ಸಿಂಧನೂರಿನಲ್ಲಿ ಹಂಪನಗೌಡರ ಗೆಲುವಿಗೆ ತಡೆ ಹಾಕಲು ಕಾಯುತ್ತಿದೆ ಬಿಜೆಪಿ

ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಹಂಪನಗೌಡ ವರ್ಚಸ್ಸು, ಜಾತಿ ಸಮೀಕರಣ ಪ್ರತಿ ಚುನಾವಣೆಯಲ್ಲಿ ಕಂಡುಬರುತ್ತಿದ್ದು, 2018ರ ಚುನಾವಣೆ ಇದೇ ಪೈಪೋಟಿ ಮುಂದುವರಿಯುವ ಸಾಧ್ಯತೆ ಇದೆ. ಆದರೆ, ಯಾರು ಆಯ್ಕೆ ಆಗಲಿದ್ದಾರೆ ಎನ್ನುವುದನ್ನು ಚುನಾವಣಾ ಫಲಿತಾಂಶವೇ ಹೇಳಬೇಕಿದೆ 

ಹೈ-ಕ ಭಾಗದ ಅತ್ಯಂತ ಹಿಂದುಳಿದ ಜಿಲ್ಲೆ ಎಂದು ಬಿಂಬಿತವಾಗಿರುವ ರಾಯಚೂರು ಜಿಲ್ಲೆಯಲ್ಲಿ ದಿನಕ್ಕೊಂದು ರಾಜಕೀಯ ತಿರುವು ಕಂಡುಬರುತ್ತಿದೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಸಿಂಧನೂರಿನಲ್ಲಿ ಭಾರಿ ಜಿದ್ದಾಜಿದ್ದಿನ ರಾಜಕೀಯ ರಾಜ್ಯದ ಗಮನ ಸೆಳೆಯುತ್ತಿದೆ.

ಭತ್ತದ ನಾಡು ಎಂದು ಹೆಸರಾಗಿರುವ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಜಾತಿ ಸಮೀಕರಣವೇ ಪ್ರಾಧಾನ್ಯವಾಗಿ ಪ್ರತಿ ಚುನಾವಣೆಯಲ್ಲಿಯೂ ರಾಜಕೀಯ ಜಿದ್ದಾಜಿದ್ದಿ ನಡೆಯುತ್ತಿದ್ದು, ಕ್ಷೇತ್ರದಲ್ಲಿ ಗೆದ್ದ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಹಿಂದಿನ ಚುನಾವಣೆಗಳ ಫಲಿತಾಂಶವನ್ನು 2013ರ ಚುನಾವಣೆ ಫಲಿತಾಂಶ ಸುಳ್ಳು ಮಾಡಿತ್ತು. ಭೌಗೋಳಿಕವಾಗಿ ಹೆಚ್ಚಿನ ನೀರಾವರಿ ಪ್ರದೇಶ ಹೊಂದಿರುವ ಈ ಕ್ಷೇತ್ರದಲ್ಲಿ ಆಂಧ್ರ ಮತ್ತು ಬಾಂಗ್ಲಾ ವಲಸಿಗರು ಕೂಡ ಇದ್ದು, ಅವರೂ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತ ಬಂದಿದ್ದಾರೆ. ಆದರೆ ಪ್ರತಿ ಚುನಾವಣೆಯಲ್ಲಿ ಲಿಂಗಾಯತರು, ಕುರುಬ ಸಮಾಜದ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತ ಬಂದಿದೆ.

1952ರಲ್ಲಿ ಜರುಗಿದ ಚುನಾವಣೆಯಲ್ಲಿ ಶಿವಬಸವನಗೌಡ ಗುಡದೂರು ಪಕ್ಷೇತರರಾಗಿ ಜಯ ಗಳಿಸಿದ್ದು, ಜಾತಿ ಲೆಕ್ಕಾಚಾರ ಅಷ್ಟಾಗಿ ನಡೆದಿರಲಿಲ್ಲ. ಆದರೆ, ನಂತರ ಜರುಗಿದ ಚುನಾವಣೆಗಳಲ್ಲಿ ಜಾತಿ ಲೆಕ್ಕಾಚಾರ ಸಾಕಷ್ಟು ಪ್ರಭಾವ ಬೀರಿದ್ದು, ಅಭ್ಯರ್ಥಿಗಳ ಆಯ್ಕೆಗೆ ಪ್ರಧಾನ ಅಂಶವಾಗಿ ಮಾರ್ಪಟ್ಟಿದೆ.

