ಬಿಜೆಪಿಯ ಕೊಡಗು ಪ್ರಣಾಳಿಕೆಯಂತೂ ಚೆನ್ನಾಗಿದೆ; ಆದರೆ ಅನುಷ್ಠಾನ ಆದೀತೇ?

ಬಿಜೆಪಿ ಈ ಬಾರಿ ಪ್ರತಿ ಜಿಲ್ಲೆಗೂ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಆಯಾ ಜಿಲ್ಲೆಯ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆ ಮಾಡಲಾಗುವ ಪ್ರಣಾಳಿಕೆಯಲ್ಲಿನ ಎಷ್ಟು ಅಂಶಗಳನ್ನು ಈಡೇರಿಸಲು ಸಾಧ್ಯ? ಕೊಡಗು ಜಿಲ್ಲೆಯ ಪ್ರಣಾಳಿಕೆಯ ಒಂದು ವಿಶ್ಲೇಷಣೆ ಇಲ್ಲಿದೆ

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಈ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ರಾಜ್ಯಕ್ಕೆ ಅನ್ವಯಿಸುವಂತೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದರೆ ಬಿಜೆಪಿ ಮಾತ್ರ ಪ್ರತಿ ಜಿಲ್ಲೆಗೂ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಆಯಾ ಜಿಲ್ಲೆಯ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆ ಮಾಡಲಾಗುವ ಪ್ರಣಾಳಿಕೆಯಲ್ಲಿನ ಎಷ್ಟು ಅಂಶಗಳನ್ನು ಈಡೇರಿಸಲು ಸಾಧ್ಯ ಎಂಬ ಪ್ರಶ್ನೆ ಹುಟ್ಟಿದೆ.

ದುರ್ಬಲ ಹಾಗೂ ಬಡ ವರ್ಗದವರಿಗಾಗಿ ನೀಡಲಾಗಿರುವ ವಿವಿಧ ಸವಲತ್ತು, ಸೌಲಭ್ಯಗಳಿಗೆ ನೀಡುವ ಸಹಾಯಧನದ ಮೊತ್ತವೇ ಸಾವಿರಾರು ಕೋಟಿ ರುಪಾಯಿಗಳಾಗಿವೆ. ರಾಜ್ಯದಲ್ಲಿ ಅತಿ ಮುಖ್ಯವಾಗಿ ಆಗಬೇಕಾದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಹಣಕಾಸಿನ ಕೊರತೆ ಇದೆ. ಹೀಗಿರುವಾಗ, ಪ್ರತಿ ಜಿಲ್ಲೆಗೂ ಪ್ರತ್ಯೇಕ ಪ್ರಣಾಳಿಕೆಗಳ ಭರವಸೆ ಈಡೇರುವ ಸಾಧ್ಯತೆಗಳ ಬಗ್ಗೆ ಕಾಲವೇ ಉತ್ತರ ಹೇಳಬೇಕಿದೆ. ಏಕೆಂದರೆ, ಈ ಭರವಸೆಗಳ ಈಡೇರಿಕೆಗೆ ಸಾವಿರಾರು ಕೋಟಿ ರುಪಾಯಿ ವೆಚ್ಚವಾಗಲಿದೆ.

