ಧಾರವಾಡದಲ್ಲಿ ಜಗದೀಶ್ ಶೆಟ್ಟರ್ ಆಪ್ತರಿಗಷ್ಟೇ ಮಣೆ; ಆಕಾಂಕ್ಷಿಗಳ ಆರೋಪ

ಬಿಜೆಪಿಯ ಎರಡನೇ ಪಟ್ಟಿ ಪ್ರಕಟವಾದ ಬೆನ್ನಲ್ಲಿಯೇ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಮ್ಮ ಆಪ್ತ ವರ್ಗದವರಿಗೆ ಟಿಕೆಟು ಕೊಡಿಸಿರುವ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ಪಟ್ಟಿ ಬಿಡುಗಡೆಯ ಬೆನ್ನಲ್ಲಿಯೇ ಭಿನ್ನಮತ ಕೂಡ ಸ್ಫೋಟಗೊಂಡಿದೆ. ಕಮಲ ಅರಳಿಸುವ ಜವಾಬ್ದಾರಿ ಶೆಟ್ಟರ್ ಮೇಲಿದೆ

ಬಿಜೆಪಿ ಪಾಳಯದಲ್ಲಿ ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಎಂದರೆ ಜಗದೀಶ ಶೆಟ್ಟರ್. ಈ ಭಾಗದಲ್ಲಿ ಕಮಲ ಅರಳಿಸುವುದು ಕೂಡ ಇವರ ಜವಾಬ್ದಾರಿ. ಆದರೆ ಶೆಟ್ಟರ್ ಮಾತ್ರ ತವರು ಜಿಲ್ಲೆ ಧಾರವಾಡದಲ್ಲಿ ತಮ್ಮ ಆಪ್ತರಿಗೆ ಟಿಕೆಟ್ ಸಿಗುವಂತೆ ಮಾಡಿ ಬಿಜೆಪಿಯ ಗೆಲುವಿಗೆ ಮುಳುವಾಗಲಿದ್ದಾರೆ ಎಂಬ ಆರೋಪವನ್ನು ಚುನಾವಣೆಯ ಪ್ರಾರಂಭದಲ್ಲಿಯೇ ಎದುರಿಸುತ್ತಿದ್ದಾರೆ.

ಬಿಜೆಪಿಯ ಎರಡನೇ ಪಟ್ಟಿ ಪ್ರಕಟವಾದ ಬೆನ್ನಲ್ಲಿಯೇ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿರುದ್ಧ ಇಂತಹ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ಪಟ್ಟಿ ಬಿಡುಗಡೆಯ ಬೆನ್ನಲ್ಲಿಯೇ ಭಿನ್ನಮತ ಕೂಡ ಸ್ಫೋಟಗೊಂಡಿದೆ. ಧಾರವಾಡ ಜಿಲ್ಲೆಯ 7 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳ ಹೆಸರು ಈಗಗಾಲೇ ಅಂತಿಮಗೊಂಡಿವೆ. ಈ ಪೈಕಿ ಎಲ್ಲ ಕ್ಷೇತ್ರಗಳಲ್ಲಿಯೂ ಶೆಟ್ಟರ್ ಆಪ್ತರಿಗೆ ಟಿಕೆಟ್ ಸಿಕ್ಕಿದೆ. ಮೊದಲ ಪಟ್ಟಿಯಲ್ಲಿ ಮೂರು ಕ್ಷೇತ್ರಗಳ ಹಾಗೂ ಎರಡನೇ ಪಟ್ಟಿಯಲ್ಲಿ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿವೆ. ಇನ್ನು ಹುಬ್ಬಳ್ಳಿ- ಧಾರವಾಡ ಪೂರ್ವ ಹಾಗೂ ಕುಂದಗೋಳ ಕ್ಷೇತ್ರಗಳಿಗೆ ಅಭ್ಯರ್ಥಿಯ ಹೆಸರು ಅಂತಿಮಗೊಳ್ಳಬೇಕಿದೆ. ಹೆಸರು ಅಂತಿಮಗೊಳ್ಳದ ಈ ಎರಡೂ ಕ್ಷೇತ್ರಗಳೊಂದಿಗೆ ಧಾರವಾಡ ಹಾಗೂ ಕಲಘಟಗಿಯಲ್ಲಿ ಬಿಜೆಪಿ ಟಿಕೆಟ್ ಗಾಗಿ ಹೆಚ್ಚಿನ ಪೈಪೋಟಿ ನಡೆದಿತ್ತು.

