ಚುನಾವಣಾ ಕಣ | ಕುತೂಹಲ ಕೆರಳಿಸಿದೆ ತಿಪಟೂರು ಕ್ಷೇತ್ರದ ಕೈ ಅಭ್ಯರ್ಥಿ ಘೋಷಣೆ

ತಿಪಟೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಕೆ ಷಡಕ್ಷರಿ ಅವರಿಗೆ ಕಾಂಗ್ರೆಸ್‌ ಟಿಕೆಟ್ ತಪ್ಪಿದೆ. ಬದಲಿಗೆ ಜೆಡಿಎಸ್‍ನಲ್ಲಿದ್ದ ನಂಜಾಮರಿಗೆ ಟಿಕೆಟ್ ನೀಡಲಾಗಿದೆ. ನಂಜಾಮರಿ ಪಕ್ಷೇತರವಾಗಿ ಕಣಕ್ಕಿಳಿಯಲ್ಲಿದ್ದಾರೆ ಎಂದು ಭಾವಿಸಿದ್ದ ಎಲ್ಲರಿಗೂ ಕಾಂಗ್ರೆಸ್‌ ಟಿಕೆಟ್‌ ನೀಡುವ ಮೂಲಕ ಅಚ್ಚರಿ ಮೂಡಿಸಿದೆ

ತುಮಕೂರು ಜಿಲ್ಲೆಯ ಕಾಂಗ್ರೆಸ್‌ ಟಿಕೆಟ್ ಹಂಚಿಕೆಯಲ್ಲಿ ಅಚ್ಚರಿದಾಯಕ ಬೆಳೆವಣಿಗೆಯೊಂದು ಘಟಿಸಿದೆ. ಅವರು ಚುನಾವಣೆಗೆ ಸ್ಪರ್ಧಿಸುತ್ತಾರೆಂಬುದನ್ನು ಬಿಟ್ಟರೆ ಕಾಂಗ್ರೆಸ್‍ನಿಂದ ಅವರು ಅಭ್ಯರ್ಥಿಯಾಗುತ್ತಾರೆ. ಹಾಲಿ ಶಾಸಕರಿಗೆ ಟಿಕೆಟ್ ತಪ್ಪುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಪ್ರತಿಪಕ್ಷಗಳು ಕೂಡ ಷಡಕ್ಷರಿ ಸ್ಪರ್ಧಿಸುತ್ತಾರೆ ಅಂದುಕೊಂಡಿದ್ದವು. ಆದರೆ ಅದೆಲ್ಲವೂ ಉಲ್ಟಾ ಆಗಿದೆ. ತಿಪಟೂರು ಕ್ಷೇತ್ರದ ಹಾಲಿ ಶಾಸಕ ಕೆ. ಷಡಕ್ಷರಿ ಅವರಿಗೆ ಟಿಕೆಟ್ ನೀಡದೆ ಬೇರೊಂದು ಪಕ್ಷದ ಅಭ್ಯರ್ಥಿಗೆ ಟಿಕೆಟ್ ನೀಡಿರುವುದು ಎಲ್ಲರಲ್ಲೂ ಕುತೂಹಲಕ್ಕೆ ಕಾರಣವಾಗಿದೆ.

ತಿಪಟೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಕೆ ಷಡಕ್ಷರಿ ಅವರಿಗೆ ಟಿಕೆಟ್ ತಪ್ಪಿದೆ. ಬದಲಿಗೆ ಜೆಡಿಎಸ್‍ನಲ್ಲಿದ್ದ ನಂಜಾಮರಿಗೆ ಟಿಕೆಟ್ ನೀಡಲಾಗಿದೆ. ನಂಜಾಮರಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಜೆಡಿಎಸ್ ಅಭ್ಯರ್ಥಿಯಾಗಿ ಕೆಜೆಪಿಯಿಂದ ವಲಸೆ ಬಂದ ಲೋಕೇಶ್ ಅವರಿಗೆ ನೀಡಿರುವುದು ನಂಜಾಮರಿ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಅವರ ನಡೆ ಏನೆಂಬುದನ್ನು ಕೊನೆಯವರೆಗೂ ಬಿಟ್ಟುಕೊಡಲಿಲ್ಲ. ಎಐಸಿಸಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಮೇಲೆಯೇ ನಂಜಾಮರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂಬುದು ಗೊತ್ತಾಗಿದ್ದು.

