ಮೊದಲ ಬಾರಿಗೆ ಮತದಾನದ ಹಕ್ಕು ಹೊಂದಿದ ತುಮಕೂರಿನ ತೃತೀಯ ಲಿಂಗಿಗಳು

ತುಮಕೂರು ಜಿಲ್ಲಾಡಳಿತವು ಜಿಲ್ಲೆಯಲ್ಲಿನ ತೃತೀಯ ಲಿಂಗಿಗಳನ್ನು ಗುರುತಿಸಿ, ಚುನಾವಣಾ ಗುರುತಿನ ಚೀಟಿ ನೀಡಿದ್ದು, ಸರ್ಕಾರಿ ಸೌಲಭ್ಯ ಪಡೆಯಲು ಅವಕಾಶ ಸಿಗುವಂತೆ ಮಾಡಿದೆ. ಈಗಾಗಲೇ ಮೂರು ಚುನಾವಣೆಯಲ್ಲಿ ಹಕ್ಕನ್ನು ಚಲಾಯಿಸಿದವರೂ ಕೆಲವರಿದ್ದಾರೆ ಎಂಬುದು ಗಮನಾರ್ಹ

ತುಮಕೂರು ಜಿಲ್ಲೆಯಲ್ಲಿ ೧,೪೬೦ ಮಂದಿ ತೃತೀಯ ಲಿಂಗಿಗಳು ಇದ್ದಾರೆ. ಇದೇ ಮೊದಲ ಬಾರಿಗೆ ಇವರೆಲ್ಲರಿಗೂ ಮತದಾನದ ಹಕ್ಕು ಚಲಾಯಿಸಲು ಅವಕಾಶ ದೊರೆತಿರುವುದು ಸಂತಸಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ಎಲ್ಲಾ ತೃತೀಯ ಲಿಂಗಿಗಳನ್ನು ಗುರುತಿಸಿ ಅವರಿಗೆ ಚುನಾವಣಾ ಗುರುತಿನ ಚೀಟಿ ನೀಡಿದ್ದು, ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅವಕಾಶ ಸಿಗುವಂತೆ ಮಾಡಿದೆ. ಇದುವರೆಗೆ ಮೂರು ಚುನಾವಣೆಯಲ್ಲಿ ಹಕ್ಕನ್ನು ಚಲಾಯಿಸಿದವರೂ ಇದ್ದಾರೆ. ಅವರೊಂದಿಗೆ ಹೊಸದಾಗಿ ಎಲ್ಲರಿಗೂ ಈ ಬಾರಿ ಚುನಾವಣಾ ಗುರುತಿನ ಚೀಟಿ ದೊರೆತಿದೆ. ಈ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ತೃತೀಯ ಲಿಂಗಿಗಳಿಗೆ ಮತದಾನ ಮಾಡುವುದು ಹೇಗೆ ಎಂಬ ಕುರಿತು ತರಬೇತಿ ನೀಡಿತು. ಚುನಾವಣಾ ಅಧಿಕಾರಿಗಳು ತೃತೀಯ ಲಿಂಗಿಗಳಿಗೆ ಮತ ಚಲಾಯಿಸುವ ಪ್ರಾತ್ಯಕ್ಷಿಕೆ ತೋರಿಸಿದರು. ಈ ಪ್ರಕ್ರಿಯೆಯಿಂದ ಉತ್ತೇಜಿತರಾಗಿರುವ ತೃತೀಯ ಲಿಂಗಿಗಳು, ಮತ ಚಲಾಯಿಸಲು ಕಾಯುತ್ತಿದ್ದಾರೆ.

ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ದೊರೆತಿರುವುದೇನೋ ಸರಿ. ಆದರೆ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಳುವವರೇ ಇಲ್ಲವಾಗಿದೆ. ಚುನಾವಣಾ ಗುರುತಿನ ಚೀಟಿ ಇದ್ದರೂ ಸರ್ಕಾರದ ಸವಲತ್ತುಗಳನ್ನು ಪಡೆಯಲು ಇಂದಿಗೂ ಆಗಿಲ್ಲ. ಪೊಲೀಸರ ಕಿರುಕುಳ, ಆರ್ಟಿಕಲ್೩೭೭ ಸಮಸ್ಯೆ, ಭಿಕ್ಷೆ ಬೇಡುವುದಕ್ಕೆ ಅಡ್ಡಿ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಪೊಲೀಸ್ ಆಕ್ಟ್ ೩೬ಕ್ಕೆತಿದ್ದುಪಡಿ ತಂದು ತೃತೀಯ ಲಿಂಗಿಗಳು ನಗರದ ಹೊರಗೆ ೨೦ ಕಿಲೋಮೀಟರ್ ವ್ಯಾಪ್ತಿಯಲ್ಲಿ ಜೀವಿಸಬೇಕು ಎಂಬ ನಿಯಮ ರೂಪಿಸಿದ್ದು, ಮುಂತಾದ ಹಲವು ಕಾನೂನುಗಳು ಇವರನ್ನು ಹೈರಾಣಾಗಿಸಿವೆ. ಆದರೂ ಸಮಸ್ಯೆಗಳ ನಡುವೆ ಬದುಕು ಸಾಗಿಸಿಕೊಂಡು ಹೋಗುತ್ತಿದ್ದಾರೆ.