ಪುಟ್ಟ ಜಿಲ್ಲೆ ಕೊಡಗಿಗೆ ಸಂಬಂಧಪಟ್ಟಂತೆ ಬಿಜೆಪಿಯು ಶನಿವಾರ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇದರಲ್ಲಿ ಮುಖ್ಯವಾಗಿ, ಪ್ರತ್ಯೇಕ ಪೊನ್ನಂಪೇಟೆ ಮತ್ತು ಕುಶಾಲನಗರ ತಾಲೂಕು ರಚನೆ, ಕಾವೇರಿ ನದಿ ಸಂರಕ್ಷಣೆಗಾಗಿ ಕ್ರಮ, ಕುಶಾಲನಗರದವರೆಗೆ ರೈಲ್ವೆ ಮಾರ್ಗ ನಿರ್ಮಾಣ ಮತ್ತಿತರ ಭರವಸೆಗಳಿವೆ. ಈ ಭರವಸೆಗಳ ಪಟ್ಟಿ ಮುಂದುವರಿದು, ಕೊಡವ ಕೌಟುಂಬಿಕ ಹಾಕಿ ಕ್ರೀಡಾಕೂಟಕ್ಕೆ ಪ್ರತಿವರ್ಷ ೧೦ ಕೋಟಿ ರುಪಾಯಿಗಳ ಅನುದಾನ, ವಾರ್ಷಿಕ ದಸರಾ ಹಬ್ಬದ ಆಚರಣೆಗಾಗಿ ೨ ಕೋಟಿ ರುಪಾಯಿಗಳ ಅನುದಾನ, ಕಾಡುಪ್ರಾಣಿಗಳ ಹಾವಳಿ ತಡೆಗೆ ಕ್ರಮ ಮತ್ತು ಕಾಡು ಪ್ರಾಣಿಗಳ ಹಾವಳಿಯಿಂದ ಆಗುವ ನಷ್ಟಕ್ಕೆ ಹೆಚ್ಚಿನ ಪರಿಹಾರ, ಸರ್ಕಾರಿ ಕಟ್ಟಡ ಹಾಗೂ ರಸ್ತೆ ದುರಸ್ಥಿಗಾಗಿ ಪ್ರತಿವರ್ಷ ೨೦೦ ಕೋಟಿ ರುಪಾಯಿಗಳ ಆನುದಾನ ಕೂಡ ಸೇರಿದೆ.

ಕೊಡಗಿನಲ್ಲಿ ಇಂದು ಜ್ವಲಂತ ಸಮಸ್ಯೆ ಎಂದರೆ, ವೀರಾಜಪೇಟೆ ಕ್ಷೇತ್ರದಲ್ಲಿ ಇರುವ ಕಾಡಾನೆಗಳ ಹಾವಳಿ. ಪ್ರತಿವರ್ಷವೂ ಜಿಲ್ಲೆಯಲ್ಲಿ ಕನಿಷ್ಟ ೬ರಿಂದ ೧೦ ಮಂದಿ ಕಾಡಾನೆಗಳ ದಾಳಿಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನೊಂದೆಡೆ, ಕಳೆದ ೩-೪ ವರ್ಷಗಳಲ್ಲಿ ಹುಲಿ ದಾಳಿಗೆ ನೂರಾರು ಜಾನುವಾರುಗಳು ಬಲಿಯಾಗುತ್ತಿವೆ. ಹಸಿರಿನ ಪ್ರದೇಶವಾಗಿರುವುದರಿಂದ ಕೊಡಗಿನಲ್ಲಿ ನೂರಾರು ರೈತರು ಹೈನುಗಾರಿಕೆ ಮೂಲಕವೇ ಜೀವನ ಸಾಗಿಸುತಿದ್ದಾರೆ. ಆದರೆ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಜಿಲ್ಲೆಯ ಗಡಿಯಲ್ಲೇ ಇರುವುದರಿಂದ, ಆನೆ ಮತ್ತು ಹುಲಿಗಳ ಸಂತತಿ ಹೆಚ್ಚುತ್ತಿರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಅಪಾರ ನಷ್ಟ ಅನುಭವಿಸುತಿದ್ದಾರೆ. ಕಾಡಾನೆಗಳ ಹಾವಳಿಯ ಶಾಶ್ವತ ತಡೆಗೆ ಹಿಂದಿದ್ದ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಅವರು ಸಂಪೂರ್ಣ ಅಧ್ಯಯನ ನಡೆಸಿ, ೬೫೭ ಕೋಟಿ ರುಪಾಯಿಗಳ ಯೋಜನೆ ರೂಪಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ, ಎರಡು ವರ್ಷಗಳೇ ಕಳೆದರೂ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಲಿಲ್ಲ. ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಈ ಅಂಶ ಇದ್ದರೂ ನಿರ್ದಿಷ್ಟ ಕ್ರಮದ ಭರವಸೆಯಾಗಲೀ, ಹಣದ ಅಂದಾಜಾಗಲೀ ಇಲ್ಲ. ಬದಲಿಗೆ, ರೈತರ ಬೆಳೆ ಮತ್ತು ಪ್ರಾಣ ಹಾನಿಯ ಪರಿಹಾರವನ್ನು ಹೆಚ್ಚಿಸುವ ಭರವಸೆ ನೀಡಲಾಗಿದೆ.