1989ರ ನಂತರದಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಬಾದರ್ಲಿ ಹಂಪನಗೌಡ ಹಾಗೂ ಕುರುಬರ ಸಮಾಜಕ್ಕೆ ಸೇರಿದ ಕೆ ವಿರುಪಾಕ್ಷಪ್ಪನವರ ನಡುವೆ ರಾಜಕೀಯ ಜಿದ್ದಾಜಿದ್ದಿ ಆರಂಭವಾಗಿ, ಪ್ರತಿ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ತುರುಸಿನ ಸ್ಪರ್ಧೆ ನಡೆಯುವಂತಾಗಿತ್ತು. ಈ ಸಂದರ್ಭದಲ್ಲಿ ಜಾತಿ ಸಮೀಕರಣವೇ ಪ್ರಮುಖ ಅಂಶವಾಗಿ ಮಾರ್ಪಟ್ಟಿತ್ತು. ಆದರೆ, 2004ರಲ್ಲಿ ಬಾದರ್ಲಿ ಹಂಪನಗೌಡ ಜನತಾ ಪರಿವಾರ ತೊರೆದು ಕಾಂಗ್ರೆಸ್ ಸೇರಿದ್ದು, ನಂತರದಲ್ಲಿ ಕ್ಷೇತ್ರದಲ್ಲಿ ರಾಜಕೀಯ ಜಿದ್ದಾಜಿದ್ದಿ ಕಡಿಮೆಯಾಗಿತ್ತು. ಕೆ ವಿರುಪಾಕ್ಷಪ್ಪನವರಿಗೆ ಕೊಪ್ಪಳ ಲೋಕಸಭೆ ಟಿಕೆಟ್ ನೀಡಿ, ಬಾದರ್ಲಿ ಹಂಪನಗೌಡರಿಗೆ ಕಾಂಗ್ರೆಸ್ ನೀಡಿ ಅವರಿಗೆ ಮಣೆ ಹಾಕಲಾಯಿತು ಎನ್ನುವ ಅಸಮಾಧಾನ ಮಾತ್ರ ಕೆ ವಿರುಪಾಕ್ಷಪ್ಪನವರ ಬೆಂಬಲಿಗರಲ್ಲಿ ಮನೆ ಮಾಡಿತ್ತು.

ಜಾತಿ ಸಮೀಕರಣದ ಆಧಾರದ ಮೇಲೆಗೆ 1957 ಮತ್ತು 1962ರ ಚುನಾವಣೆಯಲ್ಲಿ ಬಸವಂತರಾಯ ಗೌಡ ಸತತ ಎರಡು ಬಾರಿ ಗೆದ್ದು ಶಾಸಕರಾದರು. ಆದರೆ 1967ರಲ್ಲಿ ರಾಷ್ಟ್ರೀಯ ಲೋಕದಳದ ಅಮರೇಗೌಡ ಗದ್ರಟಗಿ ಗೆದ್ದು ಶಾಸಕರಾದರು. 1972ರಲ್ಲಿ ಮತ್ತೊಮ್ಮೆ ಜಾತಿ ಪ್ರಭಾವದಿಂದ ಬಸವಂತರಾಯ ಗೌಡ ಶಾಸಕರಾದರು.

