ಚುನಾವಣೆಗೆ ಮೊದಲೇ ಹುಮನಾಬಾದ್ ಜೆಡಿಎಸ್ ಅಭ್ಯರ್ಥಿ ನಸೀಮೊದ್ದೀನ್‌ಗೆ ಶಾಕ್‌!

ಹುಮನಾಬಾದ್ ಕ್ಷೇತ್ರದಿಂದ ಗೆದ್ದುಬರುವ ಕನಸು ಕಾಣುತ್ತಿದ್ದ ನಸೀಮೊದ್ದೀನ್ ಪಟೇಲ್‌ ಮೇಲೆ ಸಿಟ್ಟಾದ ಮಾಜಿ ಸಚಿವ ಮೀರಾಜೋದ್ದಿನ್ ಪಟೇಲ್ ಅವರು, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಾಜಶೇಖರ್ ಪಾಟೀಲ್‌ರನ್ನು ಬೆಂಬಲಿಸಿದ್ದಾರೆ!

ಈ ಬಾರಿ ಬೀದರ್‌ನ ಹುಮನಾಬಾದ್ ಕ್ಷೇತ್ರದಿಂದ ಗೆದ್ದುಬರುವ ಕನಸು ಕಾಣುತ್ತಿದ್ದ ನಸೀಮೊದ್ದೀನ್ ಪಟೇಲ್‌ಗೆ ಅವರ ಕುಟುಂಬಸ್ಥರೇ ಶಾಖ್ ನೀಡಿದ್ದಾರೆ. ಮತದಾನಕ್ಕೆ ಒಂದು ವಾರ ಬಾಕಿ ಇರುವಾಗ ಜೆಡಿಎಸ್ ಅಭ್ಯರ್ಥಿಯಾಗಿರುವ ನಸೀಮೊದ್ದೀನ್ ಪಟೇಲ್ ಅವರ ಸೋದರ ಸಂಬಂಧಿ ಮೀರಾಜೋದ್ದಿನ್ ಪಟೇಲ್ ಕುಟುಂಬ ಸಮೇತರಾಗಿ ಕಾಂಗ್ರೆಸ್ ಸೇರ್ಪಡೆಯಾಗಿರುವುದು ದೊಡ್ಡ ಏಟು ನೀಡಿದೆ. ಕಳೆದ ೩೦ ವರ್ಷಗಳಿಂದ ಜೆಡಿಎಸ್ನಲ್ಲಿದ್ದು ಪಕ್ಷಕ್ಕಾಗಿ ದುಡಿದಿದ್ದ ನಸೀಮೊದ್ದೀನ್ ಅವರು ಈ ಬಾರಿಯ ಚುನಾವಣೆಯಲ್ಲಿ ಹುಮನಾಬಾದ್ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಪಾಟೀಲ್‌ರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ.

ಜೆಡಿಎಸ್‌ನಲ್ಲಿ ಹುಲಿ ಎಂದೇ ಖ್ಯಾತಿ ಪಡೆದಿರುವ ಮೀರಾಜೋದ್ದಿನ್ ಪಟೇಲ್ ಮಾಜಿ ಸಚಿವರೂ ಹೌದು. ಹುಮಾನಾಬಾದ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ರಾಜಶೇಖರ ಪಾಟೀಲ್ ಅವರ ನೇತೃತ್ವದಲ್ಲಿ ಮಿರಾಜೋದ್ದಿನ್ ಪಟೇಲ್ ಪತ್ನಿ, ಮಕ್ಕಳಾದ ಸಮರೀನಾ ಫಾತೀಮ್ಮಾ ಬೇಗಂ, ಅಮೀರಾನಾ ಸೇರಿದಂತೆ ಇಡೀ ಪರಿವಾರದವರು ಜೆಡಿಎಸ್‌ಗೆ ಗುಡ್ ಬೈ ಹೇಳಿ ಕಾಂಗ್ರೆಸ್‌ಗೆ ಸೇರಿದ್ದಾರೆ. ಇದರಿಂದ ಇವರ ಚಿಕ್ಕಪ್ಪನಾದ ಹುಮನಾಬಾದ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ನಸೀಮೋದ್ದಿನ್ ಪಟೇಲರಿಗೆ ದೊಡ್ಡ ಆಘಾತವಾಗಿದೆ. ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದ ನಸೀಮೊದ್ದೀನ್ ಅವರು ಈ ಬಾರಿಯಾದರೂ ಗೆಲ್ಲುವ ಆಶಯದಲ್ಲಿದ್ದರು. ಆದರೆ ಕುಟುಂಬವೇ ತಮ್ಮ ಕೈಬಿಟ್ಟದ್ದು ಅವರಿಗೆ ನೋವು ತಂದಿದೆ.

