ಕರಾವಳಿಯಲ್ಲಿ ಗೆದ್ದ ಅಭ್ಯರ್ಥಿಗಳಿಗೇ ಹೆಚ್ಚಿನ ಒಲವು ತೋರಿದ ಕಾಂಗ್ರೆಸ್

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲದೆ ನಿರೀಕ್ಷೆಯಂತೆಯೇ ಕಾಂಗ್ರೆಸ್ ಟಿಕೆಟ್ ಹಂಚಿಕೆಯಾಗಿದೆ. ಇದರಿಂದ ಬಂಡಾಯದ ಬಿಸಿ ತಪ್ಪಬಹುದಾದರೂ ಕಳೆದ ಬಾರಿ ವಿಧಾನಸಭೆ ಪ್ರವೇಶಿಸಿದ್ದ ಎಲ್ಲರೂ ಗೆಲುವು ತಂದುಕೊಡಬಲ್ಲರೇ ಎಂಬ ಪ್ರಶ್ನೆಗಳಿವೆ

ಕರಾವಳಿಯಲ್ಲಿ ನಿರೀಕ್ಷೆಯಂತೆಯೇ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆಯಾಗಿದ್ದು, ಹೆಚ್ಚಿನ ಬದಲಾವಣೆ ಮಾಡಲಾಗಿಲ್ಲ. ಗೆಲ್ಲುವ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ಮೂಲಕ ಈವರೆಗೆ ಕೆಲವು ಕ್ಷೇತ್ರಗಳಲ್ಲಿ ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆಯಲಾಗಿದೆ. ಟಿಕೆಟ್ ದೊರೆಯದು ಎಂದು ಎಣಿಸಿದ್ದ ಕೆಲವು ಅಭ್ಯರ್ಥಿಗಳಿಗೂ ಸ್ಪರ್ಧಿಸಲು ಅವಕಾಶ ನೀಡಿ ಅಚ್ಚರಿ ಮೂಡಿಸಲಾಗಿದೆ.

ರಾಹುಲ್ ಗಾಂಧಿ ಮಂಗಳೂರು ಭೇಟಿ ವೇಳೆ ಚರ್ಚಿಸಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಹಾಲಿ ಶಾಸಕರಿಗೆ ಹಾಗೂ ಸುಳ್ಯದ ಕಳೆದ ಬಾರಿಯ ಕಾಂಗ್ರೆಸ್ ಅಭ್ಯರ್ಥಿಗೇ ಟಿಕೆಟ್ ನೀಡಲಾಗಿದೆ. ಟಿಕೆಟ್ ದೊರೆಯುವ ಬಗ್ಗೆ ಗುಮಾನಿಯಿದ್ದ ಮಂಗಳೂರು ಉತ್ತರ ಕ್ಷೇತ್ರದ ಮೋಯಿದ್ದೀನ್ ಬಾವಾ ಅವರಿಗೂ ಪಕ್ಷ ನಿರಾಸೆ ಉಂಟು ಮಾಡಿಲ್ಲ. ಬಾವಾ ಮೇಲಿದ್ದ ಹಗರಣಗಳ ಆರೋಪ, ಅವರೇ ಮೈಮೇಲೆಳೆದುಕೊಂಡ ಕೆಲವು ವಿವಾದಗಳ ಹೊರತಾಗಿಯೂ ಅಚ್ಚರಿ ಎಂಬಂತೆ ಅವರ ಸ್ಪರ್ಧೆಗೆ ಹಸಿರು ನಿಶಾನೆ ತೋರಲಾಗಿದೆ. ಬಾವಾ ಕ್ಷೇತ್ರದಲ್ಲಿ ಕಳೆದ ಹಲವು ತಿಂಗಳಿನಿಂದಲೂ ಇಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಬಿಜೆಪಿ ಇಲ್ಲಿ ಇನ್ನೂ ಅಭ್ಯರ್ಥಿ ಯಾರೆಂದು ಸ್ಪಷ್ಟಪಡಿಸಿಲ್ಲ. ಮಾಜಿ ಸಚಿವ ಕೃಷ್ಣ ಪಾಲೇಮಾರ್ ಅವರೇ ಕಣಕ್ಕಿಳಿಯುವ ಸಾಧ್ಯತೆಗಳಿದ್ದರೂ ಹೊಸಮುಖಗಳಿಗೆ ಆದ್ಯತೆ ನೀಡಬೇಕೆನ್ನುವ ಅಭಿಪ್ರಾಯವೂ ಕೇಳಿ ಬರುತ್ತಿದೆ. ಒಂದು ವೇಳೆ ಪ್ರಬಲ ಅಭ್ಯರ್ಥಿ ಕಣಕ್ಕಿಳಿದರೆ ಬಾವಾ ಇಲ್ಲಿ ಕಠಿಣ ಸ್ಪರ್ಧೆ ಎದುರಿಸಬೇಕಾದೀತು.

