ರಾಮಣ್ಣ ಲಮಾಣಿ ಅವರ ಮೇಲಿನ ಆರೋಪ ಚುನಾವಣಾ ಕುತಂತ್ರವೇ?

ರಾಮಣ್ಣ ಪರ ಶಿರಹಟ್ಟಿ ಕ್ಷೇತ್ರದಲ್ಲಿ ಉತ್ತಮ ಅಲೆ ಇದ್ದು, ಇವರ ಸ್ಪರ್ಧೆಯಿಂದ ಕಾಂಗ್ರೆಸ್ ಅಭ್ಯರ್ಥಿ ರಾಮಕೃಷ್ಣ ಗೆಲುವು ಕಷ್ಟಸಾಧ್ಯ ಎನ್ನಲಾಗುತ್ತಿದೆ. ಆದರೆ, ಇದೀಗ ಮಹಿಳೆಯೊಬ್ಬಳ ಜೊತೆಗೆ ರಾಮಣ್ಣ ಅವರು ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗುವ ವಿಡಿಯೋ ಬಯಲಾಗಿರುವುದು ಬಿಜೆಪಿಗೆ ಮುಜುಗರವಾಗಿದೆ

ಗದಗ ಜಿಲ್ಲೆಯಲ್ಲಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರ ಏಕೈಕ ಮೀಸಲು ಕ್ಷೇತ್ರ. 2008ರಲ್ಲಿ ಕ್ಷೇತ್ರ ವಿಂಗಡಣೆಯಿಂದಾಗಿ ಮುಂಡರಗಿ ತಾಲೂಕಿನ ಅರ್ಧ ಭಾಗ ಶಿರಹಟ್ಟಿ ಕ್ಷೇತ್ರಕ್ಕೆ ಸೇರಿಸಲಾಯಿತು. ಇದರಿಂದ ಶಿರಹಟ್ಟಿ ಪರಿಶಿಷ್ಟ ಜಾತಿಗೆ ಮೀಸಲಾಯಿತು. ಮೀಸಲು ಕ್ಷೇತ್ರವಾದ ನಂತರ ಪ್ರಥಮ ಪ್ರಯತ್ನದಲ್ಲೇ ಅನೀರಿಕ್ಷಿತ ಎನ್ನುವಂತೆ ಬಿಜೆಪಿಯಿಂದ ರಾಮಣ್ಣ ಲಮಾಣಿ ಜಯ ಸಾಧಿಸಿದರು.

ಆದರೆ ಈ ಕ್ಷೇತ್ರದಲ್ಲಿ ಅಧಿಕೃತವಾಗಿ ಬಿಜೆಪಿ ಅಭ್ಯರ್ಥಿ ಘೋಷಣೆ ಆಗದಿದ್ದರೂ, ಇತ್ತೀಚೆಗೆ ಶಿರಹಟ್ಟಿ ತಾಲೂಕಿನ ಆದ್ರಳ್ಳಿ ತಾಂಡಾಗೆ ಬಿಜೆಪಿ ರಾಜ್ಯಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ಭೇಟಿ ನೀಡಿದ್ದಾಗ, “ಈ ಕ್ಷೇತ್ರದಲ್ಲಿ ರಾಮಣ್ಣ ಲಮಾಣಿ ಅವರನ್ನು 20,000ಕ್ಕೂ ಅಧಿಕ ಮತಗಳಿಂದ ಆರಿಸಿ ಕಳುಹಿಸಿ,” ಎಂದು ಮನವಿ ಮಾಡಿಕೊಂಡಿದ್ದರು. ಈಗಾಗಲೇ ಬಿಜೆಪಿಯಲ್ಲಿ ಭೀಮಸಿಂಗ್‌ ರಾಠೋಡ್‌, ಶಿಗ್ಲಿ ರಾಮಣ್ಣ, ಜಯಶ್ರೀ ಹಳ್ಳೆಪ್ಪನವರ್, ನೀತಾ ಸಾಂಭ್ರಾಣಿ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಬಿ ಎಸ್‌ ಯಡಿಯೂರಪ್ಪನವರು ರಾಮಣ್ಣ ಲಮಾಣಿಯವರ ಹೆಸರು ಹೇಳುವ ಮೂಲಕ ಉಳಿದ ಆಕಾಂಕ್ಷಿಗಳಲ್ಲೂ ಅಸಮಾಧಾನ ಮೂಡಿಸಿದ್ದಾರೆ.‌ ಕಳೆದ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ರಾಮಕೃಷ್ಣ ದೊಡ್ಡಮನಿ ವಿರುದ್ಧ 315 ಮತಗಳ ಅಂತರದಿಂದ ರಾಮಣ್ಣ ಸೋಲುಂಡಿದ್ದರು. ರಾಮಣ್ಣ ಪರ ಕ್ಷೇತ್ರದಲ್ಲಿ ಉತ್ತಮ ಅಲೆ ಇದ್ದು, ಇವರ ಸ್ಪರ್ಧೆಯಿಂದ ಕಾಂಗ್ರೆಸ್ ಅಭ್ಯರ್ಥಿ ರಾಮಕೃಷ್ಣ ಗೆಲುವು ಕಷ್ಟಸಾಧ್ಯ ಎನ್ನುವಂಥ ವಾತಾವರಣವಿದೆ. ಹೀಗಾಗಿ, ಯಡಿಯೂರಪ್ಪ ಘೋಷಣೆಯಿಂದ ಬಿಜೆಪಿ ಆಕಾಂಕ್ಷಿಗಳಲ್ಲಿ ಅಸಮಾಧಾನ ಉಂಟಾದರೆ, ಇತರ ಪಕ್ಷದ ಅಭ್ಯರ್ಥಿಗಳ ನಿದ್ದೆ ಕೆಡಿಸಿದೆ. ಚುನಾವಣಾ ಅಖಾಡದಲ್ಲಿ ರಾಮಣ್ಣ ಲಮಾಣಿ ಮಣಿಸಲು ಏನೆಲ್ಲ ತಂತ್ರಗಾರಿಕೆ ಮಾಡಬಹುದೆಂಬ ಲೆಕ್ಕಾಚಾರದಲ್ಲಿ ಉಳಿದ ಪಕ್ಷದವರು ತೊಡಗಿದ್ದಾರೆ.