ಕಲಘಟಗಿಯಲ್ಲಿ ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಆಪ್ತರಲ್ಲೊಬ್ಬರಾದ ಸಿ.ಎಂ. ನಿಂಬಣ್ಣವರ, ಈ ಬಾರಿಯೂ ಬಿಜೆಪಿ ಟಿಕೆಟ್ ನ ಪ್ರಬಲ ಆಕಾಂಕ್ಷಿಯಾಗಿದ್ದರು. ಕಳೆದ ಎರಡು ಬಾರಿ ಸಂತೋಷ್ ಲಾಡ್ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದರು. ಆದರೆ, ಈ ಬಾರಿ ಅನುಕಂಪದ ಅಲೆಯಲ್ಲಿ ಗೆದ್ದು ಬರುವ ವಿಶ್ವಾಸದಲ್ಲಿ ಇದ್ದರು. ಸ್ವಲ್ಪ ಮಟ್ಟಿಗೆ ಅನುಕಂಪ ಕೂಡ ಕ್ಷೇತ್ರದಲ್ಲಿತ್ತು. ಆದರೆ, ಜಗದೀಶ ಶೆಟ್ಟರ್ ತಮ್ಮ ಆಪ್ತ ಮಹೇಶ ಟೆಂಗಿನಕಾಯಿ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹೇಶ ಟೆಂಗಿನಕಾಯಿ ಕಲಘಟಗಿ ಕ್ಷೇತ್ರದವರೇ ಅಲ್ಲ. ಅವರು ಮೂಲತಃ ಹುಬ್ಬಳ್ಳಿಯವರು. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಮಾತ್ರ ಕಲಘಟಗಿ ಕ್ಷೇತ್ರದಲ್ಲಿ ಓಡಾಟ ನಡೆಸಿದ್ದರು. ಈ ಕಾರಣಕ್ಕಾಗಿಯೇ ನೀವು ನಮ್ಮ ಕ್ಷೇತ್ರದವರಲ್ಲ. ನೀವೇಕೆ ಕ್ಷೇತ್ರದಲ್ಲಿ ಓಡಾಡುತ್ತಿದ್ದೀರಿ ಎಂದು ನಿಂಬಣ್ಣವರ ಹಾಗೂ ಅವರ ಬೆಂಬಲಿಗರು ಟೆಂಗಿನಕಾಯಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ, ಮಹೇಶ ಟೆಂಗಿನಕಾಯಿ ಹುಬ್ಬಳ್ಳಿ ಭಾಗದಲ್ಲಿ ಮಾತ್ರ ಗುರುತಿಸಿಕೊಂಡಿದ್ದ ವ್ಯಕ್ತಿ. ಈ ಕ್ಷೇತ್ರದಲ್ಲಿ ಅಷ್ಟೊಂದು ಪ್ರಭಾವಿ ವ್ಯಕ್ತಿಯಾಗಿ ಕಾಣಿಸುವುದಿಲ್ಲ. ಕಲಘಟಗಿ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಮತದಾರರಿಗೆ ಟೆಂಗಿನಕಾಯಿ ಹೆಸರೇ ಗೊತ್ತಿಲ್ಲ ಎಂದು ಮತದಾರರು ಹೇಳುತ್ತಿದ್ದಾರೆ.