“ಸ್ಪರ್ಧಿಸುವುದಾದರೆ ನೀವೇ ಸ್ಪರ್ಧಿಸಿ ಉಳಿದವರನ್ನು ಸೂಚಿಸಬೇಡಿ,” ಎಂದು ಈ ಹಿಂದೆಯೇ ಮುಲ್ಕಿ ಮೂಡುಬಿದಿರೆ ಕ್ಷೇತ್ರದ ಶಾಸಕ ಕೆ ಅಭಯಚಂದ್ರ ಜೈನ್ ಅವರಿಗೆ ಸೂಚಿಸಿದ್ದ ಕಾಂಗ್ರೆಸ್ ಕಡೆಗೂ ಅವರಿಗೇ ಟಿಕೆಟ್ ನಿಗದಿ ಮಾಡಿದೆ. ಈ ಮೂಲಕ ಕಳೆದ ಆರು ತಿಂಗಳಿನಿಂದ ಸೃಷ್ಟಿಯಾಗಿದ್ದ ಗೊಂದಲಕ್ಕೆ ಇತಿಶ್ರೀ ಹಾಡಲಾಗಿದೆ. ಪರಿಣಾಮ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಆದಿಯಾಗಿ ಟಿಕೆಟ್ ಗಾಗಿ ಸಾಲುಗಟ್ಟಿ ನಿಂತಿದ್ದ ಹಲವರಲ್ಲಿ ನಿರಾಶೆ ಮೂಡಿದೆ. ಜೈನ್ ತಮ್ಮ ಬದಲು ಅನುಯಾಯಿ ಮಿಥುನ್ ರೈ ಸ್ಪರ್ಧಿಸಲಿ ಎಂದು ಬಯಸಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೈನ್ ಅವರೇ ಸ್ಪರ್ಧಿಸಲಿ ಎಂಬ ಇಂಗಿತ ವ್ಯಕ್ತಪಡಿಸಿದ್ದರು. ಜೈನ್ ಸ್ಪರ್ಧೆಗೆ ಪಕ್ಷದ ಇತರರು ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಇನ್ನು ಪುತ್ತೂರು ಕ್ಷೇತ್ರದಲ್ಲಿ ಈ ಬಾರಿಯೂ ಶಕುಂತಲಾ ಶೆಟ್ಟಿ ಅವರಿಗೇ ಕಾಂಗ್ರೆಸ್ ಟಿಕೆಟ್ ಒಲಿದಿದೆ. ಶಕುಂತಲಾ ಸ್ಪರ್ಧೆಗೆ ಬ್ಲಾಕ್ ಕಾಂಗ್ರೆಸ್ ಮಟ್ಟದಲ್ಲಿ ಭಿನ್ನಾಭಿಪ್ರಾಯ ಎದ್ದಿತ್ತು. ಒಂದು ಕಾಲದಲ್ಲಿ ಶಕುಂತಲಾ ಅವರನ್ನು ಬೆಂಬಲಿಸುತ್ತಿದ್ದ ಸ್ಥಳೀಯ ಮುಖಂಡ ಹೇಮನಾಥ್ ಶೆಟ್ಟಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಶಕುಂತಲಾ ಸ್ಪರ್ಧೆಯಿಂದ ಕ್ಷೇತ್ರದಲ್ಲಿ ಬಂಡಾಯದ ಬಿಸಿ ಏಳುವ ಸಾಧ್ಯತೆಗಳಿವೆ. ಮತ್ತೊಂದೆಡೆ ಟಿಕೆಟ್ ಘೋಷಣೆ ಶಕಂತಲಾ ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದೆ.

