ಚುನಾವಣಾ ಕಣ | ಪಾಟೀಲ್ ಹಿಡಿತದ ವಿಜಯಪುರ ಕಣದಲ್ಲಿ ಎಲ್ಲರೂ ಪಾಟೀಲರೇ!

ವಿಜಯಪುರ ಜಿಲ್ಲೆಯಲ್ಲಿ ಪಂಚಮಸಾಲಿ, ರೆಡ್ಡಿ, ಗಾಣಿಗ, ಮುಸ್ಲಿಂ ಸಮುದಾಯದ ಯಾರೇ ಚುನಾವಣೆಗೆ ನಿಂತರೂ ತಮ್ಮ ಹೆಸರಿನ ಮುಂದೆ ಪಾಟೀಲ್ ಎನ್ನುವ ಸರ್‌ನೇಮ್ ಇಟ್ಟುಕೊಳ್ಳುತ್ತಾರೆ. ಎಲ್ಲ ಜಾತಿಗಳಲ್ಲಿ ಪಾಟೀಲ್ ಹೆಸರಿನವರಿದ್ದು, ಆಯಾ ಭಾಗದಲ್ಲಿ ತಮ್ಮದೇ ಹಿಡಿತವನ್ನು ಹೊಂದಿದ್ದಾರೆ

ವಿಜಯಪುರ ಜಿಲ್ಲೆಯಲ್ಲಿ ಪಾಟೀಲ್ ಮನೆತನಕ್ಕೆ ಎಲ್ಲಿಲ್ಲದ ಬೇಡಿಕೆ. ವಿಜಯಪುರ - ಬಾಗಲಕೋಟೆ ಅಖಂಡ ಜಿಲ್ಲೆಯಾಗಿದ್ದ ಕಾಲದಿಂದ ಹಿಡಿದು ಇದುವರೆಗೂ ಇಲ್ಲಿ ಪಾಟೀಲ್ ಮನೆತನದವರೆ ಹೆಚ್ಚಾಗಿ ಆಯ್ಕೆಯಾಗುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಬಂದಾಗಿನಿಂದಲೂ ವಿಜಯಪುರ ಜಿಲ್ಲಾ ರಾಜಕಾರಣದಲ್ಲಿ ಪಾಟೀಲ್ ಕುಟುಂಬದವರು ಇಲ್ಲದೆ ಚುನಾವಣೆಗಳು ನಡೆದ ಉದಾಹರಣೆಯೇ ಇಲ್ಲ. 1957ರಿಂದ ಹಿಡಿದು 20018 ರವರೆಗೂ ಒಟ್ಟು 119 ಜನ ಪಾಟೀಲ್ ಕುಟುಂಬದವರು ಚುನಾವಣೆಯಲ್ಲಿ ಮುಖಾಮಖಿಯಾಗಿದ್ದು, ಇದರಲ್ಲಿ 40 ಮಂದಿ ಅಧಿಕಾರದ ಗದ್ದುಗೆ ಹಿಡಿದು ಜನನಾಯಕರಾಗಿದ್ದಾರೆ. ಇನ್ನೊಂದು ವಿಶೇಷ ಅಂದರೆ ಮುಸ್ಲಿಂ ಸಮುದಾಯವರನ್ನು ಒಳಗೊಂಡಂತೆ ಇಲ್ಲಿ ರಾಜಕಾರಣಿ ಯಾವುದೇ ಜಾತಿಗೆ ಸೇರಿರಲಿ ಅವರ ಹೆಸರಿನ ಮುಂದೆ ಪಾಟೀಲ್ ಅನ್ನೋ ಸರ್‌ನೇಮ್ ಬಳಕೆ ಮಾಡಿಕೊಳ್ಳುವುದು ವಾಡಿಕೆ. ಜೊತೆಗೆ ಇದು ಗ್ರಾಮೀಣ ಭಾಗದಲ್ಲಿ ಗತ್ತು ಗೌರತ್ತಿನ ಪ್ರತೀಕ ಕೂಡ ಆಗಿದ್ದು, 1957ರಿಂದ 2018ವರೆಗೆ ಚುನಾವಣೆಯಲ್ಲಿರುವ ಪಾಟೀಲ್ ಮನೆತನಗಳ ವಿವರ ಇಲ್ಲಿದೆ.