ಏ.10ರಂದು ಯಡಿಯೂರಪ್ಪ ಆದ್ರಳ್ಳಿ ತಾಂಡಾದ ಕಾರ್ಯಕ್ರಮದಲ್ಲಿ ರಾಮಣ್ಣ ಲಮಾಣಿ ಹೆಸರು ಘೋಷಿಸಿದ ಮರುದಿನವೇ ಲಮಾಣಿ ಅವರು ಮಹಿಳೆಯೊಂದಿಗೆ ಅಸಭ್ಯ ಸಂಭಾಷಣೆ ನಡೆಸಿದ್ದಾರೆನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿನ ಅಶ್ಲೀಲ ಸಂಭಾಷಣೆ ರಾಮಣ್ಣ ಅಭಿಮಾನಿಗಳ ನೋವಿಗೂ ಕಾರಣವಾಗಿದೆ. ಆದರೆ, ಇದರಲ್ಲಿನ ಧ್ವನಿ ರಾಮಣ್ಣ ಅವರದ್ದು ಹೌದೋ, ಅಲ್ಲವೋ ಎಂಬ ಅನುಮಾನ ವ್ಯಕ್ತವಾಗಿದೆ.

ಆಡಿಯೋದಲ್ಲಿ ಮಹಿಳೆಯೊಬ್ಬರು ಸಹಾಯ ಕೇಳುವ ನೆಪದಲ್ಲಿ ಎಲ್ಲಿ, ಯಾವಾಗ ಸಿಗುತ್ತೀರಿ, ನಾನು ನಿಮ್ಮನ್ನು ಭೇಟಿಯಾಗಬೇಕು ಎಂದೆಲ್ಲ ರಾಮಣ್ಣ ಅವರನ್ನು ಕೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಮಣ್ಣನವರು ಆಡಿದ ಮಾತು ಅಸಭ್ಯವಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಒಬ್ಬರಿಂದೊಬ್ಬರಿಗೆ ಈ ಆಡಿಯೋ ಹರಿದಾಡುತ್ತಿದೆ. ಇದರಿಂದಾಗಿ ಇಡೀ ಕ್ಷೇತ್ರದಲ್ಲಿ ಈ ಕುರಿತೇ ಚರ್ಚೆಯಾಗುತ್ತಿದೆ. ಈ ರಾಸಲೀಲೆಯ ಸಂಭಾಷಣೆ ಆಡಿಯೋ ಇದೀಗ ವಿರೋಧ ಪಕ್ಷದವರಿಗೆ ದಾಳವಾಗಿ ಮಾರ್ಪಟ್ಟಿದೆ.

ಇದನ್ನೂ ಓದಿ : ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮುಂದಿದ್ದರೂ ಬಿಜೆಪಿಯ ಪೈಪೋಟಿಯಂತೂ ಇದೆ
ಮೊಬೈಲ್ ನಲ್ಲಿ ಹರಿದಾಡುತ್ತಿರೋ ಸಂಭಾಷಣೆಯಲ್ಲಿನ ಧ್ವನಿ ನನ್ನದಲ್ಲ. ಕೆಲ ವಿರೋಧಿಗಳು ನನ್ನ ಮೇಲಿನ ಷಡ್ಯಂತ್ರದಿಂದ ಆಡಿಯೋ ಹುಟ್ಟುಹಾಕಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಮಗ್ರ ತನಿಖೆಗಾಗಿ ಹಾಗೂ ನನ್ನ ತೇಜೋವಧೆ ಮಾಡಿದವರ ಮೇಲೆ ಕ್ರಮಕ್ಕಾಗಿ ಆಗ್ರಹಿಸಿ ದೂರು ನೀಡುತ್ತೇನೆ.
ರಾಮಣ್ಣ ಲಮಾಣಿ, ಮಾಜಿ ಶಾಸಕ

ಕ್ಷೇತ್ರದಲ್ಲಿ ಎದುರಾಳಿಯನ್ನು ಸದೆಬಡಿಯಲು ಐದಾರು ವರ್ಷದ ಹಿಂದಿನ ಆಡಿಯೋವನ್ನು ಎದುರಾಳಿಗಳು ಇದೀಗ ವೈರಲ್ ಮಾಡುತ್ತಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಆದರೆ, ಇದರಲ್ಲಿ ಬಿಜೆಪಿಯಲ್ಲಿನ ಕೆಲ ಟಿಕೆಟ್ ಆಕಾಂಕ್ಷಿಗಳ ಕುತಂತ್ರವೂ ಇದೆ ಎನ್ನಲಾಗುತ್ತಿದೆ‌. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶಿರಹಟ್ಟಿ ಕ್ಷೇತ್ರದಲ್ಲಿ ಅಖಾಡ ಸಿದ್ಧವಾಗುವ ಮೊದಲೇ ಆಡಿಯೋ ರಾಜಕಾರಣ ಶುರುವಾಗಿದೆ. ಮುಂಬರುವ ದಿನಗಳಲ್ಲಿ ಇದು ರಾಮಣ್ಣನವರ ರಾಜಕೀಯ ಭವಿಷ್ಯಕ್ಕೆ ಎಷ್ಟರಮಟ್ಟಿಗೆ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More