ಬಿಜೆಪಿ ವಿರುದ್ಧ ನಿಜಕ್ಕೂ ಬಂಡಾಯ ಏಳಲಿದ್ದಾರೆಯೇ ಸೀಮಾ ಮಸೂತಿ?

ಮುಂಬರುವ ಚುನಾವಣೆಯಲ್ಲಿ ವಿನಯ್ ಕುಲಕರ್ಣಿ ಅವರನ್ನು ಹೇಗಾದರೂ ಮಾಡಿ ಸೋಲಿಸಲು ಕಮಲ ಪಡೆ ಪ್ರಯತ್ನ ನಡೆಸಿದೆ. ಹೀಗಾಗಿ ಕಳೆದೆರಡು ಬಾರಿ ಬಿಜೆಪಿ ಸ್ಪರ್ಧಿಯಾಗಿದ್ದ ಸೀಮಾ ಮಸೂತಿಗೆ ಕೊಕ್ ನೀಡಿ, ಅಮೃತ್ ದೇಸಾಯಿಗೆ ಮಣೆ ಹಾಕಿದೆ. ಇದರಿಂದಾಗಿ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ

ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ವಿಚಾರ ಹೊಸ ಅಲೆ ಸೃಸ್ಟಿಸಿದೆ‌. ಪ್ರತ್ಯೇಕ ಧರ್ಮ ವಿಚಾರ ಹೋರಾಟದಲ್ಲಿ ಸಚಿವರಾದ ಎಂ ಬಿ ಪಾಟೀಲ್, ವಿನಯ್ ಕುಲಕರ್ಣಿ ಹಾಗೂ ಬಸವರಾಜ್ ಹೊರಟ್ಟಿ ಮುಂಚೂಣಿ ನಾಯಕರು‌. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಕಮಲ ಮತಗಳನ್ನು ಬೇಟೆಯಾಡಬಹುದೆಂಬ ಆತಂಕ ಬಿಜೆಪಿ ವಲಯದಲ್ಲಿ ಸೃಷ್ಟಿಯಾಗಿದೆ. ಹೀಗಾಗಿ ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವ ಕುದುರೆಗಳತ್ತ ಬಿಜೆಪಿ ಮುಖ ಮಾಡಿದೆ. ಸಚಿವ ವಿನಯ್ ಕುಲಕರ್ಣಿ ಅವರನ್ನು ಹೇಗಾದರೂ ಸೋಲಿಸಲು ಕಮಲ ಪಡೆ ಶತಾಯಗತಾಯ ಪ್ರಯತ್ನಿಸುತ್ತಿರೋದು ಮೇಲ್ನೋಟಕ್ಕೆ ಕಾಣುತ್ತಿದೆ. ಹೀಗಾಗಿ, ಕಳೆದ ಎರಡು ಅವಧಿಯಿಂದ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದ ಸೀಮಾ ಮಸೂತಿಗೆ ಕೊಕ್ ನೀಡಿ, ಅಮೃತ್ ದೇಸಾಯಿಗೆ ಮಣೆ ಹಾಕಿದೆ. ಇದರಿಂದಾಗಿ ಬಿಜೆಪಿಯಲ್ಲಿ ಭಿನ್ನಮತ ಭುಗುಲೆದ್ದಿದೆ.

ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ವಿಚಾರ ಈ ಕ್ಷೇತ್ರದಲ್ಲಿ ಬಿಜೆಪಿ ಹಿನ್ನಡೆಗೆ ಕಾರಣವಾಗಬಹುದೆಂಬ ಲೆಕ್ಕಾಚಾರದ ರಾಜಕಾರಣ ಕಮಲ ಪಡೆಯದ್ದಾಗಿದೆ. ಹೀಗಾಗಿ, ಸದ್ಯ ವಿನಯ್ ಕುಲಕರ್ಣಿ ಅವರನ್ನು ಮಣಿಸಲು ಸಮರ್ಥ ಅಭ್ಯರ್ಥಿ ಹೂಡುವ ಉದ್ದೇಶದಿಂದ ಈ ಕ್ಷೇತ್ರದಲ್ಲಿ 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅಮೃತ್ ದೇಸಾಯಿಗೆ ಬಿಜೆಪಿ ಆಹ್ವಾನ ನೀಡಿದೆ. ಪಕ್ಷದ ಈ ವರ್ತನೆ ಸಹಜವಾಗಿಯೇ ಸೀಮಾ ಅಸಮಾಧಾನಕ್ಕೆ ಕಾರಣವಾಗಿದೆ‌. ಹೀಗಾಗಿ, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಬಂಡಾಯದ ಬಾವುಟ ಹಾರಿಸಲು ಸೀಮಾ ಸಿದ್ಧರಾಗಿದ್ದಾರೆ ಎನ್ನಲಾಗಿದೆ.