1957ರ ಚುನಾವಣೆಯಲ್ಲಿ ಒಟ್ಟು ನಾಲ್ಕು ಜನ ಪಾಟೀಲರು ಸ್ಪರ್ಧೆ ಮಾಡಿದ್ದರು. ಅದರಲ್ಲಿ ಇಬ್ಬರು ಜಯ ಗಳಿಸಿದರೆ ಮತ್ತಿಬ್ಬರು ಸೋಲೊಪ್ಪಿಕೊಂಡಿದ್ದರು. ಸಿಂದಗಿ ಕ್ಷೇತ್ರದ ಕಾಂಗ್ರೆಸ್ ಶಂಕರಗೌಡ ಯಶವಂತಗೌಡ ಪಾಟೀಲ್ ಹಾಗೂ ತಾಳಿಕೋಟೆ ಕ್ಷೇತ್ರದ ಕಾಂಗ್ರೆಸ್‌ನಿಂದ ಕುಮಾರಗೌಡ ಅಡಿವೆಪ್ಪ ಪಾಟೀಲ್ ಜಯದ ನಗೆ ಬೀರಿದ್ದರು. ಬಸವನಬಾಗೇವಾಡಿಯಿಂದ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಬಸನಗೌಡ ಶಾಮರಾಯ ಪಾಟೀಲ್ ಹಾಗೂ ಯಶವಂತರಾವ್ ಅಣ್ಣಾರಾವ್ ಪಾಟೀಲ್ ಪಕ್ಷೇತರರಾಗಿ ಇಂಡಿಯಿಂದ ಪರಾಭವಗೊಂಡಿದ್ದರು.

1962 ಚುನಾವಣೆಯಲ್ಲಿ ಗುರುಲಿಂಗಪ್ಪಾ ನಿಂಗನಗೌಡ ಪಾಟೀಲ್ ಕಾಂಗ್ರೆಸ್ ಪಕ್ಷದಿಂದ ತಾಳಿಕೋಟೆ ಕ್ಷೇತ್ರದಿಂದ ಆಯ್ಕೆಯಾದರು. ತಿಕೋಟ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ಮಲ್ಲನಗೌಡ ಪಾಟೀಲ್ ಆಯ್ಕೆಯಾದರು. ಇಂಡಿ ಕ್ಷೇತ್ರದ ಗುರುಲಿಂಗಪ್ಪ ದೇವಪ್ಪ ಪಾಟೀಲ್ ಗೆಲುವಿನ ದಡ ಸೇರಿದರು.

1967ರಲ್ಲಿ ಚುನಾವಣೆಯಲ್ಲಿ ಪಾಟೀಲ್‌ರ ಛಾಪು ಮಂಕಾಗಿತ್ತು. ಈ ಚುನಾವಣೆಯಲ್ಲಿ ಪಾಟೀಲ್ ಮನತನಕ್ಕೆ ದೊರೆತದ್ದು ಕೇವಲ ಒಂದು ಸ್ಥಾನ. ವಿಜಯಪುರ ನಗರ ಕ್ಷೇತ್ರ ಪಾಟೀಲ್‌ರಿಗೆ ಒಲಿದಿತ್ತು. 1967ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಇಬ್ಬರು ಪಾಟೀಲರು ಮಾತ್ರ ಚುನಾವಣೆಗೆ ಸ್ಪರ್ಧಿಸಿದ್ದರು. ವಿಜಯಪುರ ನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲನಗೌಡ ಪಾಟೀಲ್ ಗೆಲುವು ಕಂಡರೆ, ಸಿಂದಗಿ ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧೆಗಿಳಿದಿದ್ದ ಎಸ್ ವೈ ಪಾಟೀಲ್ ಸೋಲುಂಡಿದ್ದರು.

1972ರ ಚುನಾವಣೆಯಲ್ಲಿ ನಾಲ್ವರು ಪಾಟೀಲರು ಚುನಾವಣೆಯಲ್ಲಿ ಸ್ಪರ್ಧಿಸಿ ಎಲ್ಲರೂ ಗೆಲುವು ಪಡೆದಿದ್ದು ದಾಖಲೆಯಾಗಿತ್ತು. ಇನ್ನೊಂದು ವಿಶೇಷವೆನೆಂದರೆ ಗೆಲುವು ಕಂಡ ನಾಲ್ವರೂ ಎನ್‌ಸಿಓ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. ಹೂವಿನಹಿಪ್ಪರಗಿ ಕ್ಷೇತ್ರದಿಂದ ಕೆ ಡಿ ಪಾಟೀಲ್, ಬಸವನಬಾಗೇವಾಡಿ ಕ್ಷೇತ್ರದಿಂದ ಬಿ ಎಸ್ ಪಾಟೀಲ್, ತಾಳಿಕೋಟೆ ಕ್ಷೇತ್ರದಿಂದ ಜಿ ಎನ್ ಪಾಟೀಲ್, ಸಿಂದಗಿ ಕ್ಷೇತ್ರದಿಂದ ಎಸ್ ವೈ ಪಾಟೀಲ್ ಗೆಲುವು ಕಂಡು ದಾಖಲೆ ಬರೆದಿದ್ದರು.