‘ಸಹಬಾಳ್ವೆ’ ಸಂಸ್ಥೆಯ ಅಧ್ಯಕ್ಷೆ ದೀಪಿಕಾ, “ತೃತೀಯ ಲಿಂಗಿಗಳು ಸಹಬಾಳ್ವೆ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ನಾವು ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಲೇ ಇದ್ದೇವೆ. ಈಗ ನಗರದ ಹೊರಗೆ ಜೀವನ ಸಾಗಿಸುವಂತೆ ಪೊಲೀಸರು ಅಡ್ಡಿಪಡಿಸುವುದರಿಂದ ನಾವು ಜೀವನ ನಡೆಸುವುದಾದರೂ ಹೇಗೆ?” ಎಂದು ಪ್ರಶ್ನಿಸುತ್ತಾರೆ.

ತುಮಕೂರು ನಗರದ ಶೆಟ್ಟಿಹಳ್ಳಿ, ದೇವನೂರು, ಪೂರ್‌ಹೌಸ್ ಕಾಲೋನಿ, ಬಟವಾಡಿ, ಗೂಡ್‌ಶೆಡ್ ಕಾಲೋನಿ ಹೀಗೆ ನಗರದ ವ್ಯಾಪ್ತಿಯಲ್ಲಿ ತೃತೀಯ ಲಿಂಗಿಗಳು ವಾಸ ಮಾಡುತ್ತಿದ್ದು ಅವರಿಗೆ ಯಾವುದೇ ಸೌಲಭ್ಯಗಳು ದೊರೆತಿಲ್ಲ. ಸರ್ಕಾರ ದಿಢೀರ್ ಎಂದು ತೃತೀಯ ಲಿಂಗಗಳು ಭಿಕ್ಷೆ ಬೇಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿರುವುದು ತಮಗೆ ಜೀವನ ಸಾಗಿಸಲು ಧಕ್ಕೆಯಾಗಿದೆ ಎನ್ನುತ್ತಾರವರು. ಬದಲಾಗಲು ಸ್ವಲ್ಪ ಕಾಲಾವಕಾಶ ಕೊಡಬೇಕು, ಅಂಗಡಿಗಳನ್ನು ನಿರ್ಮಿಸಿಕೊಳ್ಳಲು ಬ್ಯಾಂಕುಗಳಲ್ಲಿ ಶ್ಯೂರಿಟಿ ಇಲ್ಲದೆ ಸಾಲ ಕೊಡಬೇಕು, ಎಲ್ಲ ತೃತೀಯ ಲಿಂಗಿಗಳಿಗೂ ವಸತಿ ಸೌಲಭ್ಯ ಕಲ್ಪಿಸಬೇಕು, ಪೊಲೀಸ್ ಆಕ್ಟ್ ೩೬ರನ್ನು ರದ್ದುಪಡಿಸಬೇಕು ಎಂಬ ಬೇಡಿಕೆಗಳು ತೃತೀಯ ಲಿಂಗಿಗಳಿಂದ ವ್ಯಕ್ತವಾಗಿದೆ.

ಇದನ್ನೂ ಓದಿ : ಅಕ್ಕೈ ಪದ್ಮಶಾಲಿ ಮನದ ಮಾತು | ಈಗಲಾದರೂ ಸೆಕ್ಷನ್ 377 ತಿದ್ದುಪಡಿ ಆಗಲಿ

‘ದಿ ಸ್ಟೇಟ್’ ಜೊತೆ ಮಾತನಾಡಿದ ದೀಪಿಕಾ, “ನಾನು ಇದುವರೆಗೆ ಮೂರು ಚುನಾವಣೆಯಲ್ಲಿ ಮತದಾನ ಮಾಡಿದ್ದೇನೆ. ಈ ಚುನಾವಣೆಯಲ್ಲಿ ತೃತೀಯ ಲಿಂಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಹೀಗಾಗಿ, ನಮ್ಮನ್ನು ಸಾಮಾನ್ಯ ನಾಗರಿಕರಂತೆ ಗುರುತಿಸಿ ಮತದಾನ ಮಾಡುವುದು ಹೇಗೆ ಎಂಬ ತರಬೇತಿ ನೀಡಲಾಗಿದೆ. ನಮಗೆ ಇಷ್ಟವಾಗುವ ಪಕ್ಷಕ್ಕೆ ವೋಟು ಹಾಕುವಂತೆ ಅಧಿಕಾರಿಗಳು ತಿಳಿಸಿದರು. ಯಾವ ಅಭ್ಯರ್ಥಿಯೂ ನಮಗೆ ಇಷ್ಟವಾಗಲಿಲ್ಲ ಎಂದರೆ ನೋಟಾ ಹಾಕಬೇಕೆಂಬುದನ್ನು ಹೇಳಿಕೊಟ್ಟರು,” ಎಂದು ಖುಷಿಯಿಂದ ಹೇಳಿದರು.

ತೃತೀಯ ಲಿಂಗಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಇದುವರೆಗೆ ಯಾವುದೇ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಹಾಕಿಕೊಂಡಿಲ್ಲದಿರುವುದು ವಿಷಾದನೀಯ ಸಂಗತಿ. ತೃತೀಯ ಲಿಂಗಿಗಳು ಸಾಮಾನ್ಯ ನಾಗರಿಕರಂತೆ ಬಾಳ್ವೆ ನಡೆಸಲು ಎಲ್ಲರೂ ಸಹಕಾರ ನೀಡುವುದು ಅತ್ಯಗತ್ಯ ಎಂಬ ಕೋರಿಕೆ ಅವರದ್ದು.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More