ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಕಾವು ಕಳೆದುಕೊಂಡ ಮಹದಾಯಿ ಹೋರಾಟ

ಚಳುವಳಿಯನ್ನು ರಾಜಕೀಯದಿಂದ ಹೊರಗಿಡುವ ನಿಲುವು ಕೆಲವು ಹೋರಾಟಗಾರದ್ದಾದರೆ, ಕೆಲವರದ್ದು ಚುನಾವಣೆಯಲ್ಲಿ ಸ್ಪರ್ಧಿಸಿ ಬೇಡಿಕೆ ಈಡೇರಿಸಿಕೊಳ್ಳಲು ಶ್ರಮಿಸಬೇಕು ಎಂಬ ನಿಲುವು. ಅಂತಿಮವಾಗಿ ಯಾವುದೇ ನಿರ್ದಿಷ್ಟ ನಿಲುವು ತಳೆಯಲಾರದೆ ಮಹದಾಯಿ ಹೋರಾಟ ತಣ್ಣಗಾಗಿದೆ

ಒಂದು ಸಾವಿರಕ್ಕೂ ಹೆಚ್ಚು ದಿನಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುತ್ತಿರುವ ಮಹದಾಯಿ ಹೋರಾಟ ಚುನಾವಣೆಯ ಸಂದರ್ಭದಲ್ಲಿಯೇ ಮಂಕಾದಂತೆ ಕಾಣುತ್ತಿದೆ. ಮಹದಾಯಿ ನೀರಿಗಾಗಿ ಆಗ್ರಹಿಸಿ ರೈತ ಸೇನಾ-ಕರ್ನಾಟಕ ವೇದಿಕೆ ಗದಗ್ ಜಿಲ್ಲೆಯ ನರಗುಂದದಲ್ಲಿ ಹೋರಾಟ ಪ್ರಾರಂಭಿಸಿತ್ತು. ಈ ಸಂಘಟನೆಯ ಹೋರಾಟ ಗಟ್ಟಿಯಾಗುತ್ತಿದ್ದಂತೆ ಉತ್ತರ ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಮಹದಾಯಿ ಹೋರಾಟದ ಕೂಗು ಮಾರ್ದನಿಸತೊಡಗಿತು. ಆಗ ರೈತ ಸೇನಾ-ಕರ್ನಾಟಕ ವೇದಿಕೆಗೆ ಆನೆ ಬಲ ಬಂದಂತಾಗಿ ಹೋರಾಟ ಹಿಗ್ಗುತ್ತ ಸಾಗಿತು. ಮೂರು ವರ್ಷಗಳ ಕಾಲ ಸುದೀರ್ಘವಾಗಿ ನಡೆದ ಹೋರಾಟ ಚುನಾವಣೆಯ ಹೊಸ್ತಿಲಲ್ಲಿಯೇ ಮಂಕಾಗಿದ್ದು ಮಾತ್ರ ಸಾಕಷ್ಟು ಅನುಮಾನಗಳನ್ನು ಈಗ ಹುಟ್ಟು ಹಾಕುವಂತೆ ಮಾಡಿದೆ.