1978ರ ಚುನಾವಣೆಯಲ್ಲಿ ಒಟ್ಟು 11 ಜನ ಪಾಟೀಲರು ಸ್ಪರ್ಧೆ ಮಾಡಿದ್ದರು. ಆದರೆ ಗೆಲುವು ಕಂಡವರು 3 ಜನ ಪಾಟೀಲರು ಮಾತ್ರ. ಈ ಚುನಾವಣೆ ಪಾಟೀಲ್ ವರ್ಸಸ್ ಪಾಟೀಲ್ ಆಗಿತ್ತು. ಗೆದ್ದು ಬಂದಂತಹ ಮೂವರು ಸಹ ಜಯಪ್ರಕಾಶ ನಾರಾಯಣ ಪಕ್ಷದಿಂದ ಎನ್ನುವುದು ಕುತೂಹಲವಾಗಿತ್ತು. ಹೂವಿನ ಹಿಪ್ಪರಗಿ ಕ್ಷೇತ್ರದಿಂದ ಬಸನಗೌಡ ಸೋಮನಗೌಡ ಪಾಟೀಲ್, ತಿಕೋಟಾ ಕ್ಷೇತ್ರದಿಂದ ಬದುಗೌಡ ಬಾಬುಗೌಡ ಪಾಟೀಲ್ ಹಾಗೂ ಬಸವನಬಾಗೇವಾಡಿ ಕ್ಷೇತ್ರದಿಂದ ಬಸನಗೌಡ ಸೋಮನಗೌಡ ಪಾಟೀಲ್ ಜಯಪ್ರಕಾಶ ನಾರಾಯಣ ಪಕ್ಷದಿಂದ ಗೆದ್ದಿದ್ದರು.

1983ರ ವಿಧಾನಸಭಾ ಚುನಾವಣೆ ಮತ್ತೇ ಪಾಟೀಲರ ಭಾಗ್ಯದ ಬಾಗಿಲು ತೆರೆಯಿತು. ಜಿಲ್ಲೆಯಾದ್ಯಂತ ಒಟ್ಟು 10 ಜನ ಪಾಟೀಲ್ ಕುಟುಂಬದವರು ಚುನಾವಣಾ ಅಖಾಡಕ್ಕೆ ಧುಮಿಕಿದ್ದರು. ಅದರಲ್ಲಿ 4 ಜಯಶಾಲಿಗಳಾದರೆ 6 ಮಂದಿ ಸೋಲು ಕಾಣಬೇಕಾಯಿತು. ಹೂವಿನಹಿಪ್ಪರಗಿ ಕ್ಷೇತ್ರದಿಂದ ಬಸನಗೌಡ ಸೋಮನಗೌಡ ಪಾಟೀಲ್ ಕಾಂಗ್ರೆಸ್‌ನಿಂದ ಗೆದ್ದಿದ್ದರು. ತಿಕೋಟಾದಿಂದ ಕಾಂಗ್ರೆಸ್ ಪಕ್ಷದಿಂದ ಬಸನಗೌಡ ಮಲ್ಲನಗೌಡ ಪಾಟೀಲ್, ಬಸನವನಬಾಗೇವಾಡಿ ಕ್ಷೇತ್ರದಿಂದ ಬಸನಗೌಡ ಮಲ್ಲನಗೌಡ ಪಾಟೀಲ್, ಸಿಂದಗಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ನಿಂಗನಗೌಡ ರಾಚನಗೌಡ ಪಾಟೀಲ್ ಗೆದ್ದು ಬೀಗಿದ್ದರು.

