ಊರುಕೇರಿ | ಕೊಡಗಿನಲ್ಲಿ ಈಗ ಕುಟುಂಬ ಕ್ರೀಡಾಕೂಟಗಳ ಕಲರವ

ಕೊಡಗು ದೇಶದ ಕ್ರೀಡಾರಂಗಕ್ಕೆ ಅನೇಕ ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿದೆ. ಇಂದು ದೇಶದ ಬಹುತೇಕ ಪ್ರಮುಖ ಹಾಕಿ ತಂಡದಲ್ಲಿ ಕೊಡಗಿನ ಒಬ್ಬರಾದರೂ ಕ್ರೀಡಾಪಟು ಇದ್ದೇ ಇರುತ್ತಾರೆ ಎಂದರೆ ಜಿಲ್ಲೆಯಲ್ಲಿ ಕ್ರೀಡೆಗೆ ಈವರೆಗೆ ನೀಡಿರುವ ಪ್ರಾಮುಖ್ಯತೆಯೇ ಕಾರಣ ಎಂದರೆ ತಪ್ಪಾಗದು

ಮಾರ್ಚ್-ಏಪ್ರಿಲ್ ತಿಂಗಳು ಬಂತೆಂದರೆ ಕೊಡಗಿನಲ್ಲಿ ವಿವಿಧ ದೇವಾಲಯಗಳ ವಾರ್ಷಿಕ ಪೂಜೆ, ರಥೋತ್ಸವ ಮತ್ತು ದರ್ಗಾಗಳ ಉರುಸ್ ನಡೆಯುತ್ತದೆ. ಇವುಗಳ ನಡುವೆಯೇ ಕ್ರೀಡಾಪ್ರೇಮಿಗಳಿಗೆ ರಸದೌತಣವೂ ಇರುತ್ತದೆ. ಇಲ್ಲಿ ಕಳೆದ ೨೦ ವರ್ಷಗಳಿಂದಲೂ ಕೊಡವ ಹಾಗೂ ಗೌಡ ಜನಾಂಗದ ಕುಟುಂಬದ ಕ್ರೀಡಾಕೂಟ ಜನತೆಗೆ ಮನರಂಜನೆ ನೀಡುತ್ತಿದೆ. ಸಾವಿರಾರು ಜನ ಸೇರುವ ಈ ಕ್ರೀಡಾಕೂಟದಲ್ಲಿ ಕುಟುಂಬಗಳ ಸದಸ್ಯರು ಮಾತ್ರ ಆಡಲು ಅವಕಾಶ ಇರುತ್ತದೆ.

ಕೌಟುಂಬಿಕ ಕ್ರೀಡಾಕೂಟವನ್ನು ಮೊದಲು ಆರಂಬಿಸಿದ ಕೀರ್ತಿ ಕೊಡವ ಜನಾಂಗದ ಪಾಂಡಂಡ ಮನೆತನದ ಕುಟ್ಟಪ್ಪ ಅವರದ್ದಾಗಿದೆ. ೧೯೯೭ರಲ್ಲಿ ತಮ್ಮ ಕುಟುಂಬದಲ್ಲಿ ನೂರಾರು ಉತ್ತಮ ಕ್ರೀಡಾಪಟುಗಳು ಇರುವುದನ್ನು ಮನಗಂಡ ಕುಟ್ಟಪ್ಪ ಅವರು, ತಮ್ಮದೇ ಕುಟುಂಬದೊಳಗೆ ಕ್ರೀಡಾಕೂಟವನ್ನೇಕೆ ಏರ್ಪಡಿಸಬಾರದು ಎಂದು ಯೋಚಿಸಿದರು. ಇವರ ಅಲೋಚನೆಗೆ ಸಾಥ್ ನೀಡಿದ ಕುಟುಂಬದ ಇತರ ಹಿರಿಯರು ಸಕಾರಾತ್ಮಕವಾಗಿ ಸ್ಪಂದಿಸಿದ ಹಿನ್ನೆಲೆಯಲ್ಲಿ ಮೊತ್ತಮೊದಲ ಕೊಡವ ಕುಟುಂಬದ ಹಾಕಿ ಕ್ರೀಡಾಕೂಟ ೧೯೯೭ರಲ್ಲಿ ಆಯೋಜನೆ ಆಯಿತು. ಉತ್ತಮ ಆರಂಭ ಕಂಡ ಈ ಕ್ರೀಡಾಕೂಟ ಜಿಲ್ಲೆಯ ಯಶಸ್ವಿ ಕ್ರೀಡಾಕೂಟಗಳಲ್ಲಿ ಒಂದಾಗಿದ್ದು ಮಾತ್ರವಲ್ಲದೆ, ಒಂದು ತಿಂಗಳ ಕಾಲ ನಿತ್ಯವೂ ಸಹಸ್ರಾರು ಕ್ರೀಡಾಪ್ರೇಮಿಗಳಿಗೆ ಹಬ್ಬದ ಅನುಭವವನ್ನು ನೀಡುತ್ತಿದೆ.

