1962ರಲ್ಲೇ ಮಹಿಳಾ ಪ್ರತಿನಿಧಿ ಆಯ್ಕೆ ಮಾಡಿದ ತುಮಕೂರು ಕ್ಷೇತ್ರ ಈಗ ಹೇಗಿದೆ?

ತುಮಕೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಟಿಕೆಟ್ ಯಾರಿಗೆ ಎಂಬ ಗೊಂದಲ ಮುಂದುವರಿದಿದೆ. ಸೊಗಡು ಶಿವಣ್ಣ ಮತ್ತು ಜ್ಯೋತಿ ಗಣೇಶ್ ನಡುವೆ ಟಿಕೆಟ್‍ಗಾಗಿ ಕಿತ್ತಾಟ ಆರಂಭವಾಗಿದೆ. ಜೆಡಿಎಸ್‍ನ ಅಭ್ಯರ್ಥಿ ನೀರು ಗೋವಿಂದರಾಜು ಈಗಾಗಲೇ ಎರಡು ಸುತ್ತಿನ ಪ್ರಚಾರ ನಡೆಸಿದ್ದಾರೆ

ತುಮಕೂರು ಜಿಲ್ಲೆಯ ಇತಿಹಾಸದಲ್ಲಿ ಮಹಿಳೆಯೊಬ್ಬರು ಶಾಸಕರಾಗಿ ಆಯ್ಕೆಯಾಗಿದ್ದು ಒಂದೇ ಬಾರಿ. 1962ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ಭಾಗೀರಥಮ್ಮ 15,178 ಮತಗಳು (ಶೇ.48.63) ಮತ ಪಡೆದು ಆಯ್ಕೆಯಾಗಿದ್ದರು. ಇವರನ್ನು ಬಿಟ್ಟರೆ ತಿಪಟೂರು ಮತ್ತು ಕುಣಿಗಲ್‍ನಲ್ಲಿ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ ಗೆದ್ದ ಇತಿಹಾಸ ಇಲ್ಲ. ಭಗೀರಥಮ್ಮ ಆಯ್ಕೆ ಜಿಲ್ಲೆಯ ಮಹಿಳಾಲೋಕದ ಸಾಕ್ಷಿ ಪ್ರಜ್ಞೆಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಮಹಿಳಾ ಪರ ಧ್ವನಿಯೇ ಇಲ್ಲದ ಕಾಲದಲ್ಲಿ ಕಾಂಗ್ರೆಸ್ ಮಹಿಳೆಯೊಬ್ಬರಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡಿರುವುದು ಈಗ ಇತಿಹಾಸ. ಈ ದಾಖಲೆಯನ್ನು ಇದುವರೆಗೂ ಮರಿಯಲು ಯಾರಿಂದಲೂ ಆಗಿಲ್ಲ. ಪ್ರತಿಸ್ಪರ್ಧಿ ಟಿ ಎಸ್ ಮಲ್ಲಿಕಾರ್ಜುನಯ್ಯ ವಿರುದ್ದ ಸೆಡ್ಡುಹೊಡೆದು 5 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು ಭಗೀರಥಮ್ಮ ಅವರ ಸಾಧನೆ.

ಎರಡನೇ ಬಾರಿಗೆ 1967ರಲ್ಲಿ ಚುನಾವಣೆ ನಡೆದಾಗಲೂ ಜಿ ಸಿ ಭಾಗೀರಥಮ್ಮ ಸ್ಪರ್ಧಿಸಿ ಸೋಲು ಕಂಡಿದ್ದರು. ಜಿಲ್ಲೆಯ ಮಟ್ಟಿಗೆ ಗೆದ್ದವರು ಅವರೇ ಪ್ರಥಮ, ಅವರೇ ಕಡೆ ಮಹಿಳೆ. ತಿಪಟೂರಿನಲ್ಲಿ ಕಾಂಗ್ರೆಸ್‍ನಿಂದ 1994ರಲ್ಲಿ ಅನ್ನಪೂರ್ಣಮ್ಮ ಸ್ಪರ್ಧಿಸಿದರೂ ಎರಡನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು. ವೈ ಕೆ ರಾಮಯ್ಯ ಸಾವನ್ನಪ್ಪಿದ ನಂತರ ಕಾಂಗ್ರೆಸ್‌ನಿಂದ ಟಿಕೆಟ್ ನೀಡಬಹುದು ಎಂದು ನಿರೀಕ್ಷಿಸಿದ್ದ ವೈ ಕೆ ಆರ್ ಪತ್ನಿ ಅನಸೂಯಮ್ಮ ಅವರಿಗೆ ಟಿಕೆಟ್ ಕೊಡಲಿಲ್ಲ. ಇದರಿಂದ ಬೇಸತ್ತ ಅನಸೂಯಮ್ಮ ಬಿಜೆಪಿ ಸೇರಿದರು. ಟಿಕೆಟ್ ಕೂಡ ಸಿಕ್ಕಿತ್ತು. ಸುಮಾರು 30 ಸಾವಿರಕ್ಕೂ ಹೆಚ್ಚು ಮತ ಪಡೆದರೂ ಗೆಲುವು ಸಾಧಿಸಲಾಗಲಿಲ್ಲ. ಹಾಗೆ ನೋಡಿದರೆ, ಭಗೀರಥಮ್ಮ ಅವರದ್ದು ದಾಖಲೆ.