ಎರಡನೇ ಸಮಸ್ಯೆ ಕೊಡಗಿನ ಜಮ್ಮಾ-ಬಾಣೆಯದ್ದಾಗಿದೆ. ವಾಸ್ತವವಾಗಿ ಇಲ್ಲಿ ಸಮಸ್ಯೆ ಏನೂ ಇಲ್ಲ, ಆದರೆ ಇದು ಅಧಿಕಾರಿಗಳು ಸೃಷ್ಟಿ ಮಾಡಿರುವಂಥದ್ದಾಗಿದೆ. ಕೊಡಗಿನ ಜಮ್ಮಾ ಹಾಗೂ ಬಾಣೆ ಜಮೀನುಗಳಿಗೆ ಈ ಹಿಂದೆ ಕಂದಾಯ ನಿಗದಿ ಮಾಡುತ್ತಿರಲಿಲ್ಲ. ಇದರ ಹಕ್ಕನ್ನು ಪಡೆಯಲು ಹೈಕೋರ್ಟಿನಲ್ಲಿ ಹಿರಿಯ ವಕೀಲ ಎ ಕೆ ಸುಬ್ಬಯ್ಯ ಅವರು ಮೊಕದ್ದಮೆ ಹೂಡಿ ಹಕ್ಕನ್ನು ಪಡೆಯಲಾಯಿತು. ರಾಜ್ಯ ಸರ್ಕಾರ ಸಂಪುಟ ಉಪಸಮಿತಿ ರಚಿಸಿ ಅದರ ಶಿಫಾರಸಿನ ಮೇರೆಗೆ ೧೯೬೪ರ ಭೂಕಂದಾಯ ಕಾಯ್ದೆಯ ಸೆಕ್ಷನ್ ೮೧ಕ್ಕೆ ತಿದ್ದುಪಡಿ ತಂದು ಬಾಣೆ ಹಾಗೂ ಜಮ್ಮಾ ಜಾಗಗಳಿಗೆ ಕಂದಾಯ ವಿಧಿಸಿ ಅವುಗಳ ಹಕ್ಕುದಾರರನ್ನು ಆಧಿಭೋಗದಾರರೆಂದು ಪರಿಗಣಿಸಿ ಹಕ್ಕನ್ನು ನೀಡಬೇಕೆಂದು ಆದೇಶಿಸಲಾಗಿದೆ ಮತ್ತು ಇದಕ್ಕೆ ರಾಷ್ಟ್ರಪತಿಗಳ ಅಂಕಿತವೂ ಆಗಿದೆ. ಆದರೆ, ಮಡಿಕೇರಿಯ ಉಪವಿಭಾಗಾಧಿಕಾರಿ ಮತ್ತು ಸರ್ವೆಯ ಸಹಾಯಕ ನಿರ್ದೇಶಕರು ಕುಂಟು ನೆಪ ಒಡ್ಡಿ ಸರ್ಕಾರದಿಂದ ಇನ್ನೂ ಸುತ್ತೋಲೆ ಬಂದಿಲ್ಲ ಎಂದು ರೈತರಿಗೆ ತೊಂದರೆ ನೀಡುತಿದ್ದಾರೆ. ಭೂ ಕಂದಾಯ ಕಾಯ್ದೆಗೇ ತಿದ್ದುಪಡಿ ಆಗಿದ್ದು ಯಾವುದೇ ಸುತ್ತೋಲೆಯ ಅವಶ್ಯಕತೆ ಇಲ್ಲ ಎಂದು ವೀರಾಜಪೇಟೆಯ ಶಾಸಕ ಕೆ ಜಿ ಬೋಪಯ್ಯ ಅವರೇ ಹೇಳಿದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಅಧಿಕಾರಿಗಳೇ ಈ ರೀತಿಯ ಗೊಂದಲ ಸೃಷ್ಟಿಸುತ್ತಿರುವುದು ನಿಜಕ್ಕೂ ಮಾನವ ಹಕ್ಕಿನ ಉಲ್ಲಂಘನೆ ಅಲ್ಲದೇ ಬೇರೇನೂ ಅಲ್ಲ. ಆದರೆ ಪ್ರಣಾಳಿಕೆಯಲ್ಲಿ ಇದಕ್ಕೆ ಹೆಚ್ಚಿನ ಮಹತ್ವವನ್ನೇನೂ ನೀಡಲಾಗಿಲ್ಲ.