ಹೋರಾಟ ಮಂಕಾಗಲು ಕಾರಣವನ್ನು ಕೆದಕುತ್ತ ಹೋದರೆ, ಹೋರಾಟಗಾರರ ತಪ್ಪು ನಿರ್ಧಾರ ಹಾಗೂ ರಾಜಕೀಯ ಪಕ್ಷಗಳ ತಂತ್ರ ಕೆಲಸ ಮಾಡಿದೆ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಬೆಂಗಳೂರಿನಲ್ಲಿ ಬಿಜೆಪಿ ಕಚೇರಿ ಎದುರು ಮಹದಾಯಿ ಹೋರಾಟಗಾರರು ಪ್ರತಿಭಟನೆ ಹಮ್ಮಿಕೊಂಡ ದಿನದಿಂದಲೇ ಈ ಹೋರಾಟ ದಾರಿ ತಪ್ಪಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತು. ಹೋರಾಟದ ನೇತೃತ್ವವನ್ನು ರೈತ ಸೇನೆಯ ಅಧ್ಯಕ್ಷ ವೀರೇಶ ಸೊಬರದಮಠ ಹಾಗೂ ಉಪಾಧ್ಯಕ್ಷ ಶಂಕರಪ್ಪ ಅಂಬಲಿ ವಹಿಸಿಕೊಂಡಿದ್ದರು. ಆದರೆ, ಬೆಂಗಳೂರಿನ ಬಿಜೆಪಿ ಕಚೇರಿ ಎದುರು ನಡೆದ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ ಪಂಚನಗೌಡ ದ್ಯಾಮನಗೌಡರ ಎಂಬುವವರು ಈ ಇಬ್ಬರು ನಾಯಕರ ಮಧ್ಯೆ ಕಾಣಿಸಿಕೊಂಡರು. ಇವರನ್ನು ನೋಡಿದ್ದೇ ತಡ, ಬಿಜೆಪಿ ಇದು ಕಾಂಗ್ರೆಸ್ ಕೃಪಾಪೋಷಿತ ಹೋರಾಟವೆಂದು ಟೀಕಿಸತೊಡಗಿತು.

ಈ ಸಂದರ್ಭದಲ್ಲಿ ದ್ಯಾಮನಗೌಡರ್‌ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಸಂಪೂರ್ಣವಾಗಿ ಹೋರಾಟದಲ್ಲಿಯೇ ಗುರುತಿಸಿಕೊಂಡರು. ರೈತ ಸೇನಾದ ಅಧ್ಯಕ್ಷ ವೀರೇಶ ಸೊಬರದಮಠ ಅವರಿಗೆ ಆಪ್ತರಾಗಿ ಅವರೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು. ಸೊಬರದಮಠ ಅವರು ಪ್ರತಿಯೊಂದು ನಿರ್ಧಾರ ತೆಗೆದುಕೊಳ್ಳುವಾಗಲೂ ದ್ಯಾಮನಗೌಡರ ಅವರನ್ನು ಕೇಳಿಯೇ ತೆಗೆದುಕೊಳ್ಳುವಷ್ಟರ ಮಟ್ಟಿಗೆ ಇಬ್ಬರು ಆಪ್ತರಾದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶಂಕರಪ್ಪ ಅಂಬಲಿ ಅವರನ್ನು ಸೊಬರದಮಠ ಸ್ವಲ್ಪ ಮಟ್ಟಿಗೆ ದೂರ ಮಾಡಿದರೆಂಬ ಮಾತು ಕೇಳಿಬಂದಿದೆ. ಹೋರಾಟದಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ಸ್ವಲ್ಪ ಮಟ್ಟಿಗೆ ಪ್ರಚಾರ ಸಿಗುತ್ತಿದ್ದಂತೆ ದ್ಯಾಮನಗೌಡರ, ಹೋರಾಟದಿಂದ ದೂರವಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಆಶೆಯಿಂದ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನಿಸತೊಡಗಿದರು. ಈ ನಡುವೆ ಅಧ್ಯಕ್ಷ ಸೊಬರದಮಠ ಹಾಗೂ ಉಪಾಧ್ಯಕ್ಷ ಅಂಬಲಿ ಅವರ ಸ್ನೇಹ ಹಳಸಿ ಹೋಗಿತ್ತು.

ಇಷ್ಟೆಲ್ಲ ನಡೆದ ನಂತರ ಅಂಬಲಿ ಹಾಗೂ ಸೊಬರಮಠ ಅವರನ್ನು ಮತ್ತೇ ಒಂದು ಮಾಡಲು ಇನ್ನಿತರ ಹೋರಾಟಗಾರರು ಸಾಕಷ್ಟು ಶ್ರಮಿಸಿದರು. ಆದರೆ, ಅದು ಫಲ ನೀಡಲಿಲ್ಲ. ಚುನಾವಣೆಗೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಮಹದಾಯಿ ಹೋರಾಟಗಾರರ ನಿಲುವು ನಿರ್ಧರಿಸುವುದಕ್ಕಾಗಿ ಬಾಗಲಕೋಟೆ ಜಿಲ್ಲೆಯ ಬನಶಂಕರಿಯಲ್ಲಿ ಇತ್ತೀಚೆಗೆ ಸಭೆ ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಹೋರಾಟಗಾರರ ಭಿನ್ನಾಭಿಪ್ರಾಯ ಮತ್ತಷ್ಟು ಹೆಚ್ಚಾಗಿ ಹೋರಾಟವೇ ದಿಕ್ಕು ತಪ್ಪುವಂತಾಯಿತು.

