ಚುನಾವಣಾ ಕಣ | ವೀರಾಜಪೇಟೆ ಸ್ಪರ್ಧಿಗಳಿಗೆ ಕಾಡಾನೆ ಹಾವಳಿಯೇ ತಲೆನೋವು

ಕೊಡಗಿನ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಕಂಡುಬರುತ್ತಿದೆ. ಕಳೆದ ೧೦ ವರ್ಷಗಳ ಅವಧಿಯಲ್ಲಿ ಒಂದಷ್ಟು ಕೆಲಸ ಆಗಿದೆ ಆದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ದಿ ಆಗಿಲ್ಲ, ಹಾಗಾಗಿ ಈ ಬಾರಿ ಅಭಿವೃದ್ಧಿ ಪರ ಇರುವವರಿಗೆ ಮಾತ್ರ ಮತ ಎಂಬುದು ಕ್ಷೇತ್ರದ ಜನರ ಅಭಿಮತ

ಕೊಡಗಿನ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಕಂಡುಬರುತ್ತಿದೆ. ಟಿಕೆಟ್‌ಗಾಗಿ ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಸಾಕಷ್ಟು ಆಕಾಂಕ್ಷಿಗಳ ಹೋರಾಟ ನಡೆದು, ಕೊನೆಗೆ ಎರಡೂ ಪಕ್ಷಗಳ ವರಿಷ್ಠರು ಇದನ್ನು ಶಮನಗೊಳಿಸುವಲ್ಲಿ ಯಶಸ್ವಿ ಆಗಿದ್ದರು.

ಕೊಡವ ಜನಾಂಗದ ಮತದಾರರ ಸಂಖ್ಯೆ ಹೆಚ್ಚಾಗಿದ್ದರೂ ಇಲ್ಲಿ ಗೌಡ ಜನಾಂಗದ ಅಭ್ಯರ್ಥಿ ಕೆ ಜಿ ಬೋಪಯ್ಯ ಅವರ ಗೆಲುವಿಗೇನೂ ತೊಡಕಾಗಿಲ್ಲ ಎಂಬುದು ವಿಶೇಷ. ಎರಡು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಬೋಪಯ್ಯ, ಈ ಬಾರಿಯೂ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದಾರೆ. ಇನ್ನು, ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ಅವರು ಬಡವರಿಗೆ ತೊಂದರೆ, ಕಾಡಾನೆಗಳಿಂದ ಪ್ರಾಣ ಹಾನಿ ಆದ ಸಂದರ್ಭದಲ್ಲಿ ಮನೆಗೇ ತೆರಳಿ ತಮ್ಮ ಕಿಸೆಯಿಂದ ಪರಿಹಾರ ನೀಡುವ ಮೂಲಕವೇ ಹೆಸರು ಗಳಿಸಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿರುವ ಅರುಣ್ ಮಾಚಯ್ಯ ಈ ಹಿಂದೆ ಜೆಡಿಎಸ್‌ನಲ್ಲಿದ್ದವರು. ಅವರಿಗೆ ಮುಸ್ಲಿಮರು, ದಲಿತರ ಸಾಂಪ್ರದಾಯಿಕ ಮತಗಳ ಬೆಂಬಲ ಇದೆ.

೨೦೧೩ರ ಚುನಾವಣೆಯಲ್ಲಿ ಬಿಜೆಪಿಯ ಕೆ ಜಿ ಬೋಪಯ್ಯ ಅವರು ಕಾಂಗ್ರೆಸ್ ನ ಬಿದ್ದಾಟಂದ ಪ್ರದೀಪ್ ಅವರನ್ನು ೩೫೫೦ ಮತಗಳ ಅಂತರದಿಂದ ಸೋಲಿಸಿದ್ದರು. ಜೆಡಿಎಸ್‌ನ ದಂಬೆಕೋಡಿ ಮಾದಪ್ಪ ಅವರು ಕೇವಲ ೫೮೮೦ ಮತ ಪಡೆದಿದ್ದರು. ೨೦೦೮ರಲ್ಲಿ ಬೋಪಯ್ಯ ಅವರು ಕಾಂಗ್ರೆಸ್‌ನ ವೀಣಾ ಅಚ್ಚಯ್ಯ ಅವರನ್ನು ೧೫ ಸಾವಿರ ಮತಗಳ ಅಂತರದಿಂದ ಸೋಲಿಸಿ ಆಯ್ಕೆ ಆಗಿದ್ದರು. ಆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ದಿಸಿದ್ದ ಅರುಣ್ ಮಾಚಯ್ಯ ಅವರು ೩೦ ಸಾವಿರ ಮತ ಪಡೆದಿದ್ದು, ಇದು ಕಾಂಗ್ರೆಸ್ ಅಭ್ಯರ್ಥಿಗಿಂತ ಕೇವಲ ೩೩೦೦ರಷ್ಟು ಕಡಿಮೆ ಇತ್ತು. ಈ ಬಾರಿ ಎಂಇಪಿ ಪಕ್ಷದಿಂದ ಮಾಜಿ ಶಾಸಕ ಎಚ್ ಡಿ ಬಸವರಾಜು ಅವರೂ ಸ್ಪರ್ಧೆಗೆ ಇಳಿದಿದ್ದಾರಾದರೂ ತ್ರಿಕೋನ ಸ್ಪರ್ದೆಯಲ್ಲಿ ವ್ಯತ್ಯಾಸವೇನೂ ಆಗಲಾರದು.