ದಿಢೀರ್ ನಡೆದ ಬೆಳವಣಿಗೆಯಲ್ಲಿ ಹಾಲಿ ಶಾಸಕ ಕೆ.ಷಡಕ್ಷರಿ ಅವರಿಗೂ ಶಾಕ್ ಆಗಿದೆ. ಅಭ್ಯರ್ಥಿ ನಾನೇ, ಟಿಕೆಟ್ ತನಗೆ ಖಚಿತ, ತನಗೆ ಪ್ರತಿಸ್ಪರ್ಧಿ ಬೇರೆ ಯಾರೂ ಇಲ್ಲ ಅಂದುಕೊಂಡಿದ್ದ ಹಾಲಿ ಶಾಸಕ ಕೆ.ಷಡಕ್ಷರಿಗೆ ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸರಿಯಾದ ಹೊಡೆತ ನೀಡಿದ್ದಾರೆ. ಇದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ಗೆ ತೀವ್ರ ಹಿನ್ನಡೆ ಆಗಿದೆ ಎಂಬ ವಿಶ್ಲೇಷಣೆಯೂ ನಡೆಯುತ್ತಿದೆ. ಷಡಕ್ಷರಿ ಕೆಪಿಸಿಸಿ ಅಧ್ಯಕ್ಷ ಜಿ.ಪಮೇಶ್ವರ್ ಬೆಂಬಲಿಗ ಎಂಬುದು ಗೊತ್ತಿರುವ ಸಂಗತಿ. ಇದೊಂದೇ ಮಾನದಂಡವನ್ನಾಗಿಟ್ಟಿಕೊಂಡು ಷಡಕ್ಷರಿಗೆ ಟಿಕೆಟ್ ತಪ್ಪಿಸಲಾಗಿದೆಯೇ ಎಂಬ ಪ್ರಶ್ನೆಗೆ ಇಲ್ಲ ಎನ್ನುತ್ತದೆ ಅವರ ಆಪ್ತ ವಲಯ.

ಷಡಕ್ಷರಿ ಅವರು ಕೆಲವೇ ಮಂದಿಯ ಮಾತುಗಳಿಗೆ ಮಾತ್ರ ಮನ್ನಣೆ ನೀಡುತ್ತಿದ್ದರು. ದ್ವೇಷದ ರಾಜಕಾರಣ ಮಾಡುತ್ತಿದ್ದರು. ಯಾವುದೇ ಸಂಘಟನೆಯವರು ತಾಲೂಕು ಅಭಿವೃದ್ಧಿಯ ಕುರಿತು ಸಲಹೆಗಳನ್ನು ನೀಡಿದರೆ ಅದನ್ನು ಸ್ವೀಕರಿಸದಂತಹ ಮನಸ್ಥಿತಿ ಬೆಳೆಸಿಕೊಂಡಿದ್ದರು. ಜಮೀನು ವಿವಾದದಲ್ಲಿ ಸಿಲುಕಿದ್ದರು. ಎರಡನೇ ಪತ್ನಿ, “ಷಡಕ್ಷರಿಗೆ ಟಿಕೆಟ್ ನೀಡಿದರೆ ನಾನು ಅವರ ವಿರುದ್ಧ ಸ್ಪರ್ಧಿಸುತ್ತೇನೆ,” ಎಂದು ವಿವಾದ ಸೃಷ್ಟಿಸಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಷಡಕ್ಷರಿ ಅವರಿಗೆ ಟಿಕೆಟ್ ತಪ್ಪಿತು ಎಂದು ಹೇಳಲಾಗುತ್ತಿದೆ. ಇವೆಲ್ಲ ಅಂಶಗಳನ್ನು ಪರಿಗಣಿಸಿರುವ ಮುಖ್ಯಮಂತ್ರಿಗಳು ಷಡಕ್ಷರಿ ಅವರಿಗೆ ಟಿಕೆಟ್ ನೀಡಿಲ್ಲ ಎಂಬ ಲೆಕ್ಕಾಚಾರಗಳು ಚಾಲ್ತಿಗೆ ಬಂದಿವೆ.