2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗೋ ಮೂಲಕ ಜಿಲ್ಲೆಯ ಎರಡನೇ ಮಹಿಳಾ ಶಾಸಕಿ ಹೆಗ್ಗಳಿಕೆಗೆ ಸೀಮಾ ಪಾತ್ರರಾಗಿದ್ದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿನಯ್ ಕುಲಕರ್ಣಿ ವಿರುದ್ಧ 16,896 ಮತ ಪಡೆದು ಹೀನಾಯವಾಗಿ ಸೋತರು. ಆದರೆ ಕಳೆದ ಅವಧಿಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅಮೃತ್ ದೇಸಾಯಿ ಕಡಿಮೆ ಅಂತರದಿಂದ ಸೋಲನುಭವಿಸಿ ವಿನಯ್ ಕುಲಕರ್ಣಿಗೆ ಪ್ರಬಲ ಸ್ಪರ್ಧೆ ಒಡ್ಡಿದರು. ಈ ಕಾರಣದಿಂದ ಅಮೃತ್ ದೇಸಾಯಿಗೆ ಈ ಬಾರಿ ಬಿಜೆಪಿ ಟಿಕೇಟ್ ನೀಡಲು ಮುಂದಾಗಿದೆ. ಇದು ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯಕ್ಕೂ ದಾರಿ‌ ಮಾಡಿಕೊಟ್ಟಿದೆ.

ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಮೂಲ ಹಾಗೂ ನಿಷ್ಠಾವಂತ ಕಾರ್ಯಕರ್ತರ ಕಡಗಣನೆ ಆಗಿದೆ ಎಂದು ಅಸಮಾಧಾನ ಹೊರಹಾಕಿರುವ ಸೀಮಾ, ಬಂಡಾಯಕ್ಕೆ ಸಿದ್ಧವಾಗಿದ್ದಾರೆ. ಈ ಕುರಿತು ಏ.19, 20 ಅಥವಾ 21ರಂದು ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಾನೂ ಕೂಡ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದವಳು. ಹೀಗಾಗಿ ನಾನು ಬಿಜೆಪಿ ಬಿಟ್ಟು ಹೋಗುವ ಪ್ರಶ್ನೇಯೇ ಇಲ್ಲ. ಅದರ ಅವಶ್ಯಕತೆ ಕೂಡ ನನಗೆ ಇಲ್ಲ. ಪಕ್ಷ ಉಚ್ಛಾಟಿಸಿದರೂ, ನಾನು ಪಕ್ಷದ ಬಂಡಾಯ ಅಭ್ಯರ್ಥಿಯಾಗುತ್ತೇನೆ. ಗೆಲುವು ಸಾಧಿಸಿ ಮತ್ತೆ ಬಿಜೆಪಿ ಸೇರುತ್ತೇನೆ.
ಸೀಮಾ ಮಸೂತಿ, ಮಾಜಿ ಶಾಸಕಿ
ಇದನ್ನೂ ಓದಿ : ಧಾರವಾಡ ಗ್ರಾಮೀಣ; ಬಿಜೆಪಿಗೆ ಗೆಲುವಿಗಿಂತ ಟಿಕೆಟ್ ಹಂಚಿಕೆಯದ್ದೇ ತಲೆನೋವು

ತಮಗೆ ಟಿಕೇಟ್ ಕೈತಪ್ಪಿರೋದು ಕೇವಲ ತಮಗಾದ ಅನ್ಯಾಯವಷ್ಟೇ ಅಲ್ಲ, ಪಕ್ಷಕ್ಕೆ ಆದ ದೊಡ್ಡ ಅನ್ಯಾಯ, ಇದನ್ನು ಸರಿಪಡಿಸುವ ಕಾಲ ಮುಗಿದಿದೆ ಅನ್ನೋದು ಸೀಮಾ ಅವರ ಅಸಮಾಧಾನ. ಸೀಮಾ ಮಸೂತಿ ಅವರಿಗೆ ಬಿಜೆಪಿ ಮುಖಂಡರಾದ ಅರವಿಂದ ಏಗನಗೌಡರ, ಸುನೀಲ ಗುಡಿ ಸೇರಿದಂತೆ ಅನೇಕರು ಸಾಥ್ ನೀಡುತ್ತಿದ್ದಾರೆ.

ಮನವೊಲಿಕೆ ಯತ್ನ

ಸೀಮಾ ಮಸೂತಿ ಬಂಡಾಯ ಅಭ್ಯರ್ಥಿಯಾಗುತ್ತಾರೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಮಾಜಿ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಅವರ ನಿವಾಸದಲ್ಲಿ ಸಂಧಾನ ಸಭೆ ಕೂಡ ನಡೆದಿದೆ. ಸೀಮಾ ಹಾಗೂ ಅವರ ಆಪ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಈ ವೇಳೆ, ಅವರ ಮನವೊಲಿಸಲಾಗಿದ್ದು, ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಯಾವುದಾದರೂ ಹುದ್ದೆ ನೀಡುವ ಭರವಸೆ ಕೂಡ ನೀಡಿದ್ದಾರೆನ್ನಲಾಗುತ್ತಿದೆ. ಈ ಸಂಧಾನ ಸಭೆಯ ಪರಿಣಾಮ ಎರಡು ದಿನಗಳಲ್ಲಿ ಹೊರಬೀಳುವ ಸಾಧ್ಯತೆ ಇದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More