ಚುನಾವಣಾ ಕಣ | ಜಾರಕಿಹೊಳಿ ಕುಟುಂಬದ ದಾಖಲೆ ಗೆಲುವಿನ ರಾಜಕಾರಣ

ಜಾರಕಿಹೊಳಿ ಕುಟುಂಬದ ಮೂವರು ಸದಸ್ಯರು ಸದ್ಯ ತಲಾ ನಾಲ್ಕು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಈಗ ಮೂವರೂ ಐದನೇ ಜಯಕ್ಕಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಮೂವರು ಈ ಬಾರಿ ಗೆದ್ದರೆ, ದೇಶದ ರಾಜಕೀಯದಲ್ಲಿ ಹೊಸ ದಾಖಲೆ ಬರೆಯಲಿದ್ದಾರೆ

ಕುಟುಂಬ ರಾಜಕಾರಣ ಎಂಬುವುದು ದೇಶದ ರಾಜಕಾರಣದೊಂದಿಗೆ ತಳಕು ಹಾಕಿಕೊಂಡು ಬೇರೂರಿ ಹೆಮ್ಮರವಾಗಿ ನಿಂತಿದೆ. ವಿರೋಧಿಸುವ ಮತದಾರರೇ ಇದಕ್ಕೆ ನೀರುಣಿಸಿ ಪೋಷಿಸುತ್ತಿದ್ದಾರೆ. ಹೀಗಾಗಿ ಕುಟುಂಬ ರಾಜಕಾರಣ ಪ್ರತಿಯೊಂದು ಪಕ್ಷಗಳಲ್ಲಿಯೂ ಸ್ಥಾನ ಪಡೆದಿದೆ.

ಸದ್ಯ ಕುಟುಂಬ ರಾಜಕಾರಣದ ವ್ಯಾಪ್ತಿ ದಿನದಿಂದ ದಿನಕ್ಕೆ ಹಿಗ್ಗುತ್ತಿದೆ. ಅದು ದಾಖಲೆ ಬರೆಯುವುದರ ಮಟ್ಟಿಗೆ ಸದ್ಯ ಬೆಳೆದು ನಿಂತಿದೆ. ಈಗ ಕುಟುಂಬ ರಾಜಕಾರಣದಲ್ಲಿ ರಾಜ್ಯದ ಕುಟುಂಬವೊಂದು ದೇಶದಲ್ಲಿಯೇ ದಾಖಲೆ ಬರೆಯಲು ಹೊರಟಿದೆ. ಸತತ ನಾಲ್ಕು ಬಾರಿ ಗೆದ್ದು ಶಾಸಕರಾಗಿರುವ ಜಾರಕಿಹೊಳಿ ಸಹೋದರರೇ ಇಂತಹ ನೂತನ ದಾಖಲೆಗೆ ಸಾಕ್ಷಿಯಾಗಲು ಸಜ್ಜಾಗಿ ನಿಂತಿದ್ದಾರೆ. ಜಾರಕಿಹೊಳಿ ಕುಟುಂಬದ ಮೂವರು ಸದಸ್ಯರು ಸದ್ಯ ತಲಾ ನಾಲ್ಕು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಈಗ ಮೂವರೂ 5ನೇ ಜಯಕ್ಕಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಮೂವರು ಈ ಬಾರಿ ಗೆದ್ದರೆ, ಇಂತಹ ನೂತನ ದಾಖಲೆಗೆ ಸಾಕ್ಷಿಯಾಗಲಿದ್ದಾರೆ.

ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿರುವ ಮಾಜಿ ಸಚಿವ ಸತೀಶ ಜಾರಕಿಹೊಳಿ ಯಮಕನಮರಡಿ ಎಸ್ಟಿ ಮೀಸಲು ಕ್ಷೇತ್ರದಿಂದ ಸತತ ನಾಲ್ಕು ಬಾರಿ ಜಯಗಳಿಸಿದ್ದಾರೆ. ಸತೀಶ್, ವಿಧಾನಸಭೆ ಪ್ರವೇಶಿಸುವುದಕ್ಕೂ ಮುನ್ನ ಬೆಳಗಾವಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ ಎರಡು ಬಾರಿ ವಿಧಾನಪರಿಷತ್ ಪ್ರವೇಶಿಸಿದ್ದರು. ಸಿದ್ಧರಾಮಯ್ಯ ಜೊತೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಸಿದ್ದರಾಮಯ್ಯ ಅವರು ಸಿಎಂ ಆಗುತ್ತಿದ್ದಂತೆ, ಅಬಕಾರಿ ಖಾತೆ ಸಚಿವರಾಗಿ ಹಾಗೂ ನಂತರ ಸಣ್ಣ ಕೈಗಾರಿಕೆ ಸಚಿವರಾಗಿ ಕೆಲಸ ಮಾಡಿದ್ದಾರೆ. ಸದ್ಯ ಕೆಪಿಸಿಸಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತೊಂದು ಬಾರಿ ಇವರಿಗೆ ಟಿಕೆಟ್ ಖಚಿತವಾಗಿದ್ದು, 5ನೇ ಬಾರಿಗೆ ಯಮಕನಮರಡಿ ಮತಕ್ಷೇತ್ರದಿಂದ ಕಣಕ್ಕಿಳಿಯಲ್ಲಿದ್ದಾರೆ.

ಜಾರಕಿಹೊಳಿ ಕುಟುಂಬದ ಹಿರಿಯ ಸಹೋದರ ರಮೇಶ ಜಾರಕಿಹೊಳಿ ಗೋಕಾಕದಿಂದ 1999ರಲ್ಲಿ ಚಂದ್ರಶೇಖರ ನಾಯಕ ಎನ್ನುವವರನ್ನು ಸೋಲಿಸಿ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಅದಾದ ನಂತರ 2004, 2008 ಹಾಗೂ 2013ರ ವಿಧಾನಸಭಾ ಚುನಾವಣೆಯಲ್ಲೂ ಸತತ ಗೆಲುವು ಸಾಧಿಸಿದ್ದಾರೆ. ಸದ್ಯ ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ಸಹಕಾರಿ ಸಚಿವರಾಗಿದ್ದವರು. ಮುಂದಿನ ಚುನಾವಣೆಯಲ್ಲೂ ಗೋಕಾಕ ಮತಕ್ಷೇತ್ರದಿಂದ ಟಿಕೆಟ್ ಪಕ್ಕಾ ಆಗಿದ್ದು, 5ನೇ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.

ಇನ್ನು ಜಾರಕಿಹೊಳಿ ಕುಟುಂಬದ ಮತ್ತೊಬ್ಬ ಸಹೋದರ ಬಾಲಚಂದ್ರ ಜಾರಕಿಹೊಳಿ ಅರಬಾವಿ ಮತಕ್ಷೇತ್ರದ ಬಿಜೆಪಿಯ ಹಾಲಿ ಶಾಸಕ. 2004ರಲ್ಲಿ ಅಂದಿನ ಪ್ರಭಾವಿ ನಾಯಕ ವಿ.ಎಸ್. ಕೌಜಲಗಿ ಅವರನ್ನು ಸೋಲಿಸಿ ಜೆಡಿಎಸ್‌ನಿಂದ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. ಇದಾದ ನಂತರ 2008ರಲ್ಲೂ ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು. ಆಪರೇಷನ್ ಕಮಲಕ್ಕೆ ಒಳಗಾಗಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರಿಂದ ಬಿಜೆಪಿಯಿಂದ 2008ರ ಉಪಚುನಾವಣೆ ಹಾಗೂ 2013ರಲ್ಲಿ ಸತತ ಗೆಲುವು ಸಾಧಿಸಿದರು. ಅಷ್ಟೇ ಅಲ್ಲ ಕಳೆದ ಬಾರಿ 72 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ದಾಖಲೆ ಬರೆದಿದ್ದರು. ಈ ಬಾರಿಯೂ ಅರಭಾವಿಯಿಂದ ಬಿಜೆಪಿ ಅಭ್ಯರ್ಥಿಯಾಗಿದ್ದು, ಐದನೇ ಬಾರಿಗೆ ಕಣಕ್ಕಿಳಿದಿದ್ದಾರೆ.

