ದೇವರಾಜ ಅರಸು ಜೊತೆಗೆ ಶಾಸಕರಾಗಿ ಅವಿರೋಧ ಆಯ್ಕೆಯಾಗಿದ್ದ ಜಿ ಎನ್‌ ಪಾಟೀಲ

ಚುನಾವಣೆಯಲ್ಲಿ ಗೆಲುವಿಗಾಗಿ ಏನೆಲ್ಲ ಕುತಂತ್ರಗಳು ನಡೆಯುತ್ತವೆ ಎಂಬುದನ್ನು ಕೇಳಿದ್ದೇವೆ. ಆದರೆ ರಾಜ್ಯದ ವಿಧಾನಸಭೆ ಚುನಾವಣೆ ಇತಿಹಾಸದಲ್ಲಿ ದೇವರಾಜ ಅರಸು ಹಾಗೂ ಜಿ ಎನ್‌ ಪಾಟೀಲ ಶಾಸಕರಾಗಿ ಅವಿರೋಧ ಆಯ್ಕೆಯಾಗುವ ಮೂಲಕ ಹೊಸ ದಾಖಲೆ ಬರೆದಿದ್ದರು

ಅದು 1962ರ ವಿಧಾನಸಭೆ ಚುನಾವಣೆಯ ಸಮಯ. ಇಡೀ ರಾಜ್ಯದಲ್ಲಿ ದೀನ-ದಲಿತರ ನಾಯಕ ದೇವರಾಜ ಅರಸು ಜನಪ್ರಿಯತೆ ಉತ್ತುಂಗದಲ್ಲಿದ್ದ ಕಾಲವದು. ವಿರೋಧಿಗಳು ಏನೇ ಕಸರತ್ತು ಮಾಡಿದರೂ, ಅರಸು ಅವರಿಗೆ ಟಿಕೆಟ್ ತಪ್ಪಿಸಲು ಸಾಧ್ಯವಾಗಿರಲಿಲ್ಲ. ರಾಜಕೀಯದಲ್ಲಿ ಚತುರ ಎನಿಸಿಕೊಂಡಿದ್ದ ದೇವರಾಜ್ ಅರಸು, ತಮ್ಮ ಟಿಕೆಟ್ ತಪ್ಪಿಸಲು ತಂತ್ರ ಮಾಡುತ್ತಿದ್ದ ವಿರೋಧಿಗಳಿಗೆ ಸರಿಯಾಗೇ ಪಾಠ ಕಲಿಸಿದ್ದರು. ಹುಣಸೂರು ಮತಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗುವ ಮೂಲಕ 1962ರ ಚುನಾವಣೆಯಲ್ಲಿ ದಾಖಲೆ ಬರೆದರು. ಇದೇ ದಾಖಲೆಯನ್ನು ವಿಜಯಪುರ ಜಿಲ್ಲೆಯ ಅಂದಿನ ತಾಳಿಕೋಟೆ ಮತಕ್ಷೇತ್ರದ ಕಾಂಗ್ರೆಸ್ ಹುರಿಯಾಳು ಜಿ ಎನ್ ಪಾಟೀಲ್ ಕೂಡ ಬರೆದಿದ್ದರು. ಇಡೀ ಜಿಲ್ಲೆಯಲ್ಲಿ ಚುನಾವಣೆ ಎದುರಿಸಲು ಇತರ ನಾಯಕರು ಕಷ್ಟಪಡುತ್ತಿದ್ದರೆ, ಗದಿಗೆಪ್ಪಗೌಡ ನಿಂಗನಗೌಡ ಪಾಟೀಲ್ ಮಾತ್ರ ವಿರೋಧಿಗಳೇ ಇಲ್ಲದೆ ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ 1962ರ ಚುನಾವಣೆಯಲ್ಲಿ ರಾಜ್ಯದಲ್ಲಿ ಇಬ್ಬರು ಅವಿರೋಧವಾಗಿ ಆಯ್ಕೆಯಾದರು.

