ಚುನಾವಣಾ ಕಣ | ಸೊಗಡು ಶಿವಣ್ಣಗೆ ಟಿಕೆಟ್ ಸಿಗದಿರಲು ಕಾರಣವೇನು?

ತುಮಕೂರು ನಗರ ಕ್ಷೇತ್ರಕ್ಕೆ ನಿರೀಕ್ಷೆಯಂತೆ ಮಾಜಿ ಸಂಸದ ಬಸವರಾಜು ಪುತ್ರ ಜ್ಯೋತಿ ಗಣೇಶ್‌ಗೆ ಬಿಜೆಪಿ ಟಿಕೆಟ್ ಲಭಿಸಿದೆ. ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ ತನಗೆ ಟಿಕೆಟ್ ಕೊಡಿಸಿಯೇ ತೀರುತ್ತಾರೆ ಎಂಬ ಶಿವಣ್ಣನವರ ನಂಬಿಕೆ ಹುಸಿಯಾಗಿದೆ. ಶಿವಣ್ಣ ಬೆಂಬಲಿಗರು ಬಂಡಾಯಕ್ಕೆ ಸಜ್ಜಾಗಿದ್ದಾರೆ

ತುಮಕೂರು ನಗರ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಮಾಜಿ ಸಂಸದ ಬಸವರಾಜು ಪುತ್ರ ಜ್ಯೋತಿ ಗಣೇಶ್‌ಗೆ ಬಿಜೆಪಿ ಟಿಕೆಟ್ ಲಭಿಸಿದೆ. ಇದು ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ ಸೊಗಡು ಶಿವಣ್ಣ ಬೆಂಬಲಿಗರನ್ನು ಕೆರಳಿಸಿದೆ. ಸೊಗಡು ಶಿವಣ್ಣಗೆ ಟಿಕೆಟ್ ಕೊಡುವಂತೆ ಆಗ್ರಹಿಸಿ ಅವರ ಬೆಂಬಲಿಗರು ರಾಜಿನಾಮೆಯನ್ನೂ ನೀಡಿದ್ದರು. ಆದರೂ ಶಿವಣ್ಣನವರ ಒತ್ತಡ ತಂತ್ರಕ್ಕೆ ಬಿಜೆಪಿ ನಾಯಕತ್ವ ಮಣಿದಂತೆ ಕಾಣುತ್ತಿಲ್ಲ. ಸ್ಥಳೀಯ ಆರ್‌ಎಸ್‌ಎಸ್‌ ಮುಖಂಡರು ಶಿವಣ್ಣ ಪರವಾಗಿಯೇ ಇದ್ದರು ಎಂಬುದು ಮೇಲ್ನೋಟದ ಸಂಗತಿ. ಒಳಗೊಳಗೆ ಆರ್‌ಎಸ್‌ಎಸ್‌ ಮುಖಂಡರಿಗೆ ಸೊಗಡು ಶಿವಣ್ಣ ಬಗ್ಗೆ ಅಷ್ಟೊಂದು ಆಸಕ್ತಿ ಇರಲಿಲ್ಲ ಎಂಬುದು ಸ್ವತಃ ಆರ್‌ಎಸ್‌ಎಸ್‌ ಕಟ್ಟಾಳುಗಳು ಹೇಳುವ ಮಾತು. ಇದೀಗ ಬಿಜೆಪಿ ನಾಯಕತ್ವ ತೆಗೆದುಕೊಂಡಿರುವ ತೀರ್ಮಾನಕ್ಕೆ ಸೊಗಡು ಶಿವಣ್ಣ ಪಡೆಯ ಅಸಮಾಧಾನ ಸಿಡಿದಿದೆ.

ಹಿರಿಯ ಮುಖಂಡ ಕೆ ಎಸ್ ಈಶ್ವರಪ್ಪ ತನಗೆ ಟಿಕೆಟ್ ಕೊಡಿಸಿಯೇ ತೀರುತ್ತಾರೆ ಎಂಬ ಶಿವಣ್ಣನವರ ನಂಬಿಕೆ ಹುಸಿಯಾಗಿದೆ. ಹಿಂದೆಯೇ ಈಶ್ವರಪ್ಪ ನಡೆಯ ವಿರುದ್ಧ ಶಿವಣ್ಣ ಕಿಡಿಕಾರಿದ್ದರು ಕೂಡ. ಈಗ ಅದು ಸ್ಪೋಟಗೊಂಡಿದೆ. ತಾನು ಹಾಕಿದ ಪಟ್ಟುಗಳು ಯಾವುದೂ ಕೆಲಸಕ್ಕೆ ಬರಲಿಲ್ಲ ಎಂಬ ಒಳಗುದಿ ಅವರ ಮನದಲ್ಲಿದೆ. ಇಷ್ಟಾಗಿಯೂ ಅವರು ಬೇರೆ ಪಕ್ಷಗಳ ಮುಖಂಡರನ್ನು ಭೇಟಿಯಾಗಿ ಟಿಕೆಟ್ ಗಳಿಸಲು ಹರಸಾಹಸ ಮಾಡಿದ್ದರು. ಈಗ ತನ್ನ ಪರಮ ವಿರೋಧಿ, ಮಾಜಿ ಕಾಂಗ್ರೆಸ್ಸಿಗ, ಮಾಜಿ ಸಂಸದ ಜಿ ಎಸ್ ಬಸವರಾಜು ಪುತ್ರ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್‌ಗೆ ಟಿಕೆಟ್ ದೊರೆತಿರುವುದು ಶಿವಣ್ಣ ಬೆಂಬಲಿಗರನ್ನು ಕೆರಳುವಂತೆ ಮಾಡಿದೆ.