ಸುಳ್ಯ ಮತಕ್ಷೇತ್ರದಲ್ಲಿ ಎಸ್ ಅಂಗಾರ ಅವರ ಸ್ಪರ್ಧೆಗೆ ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲೇ ಒಪ್ಪಿಗೆ ನೀಡಿತ್ತು. 2013ರ ಚುನಾವಣೆಯಲ್ಲಿ ಜಯ ಗಳಿಸಿದ ಅವರು ದಕ್ಷಿಣ ಕನ್ನಡದ ಏಕೈಕ ಬಿಜೆಪಿ ಶಾಸಕರಾಗಿ ಹೊರಹೊಮ್ಮಿದ್ದರು. ಇವರ ವಿರುದ್ಧ ಯಾರನ್ನು ಕಣಕ್ಕಿಳಿಸುವುದು ಎಂಬ ಚಿಂತೆಯಲ್ಲಿದ್ದ ಕಾಂಗ್ರೆಸ್ ಹಿಂದೊಮ್ಮೆ ತುಳು ಜನಪದ ವಿದ್ವಾಂಸ ದಯಾನಂದ್ ಕತ್ತಲ್ಸಾರ್ ಅವರ ಹೆಸರನ್ನು ತೇಲಿಬಿಟ್ಟಿತ್ತು. ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಳೆದ ಬಾರಿ ಕೇವಲ 1373 ಮತಗಳ ಅಂತರದಿಂದ ಸೋಲನುಭವಿಸಿದ್ದ ಡಾ. ರಘು ಅವರಿಗೇ ಟಿಕೆಟ್ ನೀಡಲು ನಿರ್ಧರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಳು ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಎಲ್ಲಾ ಎಂಟು ಕ್ಷೇತ್ರಗಳಲ್ಲಿ ಜಯಗಳಿಸುವುದಾಗಿ ಹೇಳಿಕೊಂಡಿರುವುದರಿಂದ ಕ್ಷೇತ್ರ, ಪಕ್ಷಕ್ಕೆ ಪ್ರತಿಷ್ಠೆಯ ಅಖಾಡವಾಗಿದೆ.

ಉಳಿದಂತೆ ಮಂಗಳೂರು ದಕ್ಷಿಣ ಕ್ಷೇತ್ರದಿಂದ ಜೆ ಆರ್ ಲೋಬೊ, ಉಳ್ಳಾಲದಿಂದ ಯು ಟಿ ಖಾದರ್, ಬಂಟ್ವಾಳದಿಂದ ರಮಾನಾಥ ರೈ, ಬೆಳ್ತಂಗಡಿಯಿಂದ ವಸಂತ ಬಂಗೇರ ಕಣಕ್ಕಿಳಿಯಲಿದ್ದಾರೆ. ಇವರೆಲ್ಲರೂ ಕಳೆದ ಬಾರಿಯೂ ವಿಧಾನಸಭೆ ಪ್ರವೇಶಿಸಿದ್ದು ಕೆಲವರು ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಬಂಟ್ವಾಳ ಎಂಬ ಕಾಂಗ್ರೆಸ್ ಕೋಟೆಗೆ ಆಗಾಗ ಲಗ್ಗೆಯಿಟ್ಟವರು ಯಾರು? 

ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದಾಗಿ ಕಾಂಗ್ರೆಸ್ ಈ ಹಿಂದೆಯೇ ಹೇಳಿತ್ತು. ಆದರೆ ಕುಂದಾಪುರ ಹೊರತುಪಡಿಸಿದರೆ ಜಿಲ್ಲೆಯ ಬೇರಾವ ವಿಧಾನಸಭಾ ಕ್ಷೇತ್ರಗಳಲ್ಲೂ ಗುರುತರ ಬದಲಾವಣೆಗಳಾಗಿಲ್ಲ. ಉಡುಪಿ ಕ್ಷೇತ್ರದ ಪ್ರಮೋದ್ ಮಧ್ವರಾಜ್ ಅವರನ್ನು ಬಿಜೆಪಿ ಸೆಳೆಯುತ್ತಿದೆ ಎಂಬ ವದಂತಿಗಳು ಮತ್ತೆ ಹರಡಿದ್ದರ ಮಧ್ಯೆಯೂ ಅವರಿಗೆ ಕಾಂಗ್ರೆಸ್ಸಿನಿಂದ ಟಿಕೆಟ್ ಖಾತ್ರಿಯಾಗಿದೆ. ಪ್ರಮೋದ್ ಪದೇಪದೇ ಬಿಜೆಪಿ ಸೇರುವ ವದಂತಿಯ ಕುರಿತಂತೆ ಕಾಂಗ್ರೆಸ್ಸಿನ ಕೆಲ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದರು. ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಈಗಾಗಲೇ ಬಿಜೆಪಿ ಟಿಕೆಟ್ ಘೋಷಿಸಿದ್ದು, ಅವರ ವಿರುದ್ಧ ಈ ಹಿಂದೆ ಸ್ಪರ್ಧಿಸಿ ಪರಾಭವಗೊಂಡಿದ್ದ ಮಲ್ಯಾಡಿ ಶಿವರಾಮ ಶೆಟ್ಟರ ಬದಲಾಗಿ ರಾಕೇಶ್ ಮಲ್ಲಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ರಾಕೇಶ್ ಮಲ್ಲಿ ಕ್ಷೇತ್ರಕ್ಕೆ ಹೊಸಬರಾದರೂ ಜಾತಿ ಸಮೀಕರಣ ಮತ್ತಿತರ ಕಾರಣಗಳು ಅವರಿಗೆ ಟಿಕೆಟ್ ದಕ್ಕಿಸಿಕೊಡುವಲ್ಲಿ ಕೆಲಸ ಮಾಡಿವೆ. ಬೈಂದೂರು ಕ್ಷೇತ್ರದ ಟಿಕೆಟ್ ಕಳೆದ ಬಾರಿ ವಿಜಯಿಯಾಗಿದ್ದ ಕೆ ಗೋಪಾಲ ಪೂಜಾರಿ ಅವರಿಗೆ ಒಲಿದಿದೆ. ಕಾಪು ಕ್ಷೇತ್ರದಿಂದ ಕಳೆದ ಬಾರಿ ಜಯಗಳಿಸಿದ್ದ ವಿನಯ ಕುಮಾರ್ ಸೊರಕೆ ಅವರೇ ಈ ಬಾರಿಯೂ ಕಣಕ್ಕಿಳಿಯಲಿದ್ದಾರೆ. ಕಾರ್ಕಳದಲ್ಲಿ ಕಳೆದ ಬಾರಿ ಸೋತಿದ್ದ ಬಿಜೆಪಿಯ ವಿ. ಸುನೀಲ್ ಕುಮಾರ್ ಅವರೆದುರು ಸೋತಿದ್ದ ಎಚ್. ಗೋಪಾಲ ಭಂಡಾರಿ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಬಾರಿಯೂ ಇವರಿಬ್ಬರ ನಡುವೆಯೇ ಸ್ಪರ್ಧೆ ಏರ್ಪಡುವುದು ಖಚಿತವಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಕಳೆದ ಬಾರಿ ಗೆದ್ದವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 2013ರಲ್ಲಿ ವಿಜಯಿಗಳಾಗಿದ್ದ ಕಾರವಾರ ಕ್ಷೇತ್ರದ ಸತೀಶ್ ಸೈಲ್, ಕುಮಟಾದ ಶಾರದಾ ಮೋಹನ್ ಶೆಟ್ಟಿ, ಭಟ್ಕಳದ ಮಂಕಾಳ ಸುಬ್ಬ ವೈದ್ಯ, ಯಲ್ಲಾಪುರದ ಅರ್ಬೈಲ್ ಹೆಬ್ಬಾರ್ ಶಿವರಾಂ, ಹಳಿಯಾಳದ ಆರ್.ವಿ. ದೇಶಪಾಂಡೆ ಈ ಬಾರಿಯ ಕಾಂಗ್ರೆಸ್ ಅಭ್ಯರ್ಥಿಗಳು. ಕಳೆದ ಬಾರಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಸೋತಿದ್ದ ಅಯ್ಯಪ್ಪನಗರ್ ದೀಪಕ್ ಹೊನ್ನಾವರ್ ಅವರ ಬದಲು ಭೀಮಣ್ಣ ನಾಯಕರನ್ನು ಕಣಕ್ಕಿಳಿಸಲಾಗಿದೆ.

ಹಾಲಿ ಶಾಸಕರಿಗೆ ಟಿಕೆಟ್ ನೀಡಿರುವುದರಿಂದ ಕರಾವಳಿಯ ಹಲವೆಡೆ ಏಳಲಿದ್ದ ಬಂಡಾಯದ ಬಿಸಿ ತಣಿಯಬಹುದು. ಆದರೆ ಕಾಂಗ್ರೆಸ್ ಮಣೆ ಹಾಕಿರುವ ಹಾಲಿ ಶಾಸಕರಿಗೆ ಮತದಾರರು ಮಣೆ ಹಾಕಲಿದ್ದಾರೆಯೇ ಎಂಬ ಪ್ರಶ್ನೆ ಇದೆ. ಕೆಲ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಇದ್ದು, ಇದನ್ನು ಹಾಲಿ ಅಭ್ಯರ್ಥಿಗಳು ಎದುರಿಸಲೇಬೇಕಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More