ಈ ಹಿಂದೆ, ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿದ್ದಾಂಡ ಪ್ರದೀಪ್ ಅವರ ಅಕಾಲಿಕ ಮರಣದಿಂದಾಗಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿತ್ತು. ಒಂದು ವೇಳೆ ಪ್ರದೀಪ್ ಅವರು ಇದ್ದಿದ್ದರೆ ಅವರೇ ಈ ಬಾರಿಯೂ ಸ್ಪರ್ದಿಸುತಿದ್ದುದರಲ್ಲಿ ಯಾವುದೇ ಅನುಮಾನ ಇರಲಿಲ್ಲ. ಕಳೆದ ಬಾರಿ ಸೋತಿದ್ದರ ಅನುಕಂಪವೂ ಅವರಿಗೆ ಕೊಂಚ ಮಟ್ಟಿಗೆ ಸಹಾಯ ಮಾಡುತ್ತಿತ್ತು. ಪದ್ಮಿನಿ ಅವರು ಪಕ್ಷದಲ್ಲಿ ಹಿರಿಯರಾಗಿದ್ದುದರಿಂದ ಸಹಜವಾಗೇ ಟಿಕೆಟ್ ನೀಡಬಹುದೆನ್ನುವ ನಿರೀಕ್ಷೆ ಹೆಚ್ಚಾಗೇ ಇತ್ತು. ಆದರೆ ಹೈಕಮಾಂಡ್ ತೀರ್ಮಾನದಿಂದ ಬೇಸತ್ತ ಪದ್ಮಿನಿ, ಧಿಡೀರಾಗಿ ಜೆಡಿಎಸ್ ಸೇರ್ಪಡೆಗೊಂಡು ರಾಜ್ಯ ಪ್ರದಾನ ಕಾರ್ಯದರ್ಶಿ ಸ್ಥಾನವನ್ನೂ ಗಳಿಸಿಕೊಂಡರು. ಪದ್ಮಿನಿ ಅವರ ನಿರ್ಗಮನ ಕಾಂಗ್ರೆಸ್ ಪಕ್ಷಕ್ಕೆ ಹೊಡೆತವೇ ಎನ್ನುವುದರಲ್ಲಿ ಅನುಮಾನ ಏನೂ ಇಲ್ಲ. ಜೊತೆಗೆ ಜೆಡಿಎಸ್‌ನ ಸಂಕೇತ್ ಪೂವಯ್ಯ ಅವರಿಗೆ ಒಂದಷ್ಟು ಮತಗಳಿಕೆ ಹೆಚ್ಚಾಗಲಿದೆ.

ಸುಮಾರು ೨,೧೬,೯೦೯ ಮತದಾರರಿರುವ ವಿರಾಜಪೇಟೆ ಕ್ಷೇತ್ರದಲ್ಲಿ ಕೊಡವ ಜನಾಂಗದ ಸಂಖ್ಯೆ ಹೆಚ್ಚು ಮತ್ತು ನಿರ್ಣಾಯಕ. ಮಡಿಕೇರಿ ಕ್ಷೇತ್ರದಲ್ಲಿ ಒಕ್ಕಲಿಗ ಗೌಡ ಜನಾಂಗದ ಜನಸಂಖ್ಯೆ ೪೮ ಸಾವಿರ ಇದ್ದರೆ, ಇಲ್ಲಿ ಕೊಡವ ಜನಾಂಗದ ಮತದಾರರ ಸಂಖ್ಯೆ ೪೭ ಸಾವಿರ ಇದೆ. ನಂತರದ ಸ್ಥಾನದಲ್ಲಿ ಮುಸ್ಲಿಮರು ಇದ್ದು, ಇವರ ಸಂಖ್ಯೆ ೩೭ ಸಾವಿರ ಇದೆ. ಅರೆಭಾಷೆ ಗೌಡ ಒಕ್ಕಲಿಗರ ಸಂಖ್ಯೆ ೨೭ ಸಾವಿರ ಇದೆ. ಎಸ್‌ಸಿ ಮತ್ತು ಎಸ್‌ಟಿ ಮತದಾರರ ಸಂಖ್ಯೆ ೪೭ ಸಾವಿರ ಇದೆ.