ತುಮಕೂರು ಕ್ಷೇತ್ರದಲ್ಲಿ ಮೊದಲು ಮತ್ತು ಮೂರನೇ ಚುನಾವಣೆಯಲ್ಲಿ ಪ್ರಜಾ ಸೋಷಲಿಸ್ಟ್ ಪಕ್ಷದ ಅಭ್ಯರ್ಥಿ ಆಯ್ಕೆಯಾದರು. 1967ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದ ಗಂಗಾದರ್ ವಿರುದ್ದ ಭಗೀರಥಮ್ಮ ಸೋಲು ಕಂಡರು; ಕೇವಲ 7,936 ಮತ ಪಡೆದು ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಮತ ಪ್ರಮಾಣ ಶೇ.34.55ರಷ್ಟು ಪಡೆದರೂ ಸೋಲನುಭವಿಸಿದರು. 1972, 1978ರಲ್ಲಿ ಕ್ರಮವಾಗಿ ಕಾಂಗ್ರೆಸ್‍ನ ಅಬ್ದುಲ್ ಸುಭಾನ್ ಮತ್ತು ನಜೀರ್ ಅಹಮದ್ ಗೆಲುವು ಸಾಧಿಸಿದ್ದರು. ಮತಪ್ರಮಾಣ ಕ್ರಮವಾಗಿ ಶೇ.34.55 ಮತ್ತು ಶೇಕಡ 53.81.

1983 ಮತ್ತು 1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಲಕ್ಷ್ಮಿನರಸಿಂಹಯ್ಯ 34,689 ಮತ ಪಡೆದು (ಶೇ.54.11) ಆಯ್ಕೆ ಆಗಿದ್ದು ವಿಶೇಷ. 1989ರಲ್ಲಿ ಕಾಂಗ್ರೆಸ್‍ನ ಎಸ್ ಷಫಿ ಅಹಮದ್ 44,786 ಮತ ಗಳಿಸಿ, ಪ್ರತಿಸ್ಪರ್ಧಿ ಜನತಾ ಪಕ್ಷದ ಲಕ್ಷ್ಮೀನರಸಿಂಹಯ್ಯ ಅವರಿಗಿಂತ 5 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಆದರೆ ನಂತರದಲ್ಲಿ ಲಕ್ಷ್ಮೀನರಸಿಂಹಯ್ಯ ಸಾವಿನೊಂದಿಗೆ ಜನತಾ ಪಕ್ಷದ ಪತನವೂ ಆಯಿತು.

1994, 1999, 2004, 2008 ನಾಲ್ಕು ಬಾರಿಯೂ ಸೊಗಡು ಶಿವಣ್ಣ ಬಿಜೆಪಿಯಿಂದ ಸತತವಾಗಿ ಆಯ್ಕೆಯಾದರು. ಆರಂಭದಲ್ಲಿ ಪ್ರತಿ ಬಡಾವಣೆಗೂ ಭೇಟಿ ನೀಡಿ, ಅಶ್ವತ್ಥ ಕಟ್ಟೆಗಳ ಮೇಲೆ ಕುಳಿತು ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದ ಸೊಗಡು ಶಿವಣ್ಣ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದರು. ಬರುಬರುತ್ತ ಅವರ ಕಾರ್ಯಶೈಲಿ ಬದಲಾಯಿತು. ಜನರಿಂದ ದೂರ ಸರಿಯುತ್ತ ಹೋದರು. ಡಿ ವಿ ಸದಾನಂದಗೌಡರ ಕಾಲದಲ್ಲಿ ಸಾಂಖ್ಯಿಕ ಸಚಿವರೂ, ಜಿಲ್ಲಾ ಉಸ್ತುವಾರಿ ಸಚಿವರೂ ಆದರೂ ಯಾವುದೇ ಕೆಲಸ ಮಾಡಲಿಲ್ಲ ಎಂಬ ಆರೋಪ ಅವರ ಮೇಲಿದೆ. ಅವರು ಮೊದಲು ಗೆದ್ದಾಗ ಮತ ಪ್ರಮಾಣ ಹೆಚ್ಚಾಗಿದ್ದರೆ 2008ರ ವೇಳೆಗೆ ಕುಸಿದಿರುವುದು ಇದಕ್ಕೆ ಸಾಕ್ಷಿ. ಈ ಮೂರು ಅವಧಿಯಲ್ಲೂ ಕಾಂಗ್ರೆಸ್‍ನ ಎಸ್ ಷಫೀ ಅಹಮದ್ ಪ್ರತಿಸ್ಪರ್ಧಿ ಆಗಿದ್ದು, ಎರಡನೇ ಸ್ಥಾನ ಉಳಿಕೊಂಡಿದ್ದರು. ನಾಲ್ಕನೇ ಬಾರಿಗೆ ಷಫಿ ಅಳಿಯ ರಫೀಕ್ ಅಹಮದ್ ಸ್ಪರ್ಧಿಸಿ ಸೋತರು.