ವಿಜಯಪುರ ಜಿಲ್ಲೆಯ ಬಬಲೇಶ್ವರ ವ್ಯಾಪ್ತಿಯ ಕಾಖಂಡಕಿ ಗ್ರಾಮದ ಜಿ ಎನ್‌ ಪಾಟೀಲ್ ಜಿಲ್ಲೆಯ ಇತಿಹಾಸದಲ್ಲೇ ಶಾಸಕರಾಗಿ ಅವಿರೋಧವಾಗಿ ಆಯ್ಕೆಯಾದ ರಾಜಕಾರಣಿ. 1962ರ ವಿಧಾನಸಭೆ ಚುನಾವಣೆಯಲ್ಲಿ ಅಂದಿನ ತಾಳಿಕೋಟೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಜಿ ಎಸ್ ಪಾಟೀಲ್ ವಿರುದ್ಧ ಅವರ ದೂರದ ಸಂಬಂಧಿಯಾಗಿದ್ದ ಇಂಗಳೇಶ್ವರದ ಮಡಿವಾಳಪ್ಪಗೌಡ ಪಾಟೀಲ್ ಸೇರಿದ್ದಂತೆ ಮತ್ತೊಬ್ಬರು ನಾಮಪತ್ರ ಸಲ್ಲಿಸಿ, ಬಳಿಕ ವಾಪಸ್ ಪಡೆದಿದ್ದರು. ಹೀಗಾಗಿ ಜಿ ಎನ್‌ ಪಾಟೀಲರ ಅವಿರೋಧ ಆಯ್ಕೆ ಸಾಧ್ಯವಾಗಿತ್ತು. ಈ ಮೂಲಕ ರಾಜ್ಯದಲ್ಲಿ ದೇವರಾಜ್ ಅರಸು ಹೊರತುಪಡಿಸಿದರೆ ಅವಿರೋಧವಾಗಿ ಆಯ್ಕೆಯಾದ ರಾಜಕಾರಣಿ ಜಿ ಎನ್‌ ಪಾಟೀಲ್ ಎಂದು ದಾಖಲೆ ನಿರ್ಮಿಸಿದರು.

ಇದನ್ನೂ ಓದಿ : ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಗೆ ಮರುಸೇರ್ಪಡೆ, ವಿಜಯಪುರದಲ್ಲಿ ಪ್ರತಿಭಟನೆ