ತುಮಕೂರು ಹೊರವಲಯದ ಊರುಕೆರೆ ಸಮೀಪ ವಾಸವಿದ್ದ ಸೊಗಡು ಶಿವಣ್ಣ, ವಾಸ್ತು ಸರಿ ಇಲ್ಲ ಎಂಬ ಕಾರಣಕ್ಕೆ ಮತ್ತು ನಗರದಲ್ಲಿ ತಾನು ಪ್ರಚಾರ ಮಾಡಲು ಅನುಕೂಲವಾಗುತ್ತದೆ ಎಂದು ನಗರದ ಚಿಕ್ಕಪೇಟೆಯಲ್ಲಿರುವ ಹಳೆಯ ಮನೆಗೆ ಸ್ಥಳಾಂತರಗೊಂಡಿದ್ದರು. ಈಗ ನೋಡಿದರೆ ಟಿಕೆಟ್ ಲಭಿಸಿಲ್ಲ. ಹೀಗಾಗಿ, ಶಿವಣ್ಣ ಸೋಮವಾರ ರಾತ್ರಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಮಂಗಳವಾರ ಮತ್ತೊಮ್ಮೆ ಕಾರ್ಯಕರ್ತರ ಸಭೆ ಕರೆದು ಬುಧವಾರ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

ಇದನ್ನೂ ಓದಿ : ಚುನಾವಣಾ ಕಣ | ಸೊಗಡು ಶಿವಣ್ಣ ಮತ್ತು ಗೌರಿಶಂಕರ್ ಭೇಟಿ ಬಂಡಾಯದ ಸೂಚನೆಯೇ?

‘ದಿ ಸ್ಟೇಟ್’ ಸೊಗಡು ಶಿವಣ್ಣ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ "ನನಗೆ ನೋವಾಗಿದೆ. ಮಂಗಳವಾರ ಕಾರ್ಯಕರ್ತರ ಸಭೆ ಕರೆದು ಚರ್ಚೆ ನಡೆಸುತ್ತೇನೆ. ಕಾರ್ಯಕರ್ತರು ಯಾವ ತೀರ್ಮಾನಕ್ಕೆ ಬರುತ್ತಾರೋ ಅದರ ಮೇಲೆ ಮುಂದಿನ ತೀರ್ಮಾನ ಪ್ರಕಟಿಸುತ್ತೇನೆ. ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಎಲ್ಲ ವಿವರಗಳನ್ನು ಪ್ರಕಟಿಸುತ್ತೇನೆ. ಬುದ್ಧಿಯವರು ಮತ್ತು ಮಹಾಜನರು ನನ್ನನ್ನು ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಅದಕ್ಕೆ ಋಣಿಯಾಗಿದ್ದೇನೆ. ಬುದ್ಧಿಯವರಿಂದ ನಾನು ನಾಲ್ಕು ಸಲ ಗೆದ್ದಿದ್ದೇನೆ. ಹೀಗಾಗಿ ತಾಳ್ಮೆಯಿಂದ ಎರಡು ದಿನ ಕಾದು ನಂತರ ನನ್ನ ತೀರ್ಮಾನ ಹೇಳುತ್ತೇನೆ,” ಎಂದರು.

ತುಮಕೂರು ನಗರ ಕ್ಷೇತ್ರದಲ್ಲಿ ಸ್ಪೋಟಗೊಂಡಿರುವ ಈ ಭಿನ್ನಮತ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಸೊಗಡು ಶಿವಣ್ಣ ಈ ಹಿಂದೆಯೇ ಹೇಳಿದಂತೆ ಏ.೨೦ರಂದು ನಾಮಪತ್ರ ಸಲ್ಲಿಸುತ್ತಾರೆ. ಇದು ನಡೆದರೆ ಬಿಜೆಪಿಗೆ ಪೆಟ್ಟು ಕೊಡುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಕಳೆದ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದೇ ಶಿವಣ್ಣ ಅವರಿಗೆ ಟಿಕೆಟ್ ತಪ್ಪಲು ಕಾರಣ ಎಂದು ಪಕ್ಷದ ಮೂಲಗಳು ಹೇಳುತ್ತವೆ. ಕೆಜೆಪಿಯಲ್ಲಿದ್ದ ಜ್ಯೋತಿ ಗಣೇಶ್ ಹೆಚ್ಚು ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಏರಿದ್ದರು. ಇದು ಜ್ಯೋತಿ ಗಣೇಶ್‌ಗೆ ಟಿಕೆಟ್ ಲಭಿಸಲು ಪ್ಲಸ್ ಪಾಯಿಂಟ್ ಎಂದು ವಿಶ್ಲೇಷಿಸಲಾಗುತ್ತಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More