ಆಗುತ್ತದೆ. ಗೊಂತಗೋಳ ಮೂಲಕ ಗುರುಗುಂಟಕ್ಕೆ ತೆರಳಲು ಸುಮಾರು 20 ಕಿಮೀ ಆಗುತ್ತದೆ. ಆದರೆ ಸೇತುವೆ ಇಲ್ಲದ ಪರಿಣಾಮ 35 ಕಿಮೀ ಕ್ರಮಿಸಬೇಕಾದ ಪರಿಸ್ಥಿತಿ ಇದೆ.

ಈ ಸೇತುವೆ ನಿರ್ಮಾಣವಾದರೆ ಕಡದರಗಡ್ಡಿ ಗ್ರಾಮಕ್ಕೆ ಮಾತ್ರವಲ್ಲದೆ ನಡುಗಡ್ಡೆ ಪ್ರದೇಶದ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳಿಗೆ ಅನುಕೂಲವಾಗುತ್ತದೆ. ಆದರೆ, ಸರ್ಕಾರ ನಡುಗಡ್ಡೆಯ ವಾಸಿಗಳ ಆಳಲು ಕೇಳಿಸಿಕೊಂಡಿಲ್ಲ. ಹೀಗೆ ಚುನಾವಣೆ ಬಹಿಷ್ಕರಿಸುವುದರಿಂದ ಸೇತುವೆ ಆಗುವ ನಿರೀಕ್ಷೆಯೂ ಜನರಲ್ಲಿ ಇಲ್ಲ. ಆದರೆ ತಮ್ಮ ನೋವಿಗೆ ಸ್ಪಂದಿಸದ ಜನಪ್ರತಿನಿಧಿಗಳಿಗೆ ಯಾಕೆ ಮತ ಹಾಕಬೇಕು ಎನ್ನುವ ಆಕ್ರೋಶ ಕಡದರಗಡ್ಡಿ ಜನತೆಯದು.

ಶಾಲಾ-ಕಾಲೇಜಿಗೆ ತೆರಳಬೇಕಾದರೆ ನೀರಿನಲ್ಲಿ ಜೀವಭಯದಲ್ಲೇ ನಡೆದುಕೊಂಡು ಹೋಗುತ್ತೇವೆ. ಅದಕ್ಕಾಗಿಯೇ ನಮಗೆ ಸೇತುವೆ ಮಾಡಿಕೊಡಿ ಎಂದು ಜಿಲ್ಲಾಧಿಕಾರಿ, ಶಾಸಕರು, ಸಂಸದರು, ಸಚಿವರು, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದೇವೆ. ಆದರೂ ನಮಗೆ ಸೇತುವೆ ನಿರ್ಮಾಣ ಮಾಡಿಕೊಡುತ್ತಿಲ್ಲ.
ಆದೇಪ್ಪ, ಗ್ರಾಮದ ಯುವಕ
ಇದನ್ನೂ ಓದಿ : ವಿಡಿಯೋ ಸ್ಟೋರಿ | ಬಸವಣ್ಣನ ಜನ್ಮಸ್ಥಳ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರದ ಬೇಡಿಕೆ

ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಗಳ ಸಾಲಿಗೆ ಸೇರಿದ ರಾಯಚೂರು ಅಭಿವೃದ್ಧಿಗೆ ಹಲವು ಅನುದಾನಗಳನ್ನು ಮೀಸಲಿಡಲಾಗಿದೆ. ಹಿಂದುಳಿದ ಪ್ರದೇಶಗಳ ಮೂಲ ಸೌಲಭ್ಯಕ್ಕೆಂದು ಕೋಟ್ಯಂತರ ರೂಪಾಯಿ ಅನುದಾನ ಪ್ರತಿವರ್ಷ ಬಿಡುಗಡೆ ಆಗುತ್ತಲೇ ಇದೆ. ಹಾಗಿದ್ದರೂ ಸಮಸ್ಯೆಗಳು ಉಳಿದಿದ್ದು, ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಹಾಗೇ ಇದೆ. ದಾಖಲೆಗಳಲ್ಲಿ ಮಾತ್ರ ಅಭಿವೃದ್ಧಿ ಮಾಡಿ ಅನುದಾನಗಳನ್ನು ಭ್ರಷ್ಟರು ಕೊಳ್ಳೆಹೊಡೆಯುತ್ತಿರುವುದೂ ಇದಕ್ಕೆ ಮುಖ್ಯ ಕಾರಣ ಎಂಬುದು ಗ್ರಾಮಸ್ಥರ ಆಕ್ರೋಶ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More