ಇನ್ನು ಕಲಘಟಗಿ ಕ್ಷೇತ್ರದಿಂದ ಸ್ಪರ್ಧಿಸಲು ಮನಗುಂಡಿಯ ಅಂಧ ಸ್ವಾಮೀಜಿ ಬಸವಾನಂದ ಸ್ವಾಮೀಜಿ ಕೂಡ ಪ್ರಯತ್ನ ನಡೆಸಿದ್ದರು. ಸ್ವಾಮೀಜಿಗೆ ಹಲವು ಗ್ರಾಮಗಳ ಜನರು ಹಾಗೂ ಹಲವು ಮುಖಂಡರು ಬೆಂಬಲ ಸೂಚಿಸಿದ್ದರು. ಆದರೆ ಈಗ ಕ್ಷೇತ್ರದವರಲ್ಲದ ವ್ಯಕ್ತಿಗೆ ಟಿಕೆಟ್ ನೀಡಿದ್ದು, ಸ್ಥಳೀಯ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಬೇಸರ ತರಿಸಿದೆ, ಈ ಕಾರಣಕ್ಕಾಗಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಜಗದೀಶ ಶೆಟ್ಟರ್ ಹಾಗೂ ಸಂಸದ ಪ್ರಹ್ಲಾದ ಜೋಶಿ ವಿರುದ್ಧ ಮುನಿಸಿಕೊಂಡಿದ್ದಾರೆ. ಇದು ಬಿಜೆಪಿ ಗೆಲುವಿಗೆ ಮಾರಕವಾಗಬಹುದು ಎಂಬ ಮಾತು ಕಲಘಟಗಿಯಲ್ಲಿ ಕೇಳಿ ಬರುತ್ತಿದೆ.

ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಪ್ರತಿನಿಧಿಸುತ್ತಿರುವ ಧಾರವಾಡ ಕ್ಷೇತ್ರದಲ್ಲಿ ಕೂಡ ಶೆಟ್ಟರ್ ತಮ್ಮ ಆಪ್ತ ಅಮೃತ ದೇಸಾಯಿಗೆ ಟಿಕೆಟ್ ಸಿಗುವಂತೆ ಮಾಡಿದ್ದಾರೆ. ಅಮೃತ ದೇಸಾಯಿ ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಆಗ ಬಿಜೆಪಿ ಹಾಗೂ ಕೆಜೆಪಿಗಿಂತಲೂ ಅಮೃತ ಹೆಚ್ಚಿನ ಮತ ಗಳಿಸಿದ್ದರು. ಹೀಗಾಗಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸಂಸದ ಪ್ರಹ್ಲಾದ ಜೋಶಿ ಹಾಗೂ ಶೆಟ್ಟರ್ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ಅಮೃತ ದೇಸಾಯಿಯನ್ನು ಬಿಜೆಪಿಗೆ ಕರೆ ತಂದಿದ್ದರು. ಈಗ ದೇಸಾಯಿಗೆ ಟಿಕೆಟ್ ನೀಡಿದ್ದಕ್ಕೆ ಮೂಲ ಬಿಜೆಪಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಶಾಸಕಿ ಸೀಮಾ ಮಸೂತಿ ಅವರಂತೂ ಪಕ್ಷೇತರರಾಗಿ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ. ಹಲವರು ತೆರೆಯ ಹಿಂದೆ ಬಿಜೆಪಿಯ ಸೋಲಿಗೆ ಟೊಂಕ ಕಟ್ಟಿ ಈಗಿನಿಂದಲೇ ಕೆಲಸ ಮಾಡುತ್ತಿದ್ದಾರೆ ಎಂಬ ಮಾತು ಕ್ಷೇತ್ರದಲ್ಲಿ ಗುಟ್ಟಾಗಿ ಉಳಿದಿಲ್ಲ.