ಇದನ್ನೂ ಓದಿ : ಕೊರಟಗೆರೆ; ಪರಮೇಶ್ವರ್ ಮತ್ತು ಸುಧಾಕರ್ ನಡುವೆ ಪ್ರಬಲ ಪೈಪೋಟಿ ನಿರೀಕ್ಷೆ

2008ರ ವೇಳೆಗೆ ಜೆಡಿಎಸ್ ಮತ ಪ್ರಮಾಣವನ್ನು ಹೆಚ್ಚಿಸಿಕೊಂಡಿದೆಯಾದರೂ ಅಧಿಕಾರ ಹಿಡಿಯಲು ಆಗಿಲ್ಲ. ಜೆಡಿಎಸ್‌ನ ರವೀಶ್ 24,595 ಮತ ಪಡೆದು ಮೂರನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಫೀಕ್ ಅಹಮದ್ ಕಾಂಗ್ರೆಸ್‍ನಿಂದ ಸ್ಪರ್ಧಿಸಿ 43,681 ಮತ ಪಡೆದು ಆಯ್ಕೆಯಾದರೆ, ಕೆಜೆಪಿಯ ಜ್ಯೋತಿ ಗಣೇಶ್ 40,073 ಮತ ಪಡೆದು ಎರಡನೇ ಸ್ಥಾನಕ್ಕೆ ಏರಿದರು. ಜೆಡಿಎಸ್‌ನ ಗೋವಿಂದರಾಜು 38,322 ಮತಗಳು ಪಡೆದು ಮೂರನೇ ಸ್ಥಾನಕ್ಕೆ ಇಳಿದರು.

ಇದೀಗ ಬಿಜೆಪಿಯಲ್ಲಿ ಟಿಕೆಟ್ ಯಾರಿಗೆ ಎಂಬ ಗೊಂದಲ ಮುಂದುವರಿದಿದೆ. ಸೊಗಡು ಶಿವಣ್ಣ ಮತ್ತು ಜ್ಯೋತಿ ಗಣೇಶ್ ನಡುವೆ ಟಿಕೆಟ್‍ಗಾಗಿ ಕಿತ್ತಾಟ ಆರಂಭವಾಗಿದೆ. ಈ ನಡುವೆ, ಜೆಡಿಎಸ್‍ ಅಭ್ಯರ್ಥಿ ನೀರು ಗೋವಿಂದರಾಜು ಈಗಾಗಲೇ ಎರಡು ಸುತ್ತಿನ ಪ್ರಚಾರ ನಡೆಸಿದ್ದಾರೆ. ಆದರೆ, ಅವರಿಗೆ ಸ್ಥಳೀಯ ನಾಯಕರ ಬೆಂಬಲ ವ್ಯಕ್ತವಾಗಿಲ್ಲ. ಪಾಲಿಕೆ ಸದಸ್ಯರು ಮತ್ತು ಸ್ಥಳೀಯ ಮುಖಂಡರನ್ನು ಕಡೆಗಣಿಸಿ ಒಬ್ಬರೇ ಪ್ರಚಾರ ನಡೆಸುತ್ತಿದ್ದಾರೆ. “ಅದ್ಹೇಗೆ ಗೆಲ್ಲುತ್ತಾರೋ ನಾವು ನೋಡುತ್ತೇವೆ,” ಎಂದು ಮುಖಂಡರು ಕೈಚೆಲ್ಲಿ ಕುಳಿತಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್‌ನಿಂದ ಹಾಲಿ ಶಾಸಕ ರಫೀಕ್ ಅಹಮದ್‍ಗೆ ಟಿಕೆಟ್ ಖಚಿತವಾಗಿದೆ. ಜೆಡಿಎಸ್ ಮತ್ತು ಬಿಜೆಪಿ ಗೊಂದಲದ ಲಾಭ ಯಾರಿಗೆ ಆಗಲಿದೆ ಎಂದು ಕಾದುನೋಡಬೇಕು.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More