1978ರಲ್ಲಿ ಕ್ಷೇತ್ರ ವಿಭಜನೆ ನಂತರ ಹೊಸದಾಗಿ ಸೃಷ್ಟಿಯಾದ ಕನಕಗಿರಿ ವಿಧಾನಸಭೆ ಕ್ಷೇತ್ರಕ್ಕೆ ಕ್ಷೇತ್ರದ ಸುಮಾರು 35ಕ್ಕೂ ಹೆಚ್ಚು ಹಳ್ಳಿಗಳನ್ನು ಸೇರ್ಪಡೆ ಮಾಡಿದ್ದರಿಂದ ಮತ್ತು ಮೂರು ಬಾರಿ ಶಾಸಕರಾಗಿದ್ದ ಬಸವಂತರಾಯ ಗೌಡ ಕನಕಗಿರಿಗೆ ವಲಸೆ ಹೋಗಿದ್ದರಿಂದ ಆರ್ ನಾರಾಯಣಪ್ಪ ಕಾಂಗ್ರೆಸ್ ಟಿಕೆಟ್ ಪಡೆದು ಗೆದ್ದರು. 1983ರಲ್ಲಿ ಪಕ್ಷೇತರ ಅಭ್ಯರ್ಥಿ ಮಲ್ಲಪ್ಪ ಶಾಸಕರಾದರೆ, 1985ರಲ್ಲಿ ಕಾಂಗ್ರೆಸ್ ಆರ್ ನಾರಾಯಣಪ್ಪ ಪುನಃ ಗೆದ್ದು ಶಾಸಕರಾದರು.

1989ರಲ್ಲಿ ಜನತಾದಳದಿಂದ ವಿಧಾನಸಭೆ ಚುನಾವಣೆ ಕಣಕ್ಕಿಳಿದ ಪ್ರಥಮ ಪ್ರಯತ್ನದಲ್ಲಿಯೇ ವಿಜಯಿಯಾದ ಬಾದರ್ಲಿ ಹಂಪನಗೌಡ ಶಾಸಕರಾಗಿ ಆಯ್ಕೆಯಾದರು. ಆದರೆ, 1994ರಲ್ಲಿ ಕಾಂಗ್ರೆಸ್ನ ಕೆವಿರುಪಾಕ್ಷಪ್ಪ ಜನತಾದಳದ ಬಾದರ್ಲಿ ಹಂಪನಗೌಡರನ್ನು ಅಲ್ಪ ಮತಗಳಿಂದ ಮಣಿಸಿ ಶಾಸಕರಾದರು.

1999ರಲ್ಲಿ ಜೆಡಿಯುನಿಂದ ಸ್ಪರ್ಧಿಸಿದ್ದ ಬಾದರ್ಲಿ ಹಂಪನಗೌಡರಿಗೆ ಮಣೆ ಹಾಕಿದ ಮತದಾರರು, 2004ರ ಚುನಾವಣೆಯಲ್ಲಿ ಹಂಪನಗೌಡ ಕಾಂಗ್ರೆಸ್ ಸೇರಿ ಅಭ್ಯರ್ಥಿಯಾದರೂ ಅವರನ್ನು ಆಯ್ಕೆ ಮಾಡುವ ಮೂಲಕ ಅವರನ್ನು ಮೂರನೇ ಬಾರಿಗೆ ಶಾಸಕರಾಗುವಂತೆ ಮಾಡಿದರು.

2008ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾದರ್ಲಿ ಹಂಪನಗೌಡರನ್ನು ಸೋಲಿಸಿದ ಮತದಾರರು, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ವೆಂಕಟರಾವ್ ನಾಡಗೌಡರಿಗೆ ಬೆಂಬಲ ವ್ಯಕ್ತಪಡಿಸಿ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುವಂತೆ ಮಾಡಿದರು. 2013ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಹಂಪನಗೌಡ ಬಾದರ್ಲಿಯನ್ನು ಗೆಲ್ಲಿಸುವ ಮೂಲಕ ಕ್ಷೇತ್ರದಲ್ಲಿ ಗೆದ್ದ ಪಕ್ಷದ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಮಾತುಗಳನ್ನು ಸುಳ್ಳು ಮಾಡಿದರು.

ಇದನ್ನೂ ಓದಿ : 1962ರಲ್ಲೇ ಮಹಿಳಾ ಪ್ರತಿನಿಧಿ ಆಯ್ಕೆ ಮಾಡಿದ ತುಮಕೂರು ಕ್ಷೇತ್ರ ಈಗ ಹೇಗಿದೆ?