ಕೊಡಗು ಹೇಳಿ-ಕೇಳಿ ವೀರಯೋಧರ ಮತ್ತು ಕ್ರೀಡಾಪಟುಗಳ ತವರೂರು. ಸೇನೆಯಂತೆಯೇ ದೇಶದ ಕ್ರೀಡಾರಂಗಕ್ಕೂ ಸಾವಿರಾರು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿದೆ. ಇಂದು ದೇಶದ ಬಹುತೇಕ ಪ್ರಮುಖ ಹಾಕಿ ತಂಡದಲ್ಲಿ ಕೊಡಗಿನ ಒಬ್ಬ ಕ್ರೀಡಾಪಟು ಇದ್ದೇ ಇರುತ್ತಾರೆ ಎಂದು ಧಾರಾಳವಾಗಿ ಹೇಳಬಹುದಾಗಿದೆ. ಇಷ್ಟೊಂದು ಹೆಗ್ಗಳಿಕೆ ಹೊಂದಿರುವ ಜಿಲ್ಲೆಯಲ್ಲಿ ಕ್ರೀಡಾಪ್ರೇಮಿಗಳಿಗೂ ಕೊರತೆ ಏನಿಲ್ಲ. ಜಿಲ್ಲೆಯ ಪ್ರತಿ ಹಳ್ಳಿಯಲ್ಲೂ ಕ್ರೀಡಾ ಪ್ರತಿಭೆಗಳನ್ನು ಕಾಣಬಹುದಾಗಿದೆ.

ಪಾಂಡಂಡ ಕುಟ್ಟಪ್ಪ ಅವರ ಪಾಂಡಂಡ ಕುಟುಂಬ ಆಯೋಜಿಸಿದ್ದ ಮೊತ್ತಮೊದಲ ಹಾಕಿ ಕ್ರೀಡಾಕೂಟದಲ್ಲಿ ೬೦ ಕೊಡವ ಕುಟುಂಬಗಳು ಭಾಗವಹಿಸಿದ್ದು ವರ್ಷವರ್ಷವೂ ಈ ಬೇಸಿಗೆ ಕ್ರೀಡಾಕೂಟ ಜನಪ್ರಿಯತೆ ಗಳಿಸಿಕೊಳ್ಳುತ್ತ ಇಂದು ವಿಶ್ವದ ಅತಿ ದೊಡ್ಡ ಕೌಟುಂಬಿಕ ಕ್ರೀಡಾಕೂಟ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದು, ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೂ ಸೇರ್ಪಡೆಗೊಂಡಿದೆ. ಪ್ರತಿವರ್ಷವೂ ಒಂದು ತಿಂಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ದೇಶಾದ್ಯಂತ ಇರುವ ನೂರಾರು ಹಾಕಿ ಕ್ರೀಡಾಪಟುಗಳು ತವರಿಗೆ ಮರಳಿ ಕೂಟದಲ್ಲಿ ಭಾಗವಹಿಸುತ್ತಾರೆ. ಈ ಕ್ರೀಡಾಕೂಟದಲ್ಲಿ ವಯಸ್ಸಿನ ನಿರ್ಬಂಧ ಇಲ್ಲದಿರುವುದರಿಂದ ೧೨ ವರ್ಷ ವಯಸ್ಸಿನ ಬಾಲಕನಿಂದ ಹಿಡಿದು ೭೫ ವರ್ಷದ ವೃದ್ಧರೂ ಭಾಗವಹಿಸಿದ ನಿದರ್ಶನ ಇದೆ. ಮೊತ್ತಮೊದಲು ೬೦ ತಂಡಗಳು ಭಾಗವಹಿಸಿದ್ದ ಕ್ರೀಡಾಕೂಟದಲ್ಲಿ ೨೦೧೮ರ ಏ.೧೫ರಿಂದ ಮಡಿಕೇರಿ ಸಮೀಪದ ನಾಪೋಕ್ಲಿನಲ್ಲಿ ಆರಂಭಗೊಂಡಿರುವ ಕೌಟುಂಬಿಕ ಕ್ರೀಡಾಕೂಟದಲ್ಲಿ ಬರೋಬ್ಬರಿ ೩೩೩ ತಂಡಗಳು ಭಾಗವಹಿಸುತ್ತಿದ್ದು ಇದು ಒಂದು ನೂತನ ದಾಖಲೆಯೇ ಆಗಿದೆ.