ಮಹದಾಯಿ ಹೋರಾಟ ವೇದಿಕೆಯಡಿಯೇ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ರೈತ ಸೇನೆ ಈ ಹಿಂದೆ ನಿರ್ಧರಿಸಿತ್ತು. ಹೋರಾಟ ಪ್ರಾರಂಭವಾದ ದಿನದಿಂದಲೂ ಈ ಕುರಿತು ಚಿಂತನೆ ಕೂಡ ನಡೆದಿತ್ತು. ಕೇವಲ ಹೋರಾಟ ಮಾಡುವುದರಿಂದ ನಮ್ಮ ಎಲ್ಲ ಬೇಡಿಕೆಗಳು ಈಡೇರುವುದಿಲ್ಲ. ರಾಜಕೀಯಕ್ಕೆ ಧುಮುಕಿಯೇ ನಮ್ಮ ಬೇಡಿಕೆ ಬಗೆಹರಿಸಿಕೊಳ್ಳಬೇಕೆಂಬ ಕಿವಿ ಮಾತನ್ನು ದಿ. ಕೆ.ಎಸ್. ಪುಟ್ಟಣ್ಣಯ್ಯ ಹಾಗೂ ಕೋಡಿಹಳ್ಳಿ ಚಂದ್ರಶೇಖರ ಹಲವು ಬಾರಿ ಹೇಳಿದ್ದರು. ಹೀಗಾಗಿ ರೈತ ಸೇನಾ ಅಧ್ಯಕ್ಷ ವೀರೇಶ ಸೊಬರದಮಠ ನರಗುಂದ ಕ್ಷೇತ್ರಕ್ಕೆ ಹಾಗೂ ಉಪಾಧ್ಯಕ್ಷ ಶಂಕರಪ್ಪ ಅಂಬಲಿ ನವಲಗುಂದ ಕ್ಷೇತ್ರ ಸೇರಿದಂತೆ ರಾಮದುರ್ಗ, ಸವದತ್ತಿ, ಧಾರವಾಡ, ಬಾದಾಮಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ತಯಾರಿ ಕೂಡ ನಡೆದಿತ್ತು ಎಂದು ಹೋರಾಟದಲ್ಲಿ ಗುರುತಿಸಿಕೊಂಡಿರುವ ಹಲವು ರೈತರು ಹೇಳುತ್ತಿದ್ದಾರೆ.

ಇದನ್ನೂ ಓದಿ : ಸಾವಿರ ದಿನ ಪೂರೈಸಿದ ಮಹದಾಯಿ ಹೋರಾಟ, ನರಗುಂದದಲ್ಲಿ ಪ್ರತಿಭಟನೆ
ಮಹದಾಯಿ ಹೋರಾಟ ರಾಜಕೀಯ ಪ್ರೇರೇಪಿತವಾಗುತ್ತಿದೆ. ಇಲ್ಲಿಯವರೆಗೂ ರಾಜಕೀಯ ಯಾವ ಮುಖಂಡರಿಗೂ ಹೋರಾಟದಲ್ಲಿ ಸ್ಥಾನವಿರಲಿಲ್ಲ. ಆದರೆ, ಈಗ ರಾಜಕೀಯ ಮುಖಂಡರು ಹೋರಾಟದಲ್ಲಿ ಮೂಗು ತೂರಿಸುತ್ತಿದ್ದಾರೆ. ಇದಕ್ಕೆ ಹಲವರು ಮನ್ನಣೆ ನೀಡುತ್ತಿದ್ದಾರೆ. ಹೀಗಾಗಿಯೇ ನಾನು ಸಂಘಟನೆಯಿಂದ ಹಿಂದೆ ಸರಿದಿದ್ದೇನೆ. ಆದರೆ, ನನ್ನ ಹೋರಾಟ ಬಿಡುವುದಿಲ್ಲ.
ಶಂಕರಪ್ಪ ಅಂಬಲಿ, ರೈತ ಸೇನಾ- ಕರ್ನಾಟಕ, ರಾಜ್ಯ ಉಪಾಧ್ಯಕ್ಷ