ಈ ಬಾರಿ ಬಿಎಸ್‌ಪಿ ಮತ್ತು ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಹೆಚ್ಚಾಗಿರುವ ಹಿಂದುಳಿದ ಮತದಾರರ ಬೆಂಬಲ ತಮಗೆ ಸಿಗುವ ಆಶಯ ನಸೀಮೊದ್ದೀನ್ ಅವರಿಗೆ ಇತ್ತು. ವಾಸ್ತವದಲ್ಲಿ ನಸೀಮೊದ್ದೀನ್ ಮತ್ತು ಮಿರಾಜೊದ್ದೀನ್ ನಡುವೆ ಆಸ್ತಿ ಜಗಳ ನಡೆಯುತ್ತಿದೆ. ಈ ವಿಚಾರವಾಗಿ ತಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಅವರು ರಾಜಶೇಖರ ಪಾಟೀಲ್ ಅವರನ್ನು ಬೇಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿ ರಾಜಶೇಖರ ಪಾಟೀಲರಿಗೆ ಬೆಂಬಲಿಸಲೂ ನಿರ್ಧರಿಸಿದ್ದಾರೆ.

ಇದನ್ನೂ ಓದಿ : ರಾಜಕೀಯ ಕಿತ್ತಾಟಕ್ಕೆ ಬಲಿಯಾದ ಬೀದರ್‌ನ ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ

ಚಿಕ್ಕಪ್ಪ ನಸೀಮೋದ್ದಿನ್ ಪಟೇಲ್ ಮಿರಾಜೊದ್ದೀನ್ ಮೇಲೆ ಹಲವು ಕೇಸುಗಳನ್ನ ಹಾಕ್ಕಿದ್ದಾರೆ ಎನ್ನಲಾಗಿದೆ. ಅಲ್ಲದೆ ತಂದೆಯ ನಿಧನದ ಬಳಿಕ ಚಿಕ್ಕಪ್ಪನಿಂದ ಹೆಚ್ಚಿನ ಸ್ಪಂದನೆ ಸಿಕ್ಕಲ್ಲ ಎಂದೂ ಮಿರಾಜೊದ್ದೀನ್ ಆರೋಪಿಸಿದ್ದಾರೆ. ಇದೇ ಕಾರಣದಿಂದ ರಾಜಶೇಖರ ಪಾಟೀಲರ ಪರ ಪ್ರಚಾರ ಮಾಡಿ ಚಿಕ್ಕಪ್ಪನನ್ನು ಸೋಲಿಸುವ ಉಮೇದಿನಲ್ಲಿದ್ದಾರೆ. ನಿಜ ಹೇಳಬೇಕೆಂದರೆ ರಾಜಶೇಖರ ಪಾಟೀಲ್ ಮತ್ತು ಮಿರಾಜೊದ್ದೀನ್ ಪಟೇಲ್ ರಾಜಕೀಯವಾಗಿ ಬದ್ಧವೈರಿಯಾಗಿದ್ದವರು. ಮಿರಾಜೊದ್ದೀನ್ ಪಟೇಲ್ ಅವರು ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ರಾಜಶೇಖರ ಪಾಟೀಲ್ ಎದುರು ಸೋತಿದ್ದಾರೆ. ಇದೀಗ ರಾಜಶೇಖರ್ ಪಾಟೀಲ್ ಮತ್ತು ಮಿರಾಜೊದ್ದೀನ್ ಪಟೇಲ್ ಒಂದಾಗಿರುವ ಕಾರಣ ನಸೀಮೊದ್ದೀನ್ ಗೆಲುವಿನ ಆಶಯಕ್ಕೆ ತಡೆಯಾಗಿದೆ. ರಾಜಶೇಖರ್ ಪಾಟೀಲರ ಚಾಣಕ್ಯ ನಡೆಯಿಂದ ಚುನಾವಣೆಗೆ ಮುನ್ನವೇ ನಸೀಮೊದ್ದೀನ್ ಅವರಿಗೆ ಸೋಲಿನ ಭಯ ಆರಂಭವಾಗಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More