ಕ್ಷೇತ್ರದಲ್ಲಿ ಗೆದ್ದು ಬಂದು ಶಾಸಕರಾದವರಲ್ಲಿ ಒಬ್ಬರಿಗೂ ಸಚಿವ ಸ್ಥಾನದ ಯೋಗಾಯೋಗ ಕೂಡಿ ಬಂದಿಲ್ಲ ಎನ್ನುವುದು ಗಮನಾರ್ಹ. ಕಾಂಗ್ರೆಸ್‌ನಿಂದ ಮೂರು ಬಾರಿ ಗೆದ್ದು ಬಂದಿರುವ ಬಸವಂತರಾಯ ಗೌಡರಿಗೆ ಹಾಗೂ ನಾಲ್ಕು ಬಾರಿ ಶಾಸಕರಾಗಿರುವ ಬಾದರ್ಲಿ ಹಂಪನಗೌಡರಿಗೆ ಸಚಿವ ಸ್ಥಾನ ಒಲಿದು ಬರಲಿಲ್ಲ.

2013ರ ಚುನಾವಣೆಯಲ್ಲಿ ವಿಜಯಪತಾಕೆ ಹಾರಿಸಿದ ಶಾಸಕ ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಒತ್ತಾಯ ಮಾಡಲಾಗಿತ್ತು. ಆದರೆ ರಾಯಚೂರು ಜಿಲ್ಲೆಯ ಕಾಂಗ್ರೆಸ್ ಗುಂಪುಗಾರಿಕೆಯ ಫಲವಾಗಿ ಸಚಿವ ಸ್ಥಾನ ಕೈತಪ್ಪಿತ್ತು. ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆಗ ಸಹ ಸಚಿವ ಕೈತಪ್ಪಿ, ಎಂಎಸ್‌ಐಎಲ್‌ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕಲ್ಪಿಸಿ ಸಮಾಧಾನಪಡಿಸಲಾಗಿತ್ತು.

ಈಗ ಕಾಂಗ್ರೆಸ್‌ನಿಂದ ಹಾಲಿ ಶಾಸಕ ಹಂಪನಗೌಡರಿಗೆ ಟಿಕೆಟ್ ನೀಡಿದ್ದು, ಇತ್ತ ಜೆಡಿಎಸ್‌ನಿಂದ ಮಾಜಿ ಶಾಸಕ ವೆಂಕಟರಾವ್ ನಾಡಗೌಡರಿಗೆ ಟಿಕೆಟ್ ಅಖೈರು ಮಾಡಲಾಗಿದ್ದು, ಬಿಜೆಪಿ ಟಿಕೆಟ್‌ಗಾಗಿ ಬಾರಿ ಪೈಪೂಟಿ ನಡೆದಿದೆ. ಬಿಜೆಪಿ ಎರಡು ಪಟ್ಟಿ ಬಿಡುಗಡೆ ಮಾಡಿದರೂ ಟಿಕೆಟ್ ಘೋಷಣೆಯಾಗಿಲ್ಲ. ಸದ್ಯ ಕುರುಬ ಸಮುದಾಯಕ್ಕೆ ಸೇರಿದ ಮಾಜಿ ಸಂಸದ ಕೆ ವಿರುಪಾಕ್ಷಪ್ಪ ಹಾಗೂ ಕೊಲ್ಲ ಶೇಷಗಿರಾವ್ ಮಧ್ಯ ಟಿಕೆಟ್ ಫೈಟ್ ನಡೆದಿದೆ. ಅಂತಿಮವಾಗಿ, ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎಂಬುವುದು ಕುತೂಹಲ ಕೆರಳಿಸಿದೆ.

ಒಟ್ಟಿನಲ್ಲಿ, ಜಿದ್ದಾಜಿದ್ದಿಯ ಅಖಾಡವಾಗಿರುವ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಗೌಡರ ವರ್ಚಸ್ಸು, ಜಾತಿ ಸಮೀಕರಣ ಪ್ರತಿ ಚುನಾವಣೆಯಲ್ಲಿ ಕಂಡುಬರುತ್ತಿದ್ದು, 2018ರ ಚುನಾವಣೆಯಲ್ಲೂ ಇದೇ ಪೈಪೋಟಿ ಮುಂದುವರಿಯುವ ಸಾಧ್ಯತೆ ಇದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More