ಹಲವು ರೈತ ಹೋರಾಟಗಾರರು ರಾಜಕೀಯಕ್ಕೆ ಧುಮುಕದೆ, ಕೇವಲ ಹೋರಾಟ ಮಾಡಿ ನಮ್ಮ ಬೇಡಿಕೆ ಈಡೇರಿಸಿಕೊಳ್ಳೋಣ ಎಂದು ಪಟ್ಟು ಹಿಡಿದರೆ, ಇನ್ನು ಕೆಲವರು ನಾವು ಇಲ್ಲಿಯವರೆಗೂ ನಡೆದ ಹಲವು ಚುನಾವಣೆಯಲ್ಲಿ ನೋಟಾಗೆ ಮತ ನೀಡಿದ್ದೇವೆ. ನಮಗೆ ನ್ಯಾಯ ಸಿಗುವವರೆಗೂ ನೋಟಾಗೆ ಮತ ನೀಡೋಣ ಎಂದು ವಾದಿಸಿದ್ದರು. ಕೆಲವರು ಚುನಾವಣೆಯನ್ನೇ ಬಹಿಷ್ಕರಿಸೋಣ ಆಗ ನಮ್ಮ ಶಕ್ತಿ, ರಾಜಕೀಯ ಪಕ್ಷಗಳಿಗೆ ಅರಿವಾಗುತ್ತದೆ ಎಂದು ಸಲಹೆ ನೀಡಿದ್ದರು. ಆದರೆ, ಕೆಲವರು ಚುನಾವಣೆಗೆ ಧುಮುಕಲು ಪ್ರಯತ್ನಿಸಿದ್ದರು. ಇಲ್ಲಿಯವರೆಗೂ ಹೋರಾಟದ ನೇತೃತ್ವ ವಹಿಸಿದ್ದವರ ಮಾತಿಗೆ ಮನ್ನಣೆ ನೀಡುತ್ತಿದ್ದ ಹೋರಾಟಗಾರರೆಲ್ಲ ಈ ಸಂದರ್ಭದಲ್ಲಿ ತಮ್ಮ ತಮ್ಮ ನಿಲುವುಗಳಿಗೆ ಕಟ್ಟುಬಿದ್ದವರಂತೆ ವರ್ತಿಸತೊಡಗಿದರು. ಇದು ಕೂಡ ಹೋರಾಟದ ದಿಕ್ಕು ತಪ್ಪಲು ಕಾರಣವಾಗಿದೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಹಲವರು ತಮ್ಮ ನಿರ್ಧಾರದ ಹಿಂದೆ ಪಟ್ಟು ಬೀಳಲು ಇನ್ನಿತರ ಪಕ್ಷಗಳ ಕುತಂತ್ರ ಅಡಗಿದೆಯೇ ಎಂಬ ಅನುಮಾನ ಕೂಡ ವ್ಯಕ್ತವಾಗುತ್ತಿದೆ. ಏನೇ ಇದ್ದರೂ ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬರುತ್ತಿದ್ದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಮಹದಾಯಿ ಹೋರಾಟಗಾರರು ಬೆವರು ಇಳಿಸುತ್ತಾರೆ ಎಂದು ಅಂದುಕೊಂಡಿದ್ದ ಜನರಿಗೆ ಮಾತ್ರ ನಿರಾಶೆಯಾಗಿದ್ದಂತು ಸತ್ಯ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More