ವೀರಾಜಪೇಟೆ ಕ್ಷೇತ್ರದಲ್ಲಿ ಕಳೆದ ೧೦ ವರ್ಷಗಳ ಅವಧಿಯಲ್ಲಿ ಒಂದಷ್ಟು ಕೆಲಸ ಆಗಿದೆ ಆದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ದಿ ಆಗಿಲ್ಲ ಎಂಬುದು ಕ್ಷೇತ್ರದ ಜನರ ಆರೋಪ. ಶಾಸಕ ಕೆ ಜಿ ಬೋಪಯ್ಯ ಅವರು ಒಂದಷ್ಟು ಕೆಲಸ ಮಾಡಿದ್ದಾರೆ; ಎಲ್ಲಕ್ಕಿಂತ ಹೆಚ್ಚಾಗಿ ಕೊಡಗಿನ ಜಮ್ಮಾ-ಬಾಣೆಯ ಸಮಸ್ಯೆಯನ್ನು ಪರಿಹರಿಸುವುದರಲ್ಲಿ ಇವರ ಪಾತ್ರ ಮಹತ್ವದ್ದು ಎಂದು ಇವರ ವಿರೋಧಿಗಳೂ ಒಪ್ಪುತ್ತಾರೆ. ಈ ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಕಾಡಾನೆಗಳ ಹಾವಳಿ ನಿತ್ಯವೂ ಇದ್ದಿದ್ದೇ. ಇಲ್ಲಿನ ಸಿದ್ದಾಪುರ, ಮಾಲ್ದಾರೆ ಅರಣ್ಯ ಪ್ರದೇಶದ ಸುತ್ತಲೂ ಹಳ್ಳಿಗಳು ಇರುವುದರಿಂದ ಸಹಜವಾಗೇ ಆನೆಗಳು ಊರಿನೊಳಗೆ ನುಗ್ಗುತ್ತಿವೆ. ಕಾಡಾನೆಗಳಿಗೇನು ಗೊತ್ತು ಇದು ಸರ್ಕಾರಿ ಅರಣ್ಯ, ಪಕ್ಕದ್ದು ಖಾಸಗೀ ತೋಟ ಅಂತ! ಆದರೆ ಇದರಿಂದಾಗಿ ಕೇವಲ ಬೆಳೆ ಹಾನಿ ಆದರೆ ಸುಧಾರಿಸಬಹುದಿತ್ತು. ಆದರೆ, ಇಲ್ಲಿ ವರ್ಷಕ್ಕೆ ಕನಿಷ್ಠ ೫-೬ ಗ್ರಾಮಸ್ಥರು ಕಾಡಾನೆಗಳಿಗೆ ಬಲಿಯಾಗುತ್ತಿರುವುದು ದುರಂತ.

ಈ ಕ್ಷೇತ್ರವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆ ಕಾಡಾನೆಗಳ ಹಾವಳಿ ಆಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಅರಣ್ಯ ಇಲಾಖೆ ರ‍್ಯಾಪಿಡ್ ರೆಸ್ಪಾನ್ಸ್ ಟೀಮ್ ರಚಿಸಿ ಕಾಡಾನೆಗಳನ್ನು ಕಾಡಿಗಟ್ಟುವ ಪ್ರಯತ್ನ ನಡೆಸಿದೆಯಾದರೂ ರಾತ್ರಿ ಆಯಿತೆಂದರೆ ಆಹಾರ ಹುಡುಕಿಕೊಂಡು ಅವು ಪುನಃ ಬರುತ್ತಿವೆ. ಅರಣ್ಯದ ಸುತ್ತಲೂ ರೈಲು ಕಂಬಿಗಳ ಬೇಲಿಯನ್ನು ಹಾಕುವುದರಿಂದ ಮಾತ್ರ ಕಾಡಾನೆಗಳ ಹಾವಳಿ ನಿಲ್ಲಬಹುದು. ಆದರೆ ಈ ಯೋಜನೆಗೆ ಒಂದು ಕಿಲೋಮೀಟರ್‌ಗೆ ಒಂದು ಕೋಟಿ ರುಪಾಯಿ ಖರ್ಚಾಗಲಿದ್ದು, ಅರಣ್ಯ ಇಲಾಖೆ ೬೫೭ ಕೋಟಿ ರುಪಾಯಿಗಳ ಪ್ರಸ್ತಾವನೆ ಸಲ್ಲಿಸಿದೆ. ಆದರೆ ರಾಜ್ಯ ಸರ್ಕಾರದ ಬಳಿ ಹಣವಿಲ್ಲದೆ ಯೋಜನೆ ನನೆಗುದಿಗೆ ಬಿದ್ದಿದೆ.