ಮೂವರು ಸಹೋದರರು ಈ ಬಾರಿ ಗೆಲುವು ಸಾಧಿಸಿದರೆ, ಒಂದೇ ಕುಟುಂಬದ ಮೂವರು ಸತತ ಐದು ಬಾರಿ ಗೆಲುವು ಸಾಧಿಸಿದ ದಾಖಲೆ ನಿರ್ಮಾಣವಾಗಲಿದೆ ಎಂದು ರಾಜಕೀಯ ಲೆಕ್ಕಾಚಾರ ಹೇಳುತ್ತಿದೆ. ಜಾರಕಿಹೊಳಿ ಕುಟುಂಬ ಇಂತಹ ಅಪರೂಪದ ದಾಖಲೆಗೆ ಸಾಕ್ಷಿಯಾಗಲಿದೆಯೇ ಎಂಬುವುದನ್ನು ಕಾಯ್ದು ನೋಡಬೇಕಿದೆ.

ಸದ್ಯ ಇಬ್ಬರು ಶಾಸಕರು ಕಾಂಗ್ರೆಸ್ ನಿಂದ ಕಣಕ್ಕೆ ಇಳಿಯುತ್ತಿದ್ದರೆ, ಒಬ್ಬರು ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ. ಅಲ್ಲದೇ, ಈ ಮೂವರು ಸದಸ್ಯರು ಕ್ಯಾಬಿನೆಟ್ ದರ್ಜೆಯ ಅಧಿಕಾರವನ್ನು ಕೂಡ ಅನುಭವಿಸಿದ್ದಾರೆ. ಒಂದೇ ಕುಟುಂಬ ಮೂವರು ಸದಸ್ಯರು ಕ್ಯಾಬಿನೆಟ್ ಖಾತೆ ಅನುಭವಿಸಿದ್ದು ಕೂಡ ಅಪರೂಪದ ದಾಖಲೆ. ಅಧಿಕಾರ ಇವರ ಕಟುಂಬದಲ್ಲಿ ಗಿರಕಿ ಹೊಡೆಯುತ್ತಿರುವುದರಿಂದಾಗಿ ಇವರ ಮತ್ತೊಬ್ಬ ಸಹೋದರ ಲಖನ್ ಜಾರಕಿಹೊಳಿ ಕೂಡ ಈ ಬಾರಿ ಕಣಕ್ಕೆ ಇಳಿಯಲು ಪ್ರಯತ್ನ ನಡೆಸಿದ್ದರು. ಸತೀಶ ಜಾರಕಿಹೊಳಿ ಅವರನ್ನು ಕಲಬುರಗಿ ಜಿಲ್ಲೆಯ ಯಾವುದಾದರೂ ಕ್ಷೇತ್ರಕ್ಕೆ ಸ್ಪರ್ಧಿಸುವಂತೆ ಮಾಡಿ ಯಮಕನಮರಡಿ ಕ್ಷೇತ್ರದಿಂದ ಕಣಕ್ಕೆ ಇಳಿಯಲು ಲಖನ್ ನಿರ್ಧರಿಸಿದ್ದರು. ಆದರೆ, ಸತೀಶ ಮಾತ್ರ ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಲಖನ್ ಅವರನ್ನು ಯಮಕನಮರಡಿಯಿಂದಲೇ ಕಣಕ್ಕಿಳಿಸಲು ಸಚಿವ ರಮೇಶ ಜಾರಕಿಹೊಳಿ ಸಾಕಷ್ಟು ಪ್ರಯತ್ನಿಸಿದರು. "ನಾನು ಯಮಕನಮರಡಿಯಿಂದಲೇ ಸ್ಪರ್ಧೆ ಮಾಡುವುದು ನಿಶ್ಚಿತ. ಒಂದು ವೇಳೆ ಕಾಂಗ್ರೆಸ್ ನಿಂದ ಟಿಕೆಟ್ ಸಿಗದಿದ್ದರೆ, ಬಿಜೆಪಿಯಿಂದ ಸ್ಪರ್ಧೆ ಮಾಡುತ್ತೇನೆ,” ಎಂಬ ಬೆದರಿಕೆಯನ್ನು ಲಖನ್ ಒಡ್ಡಿದ್ದರು.