1962ರಲ್ಲಿ ದೇವರಾಜ್ ಅರಸು ಕೂಡ ಹುಣಸೂರು ಕ್ಷೇತ್ರದಿಂದ ಅವಿರೋಧ ಆಯ್ಕೆಯಾಗಿದ್ದರು. ಅವರೊಂದಿಗೆ ಜಿ ಎನ್‌ ಪಾಟೀಲ್ ಅವಿರೋಧ ಆಯ್ಕೆಯಾಗಿದ್ದರು. ಈ ವಿಷಯ ದೇವರಾಜ್ ಅರಸು ಅವರಿಗೆ ಗೊತ್ತಾಗಿ ಜಿ ಎನ್‌ ಪಾಟೀಲ್ ಅವರನ್ನು ಕರೆಸಿಕೊಂಡು ಮಾತನಾಡಿ, ಸಂತೋಷ ವ್ಯಕ್ತಪಡಿಸಿದ್ದರು. ರಾಜ್ಯದ ವಿಧಾನಸಭೆ ಚುನಾವಣೆ ಇತಿಹಾಸದಲ್ಲಿ ದೇವರಾಜ ಅರಸು ಹಾಗೂ ಜಿ ಎನ್‌ ಪಾಟೀಲ ಶಾಸಕರಾಗಿ ಅವಿರೋಧ ಆಯ್ಕೆಯಾಗಿದ್ದು ಬಿಟ್ಟರೆ ಇದುವರೆಗೂ ಬೇರೆ ಯಾರಿಗೂ ಸಾಧ್ಯವಾಗಿಲ್ಲ. ಆಗಿನ ಕಾಲಕ್ಕೇ ಜಿ ಎನ್‌ ಪಾಟೀಲ್ ಬಿಎಸ್‌ಸಿ ಕೃಷಿ ಪದವಿ ಪಡೆದಿದ್ದರು. 1967ರಲ್ಲಿ ತಾಳಿಕೋಟೆ ಕ್ಷೇತ್ರ ಹೂವಿನಹಿಪ್ಪರಗಿ ಕ್ಷೇತ್ರವಾಯಿತು. (ಈಗಿನ ದೇವರಹಿಪ್ಪರಗಿ) ಅಂದು ಕಾಂಗ್ರೆಸ್‌ನಿಂದ ಚುನಾವಣೆಗೆ ಆರು ಸಾವಿರ ರೂಪಾಯಿ ಖರ್ಚು ಮಾಡಿದ್ದರು. ಆ ಬಳಿಕ ಕಾಂಗ್ರೆಸ್‌ ಒಡೆದು ಸಂಸ್ಥಾ ಕಾಂಗ್ರೆಸ್‌, ಆಡಳಿತ ಕಾಂಗ್ರೆಸ್‌ ಎಂದಾದಾಗ ವೀರೇಂದ್ರ ಪಾಟೀಲ್‌ರನ್ನು ಬೆಂಬಲಿಸಿ ಹೂವಿನ ಹಿಪ್ಪರಗಿ ಮತಕ್ಷೇತ್ರ ಬಿಟ್ಟು, 1972ರ ವಿಧಾನಸಭೆ ಚುನಾವಣೆಯಲ್ಲಿ ತಿಕೋಟ ಮತಕ್ಷೇತ್ರದಿಂದ (ಈಗಿನ ಬಬಲೇಶ್ವರ) ಸಂಸ್ಥಾ ಕಾಂಗ್ರೆಸ್‌ (ಎನ್‌ಸಿಒ) ಅಭ್ಯರ್ಥಿಯಾಗಿ ಕಣಕ್ಕಿಳಿದು ಕಾಂಗ್ರೆಸ್‌ನ ಎಸ್‌ ಎ ಜಿದ್ದಿ ವಿರುದ್ಧ ಗೆಲುವು ಸಾಧಿಸಿದ್ದರು. ನಂತರದ ದಿನಗಳಲ್ಲಿ ಜಿದ್ದಾಜಿದ್ದಿ, ಅಪಾರ ಹಣ ಖರ್ಚು ಮಾಡುವ ರಾಜಕಾರಣದಿಂದ ಬೇಸರಗೊಂಡು ಸಕ್ರಿಯ ರಾಜಕಾರಣದಿಂದ ದೂರ ಸರಿದರು.

ಇದೀಗ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ರಾಜಕಾರಣಿಗಳು ಕೋಟಿ ಕೋಟಿ ಹಣ ಖರ್ಚು ಮಾಡಿ, ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ. ಇದರ ಜೊತೆಗೆ ಟಿಕೆಟ್‌ಗೆ ಕಸರತ್ತು. ನಾಯಕರ ಮನೆಗಳಿಗೆ ಓಡಾಟ. ಸ್ವಪಕ್ಷೀಯರಲ್ಲೇ ಶೀತಲಸಮರ. ಗೆಲುವಿಗೆ ತಂತ್ರ -ಕುತಂತ್ರಗಳನ್ನು ಅನುಸರಿಸುತ್ತಾರೆ. ಸದ್ಯದ ಸ್ಥಿತಿ ಹೀಗಿರುವಾಗ ಅವಿರೋಧ ಆಯ್ಕೆಯಂತೂ ದೂರದ ಮಾತು ಎಂಬ ಮಾತುಗಳಿಗೆ ಅಪವಾದ ಎಂಬಂತಿದ್ದ ಶಾಸಕರೊಬ್ಬರು ವಿಜಯಪುರ ಜಿಲ್ಲೆಯವರು ಎಂಬುದೇ ಹೆಮ್ಮೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More