ಕೊಡಗಿನಲ್ಲಿ ಮೂರನೇ ಸಮಸ್ಯೆ ಎಂದರೆ ನೂತನ ತಾಲೂಕು ರಚನೆಯ ಹೋರಾಟದ್ದು. ಜಿಲ್ಲೆಯಲ್ಲಿ ಈಗ ಮಡಿಕೇರಿ, ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕುಗಳಿದ್ದು ಗುಡ್ಡಗಾಡು ಪ್ರದೇಶ ಆಗಿರುವುದರಿಂದ ಸರಿಯಾದ ಸಂಚಾರ ಸೌಲಭ್ಯಗಳಿಲ್ಲದೆ ತಾಲೂಕು ಕೇಂದ್ರಗಳಿಗೆ ಆಗಮಿಸಬೇಕಾದರೂ ಒಂದು ದಿನದ ಕೆಲಸ ಹಾಳು ಮಾಡಿಕೊಳ್ಲುವುದಲ್ಲದೆ ಹಣವನ್ನೂ ವೆಚ್ಚ ಮಾಡಬೇಕಾಗಿದೆ. ಹಾಗಾಗಿ ಕುಶಾಲನಗರದ ಸುತ್ತಮುತ್ತಲಿನ ಗ್ರಾಮಗಳ ಹಾಗೂ ಪೊನ್ನಂಪೇಟೆ ಸುತ್ತಮುತ್ತಲಿನ ಜನ ಪ್ರತ್ಯೇಕ ತಾಲೂಕು ರಚನೆಯ ಹೋರಾಟವನ್ನು ಆರಂಬಿಸಿದ್ದಾರೆ. ಸೋಮವಾರಪೇಟೆ ತಾಲೂಕಿನ ೧೯ ಗ್ರಾಮ ಪಂಚಾಯ್ತಿಗಳನ್ನು ಬೇರ್ಪಡಿಸಿ ಕುಶಾಲನಗರ ತಾಲೂಕು ರಚನೆಯ ಬೇಡಿಕೆಗೆ ದಶಕಗಳ ಇತಿಹಾಸ ಇದೆ. ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ಅವರು ೧೯೮೩ರಲ್ಲೇ ಈ ಕನಸನ್ನು ಹುಟ್ಟುಹಾಕಿದ್ದರು. ವೀರಾಜಪೇಟೆ ತಾಲೂಕಿನ ೧೮ ಗ್ರಾಮ ಪಂಚಾಯ್ತಿಗಳನ್ನು ಸೇರಿಸಿ ಪೊನ್ನಂಪೇಟೆ ತಾಲೂಕು ರಚನೆಗಾಗಿ ಹೋರಾಟವೂ ನಡೆಯುತ್ತಿದೆ. ರಾಜ್ಯ ಸರ್ಕಾರ ಕಳೆದ ವರ್ಷ ೫೦ ನೂತನ ತಾಲೂಕು ರಚನೆಯ ಘೋಷಣೆ ಮಾಡಿದ್ದರೂ ಕೊಡಗಿನಿಂದ ಒತ್ತಡ ಕಡಿಮೆ ಇದ್ದ ಕಾರಣದಿಂದ ತಾಲೂಕಿನ ಬೇಡಿಕೆಯನ್ನೇ ತಳ್ಳಿಹಾಕಲಾಗಿದೆ. ಈಗ ಪ್ರಣಾಳಿಕೆಯಲ್ಲಿ ಸೇರಿಸಿರುವುದು ಉತ್ತಮ ಬೆಳವಣಿಗೆ ಎಂದು ಜನತೆಯ ಅಭಿಪ್ರಾಯ.