1985ರ ಚುನಾವಣೆ ಮತ್ತೇ ಪಾಟೀಲ್ ಕುಟುಂಬಕ್ಕೆ ಅಷ್ಟೊಂದು ಶುಭಕರವಾಗಿರಲಿಲ್ಲ ಎನ್ನಬಹುದು. ಸ್ಪರ್ಧಿಸಿದ್ದ 9 ಅಭ್ಯರ್ಥಿಗಳಲ್ಲಿ ಕೇವಲ 2 ಅಭ್ಯರ್ಥಿಗಳು ಮಾತ್ರ ಜಯದ ನಗೆ ಬೀರಿದ್ದರು. ಬಸವನಬಾಗೇವಾಡಿ ಕ್ಷೇತ್ರದಿಂದ ಜಯಪ್ರಕಾಶ ನಾರಾಯಣ ಪಕ್ಷದ ಕುಮಾರಗೌಡ ಅಡಿವೆಪ್ಪಗೌಡ ಪಾಟೀಲ್ ಗೆದ್ದು ಬಂದರೆ, ತಿಕೋಟಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಬಸನಗೌಡ ಮಲ್ಲನಗೌಡ ಪಾಟೀಲ್ ಗೆದ್ದರು.

1989ರ ಚುನಾವಣೆಯಲ್ಲಿ ಒಟ್ಟು 11 ಜನ ಪಾಟೀಲರು ಚುನಾವಣೆಯಲ್ಲಿ ಮುಖಾಮುಖಿಯಾದರು. ಆದರೆ ಗೆಲುವು ಕೇವಲ ಮೂವರಿಗೆ ಒಲಿದಿತ್ತು. ಹೂವಿನ ಹಿಪ್ಪರಗಿ ಕ್ಷೇತ್ರದಿಂದ ಬಸನಗೌಡಾ ಸೋಮನಗೌಡಾ ಪಾಟೀಲ್, ಬಸವನಬಾಗೇವಾಡಿ ಕ್ಷೇತ್ರದಿಂದ ಬಸನಗೌಡಾ ಸೋಮನಗೌಡಾ ಪಾಟೀಲ್, ತಿಕೋಟಾದಿಂದ ಬಸನಗೌಡಾ ಮಲ್ಲನಗೌಡಾ ಪಾಟೀಲ್ ಗೆಲುವಿನ ನಗೆ ಬೀರಿದರು.

1994ರ ಚುನಾವಣೆಯಲ್ಲಿ ಪಾಟೀಲರ ಪ್ರಾಬಲ್ಯ ಮುಂದುವರೆಯಿತು. ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 11 ಪಾಟೀಲರಲ್ಲಿ ನಾಲ್ಕು ಜನ ಜಯದ ನಗೆ ಬೀರಿದ್ದರು. ಬಸವನಬಾಗೇವಾಡಿಯಿಂದ ಬಸನಗೌಡ ಸೋಮನಗೌಡ ಪಾಟೀಲ್, ತಿಕೋಟಾದಿಂದ ಜನತಾದಳ ಅಭ್ಯರ್ಥಿಯಾಗಿ ಶಿವಾನಂದ ಪಾಟೀಲ್ ಗೆದ್ದರು. ವಿಜಯಪುರ ನಗರದಿಂದ ಬಸನಗೌಡ ಪಾಟೀಲ್ ಯತ್ನಾಳ್ ಮೊದಲ ಬಾರಿಗೆ ಬಿಜೆಪಿಯಿಂದ ಆಯ್ಕೆಯಾದರು. ಈ ಮೂಲಕ ವಿಜಯಪುರದಲ್ಲಿ ಬಿಜೆಪಿ ತನ್ನ ಮೊದಲ ಖಾತೆ ತೆರೆಯಿತು. ಇಂಡಿಯಿಂದ ರವಿಕಾಂತ ಪಾಟೀಲ್ ಪಕ್ಷೇತರರಾಗಿ ಆಯ್ಕೆಯಾದರು. ತಿಕೋಟಾದಿಂದ ಎಂ ಬಿ ಪಾಟೀಲ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಮೊದಲ ಸಲ ಸೋಲಿನ ರುಚಿ ಕಂಡರು.

1999ರ ಚುನಾವಣೆಯಲ್ಲಿ ಪಾಟೀಲ್ ಪಾಳಯದ ಅಭ್ಯರ್ಥಿಗಳು ಸೋತಿದ್ದೇ ಬಂತು ಸ್ಪರ್ಧಿಸಿದ್ದು 7 ಜನರಾದರೂ ಗೆದ್ದು ಬಂದಿದ್ದು ಇಬ್ಬರು ಮಾತ್ರ. ತಿಕೋಟಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶಿವಾನಂದ ಪಾಟೀಲ್ ಗೆಲುವು ಕಂಡರೆ, ಇಂಡಿಯಿಂದ ಪಕ್ಷೇತರನಾಗಿ ಸ್ಪರ್ಧಿಸಿದ್ದ ರವಿಕಾಂತ ಪಾಟೀಲ್ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದರು.

