ಸಿರಾ ಮತಕ್ಷೇತ್ರದಲ್ಲಿ ಮೊದಲಿನಿಂದಲೂ ಕಾಂಗ್ರೆಸ್-ಜೆಡಿಎಸ್ ನೇರ ಹಣಾಹಣಿ

ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿರುವ ಟಿ ಬಿ ಜಯಚಂದ್ರ, ಸಿರಾದಿಂದ ಸತತ ಮೂರು ಬಾರಿ ಆರಿಸಿಬಂದ ಜನಪ್ರತಿನಿಧಿ. ಇದೀಗ ಕಾಂಗ್ರೆಸ್‍ನಿಂದ ಅವರೇ ಕಣದಲ್ಲಿದ್ದು, ಕ್ಷೇತ್ರದಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಕಾರಣರಾಗಿದ್ದಾರೆ. ಇಲ್ಲಿ ಮೊದಲಿಂದಲೂ ಜೆಡಿಎಸ್-ಕಾಂಗ್ರೆಸ್ ನೇರ ಹಣಾಹಣಿ

ತುಮಕೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರ ಶಿರಾ ಕಾಂಗ್ರೆಸ್‍ನ ಭದ್ರಕೋಟೆ. ಆರಂಭದಿಂದ 1989ರವರೆಗೂ ಕಾಂಗ್ರೆಸ್ ಈ ಕ್ಷೇತ್ರದ ಅಧಿಕಾರ ಚುಕ್ಕಾಣಿ ಹಿಡಿದಿದೆ. ಜೊತೆಗೆ, ಪಕ್ಷೇತರ ಅಭ್ಯರ್ಥಿಗಳು ಕೂಡ ಮೇಲುಗೈ ಸಾಧಿಸಿರುವುದನ್ನು ನೋಡಬಹುದು. ಸಾ ಲಿಂಗಯ್ಯ, ಸಿ ಪಿ ಮೂಡಲಗಿರಿಯಪ್ಪ, ಎಸ್ ಕೆ ದಾಸಣ್ಣ, ಪಿ ಎಂ ರಂಗನಾಥಪ್ಪ ಹೀಗೆ ಗೆಲುವು ಪಡೆದವರು ಹಲವರು. ಪಾವಗಡದಂತೆ ಆಂಧ್ರದ ಸೆರಗಿನಲ್ಲಿರುವ ಸಿರಾ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ 4 ಹಾದುಹೋಗಿದೆ. ಹೀಗಾಗಿಯೇ ಸಿರಾ ಹೆಚ್ಚು ಪ್ರಸಿದ್ದಿ ಪಡೆದುಕೊಂಡಿದೆ. ಸಿರಾದಲ್ಲಿ ಇದುವರೆಗೆ ಆಗಿಹೋದ ಶಾಸಕರ ಪೈಕಿ ಟಿ ಬಿ ಜಯಚಂದ್ರ ಅವರದ್ದೇ ಪ್ರಾಬಲ್ಯ ಹೆಚ್ಚು. ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಯಚಂದ್ರ ತೋಟಗಾರಿಕೆ ಸಚಿವರಾಗಿದ್ದರು.

1962ರಲ್ಲಿ ಪಕ್ಷೇತರ ಅಭ್ಯರ್ಥಿ ಸಿ ಜೆ ಮುಕ್ಕಣ್ಣಪ್ಪ ಆಯ್ಕೆಯಾದರೆ, 1983ರಲ್ಲಿ ಪಿ ಮುಡ್ಲೇಗೌಡ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದು ವಿಶೇಷ. ಅಂದರೆ, ಎರಡು ಬಾರಿ ಪಕ್ಷೇತರ ಅಭ್ಯರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಜನ ಪಕ್ಷಕ್ಕಿಂತ ವ್ಯಕ್ತಿಗೂ ಆದ್ಯತೆ ನೀಡಿದ್ದಾರೆ ಎಂಬುದು ಇದರಿಂದ ಕಂಡುಬರುತ್ತದೆ. 1972ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಬಿ ಪುಟ್ಟಕಾಮಯ್ಯ 22,669 (ಶೇ.54.20) ಮತ ಪಡೆದು ಆಯ್ಕೆಯಾಗಿದ್ದರೆ, ಪ್ರತಿಸ್ಪರ್ಧಿ ಪಿ ಮುದ್ದೇಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

1978 ಕಾಂಗ್ರೆಸ್ (ಐ) ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಸಾ ಲಿಂಗಯ್ಯ 32,270 (ಶೇ,54.90) ಮತ ಪಡೆದು ಗೆದ್ದರು. 1985 ಕಾಂಗ್ರೆಸ್‍ನ ಸಿ ಪಿ ಮೂಡಲಗಿರಿಯಪ್ಪ 20,049 ಮತ ಗಳಿಸಿ ಆಯ್ಕೆಯಾದರೆ, 1989ರಲ್ಲಿ ಕಾಂಗ್ರೆಸ್‍ನ ಎಸ್ ಕೆ ದಾಸಣ್ಣ 29,699 (ಶೇ.39.31) ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ್ದರು.