‘ದಿ ಸ್ಟೇಟ್’ನೊಂದಿಗೆ ಮಾತನಾಡಿದ ಕ್ರೀಡಾಕೂಟದ ಉತ್ಸವ ಸಮಿತಿಯ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, "ಈ ಬಾರಿಯ ಕ್ರೀಡಾಕೂಟಕ್ಕೆ ಒಂದು ವರ್ಷದಿಂದಲೇ ಸಿದ್ಧತೆ ಮಾಡಿಕೊಂಡಿದ್ದು, ಭಾಗವಹಿಸುವ ತಂಡಗಳ ಸಂಖ್ಯೆಯನ್ನು ೩೩೩ಕ್ಕೆ ಸೀಮಿತಗೊಳಿಸಲಾಗಿದೆ. ಈ ಬಾರಿ ಕ್ರೀಡಾಕೂಟದಲ್ಲಿ ನಾಪೋಕ್ಲುವಿನ ಮೂರೂ ಹಾಕಿ ಮೈದಾನಗಳನ್ನು ಬಳಸಿಕೊಳ್ಳಲಾಗುತಿದ್ದು, ಇದೇ ಮೊದಲ ಬಾರಿಗೆ ಚಾಂಪಿಯನ್ ಆಗುವ ತಂಡಕ್ಕೆ ಕೊಡವ ವಧುವಿಗೆ ನೀಡಲಾಗುವ ಎಲ್ಲ ಚಿನ್ನಾಭರಣಗಳನ್ನು ನೀಡಲಾಗುವುದಲ್ಲದೆ, ರನ್ನರ್ ಅಪ್ ತಂಡಕ್ಕೆ ಕೊಡವ ವರನಿಗೆ ನೀಡಲಾಗುವ ಚಿನ್ನಾಭರಣಗಳನ್ನು ಕೊಡುಗೆಯಾಗಿ ನೀಡಲಾಗುವುದು. ಅಲ್ಲದೆ, ಮೊದಲ ಎರಡು ತಂಡಗಳ ಆಟಗಾರರಿಗೆ ಕೊಡವ ಸಂಪ್ರದಾಯಿಕ ಪೀಚೆ ಕತ್ತಿಗಳನ್ನು ನೀಡುವ ಜೊತೆಗೆ, ಪ್ರತಿ ತಂಡಕ್ಕೂ ಕೊಡುಗೆಯಾಗಿ ಒಂದು ಪೀಚೆ ಕತ್ತಿಯನ್ನು ನೀಡಲಾಗುವುದು,” ಎಂದರು.

ಕೊಡವ ಕೌಟುಂಬಿಕ ಹಾಕಿ ಕ್ರೀಡಾಕೂಟದಿಂದ ಪ್ರೇರಣೆ ಪಡೆದಿರುವ ಗೌಡ ಜನಾಂಗವೂ ೨೦೦೦ನೇ ಇಸವಿಯಲ್ಲಿ ಗೌಡ ಕೌಟುಂಬಿಕ ಕ್ರಿಕೆಟ್ ಕ್ರೀಡಾಕೂಟವನ್ನು ಆಯೋಜಿಸಿ ಪ್ರತಿವರ್ಷವೂ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಗೌಡ ಜನಾಂಗದ ಈ ವರ್ಷದ ಕ್ರೀಡಾಕೂಟದ ಹೊಣೆಗಾರಿಕೆಯನ್ನು ಚೆರಿಯಮನೆ ಕುಟುಂಬ ವಹಿಸಿಕೊಂಡಿದ್ದು ಇದೇ ೨೦೧೮ರ ಏ.೧೫ರಿಂದ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ೨೦ ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದೆ. ಈ ಕ್ರೀಡಾಕೂಟದಲ್ಲಿ ಸುಮಾರು ೧೨೪ ತಂಡಗಳು ಭಾಗವಹಿಸಲಿವೆ.