2004ರ ಚುನಾವಣೆಯಲ್ಲಿ 7 ಪಾಟೀಲರು ಚುನಾವಣೆಯಲ್ಲಿ ಧುಮುಕಿದ್ದರು. ಆದರೆ ಗೆಲುವು ಕಂಡಿದ್ದು 3 ಅಭ್ಯರ್ಥಿಗಳು ಮಾತ್ರ. ತಿಕೋಟಾದಿಂದ ಎಂ ಬಿ ಪಾಟೀಲ್ ಮೊದಲ ಬಾರಿಗೆ ಗೆಲುವಿನ ಸಿಹಿಯುಂಡರು. ಇಂಡಿಯಲ್ಲಿ ಪಕ್ಷೇತರ ಅಭ್ಯರ್ಥಿ ರವಿಕಾಂತ್ ಪಾಟೀಲ್ ಸತತ ಮೂರು ಬಾರಿ ಪಕ್ಷೇತರನಾಗಿ ಆಯ್ಕೆಯಾಗಿ ದಾಖಲೆ ಬರೆದರು. ಬಸವನಬಾಗೇವಾಡಿಯಲ್ಲಿ ಕಾಂಗ್ರೆಸ್‌ನಿಂದ ಶಿವಾನಂದ ಪಾಟೀಲ್ ಜಯಶಾಲಿಯಾದರು.

2008ರ ಚುನಾವಣೆ ಫಲಿತಾಂಶ ಪಾಟೀಲ್ ಮನೆತನಕ್ಕೆ ಕಹಿ ಅನುಭವ ನೀಡಿತು. ಒಟ್ಟು 16 ಪಾಟೀಲ್ ಅಭ್ಯರ್ಥಿಗಳು ಚುನಾವಣೆ ಸ್ಪರ್ಧೆ ಮಾಡಿದ್ದರು. ಗೆಲುವು ಕಂಡಿದ್ದು, ಇಬ್ಬರು ಮಾತ್ರ. ದೇವರಹಿಪ್ಪರಗಿಯಿಂದ ಎ ಎಸ್ ಪಾಟೀಲ್ ನಡಹಳ್ಳಿ, ಕಾಂಗ್ರೆಸ್‌ನಿಂದ ಗೆಲುವು ಪಡೆದುಕೊಂಡರೆ. ಬಬಲೇಶ್ವರದಿಂದ ಎಂ ಬಿ ಪಾಟೀಲ್ ಸತತ ಎರಡನೆಯ ಗೆಲುವು ಕಂಡರು. ಈ ಚುನಾವಣೆ ಜಿಲ್ಲೆಯ ರಾಜಕೀಯದಲ್ಲಿ ಪಾಟೀಲ್
ಮನೆತನದವರು ಹೆಚ್ಚಾಗಿ ಆಯ್ಕೆಯಾಗುತ್ತಿದ್ದ ಕಾಲ ಮುಗಿದೇ ಹೋಯ್ತು ಎನ್ನುವಷ್ಟರ ಮಟ್ಟಿಗೆ ಫಲಿತಾಂಶ ಬಂದಿತ್ತು.