1994ರ ಚುನಾವಣೆಯಲ್ಲಿ ಬಿ ಸತ್ಯನಾರಾಯಣ ಜನತಾದಳದಿಂದ ಸ್ಪರ್ಧಿಸಿ 28,272 ಮತ ಪಡೆದು ಆಯ್ಕೆಯಾಗಿದ್ದರು. ಜೆ ಎಚ್ ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಕಾರ್ಮಿಕ ಸಚಿವರಾಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕೆಲಸ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು. ಸರಳತೆ, ಪ್ರಾಮಾಣಿಕತೆಯಿಂದ ಗಮನ ಸೆಳೆದಿದ್ದರು.

ಈ ಮಧ್ಯೆ, 1999 ಚುನಾವಣೆ ನಡೆದು ಹನುಮಾನ್ ಬಸ್ ಮಾಲಿಕ ಪಿ ಎಂ ರಂಗನಾಥ್ ಕಾಂಗ್ರೆಸ್‍ನಿಂದ ಕಣಕ್ಕಿಳಿದು, 42,263 ಮತ ಗಳಿಸಿ, 25 ಸಾವಿರ ಮತಗಳ ಅಂತರದಿಂದ ಜೆಡಿಎಸ್‍ನ ಬಿ ಸತ್ಯನಾರಾಯಣ್ ಅವರನ್ನು ಪರಾಭವಗೊಳಿಸಿದರು. ಮಾಜಿ ಸಚಿವರಾಗಿದ್ದ ಸತ್ಯನಾರಾಯಣ್ ಆನಂತರ ಯಾವ ಚುನಾವಣೆಯಲ್ಲೂ ಗೆಲುವು ಸಾಧಿಸಲಿಲ್ಲ. ಈ ಬಾರಿಯೂ ಅವರು ಜೆಡಿಎಸ್ ಪಕ್ಷದ ಶಿರಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.

ಇದನ್ನೂ ಓದಿ : ಚುನಾವಣಾ ಕಣ | ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ತಾರಕಕ್ಕೇರಿದ ಪೈಪೋಟಿ

2008ರಲ್ಲಿ ಜಯಚಂದ್ರ ಅವರು ಜೆಡಿಎಸ್‍ನ ಸತ್ಯನಾರಾಯಣ್ ವಿರುದ್ದ 26 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಭೇರಿ ಬಾರಿಸಿದರು. ಕಾಂಗ್ರೆಸ್ 60,793 ಮತಗಳನ್ನು ಗಳಿಸಿದರೆ, ಜೆಡಿಎಸ್ 34,297 ಮತ ಗಳಿಸಿತ್ತು. 2013ರಲ್ಲೂ ಜಯಚಂದ್ರ ಅವರು 14 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದರು. ಜಯಚಂದ್ರ 74,089 (ಶೇ.46.47) ಮತ ಪಡೆದರೆ, ಸತ್ಯನಾರಾಯಣ 59,408 ಮತ ಗಳಿಸಿ ಸೋಲುಂಡರು.

2013ರಲ್ಲಿ ಮತ್ತೆ ವಿಧಾನಸಭೆ ಪ್ರವೇಶಿಸಿದ ಟಿ ಬಿ ಜಯಚಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದಾರೆ. ಇದೀಗ ಮತ್ತೆ ಅವರೇ ಕಾಂಗ್ರೆಸ್‍ನಿಂದ ಕಣದಲ್ಲಿದ್ದು, ಸಿರಾ ಕ್ಷೇತ್ರದಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಕಾರಣರಾಗಿದ್ದಾರೆ. ಬಿ ಸತ್ಯನಾರಾಯಣ ಮತ್ತು ಟಿ ಬಿ ಜಯಚಂದ್ರ ನಡುವೆ ನೇರ ಹಣಾಹಣಿ ಇದೆ. ಎರಡೂ ಪಕ್ಷಗಳು ತನ್ನ ಮತಬ್ಯಾಂಕನ್ನು ಭದ್ರಪಡಿಸಿಕೊಂಡಿವೆ. ಹಾಗಾಗಿ ಇಲ್ಲಿ ಬಿಜೆಪಿ ಲೆಕ್ಕಕ್ಕಿಲ್ಲ. ಸಿರಾ ತಾಲೂಕಿನಲ್ಲಿ ದಲಿತರು, ಮುಸ್ಲಿಮರು, ಒಕ್ಕಲಿಗರು, ಬಲಜಿಗರು ಮತ್ತು ಕಾಡುಗೊಲ್ಲರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರ ಮತವೇ ಗೆಲುವಿಗೆ ನಿರ್ಣಾಯಕ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಸಿರಾ ಮತಕ್ಷೇತ್ರದಲ್ಲಿ ಸಣ್ಣಪುಟ್ಟ ಜಾತಿಗಳ ಮತಗಳನ್ನು ಗಳಿಸುವವರು ಗೆಲುವಿನ ನಗೆ ಬೀರಲಿದ್ದಾರೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More