ಇದನ್ನೂ ಓದಿ : ಕೊಡಗು ಪ್ರತ್ಯೇಕ ರಾಜ್ಯದ ಬೇಡಿಕೆ ಬಗ್ಗೆ ರಾಜ್ಯ ಬಿಜೆಪಿಯ ಸ್ಪಷ್ಟ ನಿಲುವೇನು?

ಎರಡೂ ಕ್ರೀಡಾಕೂಟಗಳು ಏ.೧೫ರಿಂದಲೇ ಆರಂಭಗೊಂಡಿರುವುದು ಕಾಕತಾಳಿಯವೇ ಆಗಿದ್ದು, ಸಹಸ್ರಾರು ಕ್ರೀಡಾಪ್ರೇಮಿಗಳಿಗೆ ಉತ್ತಮ ಮನರಂಜನೆ ದೊರೆಯಲಿದೆ. ಅಷ್ಟೇ ಅಲ್ಲ, ಅನೇಕ ಎಲೆಮರೆಯ ಕ್ರೀಡಾಪ್ರತಿಭೆಗಳ ಪ್ರದರ್ಶನಕ್ಕೂ ಉತ್ತಮ ಅವಕಾಶ ದೊರೆಯಲಿದೆ.

“ಕೊಡವ ಕೌಟುಂಬಿಕ ಕ್ರೀಡಾಕೂಟಕ್ಕೆ ಸುಮಾರು ೧.೫ ಕೋಟಿ ರುಪಾಯಿ ವೆಚ್ಚವಾಗುತಿದ್ದು, ಇದರಲ್ಲಿ ರಾಜ್ಯ ಸರ್ಕಾರ ೪೦ ಲಕ್ಷ ರುಪಾಯಿ ಅನುದಾನ ನೀಡಲಿದೆ. ಈಗ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿ ಇರುವುದರಿಂದ ಪ್ರತಿವರ್ಷವೂ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಆಯೋಜಿಸಲಾಗುತ್ತಿದ್ದ ಮೆರವಣಿಗೆ ಹಾಗೂ ಕುಶಾಲು ತೋಪು ಹಾರಿಸುವುದನ್ನು ರದ್ದುಪಡಿಸಲಾಗಿದೆ,” ಎಂದು ಅಜಿತ್ ನಾಣಯ್ಯ ತಿಳಿಸಿದರು. ಈ ಕ್ರೀಡಾಕೂಟಕ್ಕೆ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಲೋಕಸಬಾ ಸದಸ್ಯ ನಿಧಿಯಿಂದ ೨೦ ಲಕ್ಷ ರುಪಾಯಿ ಅನುದಾನ ನೀಡಿದ್ದು, ಈ ಮೊತ್ತವನ್ನು ನಾಪೋಕ್ಲು ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದ ಸುತ್ತಲೂ ತಡೆಗೋಡೆ ಮತ್ತು ಗ್ಯಾಲರಿ ನಿರ್ಮಿಸಲು ಬಳಸಲಾಗುವುದೆಂದು ಅವರು ತಿಳಿಸಿದರು. ಒಟ್ಟಿನಲ್ಲಿ ಕೊಡಗಿನಲ್ಲಿ ಈ ಬಿರುಬೇಸಗೆಯ ನಡುವೆ ಕ್ರೀಡಾ ಸಿಂಚನ ಅಗಿರುವುದು ಕ್ರೀಡಾಪ್ರೇಮಿಗಳಲ್ಲಿ ಆಸಕ್ತಿಯನ್ನು ಹೆಚ್ಚಿಸಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More