ಹಾಗೆ ನೋಡಿದರೆ ಷಡಕ್ಷರಿ ಅವರಿಗಿಂತ ನಂಜಾಮರಿ ಅವರೇ ಪ್ರಬಲ ಮತ್ತು ಪೈಪೋಟಿ ನೀಡಬಲ್ಲ ಅಭ್ಯರ್ಥಿ. ಇದರಲ್ಲಿ ಎರಡು ಮಾತೇ ಇಲ್ಲ. ಹಣಬಲ, ಜಾತಿ ಬಲ ಎರಡೂ ಇದೆ. ಲಿಂಗಾಯತ ಸಮುದಾಯಕ್ಕೆ ಸೇರಿರುವ ನಂಜಾಮರಿ ವಿರೋಧಿ ಅಭ್ಯರ್ಥಿಗೆ ತೀವ್ರ ಪೈಪೋಟಿ ನೀಡಬಲ್ಲ ಶಕ್ತಿಯಿದೆ ಎಂಬುದು ಅವರ ಆಪ್ತರ ಅಂಬೋಣ. ಬಿಜೆಪಿಯಿಂದ 1994ರಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದ ನಂಜಾಮರಿ ಬದಲಾದ ಸನ್ನಿವೇಶದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದರು. ಜೆಡಿಎಸ್‍ನಿಂದ 2004ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈಗ ದಿಢೀರ್ ಕಾಂಗ್ರೆಸ್ ಸೇರ್ಪಡೆಯಾಗಿ, ಟಿಕೆಟ್‍ನ್ನು ಗಿಟ್ಟಿಸಿಕೊಂಡಿದ್ದಾರೆ ನಂಜಾಮರಿ.

ಇದನ್ನೂ ಓದಿ : ತಿಪಟೂರು ಶಾಸಕರಾಗಿ ಪ್ರತಿ ಬಾರಿ ಆಯ್ಕೆ ಆಗುವವರು ಕೊಬ್ಬರಿ ವರ್ತಕರೇ!

ರಾತ್ರಿ ಬೆಳಗಾಗುವುದರೊಳಗೆ ನಡೆದಿರುವ ಈ ಬೆಳವಣಿಗೆ ಎಲ್ಲರನ್ನು ಅಚ್ಚರಿ ಮತ್ತು ಕುತೂಹಲಕ್ಕೆ ತಳ್ಳುವಂತೆ ಮಾಡಿದೆ. ನಂಜಾಮರಿ ತಿಪಟೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದರೆ ಎಂದು ಮಾತನಾಡಿಕೊಳ್ಳುವಂತೆ ಮಾಡಿದೆ. ಜೊತೆಗೆ ಬಿಜೆಪಿಯ ನಾಗೇಶ್ ವಿರುದ್ಧ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ.

ತುಮಕೂರು ಜಿಲ್ಲೆಯಲ್ಲಿ ಕೆಲವೊಂದು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ. ಕುಣಿಗಲ್‍ನಲ್ಲಿ ಬಿ.ಬಿ.ರಾಮಸ್ವಾಮಿಗೌಡ ಅವರಿಗೆ ಟಿಕೆಟ್ ತಪ್ಪಿದೆ. ನಿರೀಕ್ಷೆಯಂತೆ ಸಂಸದ ಡಿ.ಕೆ.ಸುರೇಶ್ ಸಂಬಂಧಿ ಡಾ.ರಂಗನಾಥ್ ಅವರಿಗೆ ಟಿಕೆಟ್ ದೊರೆತಿದೆ. ಇದು ಡಿಕೆ ಸಹೋದರರಿಗೆ ಮೇಲುಗೈಯಾಗಿದ್ದು, ಕುಣಿಗಲ್ ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ ಪಾವಗಡ ಕ್ಷೇತ್ರಕ್ಕೆ ಮಾಜಿ ಸಚಿವ ವೆಂಕಟರಮಣಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಇತ್ತೀಚೆಗೆ ಕೆಜೆಪಿ/ಬಿಜೆಪಿಯಿಂದ ಸೇರ್ಪಡೆಯಾಗಿರುವ ರಾಯಸಂದ್ರ ರವಿಕುಮಾರ್‌ಗೆ ಟಿಕೆಟ್ ಖಚಿತವಾಗಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More