2013ರ ಚುನಾವಣೆಯಲ್ಲಿ 10 ಪಾಟೀಲ್ ಮನೆತನದವರು ವಿವಿಧ ಪಕ್ಷಗಳಿಂದ ಚುನಾವಣಾ ಅಖಾಡಕ್ಕೆ ಇಳಿದಿದ್ದರು. ಕಾಂಗ್ರೆಸ್‌ನಿಂದ ಬಸವನಬಾಗೇವಾಡಿಯಿಂದ ಶಿವಾನಂದ ಪಾಟೀಲ್, ಬಬಲೇಶ್ವರದಿಂದ ಎಂ ಬಿ ಪಾಟೀಲ್, ಇಂಡಿಯಿಂದ ಯಶವಂತರಾಯ ಪಾಟೀಲ್, ದೇವರಹಿಪ್ಪರಗಿಯಿಂದ ಎ ಎಸ್ ಪಾಟೀಲ್, ಸೋಮನಗೌಡ ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ, ಬಬಲೇಶ್ವರದಿಂದ ವಿಜುಗೌಡ ಪಾಟೀಲ್, ಬಸವನಬಾಗೇವಾಡಿಯಿಂದ ಅಪ್ಪುಗೌಡ ಪಾಟೀಲ್, ಇಂಡಿಯಿಂದ ರವಿಕಾಂತ ಪಾಟೀಲ್ ಹಾಗೂ ದೇವರಹಿಪ್ಪರಗಿಯಿಂದ ರಾಜೂಗೌಡ ಪಾಟೀಲ್ ಅಭ್ಯರ್ಥಿಗಳಾಗಿದ್ದರು. ಇದರಲ್ಲಿ ಗೆದಿದ್ದು ನಾಲ್ವರು ಮಾತ್ರ. ಬಸವನಬಾಗೇವಾಡಿಯಿಂದ ಶಿವಾನಂದ ಪಾಟೀಲ್, ಬಬಲೇಶ್ವದಿಂದ ಎಂಬಿ ಪಾಟೀಲ್, ದೇವರಹಿಪ್ಪರಗಿಯಿಂದ ಎ ಎಸ್ ಪಾಟೀಲ್ ನಡಹಳ್ಳಿ, ಇಂಡಿಯಿಂದ ಯಶವಂತರಾಯ್ ಗೌಡ ಪಾಟೀಲ್ ಆಯ್ಕೆಯಾಗಿದ್ದರು.

ಇದನ್ನೂ ಓದಿ : ಚುನಾವಣಾ ಕಣ | ಕಲ್ಯಾಣದಲ್ಲಿ ಖೂಬಾಗೆ ಬಿಜೆಪಿ ಟಿಕೆಟ್, ಮರಾಠ ಸಮುದಾಯದ ಬಂಡಾಯ

ಬಸವನಬಾಗೇವಾಡಿ ಕ್ಷೇತ್ರದಿಂದ ಸೋಲಿಲ್ಲದ ಸರದಾರನೆಂದೇ ಖ್ಯಾತಿಯನ್ನು ಪಡೆದ ಪಾಟೀಲ್ ಬಸನಗೌಡ ಸೋಮನಗೌಡ (ಮನಗೂಳಿ) ಒಟ್ಟು ಐದು ಸಾರಿ ಗೆದ್ದ ಹಿರಿಮೆ ಇವರದ್ದಾಗಿದೆ. ಬಸವನಬಾಗೇವಾಡಿಯಿಂದ 1972, 1978, 1983, 1989, 1994 ರ ಚುನಾವಣೆಯಲ್ಲಿ ಗೆದ್ದಿದ್ದಾರೆ. ಬಸನಗೌಡ ಮಲ್ಲನಗೌಡ ಪಾಟೀಲ್ (ಬಿ ಎಂ ಪಾಟೀಲ್) ತಿಕೋಟ ಮತಕ್ಷೇತ್ರದಿಂದ 1962, 1983, 1985 ಹಾಗೂ 1989ರಲ್ಲಿ ಗೆಲುವು ಕಂಡಿದ್ದಾರೆ. ಪಕ್ಷೇತರರರಾಗಿ ಸತತ ಮೂರು ಬಾರಿ ಇಂಡಿ ಕ್ಷೇತ್ರದಿಂದ 1994, 1999 ಹಾಗೂ 2004ರಲ್ಲಿ ಗೆದ್ದು ದಾಖಲೆ ಮಾಡಿದ ಹಿರಿಮೆ ರವಿಕಾಂತ ಪಾಟೀಲರ ಮುಡಗೇರಿದೆ.

ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಜಿಲ್ಲೆಯಲ್ಲಿ ಪ್ರಮುಖ ಜಾತಿಗಳಾದ, ಪಂಚಮಸಾಲಿ, ರೆಡ್ಡಿ, ಗಾಣಿಗ, ಮುಸ್ಲಿಂ ಸಮುದಾಯದಲ್ಲಿ ಯಾರೇ ಚುನಾವಣೆಗೆ ನಿಂತು ನಮ್ಮ ಹೆಸರಿನ ಮುಂದೆ ಪಾಟೀಲ್ ಅನ್ನೋ ಸರ್‌ನೇಮ್ ಇಟ್ಟುಕೊಳ್ಳುತ್ತಾರೆ. ಎಲ್ಲ ಜಾತಿಗಳಲ್ಲಿ ಪಾಟೀಲ್ ಹೆಸರಿನವರಿದ್ದು, ಆಯಾ ಭಾಗದಲ್ಲಿ ತಮ್ಮದೇ ಆದ ಹಿಡಿತವನ್ನು ಹೊಂದಿದ್ದಾರೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More