ಇದನ್ನೂ ಓದಿ : ಮಡಿಕೇರಿ ಮತಕ್ಷೇತ್ರ | ಟಿಪ್ಪು ಹಿಂದೆ ಸರಿದು ಅಭಿವೃದ್ಧಿಯ ಚರ್ಚೆ ಮುನ್ನೆಲೆಗೆ

ಈ ಕ್ಷೇತ್ರದಲ್ಲಿ ಯಾರೇ ಚುನಾಯಿತರಾದರೂ ಜನರು ಕೇಳೋದು ಕಾಡಾನೆ ಹಾವಳಿ ನಿಲ್ಲಿಸಿ ಮತ್ತು ಜಮ್ಮಾ-ಬಾಣೆ ಸಮಸ್ಯೆ ಕೊನೆಗಾಣಿಸಿ ಎಂದು ಮಾತ್ರ. ಕೊಡಗಿನಲ್ಲಿ ರಾಜರ ಕಾಲದಲ್ಲಿ ತಮ್ಮ ಸೇವೆ ಸಲ್ಲಿಸಿದ ಸೈನಿಕರು ಮತ್ತಿತರರಿಗೆ ಕೊಡುಗೆ ಆಗಿ ನೀಡಲ್ಪಟ್ಟ ಜಮೀನು ಜಮ್ಮಾ ಜಮೀನಾಗಿದ್ದು, ಇದನ್ನು ಅರಣ್ಯ ಇಲಾಖೆಗೆ ಸೇರಿದ್ದು ಎಂದು ಈ ಹಿಂದೆ ಪರಿಗಣಿಸಲಾಗುತಿತ್ತು. ನಂತರ ವಕೀಲ ಎ ಕೆ ಸುಬ್ಬಯ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಿ ಗೆದ್ದಿರುವ ಕಾರಣದಿಂದ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದಕ್ಕೆ ಕಂದಾಯ ವಿಧಿಸಿ ಅದರ ಮಾಲೀಕರಿಗೇ ನೀಡಬೇಕೆಂದು ಆದೇಶ ಹೊರಡಿಸಲಾಯಿತು. ಆದರೆ ಅಧಿಕಾರಿಗಳು ವ್ಯವಸಾಯ ಮಾಡದ ಜಮ್ಮಾ ಮತ್ತು ಬಾಣೆ ಜಮೀನುಗಳಿಗೆ ಕಂದಾಯ ವಿಧಿಸಲು ಈಗಲೂ ಮೀನಮೇಷ ಎಣಿಸುತ್ತಿದ್ದು, ಇದಕ್ಕೆ ಕಟ್ಟುನಿಟ್ಟಿನ ಆದೇಶ ನೀಡಬೇಕಿದೆ.

ಇನ್ನುಳಿದಂತೆ, ಈ ಕ್ಷೇತ್ರದಲ್ಲಿ ಗ್ರಾಮೀಣ ರಸ್ತೆ ಮತ್ತು ಕುಡಿಯುವ ನೀರಿನ ಸಮಸ್ಯೆ ಇದ್ದೇ ಇದೆ. ಸಾಕಷ್ಟು ಪ್ರಮಾಣದಲ್ಲಿ ಗಿರಿಜನರೂ ಇಲ್ಲಿ ವಾಸಿಸುತ್ತಿದ್ದು, ಅರಣ್ಯದಂಚಿನಲ್ಲಿ ಸುಮಾರು ೩೫ ಹಾಡಿಗಳಿವೆ. ಇವರಿಗೆ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಈ ಹಿಂದೆ ದಿಡ್ಡಳ್ಳಿಯಲ್ಲಿ ನಡೆದ ಪ್ರತಿಭಟನೆ ರಾಜ್ಯಾದ್ಯಂತ ಸುದ್ದಿಯಾಗಿದ್ದು, ರಾಜ್ಯ ಸರ್ಕಾರ ಸ್ಪಂದಿಸಿ ಸುಮಾರು ೫೩೭ ಗಿರಿಜನರಿಗೆ ಸೋಮವಾರಪೇಟೆ ತಾಲೂಕಿನ ಕೂಡಿಗೆ ಬಳಿ ಮನೆಗಳನ್ನು ಕಟ್ಟಿಕೊಟ್ಟಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More