ಟಿಕೆಟ್ ಘೋಷಣೆಯಾಗಿರುವ ಪೈಕಿ ನವಲಗುಂದ ಕ್ಷೇತ್ರದ ಅಭ್ಯರ್ಥಿ ಶಂಕರಪಾಟೀಲ ಮುನೇನಕೊಪ್ಪ, ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಅರವಿಂದ ಬೆಲ್ಲದ ಕೂಡ ಶೆಟ್ಟರ್ ಆಪ್ತ ಬಳಗದವರು. ಇನ್ನು ಹುಬ್ಬಳ್ಳಿ- ಧಾರವಾಡ ಪೂರ್ವ ಹಾಗೂ ಕುಂದಗೋಳ ಕ್ಷೇತ್ರಕ್ಕೆ ಟಿಕೆಟ್ ಅಂತಿಮಗೊಳ್ಳಬೇಕಿದೆ. ಹುಬ್ಬಳ್ಳಿ- ಧಾರವಾಡ ಪೂರ್ವದಲ್ಲಿ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಹಾಗೂ ಶಂಕರ ಬಿಜ್ಜವಾಡ ಟಿಕೆಟ್ ಗಾಗಿ ಪ್ರಯತ್ನಿಸುತ್ತಿದ್ದಾರೆ. ಶಂಕರ ಬಿಜ್ಜವಾಡ ಕಳೆದ ಬಾರಿ ಕೆಜೆಯಿಂದ ಸ್ಪರ್ಧಿಸಿ, ಬಿಜೆಪಿ ಸೋಲಿಗೆ ಕಾರಣವಾಗಿದ್ದರು. ಹೀಗಾಗಿ ಈ ಬಾರಿಯೂ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಯಿದೆ. ಕುಂದಗೋಳ ಕ್ಷೇತ್ರದಲ್ಲಿ ಕೂಡ ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಎಸ್.ಐ.ಚಿಕ್ಕನಗೌಡರ ಟಿಕೆಟ್ ತಪ್ಪಿಸಿ, ಶೆಟ್ಟರ್ ಆಪ್ತ ಬಳಗದ ಎಂ.ಆರ್. ಪಾಟೀಲ್ ಗೆ ಟಿಕೆಟ್ ನೀಡುವ ಸಾಧ್ಯತೆಯಿದೆ. ಎಸ್.ಐ. ಚಿಕ್ಕನಗೌಡರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಂಬಂಧಿಯಾಗಿದ್ದರಿಂದಾಗಿ ಇವರ ಟಿಕೆಟ್ ತಪ್ಪಿಸುವುದು ಸುಲಭದ ಮಾತಲ್ಲ ಎನ್ನಲಾಗುತ್ತಿದೆ. ಆದರೆ, ಬಹುತೇಕ ಶೆಟ್ಟರ್ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ : ಬಿಜೆಪಿ ದ್ವಿತೀಯ ಪಟ್ಟಿಯಲ್ಲಿ ಹಾಲಪ್ಪ, ರೇಣುಕಾಚಾರ್ಯ, ಸಿ ಸಿ ಪಾಟೀಲಗೆ ಟಿಕೆಟ್

ಮಾಜಿ ಸಿಎಂ ಯಡಿಯೂರಪ್ಪ ಕೆಜೆಪಿ ಕಟ್ಟಿದ ಸಂದರ್ಭದಲ್ಲಿ ಅವರ ಬೆನ್ನಿಗೆ ನಿಂತಿದ್ದ ಹಾಗೂ ಅವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದ ಮುಖಂಡರಿಗೆ ಟಿಕೆಟ್ ಸಿಗದಂತೆ ನೋಡಿಕೊಂಡಿರುವ ಜಗದೀಶ ಶೆಟ್ಟರ್ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಗೆಲುವಿನ ಲೆಕ್ಕಾಚಾರಕ್ಕೆ ಭಾರಿ ಪೆಟ್ಟು ನೀಡಲಿದೆ ಎಂದು ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆ.

ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಒಗ್ಗಟ್ಟು ಮೂಡಿಸಿ, ಪ್ರಭಲ ಹಾಗೂ ಸೂಕ್ತ ವ್ಯಕ್ತಿಗೆ ಟಿಕೆಟ್ ಸಿಗುವಂತೆ ಮಾಡಿ ಜಿಲ್ಲೆಯಲ್ಲಿ ಕಮಲ ಅರಳುವಂತೆ ನೋಡಿಕೊಳ್ಳಬೇಕಿದ್ದ ನಾಯಕರೇ ತಮ್ಮ ಸ್ವ ಪ್ರತಿಷ್ಠೆಗಾಗಿ ತಮ್ಮ ಆಪ್ತರಿಷ್ಟರಿಗೆ ಟಿಕೆಟ್ ನೀಡಿದ್ದು ಸರಿಯಲ್ಲ. ಪಕ್ಷ ಸೋತರೂ ಚಿಂತೆಯಿಲ್ಲ. ನಮಗೆ ಆಪ್ತರಾಗಿರಬೇಕು ಎಂಬ ಸಂದೇಶವನ್ನು ಇವರು ನೀಡಲು ಹೊರಟಂತಿದೆಯೇ ಹೊರತು, ಬಿಜೆಪಿ ಗೆಲ್ಲಿಸುವುದು ಇವರ ಉದ್ದೇಶವಲ್ಲ ಎಂದು ಹಲವರು ಬಹಿರಂಗವಾಗಿಯೇ ಹಲವರು ಬೇಸರಿಸಿಕೊಳ್ಳುತ್ತಿದ್ದಾರೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More