ಇದನ್ನೂ ಓದಿ : ಕಾಂಗ್ರೆಸ್‌ನ ಜನಪ್ರಿಯ ಯೋಜನೆಗಳ ಹೊಸ ರೂಪವೇ ಬಿಜೆಪಿ ಪ್ರಣಾಳಿಕೆ ವಿಶೇಷ!

ನಾಲ್ಕನೆಯದಾಗಿ ಜಿಲ್ಲೆಗೆ ಈತನಕವೂ ರೈಲಿನ ಸಂಪರ್ಕವಿಲ್ಲ. ರೈಲಿನ ಬೇಡಿಕೆಗೂ ೨ ದಶಕಗಳ ಇತಿಹಾಸ ಇದೆ. ಈ ಹಿಂದೆ ಡಿ ವಿ ಸದಾನಂದ ಗೌಡ ಅವರು ರೈಲ್ವೆ ಸಚಿವರಾಗಿದ್ದಾಗಲೇ ಮೈಸೂರಿನಿಂದ ಕುಶಾಲನಗರಕ್ಕೆ ೬೫೦ ಕೋಟಿ ರೂಪಾಯಿಗಳ ಯೋಜನೆಗೆ ವಿಸೃತ ವರದಿ ಸಿದ್ದಪಡಿಸಲಾಗಿತ್ತಾದರೂ ರಾಜ್ಯ ಸರ್ಕಾರ ತನ್ನ ಪಾಲಿನ ಶೇಕಡ ೫೦ರಷ್ಟು ಹಣ ಹೂಡಲು ಹಿಂಜರಿದ ಕಾರಣ ಇನ್ನೂ ನೆನೆಗುದಿಗೆ ಬಿದ್ದಿದೆ.

ಇನ್ನುಳಿದಂತೆ, ಜಿಲ್ಲೆಯಲ್ಲಿ ಕಾರ್ಮಿಕ ವರ್ಗದ ಸಾವಿರಾರು ಜನರಿದ್ದು ಇವರಿಗೆ ಇಂದಿಗೂ ಮನೆ ಇಲ್ಲ. ಇವರೆಲ್ಲ ಕಾಫಿತೋಟಗಳ ಲೈನ್ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೆ, ಸಾವಿರಾರು ಗಿರಿಜನ ಕುಟುಂಬಗಳು ಇನ್ನೂ ಅರಣ್ಯದಂಚಿನ ಹಾಡಿಗಳಲ್ಲಿ ಮೂಲಸೌಕರ್ಯ ಇಲ್ಲದೆ ವಾಸಿಸುತ್ತಿವೆ. ಸರ್ಕಾರದ ಎಲ್ಲ ನೆರವೂ ಭ್ರಷ್ಟರ ಪಾಲು ಕಳೆದುಕೊಂಡು ಇವರಿಗೆ ಸಿಗುತ್ತಿರುವುದರಿಂದ ಇನ್ನೂ ಬಡತನದಲ್ಲೇ ಇದ್ದಾರೆ.

ಬಿಜೆಪಿ ಪ್ರಣಾಳಿಕೆಯೇನೋ ನಿಜಕ್ಕೂ ರಾಮರಾಜ್ಯದ ಕಲ್ಪನೆ ಮೂಡಿಸಿದೆ. ಇದು ಕೇವಲ ಸಂದರ್ಭಕ್ಕೆ ಅನುಸಾರವಾಗಿ ಮತಗಳಿಕೆಯ ಉದ್ದೇಶ ಹೊಂದಿದ್ದರೆ ಅದು ನಿಜಕ್ಕೂ ದುರಂತ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More