ಇದನ್ನೂ ಓದಿ : ಕುಟುಂಬ ರಾಜಕಾರಣದ ಬಗ್ಗೆ ಮಾತಾಡೋ ನೈತಿಕತೆ ಕಳೆದುಕೊಳ್ಳಲಿದ್ದಾರೆಯೇ ಬಿಎಸ್‌ವೈ?

ಇದಕ್ಕೂ ಸತೀಶ ಜಾರಕಿಹೊಳಿ ಒಪ್ಪದಿದ್ದಾಗ ಅನಿವಾರ್ಯವಾಗಿ ಲಖನ್ ಸ್ಪರ್ಧೆಯಿಂದ ಹಿಂದೆ ಸರಿದರು. ಹೀಗಾಗಿ ಸತೀಶ ಯಮಕನಮರಡಿಯಿಂದ ಸ್ಪರ್ಧಿಸಲು ಸಿದ್ಧರಾಗಿದ್ದಾರೆ. ಕಳೆದ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ವಿರೋಧಿ ಅಲೆಯಿದ್ದರೂ ಸತೀಶ ಜಾರಕಿಹೊಳಿ ಹಾಗೂ ರಮೇಶ ಜಾರಕಿಹೊಳಿ ಮಾತ್ರ ಜಯಗಳಿಸಿದ್ದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಸ್ಥಾನ ಗೆದ್ದು ಕೊಡಬೇಕೆಂಬ ಜವಾಬ್ದಾರಿಯನ್ನು ಕಾಂಗ್ರೆಸ್, ಜಾರಕಿಹೊಳಿ ಸಹೋದರರಿಗೆ ನೀಡಿತ್ತು. ಆದರೆ, ಪಕ್ಷದ ನಂಬಿಕೆಯನ್ನು ಸಂಪೂರ್ಣವಾಗಿ ಉಳಿಸಿಕೊಳ್ಳಲು ವಿಫಲರಾದ ಸಹೋದರರು, ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಜಿಲ್ಲೆಯಲ್ಲಿ ಹಾಗೂ ರಾಜ್ಯ ರಾಜಕಾರಣದಲ್ಲಿ ಅಷ್ಟೊಂದು ಹಿಡಿತ ಸಾಧಿಸದ ಜಾರಕಿಹೊಳಿ ಸಹೋದರರು ತಾವು ಸ್ಪರ್ಧಿಸುತ್ತಿರುವ ಕ್ಷೇತ್ರಗಳ ಮೇಲೆ ಮಾತ್ರ ಉತ್ತಮ ಹಿಡಿತ ಸಾಧಿಸಿದ್ದಾರೆ ಎಂಬುವುದನ್ನು ಅಂಕಿ- ಅಂಶಗಳು ಹೇಳುತ್ತಿವೆ. ಈ ಬಾರಿಯೂ ಮತದಾರರು ಕುಟುಂಬ ರಾಜಕಾರಣಕ್ಕೆ ಜೈ ಎನ್ನುತ್ತಾರೊ ಅಥವಾ ಬೇರೆಯವರಿಗೆ ಅವಕಾಶ ಸಿಗುವಂತೆ ಮಾಡುತ್ತಾರೆಯೊ ಎಂಬುವುದನ್ನು ಕಾಯ್ದು ನೋಡಬೇಕಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More